ಮರ್ಯಾದೆಗೇಡು ಹತ್ಯೆ ಬಳಿಕ ತನ್ನ ಪ್ರೇಮಿಯ ಶವವನ್ನು ‘ಮದುವೆ’ಯಾದ ಮಹಾರಾಷ್ಟ್ರದ ಯುವತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಗೆಳೆಯನನ್ನು ಇಬ್ಬರು ಪೊಲೀಸರು ನಿಂದಿಸಿದ ಬಳಿಕ ನನ್ನ ಸಹೋದರ ಕೊಂದಿದ್ದಾನೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸೋಮವಾರ ನೀಡಿದ ಹೇಳಿಕೆಯಲ್ಲಿ, “ನನ್ನ ಸಹೋದರ ಹಿಮೇಶ್ ಮಾಮಿದ್ವರ್ ತನ್ನ ಗೆಳೆಯನ ವಿರುದ್ಧ ‘ಸುಳ್ಳು ಪ್ರಕರಣ’ ದಾಖಲಿಸಲು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾನೆ” ಎಂದು ಅವರು ಹೇಳಿದ್ದಾರೆ.
ಎಲ್ಲವನ್ನೂ ಕೇಳಿದ ನಂತರ, ಧೀರಜ್ ಕೊಮುಲ್ವಾರ್ ಮತ್ತು ಮಹಿ ದಾಸರ್ವರ್ ಎಂಬ ಇಬ್ಬರು ಪೊಲೀಸರು ಹಿಮೇಶ್‌ನನ್ನು ಕೆರಳಿಸಿ ತನ್ನ ಗೆಳೆಯನೊಂದಿಗೆ ‘ಸೆಟಲ್’ ಮಾಡಿಕೊಳ್ಳುವಂತೆ ಸೂಚಿಸಿದರು ಎಂದು ಅವರು ಆರೋಪಿಸಿದ್ದಾರೆ. “ಆದ್ದರಿಂದ ಆ ದಿನ, ಸಕ್ಷಮ್ ಕೊಲ್ಲಲ್ಪಡುವ ಮೊದಲು, ಬೆಳಿಗ್ಗೆ 11 ರಿಂದ 12 ರ ಸುಮಾರಿಗೆ ನನ್ನ ಕಿರಿಯ ಸಹೋದರ ಹಿಮೇಶ್ ಮಾಮಿದ್ವರ್ ನನ್ನನ್ನು ಇತ್ವಾರಾ ಪೊಲೀಸ್ ಠಾಣೆಗೆ ಕರೆದೊಯ್ದರು” ಎಂದು 21 ವರ್ಷದ ಆಂಚಲ್ ಮಾಮಿದ್ವರ್ ತಿಳಿಸಿದರು.
“ಅಲ್ಲಿ, ಅವನು ಸಕ್ಷಮ್ ವಿರುದ್ಧ ಪ್ರಕರಣ ದಾಖಲಿಸಲು ಹೇಳಿದನು. ನಾನು ಎಲ್ಲರ ಮುಂದೆ ನಿರಾಕರಿಸಿದೆ. ಆಗ ಅಲ್ಲಿದ್ದ ಇಬ್ಬರು ಪೊಲೀಸರಾದ ಧೀರಜ್ ಕೊಮುಲ್ವಾರ್ ಮತ್ತು ಮಹಿ ದಾಸರ್ವರ್ ಅವರರು ಸಹೋದರನನ್ನು ಕೆರಳಿಸಿದರು. ಅವರು, ‘ನೀನು ಅವನನ್ನು ಹೊಡೆದ ನಂತರ ಇಲ್ಲಿಗೆ ಬಂದಿದ್ದೀಯಾ? ಹೀಗೆ ಮಾಡುವ ಬದಲು, ನಿನ್ನ ಸಹೋದರಿ ಯಾರೊಂದಿಗೆ ಸಂಬಂಧ ಹೊಂದಿದ್ದಾಳೆಯೋ ಅವರೊಂದಿಗೆ ಮಾತನಾಡುವುಸು ಉತ್ತಮ’ ಎಂದು ಹೇಳಿದರು” ಎಂದು ಅವರು ಹೇಳಿದರು.
