ಜನಸಾಗರದ ನುಡವೆ ಅಜಾದಿ ಘೋಷಣೆಗಳು ಮೊಳಗಿದವು. ಎಲ್ಲಿ ನೋಡಿದರೂ ಜನರೇ ಗಿಜಿಗುಡುತ್ತಿದ್ದರು. ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂದಿನ ವಿಸ್ತಾರವಾದ ಬಯಲು ಜನರಿಂದ ತುಂಬಿ ಹೋಗಿತ್ತು. ಪ್ರಗತಿಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನಾ ಧರಣಿಯಲ್ಲಿ ಸಿಸಿಎ ಯಿಂದ ಅಜಾದಿ, ಎನ್.ಆರ್.ಸಿ ಯಿಂದ ಅಜಾದಿ, ಮೋದಿಯಿಂದ ಅಜಾದಿ, ಅಮಿತ್ ಶಾರಿಮದ ಅಜಾದಿ ಬೇಕು ಎಂದು ಪ್ರತಿಭಟನಾಕಾರರ ದೊಡ್ಡ ದನಿಯಲ್ಲಿ ಕೂಗಿ ಹೇಳಿದರು.
ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದವರಲ್ಲಿ ವಿದ್ಯಾರ್ಥಿಗಳು, ಯುವಜನರು, ವಕೀಲರು, ಪ್ರಗತಿಪರ ಚಿಂತಕರು, ಮುಸ್ಲಿಂ ಮೌಲ್ವಿಗಳು, ಜಾತ್ಯತೀತ ಮನೋಭಾವವುಳ್ಳವರು ಇದ್ದರು. ಡಿಸೆಂಬರ್ 19ರಂದು ಧರಣಿ ನಡೆಸಲು ಪೊಲೀಸರು ನಿಷೇಧಾಜ್ಞೆಯ ನೆಪದಲ್ಲಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಬಿಜೆಪಿ, ಮೋದಿ, ಅಮಿತ್ ಶಾ ವಿರುದ್ಧ ಘೋಷಣೆಗಳು ಮೊಳಗಿದವು. ಜನರನ್ನು ಒಡೆಯುವುದನ್ನು ನಿಲ್ಲಿಸಬೇಕು ಎಂದು ಸಾರಿ ಸಾರಿ ಹೇಳಿದರು.
ವಿಡಿಯೋ ನೋಡಿ
ವಾಹನದಲ್ಲಿದ್ದ ವೇದಿಕೆಯ ಮೇಲೆ ನಿಂತಿದ್ದ ಮುಖಂಡರು ಭಾಷಣ ಮಾಡುವುದಕ್ಕೂ ಮೊದಲು ಜನಗಣ ಮನ ರಾಷ್ಟ್ರಗೀತೆಯನ್ನು ಹಾಡಲಾಯಿತು. ಎಲ್ಲರೂ ರಾಷ್ಟ್ರಗೀತೆಯನ್ನು ಶಿಸ್ತಿನಿಂದ ಹಾಡಿದರು. ನೂರಾರು ಪೊಲೀಸರು ಕೂಡ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಭಾರತಕ್ಕೆ ಜಯವಾಗಲಿ, ಸಂವಿಧಾನ ಉಳಿಯಲಿ ಎಂದು ಕೂಗಿದರು. ಪ್ರತಿಭನಾಕಾರರು ಸಿಎಎ ಮತ್ತು ಎನ್ಆರ್‌ಸಿ ಯಿಂದಾಗುವ ಸಂಕಷ್ಟಗಳ ಕುರಿತು ಚರ್ಚೆ ನಡೆಸಿದರು. ಮಾತುಮಾತಿಗೂ ಅಜಾದಿ ಬೇಕೆಂದು ಒತ್ತಾಯಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಮದಣಿ ಕಾಯ್ದೆ ಜಾರಿಗೊಳಿಸಬಾರದು. ಇದರಿಂದ ಎಲ್ಲರೂ ಮತ್ತೊಮ್ಮೆ ಕ್ಯೂ ನಿಲ್ಲಬೇಕಾದಂತಹ ಪರಿಸ್ಥಿತಿ ಬರುತ್ತದೆ. ಅಷ್ಟೇ ಅಲ್ಲ, ಸಿಎಎ ಮತ್ತು ಎನ್ಆರ್‌ಸಿ ಸಂವಿಧಾನದ ಆರ್ಟಿಕಲ್ 14, 21 ಮತ್ತು 15ನೇ ಪರಿಚ್ಛೇದದ ಸ್ಪಷ್ಟ ಉಲ್ಲಂಘನೆಯಾಗಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಪದ್ದತಿ ನಿಲ್ಲಬೇಕು. ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಮತ್ತು ಎನ್ಆರ್‌ಸಿ ದೇಶದ ಜನರನ್ನು ಧರ್ಮಧ ಆಧಾರದಲ್ಲಿ ಒಡೆಯುತ್ತವೆ. ಇಂತಹ ಸಂವಿಧಾನಬಾಹಿರ ಮತ್ತು ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನಾವು ಈ ದೇಶದಲ್ಲಿ ಹುಟ್ಟಿದ್ದೇವೆ. ಈ ದೇಶದಲ್ಲಿ ಬೆಳೆದು ಬದುಕಿದ್ದೇವೆ. ಇಲ್ಲಿಯೇ ಸಾಯುತ್ತೇವೆ. ನಾವು ಭಾರತೀಯರು, ಭಾರತದ ಪೌರತ್ವವನ್ನು ಹುಟ್ಟಿನಿಂದಲೇ ಪಡೆದಿದ್ದೇವೆ. ಕೇಂದ್ರ ಸರ್ಕಾರ ಮತರಾಜಕಾರಣ ಮಾಡುತ್ತಿದೆ. ಜನರನ್ನು ಒಡೆಯುವ ಕೆಲಸ ಮಾಡುತ್ತಿದೆ. ಆದಿವಾಸಿಗಳು, ನಿರಾಶ್ರಿತರು, ಬಡವರು, ಭೂಮಿ ಇಲ್ಲದವರು, ಮನೆ ಇಲ್ಲದವರು, ಅಲೆಮಾರಿಗಳು, ಹಟ್ಟಿ, ಹಾಡಿ, ದೊಡ್ಡಿಗಳಲ್ಲಿ ವಾಸ ಮಾಡುತ್ತಿರುವವರಿಗೆ ಯಾವುದೇ ದಾಖಲೆಗಳಿಲ್ಲ. ಇಂತವರನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಸಿಎಎ-2019 ಕಾಯ್ದೆಯಂತೆ ಆಫ್ಘಾನಿಸ್ತಾನ, ಪಾಕಿಸ್ಥಾನ ಮತ್ತು ಬಾಂಗ್ಲಾದೇಶ ದಿಂದ ಬಂದಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯದವರು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದು ಕೇವಲ ಐದು ವರ್ಷ ನೆಲೆಸಿದ್ದರೆ ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸದೆ ಪೌರತ್ವ ನೀಡಲು ಅವಕಾಶ ಕಲ್ಪಿಸಲಾಗಿದೆ.
ಇದರಲ್ಲಿ ದೊಡ್ಡ ಯೋಜನೆಗಳಿಂದ ಸ್ಥಳಾಂತರಗೊಂಡವರು, ವಲಸೆ ಕಾರ್ಮಿಕರು, ಬುಡಕಟ್ಟು ಸಮುದಾಯಗಳು, ಕಳ್ಳಸಾಗಾಣಿಕೆಯಾದವರು, ಮದುವೆ ನಂತರ ಗಂಡನ ಮನೆಗೆ ಹೋದ ಮಹಿಳೆಯರು ಸೇರಿದಂತೆ ಇವರೆಲ್ಲರೂ ಎನ್.ಆರ್.ಸಿ. ಪೌರತ್ವದ ಆಧಾರಕ್ಕಾಗಿ ಬೇಕಾಗುವ 50 ವರ್ಷಗಳ ದಾಖಲೆಗಳನ್ನು ಪಡೆಯುವುದು ಕಷ್ಟಸಾಧ್ಯವೇ ಸರಿ ಎಂದು ಮುಖಂಡರು ಆರೋಪಿಸಿದರು.
