ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಾಲ್ವರು ಮುಸ್ಲಿಂ ವ್ಯಾಪಾರಿಗಳನ್ನು ಬಾಂಗ್ಲಾದೇಶಿಯರು ಮತ್ತು ರೋಹಿಂಗ್ಯಾ ವಲಸಿಗರು ಎಂದು ಆರೋಪಿಸಿ ಒಡಿಶಾದ ನಯಾಗಢವನ್ನು ತೊರೆಯಲು 72 ಗಂಟೆಗಳ ಗಡುವು ನೀಡಲಾಗಿದೆ ಎಂದು ದಿ ಟೆಲಿಗ್ರಾಫ್ ಮಂಗಳವಾರ (ಡಿ.2) ವರದಿ ಮಾಡಿದೆ.
ಈ ನಾಲ್ವರು ಪುರುಷರು ಹಲವಾರು ವರ್ಷಗಳಿಂದ ನಯಾಗಢದಲ್ಲಿ ದ್ವಿಚಕ್ರ ವಾಹನಗಳಲ್ಲಿ ಸೊಳ್ಳೆ ಪರದೆ, ಹೊದಿಕೆ ಮತ್ತು ಉಣ್ಣೆಯ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ನಾಲ್ವರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಡೊಮ್ಕಲ್ ಉಪವಿಭಾಗದ ಜಲಂಗಿ ಬ್ಲಾಕ್‌ನಲ್ಲಿರುವ ಸಾಗರ್‌ಪಾರ ಗ್ರಾಮ ಪಂಚಾಯತ್‌ಗೆ ಸೇರಿದವರು.
ನವೆಂಬರ್ 27ರಂದು, ನಾಲ್ವರಲ್ಲಿ ಒಬ್ಬರಾದ ಸಾಹೇಬ್ ಶೇಖ್ ಎಂಬವರ ಬಾಡಿಗೆ ಮನೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, “ನೀವು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಾಗಳು” ಎಂದು ಆರೋಪಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಅಧಿಕಾರಿಗಳು ತನ್ನ ಗುರುತಿನ ಚೀಟಿಗಳನ್ನು ಕೇಳಿದ್ದಾರೆ ಎಂದು ಶೇಖ್ ಹೇಳಿರುವುದಾಗಿ ವರದಿ ತಿಳಿಸಿದೆ.
“ಅಧಿಕಾರಿಗೆ ನಾನು ನನ್ನ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ತೋರಿಸಿದೆ. ಅದಕ್ಕೆ ಅವರು ತೃಪ್ತರಾಗಲಿಲ್ಲ. ನನ್ನ ಬಾಡಿಗೆ ಮನೆಯ ಮಾಲೀಕರಿಗೆ ಕರೆ ಮಾಡಿ ಸಂಜೆ 5 ಗಂಟೆಯೊಳಗೆ ಎಲ್ಲರೂ ಠಾಣೆಗೆ ಬರುವಂತೆ ಸೂಚಿಸಿದರು” ಎಂದು ಸಾಹೇಬ್ ಶೇಖ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಪೊಲೀಸ್ ಅಧಿಕಾರಿ ಹೇಳಿದಂತೆ ನಾಲ್ವರೂ ಓಡಗಾಂವ್ ಪೊಲೀಸ್ ಠಾಣೆಗ ಹೋಗಿದ್ದರು. ಅಲ್ಲಿ ಒಬ್ಬ ಅಧಿಕಾರಿ ನಾಲ್ವರೂ ಮೂರು ದಿನಗಳಲ್ಲಿ ಪಟ್ಟಣ ತೊರೆಯುವಂತೆ ಸೂಚಿಸಿದ್ದಾರೆ. ಬಂಗಾಳಿ ಭಾಷೆಯಲ್ಲಿ ಮಾತನಾಡಿದ ಕಾರಣ ಅವರನ್ನು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು ಎಂಬುವುದಾಗಿ ಆರೋಪಿಸಲಾಗಿದೆ ಎಂದು ವರದಿ ಹೇಳಿದೆ.
ಪೊಲೀಸರು ನಾಲ್ವರಿಂದಲೂ ಸಹಿ ಮಾಡಿದ ದಾಖಲೆಗಳ ಪ್ರತಿಗಳನ್ನು ತೆಗೆದುಕೊಂಡಿದ್ದಾರೆ.
“ನಾವು ಠಾಣೆಗೆ ಹೋದಾಗ ನಮಗೆ ಕಿರುಕುಳ ನೀಡುತ್ತಿದ್ದ ಹಿಂದುತ್ವ ಗುಂಪು ಕೂಡ ಠಾಣೆಯಲ್ಲಿ ಇತ್ತು. ಅವರನ್ನು ನಾವು ಮಾರುಕಟ್ಟೆ ಸೇರಿದಂತೆ ವಿವಿದೆಡೆಗಳಲ್ಲಿ ನೋಡಿದ್ದೇವೆ. ಅವರ ಮುಖ ನಮಗೆ ಪರಿಚಯವಿದೆ” ಎಂದು ನಾಲ್ವರಲ್ಲಿ ಒಬ್ಬರಾದ ಅಬ್ದುಸ್ಸಲಾಂ ಎಂಬವರು ಹೇಳಿದ್ದಾರೆ ಎಂದು ದಿ ಟೆಲಿಗ್ರಾಫ್ ವಿವರಿಸಿದೆ.
