ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿರುವ ಎಸ್‌ಸಿ ಮತ್ತು ಅದಾನಿ ಪರ ಅಮೆರಿಕ ಮೂಲದ ವಕೀಲರು, ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಎಸ್‌ಇಸಿಯ ಸಮನ್ಸ್‌ಗಳನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದಾಗಿ, ಅದಾನಿಗಳಿಗೆ ಹೇಗೆ ಸಮನ್ಸ್ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡುವ ಅಗತ್ಯವಿಲ್ಲ ಎಂದು ವರದಿಗಳು ಹೇಳಿವೆ.
ಅಮೆರಿಕದ ಕಾನೂನಿನ ಪ್ರಕಾರ ಈ ಪ್ರಕರಣದಲ್ಲಿ ಅದಾನಿಗಳಿಗೆ ಸಮನ್ಸ್ ಕೊಡುವುದು ಕಡ್ಡಾಯವಾಗಿದೆ. ಹಾಗಾಗಿ, ಎಸ್‌ಇಸಿ ಹೇಗ್ ಕನ್ವೆನ್ಷನ್ ಮೂಲಕ ಎರಡು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅದನ್ನು ಅದಾನಿಗಳಿಗೆ ತಲುಪಿಸಲು ಎರಡೂ ಬಾರಿಯೂ ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯ ನಿರಾಕರಿಸಿತ್ತು. ಸಮನ್ಸ್‌ಗಳಲ್ಲಿ ತಾಂತ್ರಿಕ ದೋಷಗಳಿದ್ದವು. ಅಂದರೆ, ಅದರ ಮೇಲೆ ಅಗತ್ಯವಾದ ಅಧಿಕೃತ ಸೀಲ್ ಮತ್ತು ಇಂಕ್ ಸಹಿ ಮುಂತಾದವು ಸರಿಯಾಗಿ ಇರಲಿಲ್ಲ ಎಂದು ಸರ್ಕಾರ ಜಾರಿಕೊಂಡಿತ್ತು.
ಭಾರತ ಸರ್ಕಾರ ಎರಡು ಬಾರಿ ಸಮನ್ಸ್ ತಲುಪಿಸಲು ನಿರಾಕರಿಸಿದ ಕಾರಣ ಎಸ್‌ಇಸಿಗೆ ಹೇಗ್ ಕನ್ವೆನ್ಷನ್ ಮೂಲಕ ಸಮನ್ಸ್ ತಲುಪಿಸುವುದು ಕಷ್ಟವಾಗಿತ್ತು. ಇದರಿಂದಾಗಿ ಅದು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್ ಫೆಡರಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಾಮಾನ್ಯ ಪ್ರಕ್ರಿಯೆಯನ್ನು ಬಿಟ್ಟು ಬೇರೆ ಮಾರ್ಗದ ಮೂಲಕ (ಇ-ಮೇಲ್ ಮೂಲಕ) ಸಮನ್ಸ್ ತಲುಪಿಸಲು ಅನುಮತಿ ಕೇಳಿತ್ತು. ಈ ನಡುವೆ ಅದಾನಿಗಳು ಸಮನ್ಸ್ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಧೀಶರು ಈ ಜಂಟಿ ಅರ್ಜಿಯನ್ನು ಅನುಮೋದಿಸಿದರೆ, ಅದಾನಿಯವರಿಗೆ ಎಸ್‌ಇಸಿ ದೂರಿನ ಮೇಲೆ ಪ್ರತಿಕ್ರಿಯಿಸಲು ಅಥವಾ ಆ ಪ್ರಕರಣವನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಲು 90 ದಿನಗಳ ಕಾಲಾವಕಾಶ ಸಿಗಲಿದೆ. ಅದಾನಿಯವರ ಪ್ರತಿಕ್ರಿಯೆಯ ನಂತರ, ಎಸ್‌ಇಸಿ ತನ್ನ ಆಕ್ಷೇಪಣೆ ಅಥವಾ ವಿರೋಧವನ್ನು ಸಲ್ಲಿಸಲು ಮುಂದಿನ 60 ದಿನಗಳ ಕಾಲಾವಕಾಶ ಹೊಂದಿರುತ್ತದೆ. ಎಸ್‌ಇಸಿ ಸಲ್ಲಿಸಿದ ಆಕ್ಷೇಪಣೆಗಳಿಗೆ ಅದಾನಿಯವರು ತಮ್ಮ ಅಂತಿಮ ಪ್ರತ್ಯುತ್ತರವನ್ನು ನೀಡಲು 45 ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ.
ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಅವರು 2021 ರ ಬಾಂಡ್ ವಿತರಣೆಯ ಸಮಯದಲ್ಲಿ ಅಮೆರಿಕದ ಹೂಡಿಕೆದಾರರಿಗೆ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಸುಮಾರು $265 ಮಿಲಿಯನ್ (ಅಂದಾಜು ₹2,200 ಕೋಟಿ) ಲಂಚ ನೀಡುವ ಯೋಜನೆಯ ಬಗ್ಗೆ ಹೂಡಿಕೆದಾರರಿಂದ ಮಾಹಿತಿಯನ್ನು ಮರೆಮಾಚಲಾಗಿದೆ. ಹೂಡಿಕೆದಾರರಿಗೆ ಕಂಪನಿಯು ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ ಎಂದು ನಂಬಿಸಿ, ಅಕ್ರಮವಾಗಿ ಹಣ ಸಂಗ್ರಹಿಸಲಾಗಿದೆ ಈ ಎಲ್ಲಾ ಆರೋಪಗಳನ್ನು ಮಾಡಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ಮೇಲೆ ಎಸ್‌ಇಸಿ ನವೆಂಬರ್ 2024 ರಲ್ಲಿ ದೂರು ದಾಖಲಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್, ಈ ಆರೋಪಗಳು ಆಧಾರರಹಿತವಾಗಿವೆ ಎಂದು ತಿರಸ್ಕರಿಸಿದೆ. ಅಲ್ಲದೆ, ಎಜಿಇಎಲ್ ಕಂಪನಿಯು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಮತ್ತು ಕಂಪನಿಯ ಯಾವುದೇ ನಿರ್ದೇಶಕರ ಮೇಲೆ ಲಂಚ ಅಥವಾ ಭ್ರಷ್ಟಾಚಾರದ ಅಪರಾಧ ಆರೋಪಗಳನ್ನು ಹೊರಿಸಲಾಗಿಲ್ಲ ಎಂದು ವಾದಿಸಿದೆ.


