ಒಡಿಶಾದ ಧೆಂಕನಲ್‌ನಲ್ಲಿ ಪಾದ್ರಿಯೊಬ್ಬರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದು, ಸಗಣಿ ತಿನ್ನಿಸಿ, ಜೈ ಶ್ರೀರಾಮ್ ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ಜನವರಿ 4ರಂದು ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾದ್ರಿ ಬಿಪಿನ್ ಬಿಹಾರಿ ನಾಯಕ್, ಅವರ ಪತ್ನಿ ಮತ್ತು ಇತರ ಕೆಲವರೊಂದಿಗೆ ಪರ್ಜಂಗ್ ಗ್ರಾಮದ ಮನೆಯೊಂದರಲ್ಲಿ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದಾಗ ಸುಮಾರು 40 ಜನರ ಗುಂಪೊಂದು ಮನೆಯ ಹೊರಗೆ ಜಮಾಯಿಸಿತ್ತು ಎಂದು ವರದಿ ಹೇಳಿದೆ.
“ಗುಂಪು ನಾಯಕ್ ಅವರನ್ನು ಮನೆಯಿಂದ ಹೊರಗೆ ಬರಲು ಒತ್ತಾಯಿಸಿತು. ಪ್ರಾರ್ಥನೆ ಮುಗಿದ ನಂತರ ಹೊರಗೆ ಬರುವುದಾಗಿ ನಾಯಕ್ ಹೇಳಿದಾಗ, ಗುಂಪು ಮನೆಯೊಳಗೆ ಪ್ರವೇಶಿಸಿತು. ನಂತರ ಮನೆಯೊಳಗಿದ್ದ ಎಲ್ಲರಿಗೂ ಹೊಡೆಯಲು ಪ್ರಾರಂಭಿಸಿತು. ನಮ್ಮೊಂದಿಗೆ ಪ್ರಾರ್ಥನೆ ಮಾಡುತ್ತಿದ್ದ ಏಳು ಕುಟುಂಬಗಳು ಇದ್ದವು. ನನ್ನ ಮಕ್ಕಳು ಮತ್ತು ನಾನು ಮನೆಯಿಂದ ಹೊರಗೆ ಓಡಿಹೋಗುವಲ್ಲಿ ಯಶಸ್ವಿಯಾದೆವು ಮತ್ತು ಕಿರಿದಾದ ಓಣಿಯ ಮೂಲಕ ಹತ್ತಿರದ ಪೊಲೀಸ್ ಠಾಣೆಯ ಕಡೆಗೆ ಧಾವಿಸಿದೆವು” ಎಂದು ಪಾದ್ರಿ ನಾಯಕ್ ಅವರ ಪತ್ನಿ ವಂದನಾ ಹೇಳಿದ್ದಾಗಿ ಮಕ್ತೂಬ್ ಮೀಡಿಯಾ ಉಲ್ಲೇಖಿಸಿದೆ.
“ತನ್ನನ್ನು ಮನೆಯಿಂದ ಹೊರಗೆಳೆದು ದೇಹದ ಯಾವುದೇ ಜಾಗವೂ ಬಿಡದೆ ಥಳಿಸಿದರು. ಕಪಾಳಮೋಕ್ಷ ಮಾಡಿದರು. ಕೋಲುಗಳಿಂದ ಹೊಡೆದರು. ಹಣೆಗೆ ಮುಖಕ್ಕೆ ಕುಂಕುಮ ಬಳಿದು, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದರು. ನಂತರ ಬಜರಂಗದಳ ಸದಸ್ಯರು ಮತ್ತು ಕೆಲವು ಗ್ರಾಮಸ್ಥರು ಗ್ರಾಮದಾದ್ಯಂತ ಮೆರವಣಿಗೆ ಮಾಡಿದರು. ಇದು ಸುಮಾರು ಎರಡು ಗಂಟೆಗಳ ಕಾಲ ಮುಂದುವರೆಯಿತು” ಎಂದು ಪಾದ್ರಿ ನಾಯಕ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಈ ನಡುವೆ, ವಂದನಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡನನ್ನು ರಕ್ಷಿಸುವಂತೆ ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿದ್ದರು. ಸುಮಾರು ಎರಡು ಗಂಟೆಗಳ ನಂತರವೇ ಪೊಲೀಸರು ಗ್ರಾಮವನ್ನು ತಲುಪಿದರು ಎಂದು ವರದಿ ಹೇಳಿದೆ.
