Homeಮುಖಪುಟತೊಂಭತ್ತರ ಹರೆಯದಲ್ಲೂ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತ ಹಿರಿಯಜ್ಜ..!!

ತೊಂಭತ್ತರ ಹರೆಯದಲ್ಲೂ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತ ಹಿರಿಯಜ್ಜ..!!

2019ನೆಯ ವರ್ಷದ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕೃತರಾದ ಜಾನ್ ಈವರೆಗಿನ ನೊಬೆಲ್ ಪುರಸ್ಕೃತರಲ್ಲೇ ಹಿರಿಯರು...

- Advertisement -
- Advertisement -

ಇದೇ ವರ್ಷದ ಜುಲೈ 22ಕ್ಕೆ 98ವರ್ಷ ತುಂಬುವ ಹಿರಿಯಜ್ಜ ಪ್ರತಿದಿನವೂ ಪ್ರಯೋಗಾಲಕ್ಕೆ ಹೋಗಿ ಬರುತ್ತಾರೆಂದರೆ ದೊಡ್ಡ ಅಚ್ಚರಿಯೇ! ಜಾನ್ ಗುಡ್‌ಎನಫ್ ತಮ್ಮ ತೊಂಭತ್ತರ ಹರೆಯದಲ್ಲಿ ದಿನವೂ ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜನಿಯರಿಂಗ್ ಮತ್ತು ಮಟೆರಿಯಲ್ ವಿಜ್ಞಾನ ಪ್ರಯೋಗಾಲಕ್ಕೆ ಹೋಗಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ.2019ನೆಯ ವರ್ಷದ ರಸಾಯನ ವಿಜ್ಞಾನದ ನೋಬೆಲ್ ಪುರಸ್ಕೃತರೂ ಆಗಿರುವ ಜಾನ್ ಈವರೆಗಿನ ನೊಬೆಲ್ ಪುರಸ್ಕೃತರಲ್ಲೇ ಹಿರಿಯರು. ಅಷ್ಟೇ ಅಲ್ಲ ಪ್ರಶಸ್ತಿ ಸ್ವೀಕಾರಕ್ಕೂ ಗಾಲಿ ಖುರ್ಚಿಯಲ್ಲೇ ಬಂದು, ತಮ್ಮ ಭಾಷಣವನ್ನೂ ಮಾಡಿದರು.

ನಾಗರಿಕ ಜಗತ್ತಿಗೆ ಮಹತ್ವವಾದ ಅನ್ವೇಷಣೆಯನ್ನು ತಮ್ಮ 50ರ ಹರೆಯದಲ್ಲಿಯೇ ಕೊಡುಗೆಯಾಗಿ ಕೊಟ್ಟ ಈ ವಿಜ್ಞಾನಿಗೆ ಇನ್ನೂ ಮತ್ತೂ ಮಹತ್ತರವಾದ ತಮ್ಮ ಕನಸೊಂದನ್ನು ನನಸು ಮಾಡುವ ಬಯಕೆಯಂತೆ.