ಆಂಚಲ್ ಮತ್ತು ಸಕ್ಷಮ್ (20) ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದರು. ಆದರೆ, ಯುವತಿಯ ಕುಟುಂಬ ಸದಸ್ಯರು ಅವರ ಜಾತಿಗಳು ಬೇರೆ ಬೇರೆಯಾಗಿರುವುದರಿಂದ ಇಬ್ಬರ ಸಂಬಂಧವನ್ನು ವಿರೋಧಿಸಿದ್ದರು. ವರದಿಯ ಪ್ರಕಾರ, ಸಕ್ಷಮ್ ಮತ್ತು ಆಂಚಲ್ ಅವರ ಸಹೋದರರು ಈ ಬಗ್ಗೆ ಪರಸ್ಪರ ತಿಳಿದಿದ್ದರು, ಪ್ರೇಮಿಗಳಿಬ್ಬರೂ ಮೊದಲ ಭಾರಿಗೆ ಸಹೋದರ ಮೂಲಕವೇ ಭೇಟಿಯಾಗಿದ್ದರು.
ನವೆಂಬರ್ 27 ರ ಸಂಜೆ, ಸಕ್ಷಮ್ ಮತ್ತು ಹಿಮೇಶ್ ನಡುವೆ ಜಗಳ ನಡೆದ ನಂತರ, ಮಹಾರಾಷ್ಟ್ರದ ನಾಂದೇಡ್‌ನ ಓಲ್ಡ್ ಗಂಜ್ ಪ್ರದೇಶದಲ್ಲಿ ಸಕ್ಷಮ್ ಮೇಲೆ ಹಿಮೇಶ್ ನಡುವೆ ಗುಂಡು ಹಾರಿಸಿದನು. ನಂತರ, ಹಿಮೇಶ್ ಸಕ್ಷಮ್‌ನ ತಲೆಗೆ ಟೈಲ್‌ನಿಂದ ಹೊಡೆದ ಬಳಿಕ ಅವನು ಸ್ಥಳದಲ್ಲೇ ಸಾವನ್ನಪ್ಪಿದನು.
ಆಂಚಲ್ ಈಗ ತನ್ನ ಸಹೋದರ ಮತ್ತು ಇತರ ಕುಟುಂಬ ಸದಸ್ಯರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾಳೆ. “ನಾನು ಸಕ್ಷಾಮ್ (ಮೃತ) ಜೊತೆ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದೆ. ಅವನು ‘ಜೈ ಭೀಮ್’ ಅನುಯಾಯಿಯಾಗಿರುವುದರಿಂದ ನನ್ನ ಕುಟುಂಬ ಅದನ್ನು ಸ್ವೀಕರಿಸಲಿಲ್ಲ, ಅಷ್ಟೇ. ನನ್ನ ಕುಟುಂಬವು ಅವನಿಗೆ ನಮ್ಮ ಮದುವೆ ಮಾಡುವುದಾಗಿ ಭರವಸೆ ನೀಡಿತ್ತು. ಅವರು ನನಗೂ ಅದೇ ಭರವಸೆ ನೀಡಿದ್ದರು” ಎಂದು ಅವರು ತಿಳಿಸಿದರು.
ಪೊಲೀಸರು ಈಗ ಹಿಮೇಶ್ ಮತ್ತು ಆಂಚಲ್ ಅವರ ಇನ್ನೊಬ್ಬ ಸಹೋದರ ಸಾಹಿಲ್ (25) ಮತ್ತು ಅವರ ತಂದೆ ಗಜಾನನ್ ಮಾಮಿದ್ವಾರ್ (45) ಅವರನ್ನು ಬಂಧಿಸಿದ್ದಾರೆ. ಅವರೆಲ್ಲರನ್ನೂ ಮೂರು ದಿನಗಳ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


