ವರ್ಷಾಂತ್ಯದ ಎರಡು ಪ್ರಮುಖ ದಿನಗಳಾದ ಡಿಸೆಂಬರ್ 25ರ ಕ್ರಿಸ್‌ಮಸ್ ಮತ್ತು ಡಿಸೆಂಬರ್ 31ರ ಹೊಸ ವರ್ಷದ ಸಂಜೆ (ಮುನ್ನಾದಿನ) ದೇಶದಾದ್ಯಂತ ಪ್ರತಿಭಟನೆ ನಡೆಸಲು ಗಿಗ್ ಕಾರ್ಮಿಕರು ನಿರ್ಧರಿಸಿದ್ದಾರೆ.
ಈಗಾಗಲೇ ಡಿಸೆಂಬರ್ 25ರ ಕ್ರಿಸ್‌ಮಸ್ ದಿನದಂದು ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಗಿಗ್ ಕಾರ್ಮಿಕರು, ವಿಶೇಷವಾಗಿ ಆ್ಯಪ್ ಆಧಾರಿತ ಆಹಾರ ವಿತರಣಾ ಏಜೆಂಟ್‌ಗಳು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಆಹಾರ ವಿತರಣೆ ಮತ್ತು ತ್ವರಿತ ವಾಣಿಜ್ಯ ಸೇವೆಗಳಲ್ಲಿ ಕೆಲವು ಅಡಚಣೆಗಳನ್ನು ಉಂಟಾಗಿರುವ ಬಗ್ಗೆ ವರದಿಯಾಗಿದೆ.
ನ್ಯಾಯಯುತ ಮತ್ತು ಪಾರದರ್ಶಕ ವೇತನ ಒದಗಿಸಬೇಕು, ಅಸುರಕ್ಷಿತ ’10 ನಿಮಿಷದ ವಿತರಣೆ’ (10-minute delivery) ಮಾದರಿಗಳನ್ನು ಕೊನೆಗೊಳಿಸಬೇಕು, ಅನಿಯಂತ್ರಿತ ಐಡಿ ನಿರ್ಬಂಧಿಸುವಿಕೆಯನ್ನು ಕೊನೆಗಾಣಿಸಬೇಕು ಮತ್ತು ಉತ್ತಮ ಸುರಕ್ಷತೆ, ವಿಶ್ರಾಂತಿ ವಿರಾಮಗಳು ಹಾಗೂ ಸಾಮಾಜಿಕ ಭದ್ರತಾ ಪ್ರಯೋಜನಗಳ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಗಿಗ್ ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ನ್ಯಾಯಯುತ ಮತ್ತು ಪಾರದರ್ಶಕ ವೇತನ ರಚನೆಯಲ್ಲಿ ರೈಡ್-ಹೇಲಿಂಗ್ ಚಾಲಕರಿಗೆ ಪ್ರತಿ ಕಿ.ಮೀಗೆ ಕನಿಷ್ಠ ರೂ. 20ಕ್ಕಿಂತ ಕಡಿಮೆಯಿಲ್ಲದ ಕನಿಷ್ಠ ದರವೂ ಸೇರಿದೆ. ದಿನಕ್ಕೆ 8 ಗಂಟೆಗಳ ಕೆಲಸ, ನಿಗದಿತ ಸಮಯಕ್ಕಿಂತ ಹೆಚ್ಚಿನ ಕೆಲಸಕ್ಕೆ ಹೆಚ್ಚುವರಿ ಪಾವತಿ, ಅಪಘಾತ, ಅನಾರೋಗ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಕಾರ್ಮಿಕರಿಗೆ ಬೆಂಬಲ ನೀಡಲು ಕ್ರಿಯಾತ್ಮಕ ವಿಮೆ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತಾ ಪ್ರಯೋಜನಗಳ ಬೇಡಿಕೆಯನ್ನು ಕಾರ್ಮಿಕರು ಮುಂದಿಟ್ಟಿದ್ದಾರೆ.
ಕ್ರಿಸ್‌ಮಸ್ ದಿನ ಫೆಡರೇಶನ್ ಆಫ್ ಆಪ್ ಬೇಸ್ಡ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ (ಐಎಫ್‌ಎಟಿ) ಮತ್ತು ತೆಲಂಗಾಣ ಗಿಗ್ ಅಂಡ್ ಫ್ಲ್ಯಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಡಬ್ಲ್ಯುಯು) ನೇತೃತ್ವದಲ್ಲಿ ಬೆಂಗಳೂರು ಹೈದರಾಬಾದ್, ಮುಂಬೈ ಮತ್ತು ದೆಹಲಿ ನಗರಗಳಲ್ಲಿ ಗಿಗ್ ಕಾರ್ಮಿಕರು ಪ್ರತಿಭಟಿಸಿದ್ದಾರೆ.
ಝೊಮ್ಯಾಟೋ, ಸ್ವಿಗ್ಗಿ, ಬ್ಲಿಂಕಿಟ್, ಝೆಪ್ಟೋ, ಆಮೆಝಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ವಿವಿಧ ಆಹಾರ ಮತ್ತು ಇತರ ವಸ್ತುಗಳ ವಿತರಣಾ ಆ್ಯಪ್‌ಗಳ ಸುಮಾರು 40 ಸಾವಿರ ವಿತರಣಾ ಏಜೆಂಟ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವರದಿಯಾಗಿದೆ.
ಕ್ರಿಸ್‌ಮಸ್ ದಿನದ ಪ್ರತಿಭಟನೆಯ ಬಿಸಿ ಹರಿಯಾಣದ ಗುರುಗ್ರಾಮ ನಗರದಲ್ಲಿ ಹೆಚ್ಚಾಗಿ ತಾಗಿದೆ ಎಂದು ವರದಿಯಾಗಿದೆ. ಅಲ್ಲಿನ ನಿವಾಸಿಗಳು ಆಹಾರ ಆರ್ಡರ್ ಮಾಡಿ ಗಂಟೆಗೂ ಹೆಚ್ಚು ಸಮಯ ಕಾಯುವಂತಾಗಿದೆ ಎಂದು ವರದಿಗಳು ಹೇಳಿವೆ.
ಆ್ಯಪ್ ಕಂಪನಿಗಳು ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಎರಡು ಬಹು ಬೇಡಿಕೆಯ ದಿನಗಳಾದ ಕ್ರಿಸ್‌ಮಸ್ ಮತ್ತು ಹೊಸ ವರ್ಷದಂದು ಕಾರ್ಮಿಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.