ಇಪ್ಪತ್ತನೆಯ ಶತಮಾನದ ಎರಡು ಮಹತ್ವದ ಶೋಧಗಳೆಂದರೆ ಇಲೆಕ್ಟ್ರಾನಿಕ್ ಲೋಕವನ್ನು ಸಾಧ್ಯಮಾಡಿದ ಟ್ರಾನ್ಸ್ಸಿಸ್ಟರ್ ಮತ್ತು ಇಡೀ ಎಲೆಕ್ಟ್ರಾನಿಕ್ ಲೋಕವನ್ನು ಮೊಬೈಲಾಗಿಸಿದ ಹಗುರವಾದ ಲಿತಿಯಂ ಅಯಾನಿನ ಬ್ಯಾಟರಿ. ಗಾತ್ರದಲ್ಲಿ ಎರಡೂ ಒಂದನ್ನೊಂದು ಪೈಪೋಟಿ ಮಾಡುತ್ತಾ ಚಿಕ್ಕದಾಗುತ್ತಾ ಬೆಳೆದವು. ಟ್ರಾನ್ಸಿಸ್ಟರ್ ಅನ್ವೇಷಣೆಯನ್ನು ಬೆಲ್ ಪ್ರಯೋಗಾಲಯದ ವಿಜ್ಞಾನಿಗಳು 1947ರಲ್ಲಿಯೇ ಮಾಡಿ ಇಂದಿನ ಇಲೆಕ್ಟ್ರಾನಿಕ್ ಜಗತ್ತನ್ನು ಇಷ್ಟು ಅಗಲವಾಗಿ ಬೆಳೆಸಿದ್ದಾರೆ. ಅದರ ಈ ಬೆಳವಣಿಗೆಯನ್ನು ಚಲನೆಗೆ ಒಗ್ಗುವಂತೆ ಮಾಡಿದ ಕೀರ್ತಿಯು ಚಿಕ್ಕದಾಗುತ್ತಾ-ಹಗುರವಾಗುತ್ತಾ ಬೆಳೆಯುತ್ತಿರುವ ಲಿತಿಯಂ ಬ್ಯಾಟರಿಯದು. ಸಮಕಾಲೀನ ನಾಗರಿಕತೆಯಲ್ಲಿ ಒಟ್ಟಾರೆ ಆರ್ಥಿಕ ವಹಿವಾಟಿನಲ್ಲಿ ಇಲೆಕ್ಟ್ರಾನಿಕ್ ಉದ್ಯಮದ ಪಾತ್ರ ಹಿರಿದು. ಎಷ್ಟೆಂದರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನು! ನಮ್ಮ ಆಲೋಚನೆಗಳಿಗೆ ಧ್ವನಿಯನ್ನು ಅಷ್ಟೇ ವೇಗವಾಗಿ ಹರಿಬಿಡಲು ಸಾಧ್ಯವಾಗುತ್ತಿದೆ ಎಂದರೆ, ಅದಕ್ಕೆ ಸಾಧನವಾಗಿ ಶಕ್ತಿ ಒದಗಿಸುವ ಲಿತಿಯಂ ಬ್ಯಾಟರಿಯ ಚಮತ್ಕಾರವು ಅದರಲ್ಲಿ ಬೆರೆತಿದೆ. ಇದರ ಹಿಂದಿರುವ ವಿಜ್ಞಾನಿಯೇ ಈ ಹಿರಿಯಜ್ಜ, ಇನ್ನೂ ಕನಸುಗಳನ್ನು ಹೊತ್ತು ದಿನವೂ ಪ್ರಯೋಗಾಲಯಕ್ಕೆ ಅಲೆಯುತ್ತಿದ್ದಾರೆ.

ಕಳೆದ 60-70 ವರ್ಷದ ವೈಜ್ಞಾನಿಕ ಬದಲಾವಣೆಗಳಲ್ಲಿ ಮಹತ್ವವಾದ ಪೋಲಿಯೋ ವ್ಯಾಕ್ಸೀನು, ರಾಕೆಟ್ ತಂತ್ರಜ್ಞಾನ-ಆ ಮೂಲಕ ಸಾಧ್ಯವಾದ- ವ್ಯೋಮಯಾನ, ಇಂಟರ್ನೆಟ್ ಬೆಳವಣಿಗೆಗಳು ನಮ್ಮ ನಾಗರಿಕ ಬದುಕಿನ ನೋಟವನ್ನೇ ಅಚ್ಚರಿಗೊಳಿಸಿವೆ. ಇದನ್ನೆಲ್ಲಾ ಸಾಧ್ಯಮಾಡಲು ಒಳಗೆ ಮುಚ್ಚಿಟ್ಟ ಡಬ್ಬಿಯಲ್ಲಿ ಅಡಗಿದ ಬ್ಯಾಟರಿಯು ಇಡೀ ಕೌತುಕವನ್ನು ಜನಪ್ರಿಯಗೊಳಿಸುತ್ತಾ ತನ್ನ ಶಕ್ತಿಯನ್ನು ಕೊಡುತ್ತಿದೆ. ಈ ಲಿತಿಯಂ ಬ್ಯಾಟರಿಯನ್ನು 1980ರಲ್ಲಿ ಮೊದಲಬಾರಿಗೆ ಜಾನ್ ಗುಡ್‌ಎನಫ್ ರೂಪುಗೊಳಿಸಿದರು.

