ಸೋಮವಾರ ಲೋಕಸಭೆಯಲ್ಲಿ ‘ವಂದೇ ಮಾತರಂನ 150 ವರ್ಷಗಳು’ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಹೆಚ್ಚು ಮುಖ್ಯವಾದ ವಿಷಯಗಳಿರುವಾಗ, ಈ ಗೀತೆಯ ಕುರಿತು ಸದನ ಏಕೆ ಚರ್ಚೆ ನಡೆಸುತ್ತಿದೆ ಎಂದು ಪ್ರಶ್ನಿಸಿದರು.
“ನಾವು ಚರ್ಚಿಸುತ್ತಿರುವ ವಿಷಯವು ದೇಶದ ಆತ್ಮದ ಭಾಗವಾಗಿದೆ. ನಾವು ವಂದೇ ಮಾತರಂ ಬಗ್ಗೆ ಪ್ರಸ್ತಾಪಿಸಿದಾಗ, ಅದು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುತ್ತದೆ. ಈ ಚರ್ಚೆ ವಿಚಿತ್ರವಾಗಿದೆ; ಈ ಗೀತೆ ಜನರ ಹೃದಯದಲ್ಲಿ ಸ್ಥಾನ ಪಡೆದಿದೆ; ಹೀಗಿರುವಾಗ ಈ ಚರ್ಚೆಯ ಅಗತ್ಯವೇನಿದೆ?” ಎಂದು ಪ್ರಿಯಾಂಕಾ ಗಾಂಧಿ ಕೇಳಿದರು.
“ನಮ್ಮ ಗುರಿ ಏನು, ಜನರಿಗೆ ಸಂಬಂಧಿಸಿದಂತೆ ನಮ್ಮ ಜವಾಬ್ದಾರಿ ಏನು, ಅದನ್ನು ನಾವು ಹೇಗೆ ಪೂರೈಸುತ್ತಿದ್ದೇವೆ..? ನಾವು ಈ ರಾಷ್ಟ್ರೀಯ ಗೀತೆಯ ಬಗ್ಗೆ ಚರ್ಚಿಸುತ್ತಿರುವುದು ಏಕೆ? ಅದರ ಬಗ್ಗೆ ಏನು ಚರ್ಚೆ ಮಾಡಬಹುದು?” ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆ ಎತ್ತಿದ್ದರು.
ಇತರ ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತು ಪ್ರಧಾನ ಮಂತ್ರಿಗಳು ಅದರಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲು ಬಯಸುತ್ತಿರುವುದರಿಂದ ನಾವು ಈ ಚರ್ಚೆಯನ್ನು ನಡೆಸುತ್ತಿದ್ದೇವೆ” ಎಂದು ಹೇಳಿದರು.
ಸರ್ಕಾರ ಈ ಚರ್ಚೆ ಹಮ್ಮಿಕೊಳ್ಳಲು ಎರಡನೆಯ ಕಾರಣವೆಂದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ದೇಶಕ್ಕಾಗಿ ಅಪಾರ ತ್ಯಾಗ ಮಾಡಿದವರ ವಿರುದ್ಧ ಹೊಸ ಆರೋಪಗಳನ್ನು ಮಾಡಲು ಎಂದು ಪ್ರಿಯಾಂಕಾ ಗಾಂಧಿ ದೂರಿದರು.
“ಈ ಸರ್ಕಾರ ವರ್ತಮಾನ ಮತ್ತು ಭವಿಷ್ಯವನ್ನು ನೋಡಲು ಬಯಸುವುದಿಲ್ಲವಾದ್ದರಿಂದ ನಾವು ಭೂತಕಾಲವನ್ನು ಪರಿಶೀಲಿಸುತ್ತಲೇ ಇರಬೇಕೆಂದು ನೀವು ಬಯಸುತ್ತೀರಿ” ಎಂದರು.
“ಪ್ರಧಾನಿ ಮೋದಿ ಅವರು ಹಿಂದಿನ ಪ್ರಧಾನಿಯಲ್ಲ; ಇದು ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ ಮತ್ತು ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ ಎಂದು ತೋರಿಸುತ್ತಿದೆ. ಸರ್ಕಾರದಲ್ಲಿರುವ ನನ್ನ ಸ್ನೇಹಿತರು ಮೌನವಾಗಿದ್ದಾರೆ, ಏಕೆಂದರೆ ಅವರಿಗೂ ಇದು ತಿಳಿದಿದೆ” ಎಂದು ಪ್ರಿಯಾಂಕಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಪ್ರಿಯಾಂಕಾ, ಅವರ “ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ ಮತ್ತು ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ” ಎಂದು ಆರೋಪಿಸಿದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ ಗಾಂಧಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ವಿರುದ್ಧ ಹೊಸ ಆರೋಪಗಳನ್ನು ಮಾಡಲು ಸರ್ಕಾರ ಈ ಚರ್ಚೆಯನ್ನು ಬಯಸುತ್ತಿದೆ ಎಂದು ಹೇಳಿದರು.
“ನೀವು ನೆಹರು ಬಗ್ಗೆ ಸದಾ ಮಾತನಾಡುತ್ತಿರುವುದರಿಂದ ಒಂದು ಕೆಲಸ ಮಾಡೋಣ. ಒಂದು ಚರ್ಚೆಗೆ ಸಮಯ ನಿಗದಿಪಡಿಸೋಣ. ನೆಹರು ವಿರುದ್ದದ ಎಲ್ಲಾ ಆರೋಪಗಳನ್ನು ಪಟ್ಟಿ ಮಾಡೋಣ. ಅವುಗಳ ಕುರಿತು ಚರ್ಚೆ ನಡೆಸಿ, ವಿಷಯವನ್ನು ಅಲ್ಲಿಗೆ ಮುಗಿಸಿ ಬಿಡೋಣ. ಅದರ ನಂತರ, ಇಂದಿನ ಸಮಸ್ಯೆಗಳಾದ ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡೋಣ” ಎಂದರು.
ವಂದೇ ಮಾತರಂ ಮೇಲೆ ಕಾಂಗ್ರೆಸ್ ತುಷ್ಟೀಕರಣದ ರಾಜಕೀಯ ಮಾಡಿದೆ ಎಂಬ ಪ್ರಧಾನಿ ಮೋದಿಯವರ ಆರೋಪವನ್ನು ಅಲ್ಲಗಳೆಯಲು ಪ್ರಿಯಾಂಕಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸುಭಾಷ್ ಚಂದ್ರ ಬೋಸ್ ನಡುವಿನ ಪತ್ರವ್ಯವಹಾರವನ್ನು ಉಲ್ಲೇಖಿಸಿದರು.
“ಬಂಕಿಮ್ ಚಂದ್ರ ಚಟರ್ಜಿ 1875ರಲ್ಲಿ ಈ ಗೀತೆಯನ್ನು ಬರೆದರು, ಮೊದಲ ಎರಡು ಚರಣಗಳನ್ನು ಬರೆದರು ಮತ್ತು 1882ರಲ್ಲಿ ನಾಲ್ಕು ಚರಣಗಳನ್ನು ಸೇರಿಸಿದ ನಂತರ ಆನಂದ್ ಮಠದಲ್ಲಿ ಪ್ರಕಟಿಸಿದರು. 1896ರಲ್ಲಿ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರು ಇದನ್ನು ಮೊದಲ ಬಾರಿಗೆ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯನ್ನಾಗಿ ಮಾಡುವ ನಿರ್ಧಾರವನ್ನು ಪ್ರಶ್ನಿಸುವುದು ಸಂವಿಧಾನ ಸಭೆ ಮತ್ತು ಅದರ ಸದಸ್ಯರನ್ನು ಪ್ರಶ್ನಿಸಿದಂತಿದೆ ಎಂದರು.
“ಮೋದಿಯವರು ಸುಮಾರು 12 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ. ಸರಿ ಸುಮಾರು ಅಷ್ಟೇ ಕಾಲ ನೆಹರು ಅವರು ಜೈಲಿನಲ್ಲಿದ್ದರು” ಎಂದು ನೆಹರು ವಿರುದ್ದದ ಮೋದಿ ಟೀಕೆಗೆ ಪ್ರಿಯಾಂಕಾ ತಿರುಗೇಟು ಕೊಟ್ಟರು.


