ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಪ್ರತಿಭಟಿಸಿದ ಹಿನ್ನೆಲೆ, ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ನಾಳೆಗೆ (ಡಿಸೆಂಬರ್ 2) ಮುಂದೂಡಿಕೆಯಾಗಿದೆ.
ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಮಧ್ಯಾಹ್ನದ ನಂತರ ಮಣಿಪುರದ ಜಿಎಸ್‌ಟಿ ಮಸೂದೆ ಅಂಗೀಕಾರಗೊಂಡಿದೆ. ಈ ಮಸೂದೆಯನ್ನು ಲೋಕಸಭೆ ಕಲಾಪದ ಬೆಳಗ್ಗಿನ ಅವಧಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದರು. ಮಸೂದೆಯ ಕುರಿತು ನಾಳೆಯ ಕಲಾಪದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಮಧ್ಯಾಹ್ನ 2.20ಕ್ಕೆ ಕಲಾಪವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಇದಕ್ಕೂ ಮುನ್ನ ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನೆಲೆ, ಕಲಾಪವನ್ನು ಎರಡು ಬಾರಿ ಮುಂದೂಡಿಕೆ ಮಾಡಿ ಪುನರಾರಂಭಿಸಲಾಗಿತ್ತು.
ರಾಜ್ಯ ಸಭೆ ಕಲಾಪವನ್ನೂ ನಾಳೆಗೆ ಮುಂದೂಡಲಾಗಿದೆ. ಅಲ್ಲಿಯೂ ಎಸ್‌ಐಆರ್ ಕುರಿತು ಚರ್ಚೆ ನಡೆಸುವಂತೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದಿದ್ದಾರೆ. ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಎಸ್‌ಐಆರ್ ಅಥವಾ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ಸರ್ಕಾರ ಹಿಂಜರಿಯುವುದಿಲ್ಲ. ಆದರೆ, ಸಮಯ ಮಿತಿಯನ್ನು ನಿಗದಿಪಡಿಸುವಂತೆ ಒತ್ತಾಯಿಸಬೇಡಿ ಎಂದಿದ್ದಾರೆ. ಸಚಿವರ ಪ್ರತಿಕ್ರಿಯೆಯಿಂದ ತೃಪ್ತರಾಗದ ಹಲವಾರು ವಿರೋಧ ಪಕ್ಷಗಳ ಸದಸ್ಯರು ಮೇಲ್ಮನೆಯಿಂದ ಹೊರನಡೆದರು.
ನೂತನ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರು ಇಂದು ರಾಜ್ಯಸಭೆಯ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಅವರಿಗೆ ಇದು ಮೊದಲ ಸಂಸತ್ ಅಧಿವೇಶನವಾಗಿದೆ.
ಉಭಯ ಸದನಗಳ ಕಲಾಪ ನಾಳೆ (ಡಿ.2) ಬೆಳಿಗ್ಗೆ 11 ಗಂಟೆಗೆ ಪುನರಾರಂಭಗೊಳ್ಳಲಿದೆ. ನಾಳೆಯೂ ಎಸ್‌ಐಆರ್, ದೇಶದ ಭದ್ರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆ ಇದೆ.


