ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ. ತಾಜುದ್ದೀನ್ ಅವರ ಮೇಲೆ ಸುಳ್ಳಾರೋಪ ಹೊರಿಸಿ ಅಕ್ರಮವಾಗಿ ಬಂಧಿಸಿದ್ದಕ್ಕೆ, ಅವರನ್ನು ಕಸ್ಟಡಿಯಲ್ಲಿಟ್ಟುಕೊಂಡು ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಕ್ಕೆ ಮತ್ತು ಅವರ ವೈಯಕ್ತಿಯ ಘನತೆಯನ್ನು ಹಾಳು ಮಾಡಿದ್ದಕ್ಕೆ ಪರಿಹಾರ ಒದಗಿಸಲು ನ್ಯಾಯಾಲಯ ಆದೇಶಿಸಿದೆ.
ತಾಜುದ್ದೀನ್‌ಗೆ ನೀಡಲಾದ 14 ಲಕ್ಷ ರೂಪಾಯಿ ಪರಿಹಾರ ಹಣದಲ್ಲಿ ಅವರ ಪತ್ನಿ ಮತ್ತು ಮೂವರು ಮಕ್ಕಳ ಪಾಲು ತಲಾ 1 ಲಕ್ಷ ರೂಪಾಯಿಗಳು ಸೇರಿವೆ.
ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ತಾಜುದ್ದೀನ್ ಅವರನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಪ್ಪಾಗಿ ಸರಗಳ್ಳತನ ಮಾಡುವ ವ್ಯಕ್ತಿ ಎಂದು ಪೊಲೀಸರು ಗುರುತಿಸಿದ್ದರು. 2018ರಲ್ಲಿ ಅವರು ತಮ್ಮ ಮಗಳ ಮದುವೆಗೆ ಕೇರಳಕ್ಕೆ ಬಂದಿದ್ದಾಗ ಪೊಲೀಸರು ಬಂಧಿಸಿ ಕಿರುಕುಳ ನೀಡಿದ್ದರು. ಮಾಡದ ತಪ್ಪಿಗೆ 54 ದಿನಗಳನ್ನು ತಾಜುದ್ದೀನ್ ಜೈಲಿನಲ್ಲಿ ಕಳೆದಿದ್ದರು.
ಅಕ್ಟೋಬರ್ 14, 2025ರಂದು ಹೊರಡಿಸಲಾದ ಆದೇಶದಲ್ಲಿ ನ್ಯಾಯಮೂರ್ತಿ ಪಿ.ಎಂ. ಮನೋಜ್ ಅವರು, ಪೊಲೀಸ್ ಅಧಿಕಾರಿಗಳು ಇಂತಹ ‘ಬೇಜವಾಬ್ದಾರಿ ಕೃತ್ಯಗಳಲ್ಲಿ ತೊಡಗದಂತೆ ನೋಡಿಕೊಳ್ಳಲು ಪರಿಹಾರ ನೀಡಲು ಆದೇಶಿಸಲಾಗಿದೆ. ಭವಿಷ್ಯದಲ್ಲಿ ಇತರ ಅಧಿಕಾರಿಗಳು ಇದೇ ರೀತಿಯ ಕ್ರಮಗಳಲ್ಲಿ ತೊಡಗದಂತೆ ತಡೆಯಬೇಕು ಎಂದು ಹೇಳಿದ್ದಾರೆ.
ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತಾಜುದ್ದೀನ್ ಮತ್ತು ಅವರ ಕುಟುಂಬವು ನಾಗರಿಕ ಕಾನೂನು ಪರಿಹಾರಗಳನ್ನು ಕೋರಲು ಸ್ವತಂತ್ರರು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರತಿಯನ್ನು ಜನವರಿ 8, 2026 ರಂದು ಪ್ರಕಟಿಸಲಾಗಿದೆ.
ತನಗೆ ನ್ಯಾಯ ಸಿಕ್ಕಿದರೂ, ಪ್ರಕರಣದ ಸಮಯದಲ್ಲಿ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಯಾತನೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ತಾಜುದ್ದೀನ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
“ಪ್ರಕರಣದ ನಂತರ ನನ್ನ ವ್ಯವಹಾರ ಕುಸಿದು ನಾನು ಭಾರೀ ನಷ್ಟ ಅನುಭವಿಸಿದ್ದೇನೆ. ಅವೆಲ್ಲದಕ್ಕೂ ನ್ಯಾಯಾಲಯದ ಆದೇಶ ಪರಿಹಾರ ನೀಡುವುದಿಲ್ಲ. ಆದರೂ, ನನಗೆ ನ್ಯಾಯ ಸಿಕ್ಕಿದೆ ಎಂದು ನಾನು ಹೇಳಬಲ್ಲೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಾನು ಸಿವಿಲ್ ಮೊಕದ್ದಮೆ ಹೂಡುತ್ತೇನೆ” ಎಂದು ತಾಜುದ್ದೀನ್ ಹೇಳಿದ್ದಾರೆ.


