ನಿರೀಕ್ಷೆಯಂತೆ ಬಿಹಾರದ ಜೆಡಿ (ಯು) ಶಾಸಕಾಂಗದ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಪಾಟ್ನಾದಲ್ಲಿ ಬುಧವಾರ (ನವೆಂಬರ್ 19) ನಡೆದ ನೂತನ ಶಾಸಕ ಸಭೆಯಲ್ಲಿ ನಿತೀಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸಮ್ರಾಟ್ ಚೌಧರಿ ಮತ್ತು ಉಪ ನಾಯಕರಾಗಿ ವಿಜಯ್ ಸಿನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ.
ಜೆಡಿ(ಯು) ಸೇರಿದಂತೆ ಎನ್‌ಡಿಎ ನಾಯಕರು ಮಂಗಳವಾರ (ನವೆಂಬರ್ 18) ಪರಸ್ಪರ ಚರ್ಚೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೆಡಿಯು ಕಾರ್ಯನಿರತ ಅಧ್ಯಕ್ಷ ಸಂಜಯ್ ಜಾ ಮತ್ತು ಮೋದಿ ಸಂಪುಟದಲ್ಲಿ ಪಕ್ಷದ ಪ್ರತಿನಿಧಿಯಾಗಿರುವ ಲಲನ್ ಸಿಂಗ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜೆಡಿ(ಯು) ಸ್ಥಾನಗಳು ಹೆಚ್ಚಳವಾಗಿರುವುದರಿಂದ ಮತ್ತು ಎಲ್‌ಜೆಪಿ (ರಾಮ್ ವಿಲಾಸ್), ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಪಕ್ಷಗಳು ಮೈತ್ರಿಕೂಟ ಸೇರ್ಪಡೆಯಾಗಿರುವ ಕಾರಣ ಕಳೆದ ಸರ್ಕಾರಕ್ಕಿಂತ ಹೊಸ ಸರ್ಕಾರ ವಿಭಿನ್ನವಾಗಿ ಕಾಣುವ ಸಾಧ್ಯತೆ ಇದೆ.
ಬಿಜೆಪಿ ಮತ್ತು ಜೆಡಿ(ಯು) ಬಹುತೇಕ ಸಮಾನ ಬಲವನ್ನು ಹೊಂದಿರುವುದು ಇದೇ ಮೊದಲು. 2020ರಲ್ಲಿ ಬಿಜೆಪಿಯ ಸಂಖ್ಯೆಗಳು ಕಡಿಮೆ ಇತ್ತು. 2005ರಲ್ಲಿ ಎರಡೂ ಪಕ್ಷಗಳು ಮೊದಲ ಬಾರಿಗೆ ರಾಜ್ಯ ಚುನಾವಣೆಯಲ್ಲಿ ಒಟ್ಟಾಗಿ ಗೆದ್ದಾಗಿನಿಂದ ಜೆಡಿ(ಯು) ಪ್ರಬಲ ಪಾಲುದಾರವಾಗಿತ್ತು.
ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನವೆಂಬರ್ 20 ರಂದು (ನಾಳೆ) ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯಲಿದೆ.