ನಂತರ 1991ರಲ್ಲಿ ಅದು ಸೋನಿ ಕಂಪನಿಯ ಮೂಲಕ ನಾಗರಿಕ ಬದುಕಿಗೆ ಪರಿಚಯಗೊಂಡಿತು. ಈ ಬ್ಯಾಟರಿಗಳು ಆ ಮೊದಲೂ ಇಲ್ಲವೆಂದಲ್ಲ ಇದ್ದವು ಅವು ಆಮ್ಲದೊಳಗೆ ಮುಳುಗಿದ್ದ ಲೋಹದ ಸರಳುಗಳನ್ನು ಒಳಗೊಂಡು ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿ ಎಲ್ಲಿಯಾದರೂ ಕೊಂಡೊಯ್ಯಲು ಅಸಾಧ್ಯ ಎನ್ನುವಂತಿದ್ದವು. ಆದರೆ ಲಿತಿಯಂ ಅತ್ಯಂತ ಹಗುರವಾದ ಲೋಹವಾಗಿದ್ದು ಅದರ ಮೂಲಕ ಇಂದು ಬ್ಯಾಟರಿಗಳು ಚಿಕ್ಕದಾಗುತ್ತಾ ಹಗುರವಾಗುತ್ತಾ ಬಂದಿವೆ.

ಈ ಲಿತಿಯಂಅನ್ನು ಬ್ಯಾಟರಿಯಲ್ಲಿ ಊಹಿಸಿದ್ದೇ ಒಂದು ಅಪ್ಪಟ ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವಾದ ಮಿಶ್ರಣ. ಈ ಎರಡೂ ಜ್ಞಾನಶಾಖೆಗಳ ಮೂಲಭೂತ ಅಧ್ಯಯನವಿಲ್ಲದ ವ್ಯಕ್ತಿಯೊಬ್ಬರು ಸಾಧ್ಯಮಾಡಿದ್ದು ಅಚ್ಚರಿಯೇ ಸರಿ. ಜಾನ್ ಗುಡ್‌ಎನಫ್ ತಮ್ಮ ಗಣಿತದ ಪದವಿಯನ್ನು ಪಡೆದ ನಂತರ ಸೈನ್ಯದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದವರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೇನೆಯಲ್ಲಿದ್ದು ಹೊರದೇಶಗಳ ಸುತ್ತಾಟದಲ್ಲಿ ಕಳೆದವರು. ಯುದ್ಧ ಮುಗಿದನಂತರ ಸೈನಿಕರಿಗೆ ಪುನರ್ವಸತಿ ಮಾಡಿಕೊಡುವ ತಯಾರಿಯಲ್ಲಿ ಉಳಿದ ಹಣದಿಂದ ಕೆಲವರನ್ನು ಹೆಚ್ಚಿನ ಓದಿಗೆ ಕಳಿಸಲು ಆಲೋಚಿಸಲಾಯಿತು. ಅಂತಹ ಆಕಸ್ಮಿಕವಾದ ನಿರ್ಧಾರದಲ್ಲಿ ಸಿಕ್ಕಿಕೊಂಡವರು ಜಾನ್ ಅವರನ್ನು ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಓದಿಗೆ ಶಿಫಾರಸ್ಸು ಮಾಡಿ ಕಳಿಸಲಾಯಿತು. ಅದೂ ಭೌತವಿಜ್ಞಾನದ ಅಧ್ಯಯನಕ್ಕೆ! ತಮಾಷೆ ಎಂದರೆ ಆಗಲೇ ಜಾನ್ ಅವರಿಗೆ 24 ವರ್ಷ ತುಂಬಿದ್ದವು.

