ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶಕ್ಕೆ ‘ತಳ್ಳಿದ್ದ’ ಪಶ್ಚಿಮ ಬಂಗಾಳದ ಗರ್ಭಿಣಿ ಮಹಿಳೆ ಮತ್ತು ಅವರ ಎಂಟು ವರ್ಷದ ಮಗನನ್ನು ಶುಕ್ರವಾರ (ಡಿಸೆಂಬರ್ 5) ಭಾರತಕ್ಕೆ ಮರಳಿ ಕರೆತರಲಾಗಿದೆ.
ಸುನಾಲಿ ಖಾತೂನ್ ಎಂಬ ಮಹಿಳೆ ಮತ್ತು ಆಕೆಯ ಮಗ 8 ವರ್ಷ ಸಬೀರ್ ಮಹಾದೀಪುರ ಗಡಿ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಹಾದೀಪುರದಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಬಿರ್ಭೂಮ್‌ನಲ್ಲಿ ಮಹಿಳೆಯ ಮನೆಯಿದೆ. ತುಂಬು ಗರ್ಭಿಣಿಯಾದ್ದರಿಂದ ಆಕೆಗೆ ಮನೆಗೆ ಪ್ರಯಾಣಿಸಲು ಸಾಧ್ಯವೇ ಎಂದು ನಿರ್ಧರಿಸಲು ಮಾಲ್ಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿಗಿದೆ ಎಂದು ವರದಿ ಹೇಳಿದೆ.
ಖಾತೂನ್ ಅವರ ಪತಿ ಡ್ಯಾನಿಶ್ ಎಸ್‌ಕೆ ಇನ್ನೂ ಬಾಂಗ್ಲಾದೇಶದಲ್ಲಿದ್ದಾರೆ.ಅವರ ಮರಳುವಿಕೆಯ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ.
ಮಾನವೀಯ ನೆಲೆಯಲ್ಲಿ ಸುನಾಲಿ ಖಾತೂನ್ ಮತ್ತು ಅವರ ಮಗನನ್ನು ಭಾರತಕ್ಕೆ ವಾಪಸ್ ಕರೆ ತರುತ್ತೇವೆ ಎಂದು ಕೇಂದ್ರ ಸರ್ಕಾರ ಬುಧವಾರ (ಡಿಸೆಂಬರ್ 4) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿತ್ತು. ಆದರೆ, ಮಹಿಳೆ ಮತ್ತು ಆಕೆಯ ಬಾಂಗ್ಲಾದೇಶಿಗರು ಎಂಬ ನಮ್ಮ ಮೂಲವಾದ ಮತ್ತು ಅವರ ಮೇಲೆ ಕಣ್ಗಾವಲಿಡುವ ಹಕ್ಕು ನಮ್ಮಲ್ಲೇ ಉಳಿಸಿಕೊಂಡಿದ್ದೇವೆ ಎಂದು ಹೇಳಿತ್ತು.
ಇದಕ್ಕೂ ಎರಡು ದಿನ ಮೊದಲು ನಡೆದ ವಿಚಾರಣೆ ವೇಳೆ, ಸುನಾಲಿ ಖಾತೂನ್ ಅವರ ಗರ್ಭಾವಸ್ಥೆಯನ್ನು ಪರಿಗಣಿಸಿ, ಆಕೆ ಮತ್ತು ಮಗನನ್ನು ಭಾರತಕ್ಕೆ ವಾಪಸ್ ಕರೆತರಲು ಸಾಧ್ಯವೇ ಎಂದು ತಿಳಿಸಲು ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿತ್ತು.
ಗಡಿಯಾಚೆಗೆ ತಳ್ಳಲ್ಪಟ್ಟ ಬಳಿಕ ಅಕ್ರಮ ವಲಸಿಗರು ಎಂದು ಬಾಂಗ್ಲಾದೇಶ ಪೊಲೀಸರು ಖಾತೂನ್ ಮತ್ತು ಅವರ ಕುಟುಂಬಸ್ಥರು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದರು. ಅವರೆಲ್ಲರೂ ಸೋಮವಾರ ಸಂಜೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು.


