ಭಗವದ್ಗೀತೆಯನ್ನು ‘ಪವಿತ್ರ ಗ್ರಂಥ’ ಎಂದಿರುವ ಜಾತ್ಯತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಭಗವದ್ಗೀತೆ ಬೋಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, “ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು, ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು” ಎಂದು ವಿನಂತಿಸಿದ್ದಾರೆ.
“ನಿಷ್ಕಾಮ ಕರ್ಮದ ಕಾಲಾತೀತ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನೈತಿಕ ಶಕ್ತಿಯು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಹೆಚ್ಚು ಉತ್ಕೃಷ್ಟಗೊಳಿಸುತ್ತದೆ ಮತ್ತು ನಮ್ಮ ಯುವಜನರು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳಾಗಿ ರೂಪುಗೊಂಡು ಜಾಗತಿಕವಾಗಿ ಶ್ರೇಷ್ಠರಾಗಲು ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಅತ್ಯಂತ ಶ್ರೇಷ್ಠ, ಮಾನವೀಯತೆಯ ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಸಂಕಲ್ಪಕ್ಕೆ ಅನುಗುಣವಾಗಿ ಭಗವದ್ಗೀತೆ ಬೋಧನೆ ಅಗತ್ಯವಿದೆ ಎಂದು ನಾನು ಬಲವಾಗಿ ನಂಬಿದ್ದೇನೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕುಮಾರಸ್ವಾಮಿ ಪತ್ರಕ್ಕೆ ಬಿಜೆಪಿ ಬೆಂಬಲಿಗರಿಂದ ಮೆಚ್ಚುಗೆ
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪತ್ರ ಬರೆದಿರುವುದಕ್ಕೆ ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯ ಹಿಂದುತ್ವವಾದ ಬೆಂಬಲಿಗರು ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಧನ್ಯವಾದಗಳು ಸರ್, ನಮ್ಮ ಸನಾತನ ಸಂಸ್ಕೃತಿ ಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬರುವುದು ಉತ್ತಮ” ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಬರೆದಿದ್ದಾರೆ.
“ನಿಮ್ಮ ಮೇಲೆ ಇದ್ದ ಅಭಿಪ್ರಾಯ ಬದಲಾಯ್ತು ಅಣ್ಣ, ನಿಮ್ಮ ಧರ್ಮ ನಿಷ್ಠೆಗೆ ನನ್ನ ನಮನಗಳು” ಎಂದು ಬಿಜೆಪಿ ಬೆಂಬಲಿಗರೊಬ್ಬರು ಮತ್ತು “ನಮ್ಮದೇಶ ಗುರುಕುಲಗಳ ತಾಣ. ಮೊದಲಿನಿಂದಲೂ ರಾಮಾಯಣ, ಮಹಾಭಾರತ ಪ್ರವಚನಗಳು ನಡೆಯುತ್ತಿತ್ತು. ಕುತಂತ್ರಿಗಳು ಮತ್ತು ಧರ್ಮದ್ರೋಹಿಗಳಿಂದ ನಮ್ಮ ದೇಶ ಹಾಳಾಗಿತ್ತು. ಸದ್ಯ ಈಗಲಾದರೂ ಎಲ್ಲಾ ಹಿಂದುಗಳು ಒಟ್ಟುಗೂಡಲಿ. ಅಭಿವೃದ್ಧಿಯು ನಡೆಯಲಿ ಧರ್ಮವು ಬೆಳೆಯಲಿ” ಮತ್ತೊಬ್ಬ ಬಳಕೆದಾರ ಮೆಚ್ಚುಗೆ ಸೂಚಿಸಿದ್ದಾರೆ.
ಕುಮಾರಸ್ವಾಮಿ ಪೋಸ್ಟ್‌ಗೆ ವಿರೋಧ:
ಕುಮಾರಸ್ವಾಮಿ ಅವರ ಪೋಸ್ಟ್‌ಗೆ ಬಲಪಮಥೀಯರು ವಿರೊಧ ವ್ಯಕ್ತಪಡಿಸಿದ್ದರೆ, ಕೆಲವರು ವಿರೊಧ ವ್ಯಕ್ತಪಡಿಸಿದ್ದಾರೆ. “ಭಗವದ್ಗೀತೆ ಗಿಂತಲೂ ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂವಿಧಾನದ ಪಾಠ ಬಹಳ ಮುಖ್ಯ” ಎಂದು ಪೇಸ್‌ಬುಕ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
“ಅರ್‌ಎಸ್‌ಎಸ್ ಅನ್ನು ಮೆಚ್ಚಿಸಲು ಏನೆಲ್ಲಾ ಲಾಗ ಹೋಡೆಯಬಹುದು ಎಂದು ಇದರಲ್ಲಿ ಗೊತ್ತಾಗುತ್ತೆ. ಒಂದು ನೆನಪಿಡಿ ಕುಮಾರಣ್ಣ.. ನಿಮ್ಮ ಕೈಗೆ ಕೊನೆಗೆ ಅವರು ಕೊಡೋದು ಚೆಂಬು ಮಾತ್ರ” ಎಂದು ಒಬ್ಬರು, “ಅಲ್ಪವಾದರೂ ಸ್ವಾಭಿಮಾನ ಇರಲಿ, ಒಬ್ಬ ಕನ್ನಡಿಗನಾಗಿ ಹೇಳ್ತಿದ್ದೇನೆ ಕುಮಾರಣ್ಣ… ಅಧಿಕಾರಕ್ಕಾಗಿ ನೀವೂ ಒಂದು ಪಕ್ಷಕ್ಕೆ ಇಷ್ಟೊಂದು ಬಕೇಟು ಹಿಡಿಯುತ್ತಿರುವುದು ನನಗಿಷ್ಟ ಇಲ್ಲ” ಎಂದು ಮತ್ತೊರ್ವ ಬಳಕೆದಾರ ಬೇಸರ ಹೊರಹಾಕಿದ್ದಾರೆ.