“ತಾನು ಪದೇ ಪದೇ ವಿನಂತಿಸಿಕೊಂಡರೂ, ಪೊಲೀಸರು ಆರಂಭದಲ್ಲಿ ಗ್ರಾಮದಲ್ಲಿ ಯಾರೂ ಇಲ್ಲ ಎಂದು ಹೇಳಿ ತನ್ನನ್ನು ದಾರಿ ತಪ್ಪಿಸಿದರು ಎಂದು ವಂದನಾ ತಿಳಿಸಿದ್ದಾರೆ. ಕೊನೆಗೆ ನಾನು ಪೊಲೀಸರೊಂದಿಗೆ ಗ್ರಾಮಕ್ಕೆ ತೆರಳಿದಾಗ ಕಂಡದ್ದು ಭಯಾನಕ ದೃಶ್ಯವಾಗಿತ್ತು ಎಂದಿದ್ದಾರೆ.
“ನನ್ನ ಗಂಡನನ್ನು ಗ್ರಾಮದ ಹನುಮಾನ್ ದೇವಸ್ಥಾನಕ್ಕೆ ಕಟ್ಟಿ ಹಾಕಲಾಗಿತ್ತು. ಅವರ ಎರಡೂ ಕೈಗಳನ್ನು ರಾಡ್‌ನ ಹಿಂದೆ ಕಟ್ಟಲಾಗಿತ್ತು. ಅವರಿಗೆ ಹಸುವಿನ ಸಗಣಿ ತಿನ್ನುವಂತೆ ಒತ್ತಾಯಿಸುತ್ತಿದ್ದರು. ತೀವ್ರ ರಕ್ತಸ್ರಾವವಾಗುತ್ತಿತ್ತು. ಜನರು ಅವರಿಗೆ ಕಪಾಳಮೋಕ್ಷ ಮಾಡಿ ಜೈ ಶ್ರೀ ರಾಮ್ ಕೂಗುವಂತೆ ಒತ್ತಾಯಿಸುತ್ತಿದ್ದರು” ಎಂದು ವಂದನಾ ವಿವರಿಸಿದ್ದಾರೆ.
ಪೊಲೀಸರ ಮಧ್ಯಪ್ರವೇಶದ ಹೊರತಾಗಿಯೂ, ಗುಂಪು ತಕ್ಷಣ ಹಲ್ಲೆ ನಡೆಸುವುದನ್ನು ನಿಲ್ಲಿಸಿರಲಿಲ್ಲ. ಕೊನೆಗೆ ಪೊಲೀಸರು ನಾಯಕ್ ಅವರನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ವರದಿ ಉಲ್ಲೇಖಿಸಿದೆ.
ಠಾಣೆಗೆ ಕರೆದೊಯ್ದ ಮೇಲೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದೆ ನಾಯಕ್ ಅವರನ್ನು ಸುಮಾರು ಒಂದು ಗಂಟೆಗಳ ಕಾಲ ಸುಮ್ಮನೆ ಕೂರಿಸಲಾಗಿತ್ತು. ನಾನು ಠಾಣೆಗೆ ತಲುಪುವ ಹೊತ್ತಿಗೆ, ಅವರು ಅಲ್ಲಿಯೇ ಮೂರ್ಛೆ ಹೋಗಿದ್ದರು. ಅವರು ಬರಿಗಾಲಿನಲ್ಲಿದ್ದರು ಮತ್ತು ಮುಖದ ಮೇಲೆ ಕುಂಕುಮವಿತ್ತು. ಅವರು ಭಯಾನಕ ಸ್ಥಿತಿಯಲ್ಲಿದ್ದರು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿರುವುದಾಗಿ ವರದಿ ತಿಳಿಸಿದೆ.
ನಾಯಕ್ ಬಲವಂತದ ಧಾರ್ಮಿಕ ಮತಾಂತರಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗುಂಪು ಹಲ್ಲೆ ನಡೆಸಲಾಗಿದೆ. ಗ್ರಾಮದ ಸರಪಂಚ್ ಮಾಡಿದ ಮತಾಂತರದ ಆರೋಪಗಳನ್ನು ಉಲ್ಲೇಖಿಸಿ ಪೊಲೀಸರು ಈ ವಿಷಯವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದರು ಮತ್ತು ಆರಂಭದಲ್ಲಿ ದೂರು ದಾಖಲಿಸಲು ನಿರಾಕರಿಸಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಆರೋಪಿಸಿದ್ದಾರೆ.
ಪದೇ ಪದೇ ಒತ್ತಾಯಿಸಿದ ನಂತರ ಕೊನೆಗೆ ದೂರು ದಾಖಲಿಸಲಾಯಿತಾದರೂ, ಬಲವಂತದ ಮತಾಂತರದ ಆರೋಪ ಹೊರಿಸಿ ನಾಯಕ್ ವಿರುದ್ಧ ಪ್ರತಿ ಎಫ್‌ಐಆರ್ ಕೂಡ ದಾಖಲಿಸಲಾಗಿದೆ ಎಂದು ವಂದನಾ ತಿಳಿಸಿದ್ದಾರೆ.


