ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಹಳ್ಳಿಯೊಂದರ ಖಾಲಿ ಮನೆಯಲ್ಲಿ ನಮಾಝ್ ಮಾಡಿದ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ ವರದಿಯಾಗಿದೆ.
ಅನುಮತಿ ಪಡೆಯದೆ ನಮಾಝ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು theprint.in ವರದಿ ಮಾಡಿದೆ. ಮನೆಯೊಳಗೆ ಜನರು ನಮಾಝ್ ಮಾಡಿದ್ದು ಎನ್ನಲಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ಹಲವು ವಾರಗಳಿಂದ ಖಾಲಿ ಮನೆಯನ್ನು ತಾತ್ಕಾಲಿಕ ಮದ್ರಸವಾಗಿ ಬಳಸಲಾಗುತ್ತಿದೆ ಎಂಬ ಮಾಹಿತಿ ಮೊಹಮ್ಮದ್‌ಗಂಜ್ ಗ್ರಾಮದ ಜನರಿಂದ ಬಂದ ನಂತರ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ ಎಂದು ಎಸ್‌ಪಿ (ದಕ್ಷಿಣ) ಅಂಶಿಕಾ ವರ್ಮಾ ತಿಳಿಸಿದ್ದಾಗಿ theprint.in ಉಲ್ಲೇಖಿಸಿದೆ.
“ಅನುಮತಿ ಇಲ್ಲದೆ ಯಾವುದೇ ಹೊಸ ಧಾರ್ಮಿಕ ಚಟುವಟಿಕೆ ಅಥವಾ ಸಭೆ ನಡೆಸುವುದು ಕಾನೂನಿನ ಉಲ್ಲಂಘನೆಯಾಗಿದೆ. ಅಂತಹ ಚಟುವಟಿಕೆಗಳು ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಸ್‌ಪಿ ಹೇಳಿದ್ದಾರೆ. ಜನರು ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಬಂಧಿತ 12 ಜನರ ಮೇಲೆ ಶಾಂತಿ ಭಂಗಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಖಾಲಿ ಇರುವ ಮನೆ ಹನೀಫ್ ಎಂಬುವವರಿಗೆ ಸೇರಿದ್ದು, ಶುಕ್ರವಾರದ ನಮಾಜ್‌ಗೆ ತಾತ್ಕಾಲಿಕವಾಗಿ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಅಧಿಕಾರಿಗಳು ಕೇಳಿದಾಗ ಯಾವುದೇ ಲಿಖಿತ ಅನುಮತಿ ಅಥವಾ ಮಾನ್ಯ ದಾಖಲೆಗಳನ್ನು ತೋರಿಸಲು ಸಾಧ್ಯವಾಗಿಲ್ಲ.
ಮನೆಯಲ್ಲಿ ಅನುಮತಿಯಿಲ್ಲದೆ ನಿಯಮಿತವಾಗಿ ಪ್ರಾರ್ಥನೆ ನಡೆಸುವುದಕ್ಕೆ ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು, ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಸಭೆಯನ್ನು ನಿಲ್ಲಿಸಿದ್ದಾರೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ಆನ್‌ಲೈನ್ ವಿಡಿಯೋವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