ನಾಲ್ವರೂ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ಗೆ ಮರಳಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಕಾರ್ಮಿಕರನ್ನು ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ, ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳ ಪೊಲೀಸರು ಬಂಗಾಳಿ ಮಾತನಾಡುವ ಜನರನ್ನು, ಹೆಚ್ಚಾಗಿ ಮುಸ್ಲಿಮರನ್ನು ಬಂಧಿಸಿ, ಅವರು ಭಾರತೀಯ ನಾಗರಿಕರು ಎಂದು ಸಾಬೀತುಪಡಿಸಲು ಕೇಳುತ್ತಿದ್ದಾರೆ.
ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ವಿಫಲರಾದ ಆರೋಪದ ಮೇಲೆ ಹಲವಾರು ವ್ಯಕ್ತಿಗಳನ್ನು ಬಾಂಗ್ಲಾದೇಶಕ್ಕೆ ಬಲವಂತವಾಗಿ ಕಳುಹಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ತಪ್ಪಾಗಿ ಬಾಂಗ್ಲಾದೇಶಕ್ಕೆ ಕಳುಹಿಸಲ್ಪಟ್ಟ ವ್ಯಕ್ತಿಗಳು ಭಾರತದಲ್ಲಿನ ರಾಜ್ಯ ಅಧಿಕಾರಿಗಳು ಅವರು ಭಾರತೀಯರು ಎಂದು ಸಾಬೀತುಪಡಿಸಿದ ನಂತರ ದೇಶಕ್ಕೆ ಮರಳಿದ್ದಾರೆ.
ಪಶ್ಚಿಮ ಬಂಗಾಳ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಕೂಡ ಈ ವಿಷಯವನ್ನು ವಿಚಾರಣೆ ನಡೆಸುತ್ತಿದೆ.
ಒಡಿಶಾದಲ್ಲಿ, ಇತ್ತೀಚಿನ ದಿನಗಳಲ್ಲಿ ಬಂಗಾಳಿ ಮುಸ್ಲಿಮರು ಹಿಂಸಾಚಾರ ಮತ್ತು ಬೆದರಿಕೆಗಳನ್ನು ಎದುರಿಸುತ್ತಿರುವ ಬಗ್ಗೆ ಹಲವಾರು ವರದಿಯಾಗಿದೆ.
ನವೆಂಬರ್ 24ರಂದು, ಮುರ್ಷಿದಾಬಾದ್‌ನ ಚಳಿಗಾಲದ ಉಡುಪುಗಳ ಮಾರಾಟಗಾರ 24 ವರ್ಷದ ರಾಹುಲ್ ಇಸ್ಲಾಂ ಅವರನ್ನು ಬಾಂಗ್ಲಾದೇಶಿ ಎಂದು ಆರೋಪಿಸಲಾಗಿತ್ತು. ಗಂಜಾಂನಲ್ಲಿ ‘ಜೈ ಶ್ರೀ ರಾಮ್’ ಎಂದು ಹೇಳಲು ಅವರಿಗೆ ಒತ್ತಾಯಿಸಲಾಗಿತ್ತು. ನಿರಾಕರಿಸಿದ್ದಕ್ಕೆ ಗುಂಪೊಂದು ಅವರನ್ನು ಥಳಿಸಿತ್ತು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ಮುರ್ಷಿದಾಬಾದ್‌ನಲ್ಲಿರುವ ತನ್ನ ಮನೆಗೆ ಹಿಂದಿರುಗಿದ ಇಸ್ಲಾಂನ ಉದ್ಯೋಗದಾತ ಮೈನುಲ್ ಸರ್ಕಾರ್, ಸಹಾಯಕ್ಕಾಗಿ ಒಡಿಶಾದ ಪೊಲೀಸರ ಬಳಿ ಹೋಗಿದ್ದೆ ಆದರೆ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.
ಜುಲೈನಲ್ಲಿ, ಒಡಿಶಾದ ಜಾರ್ಸುಗುಡದಲ್ಲಿ ನೂರಾರು ಬಂಗಾಳಿ ಕಾರ್ಮಿಕರನ್ನು ಬಾಂಗ್ಲಾದೇಶೀಯರು ಎಂಬ ಅನುಮಾನದ ಮೇಲೆ ಬಂಧಿಸಲಾಗಿತ್ತು. ಅಧಿಕಾರಿಗಳು ಅವರು ಭಾರತೀಯರು ಎಂದು ಖಚಿತಪಡಿಸಿಕೊಂಡ ನಂತರ ಅವರಲ್ಲಿ ಹಲವರನ್ನು ಬಿಡುಗಡೆ ಮಾಡಲಾಯಿತು.


