ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಪುರುಷರ ಗುಂಪನ್ನು ಪ್ರಶ್ನಿಸಿದ್ದಕ್ಕಾಗಿ 20 ಜನ ದುಷ್ಕರ್ಮಿಗಳ ಗುಂಪು ಹೊಂಚುಹಾಕಿ, 26 ವರ್ಷದ ರಾಷ್ಟ್ರ ಮಟ್ಟದ ಬಾಡಿ ಬಿಲ್ಡರ್ ಅನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿರುವ ಘಟನೆ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ.
ಹುಮಾಯೂನ್‌ಪುರ ಗ್ರಾಮದ ನಿವಾಸಿ ರೋಹಿತ್ ಧಂಖರ್ ದುಷ್ಕರ್ಮಿಗಳ ಹಲ್ಲೆಯಿಂದ ಸಾವನ್ನಪ್ಪಿದ್ದಾರೆ. ರೋಹ್ಟಕ್‌ನ ಜಿಮ್ಖಾನಾ ಕ್ಲಬ್‌ನಲ್ಲಿ ಸದಸ್ಯರಿಗೆ ತರಬೇತಿ ನೀಡಿದ ವೃತ್ತಿಪರ ಬಾಡಿಬಿಲ್ಡರ್ ಆಗಿದ್ದ, ರೋಹಿತ್ 2018 ರಲ್ಲಿ, ಭಾರತದ ಪ್ಯಾರಾ ಒಲಿಂಪಿಕ್ ಸಮಿತಿ ಆಯೋಜಿಸಿದ್ದ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದರು.
ಬಲಗಾಲಿನಲ್ಲಿ ಅಂಗವೈಕಲ್ಯದಿಂದ ಬಳಲುತ್ತಿದ್ದ ರೋಹಿತ್ 2018 ರಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಅಂತರರಾಷ್ಟ್ರೀಯ ಪದಕ ವಿಜೇತರಾಗಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಗಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರೋಹಿತ್ ಅವರನ್ನು ಸನ್ಮಾನಿಸಿದ್ದರು.
ಶುಕ್ರವಾರ, ರೋಹಿತ್ ತನ್ನ ಸ್ನೇಹಿತ ಜತಿನ್ ಜೊತೆ ಜತಿನ್ ಅವರ ಸಂಬಂಧಿಕರ ಮದುವೆಗೆ ‘ಉಡುಗೊರೆ’ ಅರ್ಪಿಸಲು ಭಿವಾನಿಗೆ ಪ್ರಯಾಣ ಬೆಳೆಸಿದ್ದರು. ಅವರ ಸಂಬಂಧಿಕರ ಪ್ರಕಾರ, ಗ್ರಾಮದ ಹುಡುಗನ ಕಡೆಯವರು ತಡರಾತ್ರಿ ಮದುವೆ ಸ್ಥಳಕ್ಕೆ ಬಂದರು, ಆ ಗುಂಪಿನಲ್ಲಿದ್ದ ಕೆಲವು ಪುರುಷರು ಮಹಿಳೆಯರೊಂದಿಗೆ ಕೆಟ್ಟದಾಗಿ ವರ್ತಿಸಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ರೋಹಿತ್ ಅವರನ್ನು ಎಚ್ಚರಿಸಿದರು, ಇದು ಸ್ವಲ್ಪ ಸಮಯದ ವಾಗ್ವಾದಕ್ಕೆ ಕಾರಣವಾಯಿತು. ಕಿರುಕುಳ ನೀಡಿದವರು ಅಲ್ಲಿಂದ ಹೊರಟುಹೋದರು, ಆದರೆ ನಂತರ ಪರಿಸ್ಥಿತಿ ಉಲ್ಬಣಗೊಂಡಿತು. ಸಮಾರಂಭದ ನಂತರ, ರೋಹಿತ್ ಮತ್ತು ಜತಿನ್ ಮನೆಗೆ ಮರಳಲು ತಮ್ಮ ವಾಹನದಲ್ಲಿ ಹೊರಟಾಗ, ಗೇಟ್ ಮುಚ್ಚಿದ್ದರಿಂದ ಅವರ ಕಾರು ರೈಲ್ವೆ ಕ್ರಾಸಿಂಗ್‌ನಲ್ಲಿ ನಿಲ್ಲಬೇಕಾಯಿತು.
ಈ ವೇಳೆ ಹೊಂಚು ಹಾಕಿದ್ದ ಸುಮಾರು 20 ದುಷ್ಕರ್ಮಿಗಳ ತಂಡ ದೊಣ್ಣೆ, ರಾಡ್ ಮತ್ತು ಇತರ ಆಯುಧಗಳಿಂದ ರೋಹಿತ್ ಮತ್ತು ಜನಿನ್ ಅವರನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ರೋಹಿತ್ ಜೊತೆಯಲ್ಲಿದ್ದ ಜತಿನ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ರೋಹಿತ್ ಅವರನ್ನು ಹಿಡಿದು ತೀವ್ರವಾಗಿ ಥಳಿಸಲಾಗಿದೆ. “ಗಾಯದ ಗುರುತುಗಳಿಲ್ಲದ ಅವನ ದೇಹದ ಒಂದು ಭಾಗವೂ ಇರಲಿಲ್ಲ” ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ. ದಾಳಿಕೋರರು ಓಡಿಹೋದ ನಂತರ, ಜತಿನ್ ಸಹಾಯದಿಂದ ಹಿಂತಿರುಗಿ ರೋಹಿತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ರೋಹ್ಟಕ್‌ನ ಪಿಜಿಐಎಂಎಸ್‌ಗೆ ಕಳುಹಿಸಲಾಯಿತು. ವೈದ್ಯರ ರಾತ್ರಿಯಿಡೀ ಪ್ರಯತ್ನದ ಹೊರತಾಗಿಯೂ, ರೋಹಿತ್ ಶನಿವಾರ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಭಿವಾನಿ ಪೊಲೀಸರು ಪಿಜಿಐಎಂಎಸ್‌ಗೆ ತೆರಳಿದರು. ಕುಟುಂಬದ ದೂರಿನ ಆಧಾರದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ. ರೋಹಿತ್ ಅವರ ಸೋದರ ಮಾವ ರವಿ ಖಾಸ್ಸಾ ಮತ್ತು ಚಿಕ್ಕಪ್ಪ ಸತೀಶ್ ಧನಖರ್, ಹಲ್ಲೆಕೋರರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. “ಇದು ಯೋಜಿತ ಕೊಲೆ. ರೋಹಿತ್ ಮಹಿಳೆಯರ ಘನತೆಯ ಪರವಾಗಿ ನಿಂತಿದ್ದಕ್ಕಾಗಿ ತಮ್ಮ ಜೀವವನ್ನು ತೆತ್ತರು” ಎಂದು ಹೇಳಿದ್ದಾರೆ.