ಶ್ರೀಲಂಕಾ ತಮಿಳರು, ಮ್ಯಾನ್ಮಾರಿನ ರೊಹಿಂಗ್ಯಾ ಸಮುದಾಯ, ಚೀನದಿಂದ ಬಂದಿರುವ ಬೌದ್ಧರು, ಬಾಂಗ್ಲಾದೇಶದ ಜಾತ್ಯತೀತ ವಿಚಾರವಾದಿಗಳು, ಪಾಕಿಸ್ತಾನದ ಆಹ್ಮದಿಯಾ ಸಮುದಾಯ ಮತ್ತು ಎಲ್ಲಾ ದೇಶಗಳ ಜಾತ್ಯತೀತರನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿ ಕಾಯ್ದೆ ಮೂಲಭೂತ ಹಕ್ಕುಗಳು, ನೈಸರ್ಗಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಭಾರತದಲ್ಲಿ ವಸುದೈವಂ ಕುಟುಂಬಕಂ’ ಮತ್ತು ‘ಸರ್ವೇಜನೋ ಸುಖಿನೋಭವಂತು’ ‘ಮಾನವ ಕುಲಂ ತಾನೊಂದೇ ವಲಂ’ ‘ಸರ್ವಜನಾಂಗದ ಶಾಂತಿಯ ತೋಟ’ ‘ಧಾರ್ಮಿಕ ಸಹಿಷ್ಣತೆ’, ‘ಭ್ರಾತೃತ್ವ’ ‘ಸೋದರತೆ ತತ್ವಗಳು ಮಾನವೀಯತೆಯನ್ನೇ ಸಾರುತ್ತವೆ. ಹಿಂದೂ, ಮುಸ್ಲಿಂ, ಕ್ರಿಶ್ಛಿಯನ್, ಬೌದ್ದ ಸಿಖ್, ಪಾರ್ಸಿ, ಜೈನ ಸೇರಿದಂತೆ ಹಲವು ಧರ್ಮಗಳ ಜನರು ಪರಸ್ಪರ ಯಾರಿಗೂ ತೊಂದರೆಯಾಗದಂತೆ ಸೋದರರಂತೆ ಜೀವಿಸುತ್ತಾ ಬಂದಿದ್ದಾರೆ. ಇಂತಹ ವೈವಿಧ್ಯಮಯ ಭಾಷೆ, ಧರ್ಮ, ಆಚಾರ-ವಿಚಾರಗಳ ಪರಂಪರೆಯನ್ನು ಹೊಂದಿರುವ ಭಾರತ ದೇಶದಲ್ಲಿ ಸಿಎಎ ಮತ್ತು ಎನ್‍ಆರ್‍ಸಿ ಜಾರಿಯಿಂದ ಜನತೆ ಘಾಸಿಗೊಂಡಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜನಪರ ಚಿಂತಕ ಪ್ರೊ.ಕೆ.ದೊರೈರಾಜ್, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ರಫೀಕ್ ಅಹಮದ್, ಮುಖಂಡರಾದ ಅಸ್ಲಾಂ ಪಾಷಾ, ನಯಾಜ್ ಅಹಮದ್, ಪರಿಸರವಾದಿ ಸಿ.ಯತಿರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಉಮೇಶ್, ಸಾಮಾಜಿಕ ಕಾರ್ಯಕರ್ತರಾದ ತಾಜುದ್ದೀನ್, ಅತೀಕ್ ಅಹಮದ್, ಸಿಐಟಿಯು ಮುಖಂಡ ಸೈಯದ್ ಮುಜೀಬ್, ಸಿಪಿಐ ಗಿರೀಶ್, ಸಿಪಿಎಂ ಎನ್.ಕೆ.ಸುಬ್ರಮಣ್ಯ, ಅಫ್ತಾಬ್, ಕುಮಾರ್, ಉಬೇದ್ ಅಹಮದ್, ನಿಸಾರ್ ಅಹಮದ್, ರಫೀಕ್, ಕೆಜಿಎನ್ ಮೊದಲಾದವರು ಉಪಸ್ಥಿತರಿದ್ದರು.


