2018ರ ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯನ್ನು ಗೃಹ ಸಚಿವಾಲಯವು ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿದೆ. ಅದರ ಬೆನ್ನಲ್ಲೇ ವ್ಯಾಪಕ ವಿರೋಧ ಕೇಳಿಬಂದಿದೆ.
ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯ ಕುರಿತು ಮಹಾರಾಷ್ಟ್ರ ಸರ್ಕಾರವು ಪುಣೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಒಂದು ದಿನದಲ್ಲಿಯೇ ಕೇಂದ್ರ ಸರ್ಕಾರವು ತನಿಖೆಯನ್ನು ಎನ್‌ಐಎಗೆ ವಹಿಸಿರುವುದರಿಮದ ಮತ್ತೊಮ್ಮೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದ್ದು, ನಿರಪರಾಧಿಗಳ ಮೇಲೆ ಉದ್ದೇಶಪೂರ್ವಕವಾಗಿ ಹಾಕಲಾಗಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಬುದ್ಧಿಜೀವಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ತಯಾರಿ ನಡೆಸುತ್ತಿದ್ದರೆ, ಅದನ್ನು ತಡೆಯಲೇಂದೆ ಕೇಂದ್ರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.
ಈ ಕುರಿತು ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್‌ಮುಖ್ ಕೇಂದ್ರದ ವಿರುದ್ಧ ಕಿಡಿಕಾರಿದ್ದು “ಈ ಪ್ರಕರಣವನ್ನು ರಾಜ್ಯದ ಅನುಮತಿಯಿಲ್ಲದೆ ವರ್ಗಾಯಿಸಲಾಗಿದೆ, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಮತ್ತು ನಾನು ಅದನ್ನು ಖಂಡಿಸುತ್ತೇನೆ” ಎಂದಿದ್ದಾರೆ.
I strongly condemn the decision to transfer the investigation of "Koregaon-Bhima" case to NIA, by the Central Government without any consent of Maharashtra State Government..@PMOIndia@HMOIndia@PawarSpeaks@supriya_sule pic.twitter.com/Ov8PZlSknG
— ANIL DESHMUKH (@AnilDeshmukhNCP) January 24, 2020
ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವಾದ್, “ಕಾನೂನು ಸುವ್ಯವಸ್ಥೆ ರಾಜ್ಯ ವಿಷಯವಾಗಿದೆ ಎಂದು ಕೇಂದ್ರಕ್ಕೆ ನೆನಪಿಸಲು ಬಯಸುತ್ತೇನೆ. ಕೇಂದ್ರದ ನೇರ ಕ್ರಮವು ಸಂವಿಧಾನವನ್ನು ಅವಮಾನಿಸುವಂತಿದೆ. ಸಂವಿಧಾನವು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧವನ್ನು ಸ್ಪಷ್ಟವಾಗಿ ಹೇಳುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿದ್ದು, ರಕ್ಷಣೆ ಮಾತ್ರ ಕೇಂದ್ರಕ್ಕೆ ಸಂಬಂಧಿಸಿದೆ. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಸವಾರಿ ಮಾಡಿದರೆ ಸಂವಿಧಾನಕ್ಕೆ ವಿರುದ್ಧವಿದ್ದೀರಿ ಎಂದರ್ಥ” ಎಂದು ಆಕ್ರೋಶ ಹೊರಹಾಕಿದ್ದಾರೆ.
Anyone who opposes the MOSH agenda of hate is an “Urban Naxal”.
Bhima-Koregaon is a symbol of resistance that the Government’s NIA stooges can never erase. https://t.co/vIMUSs2pjL
— Rahul Gandhi (@RahulGandhi) January 25, 2020
ಮೋದಿ-ಶಾರ ದ್ವೇಷದ ಕಾರ್ಯಸೂಚಿಯನ್ನು ವಿರೋಧಿಸುವವರನ್ನು “ಅರ್ಬನ್ ನಕ್ಸಲ್” ಎಂದು ಹಣೆಪಟ್ಟೆ ಕಟ್ಟಲಾಗುತ್ತದೆ. ಭೀಮಾ-ಕೋರೆಗಾಂವ್ ಪ್ರತಿರೋಧದ ಸಂಕೇತವಾಗಿದ್ದು, ಅದನ್ನು ಸರ್ಕಾರದ ಎನ್‌ಐಎ ತನಿಖೆ ಎಂದಿಗೂ ಅಳಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣದ ಪರಿಶೀಲನೆ ನಡೆಸುತ್ತೇವೆ: ಮಹಾರಾಷ್ಟ್ರ ಗೃಹ ಸಚಿವ
ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದಾರೆ. “ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಿ ನಗರ ನಕ್ಸಲರನ್ನು ಕೃತ್ಯವನ್ನು ಬಹಿರಂಗಪಡಿಸಿದೆ. ಸುಪ್ರೀಂ ಕೋರ್ಟ್ ಕೂಡ ಮಹಾರಾಷ್ಟ್ರ ಪೊಲೀಸರ ಪರವಾಗಿ ತೀರ್ಪು ನೀಡಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕೇಸುಗಳನ್ನು ಹಿಂಪಡೆಯಲು ಯೋಜಿಸಿದೆ ಎಂದು ದೂರಿದ್ದಾರೆ.
ಏನಿದು ಪ್ರಕರಣ?
ಈ ಪ್ರಕರಣವು 2018ರ ಜನವರಿ 01ರಂದು ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್ ಬಳಿ ದಲಿತ ಗುಂಪುಗಳು 200ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸುತ್ತಿದ್ದಾಗ ಹಿಂಸಾಚಾರವನ್ನು ಕಂಡುಬಂದಿತ್ತು. ಡಿಸೆಂಬರ್ 31, 2017 ರಂದು ನಡೆದ ಎಲ್ಗರ್ ಪರಿಷತ್‌ನಲ್ಲಿ ಭಾಷಣ ಮಾಡಿದ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ವಿರುದ್ಧ ಪುಣೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದರು. ಕಾರ್ಯಕರ್ತರ ಮೇಲೆ ಹಿಂಸಾಚಾರವನ್ನು ಪ್ರಚೋದಿಸಲಾಯಿತು ಮತ್ತು ದೇಶಾದ್ಯಂತ ದಾಳಿಗಳಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದರು. ಅಲ್ಲದೇ ಸಭೆಯ ಸಂಘಟಕರಿಗೆ ನಕ್ಸಲ್ ಸಂಪರ್ಕವಿದೆ ಎಂದು ಪೊಲೀಸರು ಹೇಳಿಕೊಂಡಿದ್ದರು.
1818ರ ಸಮಯದಲ್ಲಿ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟ ಮಹರ್ ಸಮುದಾಯದ ಸೈನಿಕರು ಜಾತಿ ತಾರತಮ್ಯ, ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು ಮೇಲ್ಜಾತಿ ಪೇಶ್ವೆಗಳ ವಿರುದ್ಧದ ಮೂರನೇ ಆಂಗ್ಲೋ-ಮರಾಠಾ ಯುದ್ದದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಬೆಂಬಲಿಸಿದರು. ಕೇವಲ 500 ಜನ ದಲಿತ ಸೈನಿಕರು ದಿಟ್ಟ ಹೋರಾಟದ ಮೂಲಕ ಪೇಶ್ವೆ ಸೈನ್ಯವನ್ನು ಮಣಿಸಿದ ನೆನಪಿಗಾಗಿ ಇಲ್ಲಿ ಪ್ರತಿವರ್ಷ ವಿಜಯೋತ್ಸವ ಆಚರಿಸಲಾಗುತ್ತದೆ.