ಆಗಿನಕಾಲದಲ್ಲಿ ಭೌತವಿಜ್ಞಾನ ಏನಿದ್ದರೂ ಮೊದಲ 2-3 ದಶಕದೊಳಗೇ ಓದಿ ಅರ್ಥೈಸಿಕೊಳ್ಳುವುದು ಎನ್ನುವಂತಹ ಪರಿಪಾಠ. ಅಲ್ಲದೆ ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ ಜಾನ್ ಹಿರಿಯರಾದ ಕಾರಣ ಭೌತವಿಜ್ಞಾನ ಕಲಿಸುವ ಶಿಕ್ಷಕರು ಅವರ ಕುರಿತು ತಮಾಷೆಯನ್ನೂ ಮಾಡುತ್ತಿರುತ್ತಾರೆ. “ಏನ್ರಿ ಈ ವಯಸ್ಸಿನಲ್ಲಿ ಭೌತವಿಜ್ಞಾನ ಕಲಿಯೋದು ಅಂದರೆ ಹೇಗೆ? ನಿಮ್ಮ ವಯಸ್ಸಿನವರು ಈಗಾಗಲೇ ಭೌತವಿಜ್ಞಾನದಲ್ಲಿ ಸಾಧನೆ ಮಾಡಿರುವವರು ಇದ್ದಾರಲ್ಲವೇ?” ಎಂದು ಹಾಸ್ಯ ಮಾಡಿದ್ದೂ ಇದೆ. ಇವೆಲ್ಲದರ ನಡುವೆಯೇ ಜಾನ್ ಅವರಿಗೆ ಸಂಶೋಧನೆ ಮುಗಿಸಿ ಪಿಎಚ್.ಡಿ ಪದವಿ ಪಡೆಯಲು ಸಾಧ್ಯವಾಯಿತು.

