ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು ಹೇಳಿ ಥಳಿಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಅಮರಕಂಟಕ್‌ನಲ್ಲಿ 22 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಐವರನ್ನು ಹೊರಹಾಕಿ, ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಜಿಎನ್‌ಟಿಯುನಲ್ಲಿ ಅಸ್ಸಾಂನ ಅರ್ಥಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿ ಹಿರೋಸ್ ಜ್ಯೋತಿ ದಾಸ್ ಅವರ ದೂರಿನ ಮೇರೆಗೆ ಬುಧವಾರ ಮಧ್ಯರಾತ್ರಿಯ ಮೊದಲು ಐದು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅನುಪ್ಪುರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ನವೀನ್ ತಿವಾರಿ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 296 (ಅಶ್ಲೀಲ ಕೃತ್ಯಗಳು ಮತ್ತು ಮಾತುಗಳು), 351(3) (ಕ್ರಿಮಿನಲ್ ಬೆದರಿಕೆ), ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಗುರುವಾರ ಹೇಳಿದರು.
ಕಳೆದ ತಿಂಗಳು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈಶಾನ್ಯದ ತ್ರಿಪುರದ ವಿದ್ಯಾರ್ಥಿನಿ ಅಂಜೆಲ್ ಚಕ್ಮಾ ಸಾವನ್ನಪ್ಪಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಚಕ್ಮಾ ಹತ್ಯೆ ಪ್ರಕರಣ ರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಯಿತು. ಇಂತಹ ದ್ವೇಷ ಅಪರಾಧಗಳ ವಿರುದ್ಧ ಕ್ರಮ ಮತ್ತು ಕಾನೂನುಗಳಿಗೆ ಕರೆಗಳು ಬಂದಿವೆ.
“ಐವರು ವಿದ್ಯಾರ್ಥಿಗಳನ್ನು ಶಿಸ್ತು ಸಮಿತಿಯು ಒಂದು ದಿನ ಮುಂಚಿತವಾಗಿ ವಿಶ್ವವಿದ್ಯಾಲಯದಿಂದ ಹೊರಹಾಕಿದೆ ಎಂದು ವಿಶ್ವವಿದ್ಯಾಲಯವು ನಮಗೆ ತಿಳಿಸಿದೆ. ದಾಸ್ ಅವರಿಂದ ದೂರು ಸ್ವೀಕರಿಸಿದ ನಂತರ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ದಾಸ್ ಪ್ರಕಾರ, ಅವರು ಶೌಚಾಲಯದಿಂದ ತಮ್ಮ ಹಾಸ್ಟೆಲ್ ಕೋಣೆಗೆ ಹಿಂತಿರುಗುತ್ತಿದ್ದಾಗ, ಆರೋಪಿಗಳು ನೀವು ಎಲ್ಲಿಂದ ಬಂದವರು ಮತ್ತು ವಿಶ್ವವಿದ್ಯಾಲಯದಲ್ಲಿ ಏನು ಮಾಡುತ್ತಿದ್ದೀರಿ ಎಂದು ಕೇಳಿದರು. ನಂತರ ಅವರು ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಅವರ ಮೇಲೆ ಹಲ್ಲೆ ನಡೆಸಿದರು” ಎಂದು ಅಧಿಕಾರಿ ಹೇಳಿದರು.
“ತಾನು ಕಳೆದ ಮೂರು ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದೇನೆ. ಬಳೆಯಿಂದ ಹೊಡೆದ ಪರಿಣಾಮ ತನ್ನ ಕಣ್ಣು, ತುಟಿ, ಮೂಗಿಗೆ ಗಾಯಗಳಾಗಿವೆ” ಎಂದು ಬಲಿಪಶು ಪೊಲೀಸರಿಗೆ ತಿಳಿಸಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.
“ವಿದ್ಯಾರ್ಥಿಯು ತಮ್ಮ ದೂರಿನಲ್ಲಿ ಅನುರಾಗ್ ಪಾಂಡೆ, ಜತಿನ್ ಸಿಂಗ್, ರಜನೀಶ್ ತ್ರಿಪಾಠಿ, ವಿಶಾಲ್ ಯಾದವ್ ಮತ್ತು ಉತ್ಕರ್ಷ್ ಸಿಂಗ್ ಅವರನ್ನು ಹೆಸರಿಸಿದ್ದಾರೆ” ಎಂದು ಅವರು ಹೇಳಿದರು.


