ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
“ಪ್ರಸಾದ್ ಅವರನ್ನು ಅವರ ಜಾತಿಯ ಕಾರಣದಿಂದ ನಿರ್ಲಕ್ಷಿಸಲಾಗಿದೆ” ಎಂದು ಅವರ ಹೇಳಿಕೆಗಳನ್ನು ಕಾಂಗ್ರೆಸ್ ಸಂಸದರೊಬ್ಬರು ಬೆಂಬಲಿಸಿದ್ದಾರೆ. ಆದರೆ, ಈ ಆರೋಪಗಳನ್ನು ಬಿಜೆಪಿ ಆಧಾರರಹಿತ ಎಂದು ತಿರಸ್ಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲ ಆನಂದಿಬೆನ್ ಪಟೇಲ್ ಸೇರಿದಂತೆ ಹಲವು ಸಂತರು, ಬುಡಕಟ್ಟು ಗುಂಪುಗಳು ಮತ್ತು ಅನೇಕ ಭಕ್ತರ ಸಮ್ಮುಖದಲ್ಲಿ ದೇವಾಲಯದ ಶಿಖರದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದರು. ಅದೇ ದಿನ, ಅವಧೇಶ್ ಪ್ರಸಾದ್ ಅವರು ಎಕ್ಸ್‌ನಲ್ಲಿ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಬರೆದಿದ್ದಾರೆ.
“ನಾನು ದಲಿತ ಸಮಾಜದಿಂದ ಬಂದವನಾಗಿರುವುದರಿಂದ ಧಾರ್ಮಿಕ ಧ್ವಜವನ್ನು ಸ್ಥಾಪಿಸಿದ್ದಕ್ಕಾಗಿ ನನ್ನನ್ನು ಕಾರ್ಯಕ್ರಮಕ್ಕೆ ಕರೆಯಲಾಗಿಲ್ಲ. ಇದು ರಾಮನ ಘನತೆ ಅಲ್ಲ. ಇದು ಯಾರೊಬ್ಬರ ಸಂಕುಚಿತ ಚಿಂತನೆಯನ್ನು ತೋರಿಸುತ್ತದೆ. ರಾಮ ಎಲ್ಲರಿಗೂ ಸೇರಿದವನು. ನನ್ನ ಹೋರಾಟ ಯಾವುದೇ ಹುದ್ದೆ ಅಥವಾ ಆಹ್ವಾನಕ್ಕಾಗಿ ಅಲ್ಲ, ಅದು ಗೌರವ, ಸಮಾನತೆ ಮತ್ತು ಸಂವಿಧಾನದ ಘನತೆಗಾಗಿ” ಎಂದು ಅವರು ಹೇಳಿದರು.
ಧ್ವಜಾರೋಹಣಕ್ಕೂ ಒಂದು ದಿನ ಹಿಂದೆ ಪ್ರಸಾದ್ ಅವರು, ನನಗೆ ಯಾವುದೇ ಆಹ್ವಾನ ಬಂದಿಲ್ಲ. ಆಹ್ವಾನ ಬಂದರೆ, ನಾನು ನನ್ನ ಎಲ್ಲಾ ಕೆಲಸಗಳನ್ನು ಬಿಟ್ಟು ಬರಿಗಾಲಿನಲ್ಲಿ ಹೋಗುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಅವರ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿತು. ಪಕ್ಷದ ವಕ್ತಾರ ಹರಿಶ್ಚಂದ್ರ ಶ್ರೀವಾಸ್ತವ ಮಾತನಾಡಿ, ಅವರ ಆರೋಪಗಳು ಸಂಪೂರ್ಣವಾಗಿ ರಾಜಕೀಯ ಎಂದು ಹೇಳಿದರು. “ಆರೋಪಗಳು ಸಂಪೂರ್ಣವಾಗಿ ಸುಳ್ಳು. ಅವಧೇಶ್ ಪ್ರಸಾದ್ ಅವರಿಗೆ ನಿಜವಾಗಿಯೂ ಭಗವಾನ್ ರಾಮನ ಮೇಲೆ ಭಕ್ತಿ ಇದ್ದರೆ, ಪ್ರಧಾನಿ ಧ್ವಜಾರೋಹಣ ಮಾಡಿದಾಗ ಅವರು ಅಯೋಧ್ಯೆಯ ಜನರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು” ಎಂದು ಹೇಳಿದ್ದಾರೆ.