ಕಳೆದ ಹಲವು ದಶಕಗಳಿಂದ ವಿಜ್ಞಾನ ಜಗತ್ತು ಬಗೆಬಗೆಯ ಪದಾರ್ಥಗಳ ಬೆನ್ನು ಹತ್ತಿದೆ. ಹೊಸ ಹೊಸ ವಸ್ತುಗಳ ಹುಡುಕಾಟದಲ್ಲಿ ನಿರತವಾಗಿದೆ. ಇದು ಹಿಂದಿನಿಂದಲೂ ನಡೆದುಬಂದಿದೆ. ಹಾಗಾಗಿಯೇ ಹಿತ್ತಾಳೆಯಂತಹ ಅಲಾಯ್ಗಳೂ, ಪಿಂಗಾಣಿ, ಗಾಜಿನಂತಹ ವಸ್ತುಗಳೂ ಬಹಳ ಹಿಂದೆಯೇ ನಮಗೆ ಲಭ್ಯವಾಗಿವೆ. ಈಗಂತೂ ಲಭ್ಯ ಪದಾರ್ಥಗಳ ಪಟ್ಟಿಯೇ ಬಲು ದೊಡ್ಡದಿದ್ದರೆ ಆಶ್ಚರ್ಯವೇನಲ್ಲ. ಅವುಗಳ ಜಾಲ ದೊಡ್ಡ ದೊಡ್ಡ ಕಟ್ಟಡ ಕಟ್ಟುವ ಪದಾರ್ಥಗಳಿಂದ ಹಿಡಿದು ವಿದ್ಯುತ್ ಸಂಪರ್ಕಿಸುವ ಸಣ್ಣ ತಂತಿಯವರೆಗೂ ಹಬ್ಬಿದೆ. ಹಾಗಾಗಿ ಇಂತಹ ಪದಾರ್ಥಗಳ ಹುಡುಕಾಟದ ಹಿಂದೆ ಸಂಶೋಧಕರ ದೊಡ್ಡ ಹಿಂಡೇ ಇದೆ. ಅನೇಕ ಕಂಪನಿಗಳೂ ಇವೆ. ಬ್ಯಾಟರಿ ರೂಪಿಸುವ ಪದಾರ್ಥಗಳನ್ನು ಅರ್ಥೈಸಿಕೊಂಡು ನಿರ್ವಹಿಸಲು ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವರಿತ ತಿಳಿವಳಿಕೆಯ ಅವಶ್ಯಕತೆಯಿರುತ್ತದೆ. ಏಕೆಂದರೆ ಬ್ಯಾಟರಿಯಲ್ಲಿ ಇಲೆಕ್ಟ್ರೋ ಕೋಡ್‌ಗಳಿರುತ್ತವೆ ಮತ್ತು ಅವುಗಳ ಮಧ್ಯೆ ಪ್ರವಹಿಸಲು ಆಯಾನುಗಳಿರಬೇಕಿರುತ್ತದೆ. ವಿದ್ಯುದಂಶದ ಉತ್ಪಾದನೆ ಹಾಗೂ ಪ್ರವಹಿಸುವ ಮಾಧ್ಯಮದಲ್ಲಿ ಆಯಾನುಗಳ ಚಲನೆ. ಇವೆಲ್ಲಾ ಅರ್ಥವಾಗಲು ಪದಾರ್ಥದ ಅಣುಸ್ವರೂಪದ ಲಕ್ಷಣಗಳ ಜತೆಗೆ ಪದಾರ್ಥದ ವರ್ತನೆಯ ತಿಳಿವಳಿಕೆಯೂ ಇರಬೇಕಿರುತ್ತದೆ. ವಿವಿಧ ಆಕ್ಸೈಡ್‌ಗಳ ಮಿಶ್ರಣದಿಂದ ಉನ್ನತವಾಗಿರುವುದನ್ನೂ ಮತ್ತು ಅದು ಹಗುರವಾಗಿಯೂ ಬಹುಕಾಲ ತಡೆಯಬಲ್ಲದ್ದಾಗಿಯೂ ಇರುವ ಹುಡುಕಾಟಕ್ಕೆ ಮೂಲವಸ್ತುಗಳ ರಚನೆ ಮತ್ತು ವರ್ತನೆಗಳ ಪಕ್ವವಾದ ಊಹೆಯು ತಿಳಿವಳಿಕೆಯ ಭಾಗವಾಗಿರಬೇಕು. ವಿದ್ಯುತ್ ಪ್ರವಹಿಸಲು ಲೋಹವೇ ಆಗಬೇಕು. ಲೋಹಗಳು ಹೇಳಿಕೇಳಿ ಸಾಂದ್ರವಾದವು, ಹೆಚ್ಚು ಭಾರವಾದವು. ಲಿತಿಯಂ ಲೋಹಗಳಲ್ಲೆಲ್ಲಾ ಹಗುರವಾದದ್ದು. ಅದಕ್ಕೆ ಸರಿಯಾದ ಮಿಶ್ರಣವನ್ನು ಸಾಧಿಸಿ ಇಲೆಕ್ಟ್ರೋಡ್ ಸಾಧಿಸಿದ್ದು ಜಾನ್ ಅವರ ಜಾಣ್ಮೆ. ಅಷ್ಟೇ ಅಲ್ಲ, ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಲೂ ಆಗವಂತೆ ಮಾಡಿದ್ದು ಹಿರಿಯ ಸಾಧನೆ. ಅದಕ್ಕೇ ನಾವು ದಿನವೂ ಮೊಬೈಲ್ ಚಾರ್ಜ್ ಮಾಡುವುದನ್ನು ಒಂದು ಕಾಯಕ ಮಾಡಿಕೊಂಡಿದ್ದೇವೆ. ಸಾಲದ್ದಕ್ಕೆ ಎಲ್ಲಿಗಾದರೂ ಹೊರಟರೆ ತೆಗೆದುಕೊಂಡೊಯ್ಯುವ ಚಾರ್ಜರ್ ಕೂಡ ನಮ್ಮ ಹೊಸ ಸಂಗಾತಿ ಆಗಿದೆ.

ಹೀಗೆ ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸುವ ಬ್ಯಾಟರಿಗಳ ಮರುಬಳಕೆ ಮಾಡುವ ಗುಣವು ಪದಾರ್ಥಗಳ ಜಾಣತನದ ಬಳಕೆಗೂ ಸಹಾಯವಾಗುತ್ತವೆ. ಇಂತಹ ಅನ್ವೇಷಣೆಯಲ್ಲಿ ಮಹತ್ವವಾದದ್ದು ಲಿತಿಯಂ ಬ್ಯಾಟರಿ. ಏಕೆಂದರೆ ಇವನ್ನು ನಾವು ಎಲ್ಲೆಲ್ಲಿ ಎಲೆಕ್ಟ್ರಾನಿಕ್ ಆಕರಗಳನ್ನು ಕಾಣುತ್ತೇವೆಯೋ, ಅವುಗಳೆಲ್ಲದರ ಒಳಗಡೆ ಕಾಣದಂತಹ ಪುಟ್ಟ ಲಿತಿಯಂ ಬ್ಯಾಟರಿಯು ಕುಳಿತಿರುತ್ತದೆ. ಅದು ಕುಳಿತಿದ್ದು ಆ ಪರಿಕರವನ್ನು ಚಲನೆಗೂ ಒಳಪಡಿಸಿ ಎಲ್ಲಿಗೆ ಬೇಕಾದರೂ ಒಯ್ಯಬಲ್ಲಂತೆ ಮಾಡುವಲ್ಲಿ ಸಹಾಯವಾಗುತ್ತದೆ. ಅದು ನಮ್ಮೆಲ್ಲರ ಕೈಯಲ್ಲಿರುವ ಮೊಬೈಲ್ ಫೋನಿರಬಹುದು ಅಥವಾ ನಮ್ಮ ನಭೋಮಂಡಲದಲ್ಲಿ ತೇಲಾಡುತ್ತಿರುವ ಉಪಗ್ರಹಗಳ ನಿರ್ವಹಿಸುವ ಸಾಧನಗಳಲ್ಲಿಯೂ ಇರಬಹುದು.

ಕಾಣದಂತೆ ಅಡಗಿ ಕುಳಿತ ಮಾಯಾಪೆಟ್ಟಿಗೆಯ ಇಲೆಕ್ಟ್ರೋಡ್ ಅನ್ವೇಷಕ ಜಾನ್ ಬದುಕು ಸಹ ಮಾಯಾಜಾಲವೆ. ತನ್ನ ಹೆತ್ತಮ್ಮನಿಗೆ ಬೇಡವಾದ ಮಗುವಾಗಿ ಹುಟ್ಟಿದ ಜಾನ್, ಅಮ್ಮನ ಪ್ರೀತಿಯನ್ನೇ ಅನುಭವಿಸಲಿಲ್ಲ. ಅಪ್ಪನೂ ಪರಿಚಿತನಂತಹ ಬದುಕನ್ನೇ ಕೊಟ್ಟವರು. ಅದಕ್ಕೆ ತಮ್ಮ ಪುಟ್ಟ ಆತ್ಮಕತೆಯಲ್ಲಿ ಎಲ್ಲಿಯೂ ಅಮ್ಮ-ಅಪ್ಪನ ಹೆಸರನ್ನೂ ಹೇಳಿಲ್ಲ! ಇದೀಗ ಕಡೆಗಾಲದಲ್ಲಿ ಹೆಂಡತಿಯೂ ತೀರಿಹೋಗಿದ್ದಾರೆ. ಸಹೋದರರೊಬ್ಬರು ತಮ್ಮ 90ರ ಇಳಿವಯಸ್ಸಿನಲ್ಲಿ ಜೀವನಯಾತ್ರೆ ಮುಗಿಸಿದ್ದಾರೆ. ಸ್ವತಃ ಜಾನ್ 97 ವಸಂತಗಳ ಕಂಡು ಲವಲವಿಕೆಯ ಅಧ್ಯಯನ, ಸಂಶೋಧನೆ ನಡೆಸುತ್ತಾ, ಇಡೀ ನಾಗರಿಕ ಬದುಕನ್ನು ಚಲನೆಯಾಗಿಸುವ ಕನಸುಗಳ ನನಸಾಗಿಸುವಲ್ಲಿ ನಿರತರಾಗಿದ್ದಾರೆ. ಅವರ ಹೊಸ ಕನಸು, ನಮ್ಮ ಮಾಮೂಲಿ ಪೆಟ್ರೋಲ್ ಕಾರುಗಳ ಕಂಬಶ್ಚನ್ ಯಂತ್ರದ ಮಾದರಿಯ ವಿದ್ಯುತ್ ಕಾರು ರಸ್ತೆಯಲ್ಲಿ ಓಡಿಸುವುದಾಗಿದೆ.

ಹೊಸತೊಂದನ್ನು ಕೊಡುವ ಉತ್ಸಾಹದ ದಣಿವರಿಯದ ವಿಜ್ಞಾನದ ಅಜ್ಜನಿಗೆ ಹಲವಾರು ಗೌರವಗಳು. ಕಳೆದ 2009ರ ಎನ್ರಿಕೋ ಫರ್ಮಿ ಪುರಸ್ಕಾರದ ಜತೆಗೆ 2013ರಲ್ಲಿ ಅಮೆರಿಕಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. ರಸಾಯನಶಾಸ್ತ್ರದ ರಾಯಲ್ ಸೊಸೈಟಿಯು ಜಾನ್ ಗುಡ್‌ಎನಫ್ ಹೆಸರಲ್ಲಿ ರಸಾಯನವಿಜ್ಞಾನದ ಬಹುಮಾನವನ್ನು ಸ್ಥಾಪಿಸಿದೆ. ಭೌತಶಾಸ್ತ್ರ ಮತ್ತು ರಸಾಯನವಿಜ್ಞಾನದ ಸರಿಯಾದ ಮಿಳಿತವಾದ ಸಂಶೋಧನೆಯನ್ನು ಮಾಡಿದ ಹಿರಿಯಜ್ಜನಿಗೆ 90ರ ನಂತರ ಹೆಚ್ಚೂಕಡಿಮೆ ಪ್ರತೀವರ್ಷ ನೊಬೆಲ್ ಪುರಸ್ಕಾರಕ್ಕೆ ಹೆಸರು ಸೂಚಿಸಲಾಗಿತ್ತು. ಇಡೀ ಇಲೆಕ್ಟ್ರಾನಿಕ್ ಜಗತ್ತನ್ನು ಕ್ರಾಂತಿಕಾರಿಯಾಗಿಸುವ ಶೋಧಕ್ಕೆ ನೊಬೆಲ್ ಬಹುಮಾನ ಯೋಗ್ಯವೆಂದು ಹಲವಾರು ವಿಜ್ಞಾನಿಗಳ ಅನಿಸಿಕೆಯಾಗಿತ್ತು. ಕಡೆಗೂ 2019ನೆಯ ವರ್ಷದ ಅಕ್ಟೋಬರ್‌ನಲ್ಲಿ ಘೋಷಿಸಲಾದ ಪುರಸ್ಕಾರದಲ್ಲಿ ಜಾನ್ ಗುಡ್‌ಎನಫ್ ಕೇಳಿಬಂದು, ಅವರ ಅಭಿಮಾನಿಗಳಲ್ಲಿ ಪುಳಕವನ್ನು ಉಂಟುಮಾಡಿತ್ತು. 98 ರ ಹರೆಯದ ತಾತನ ಆಯುಷ್ಯ ಹೆಚ್ಚಲಿ, ವಿಶ್ವಾಸದ ಕಣಜವಾಗಿರುವ ಹಿರಿಯ ವಿಜ್ಞಾನಿಯಿಂದ ಎಳೆಯರಿಗೆ ಹುರುಪು ಬರಲಿ ಎಂಬುದು ಹಲವಾರು ವಿಜ್ಞಾನಪ್ರಿಯರ ಅಭಿಲಾಷೆ.

ಗುಡ್‌ಎನಫ್ ಅಂದರೆ ಸಹಜವಾಗಿ ಅಷ್ಟು ಸಾಕು, ಎಂದರ್ಥ. ಜಾನ್ ಅವರಿಗೆ ಅದು ಅವರ ಹೆಸರು ಮಾತ್ರ. ತೊಂಭತ್ತೆಂಟು ವರ್ಷಗಳ ಸಮೀಪದ ಹಿರಿಯಜ್ಜನಿಗೆ ತಾನು ಮಾಡಿದ್ದೇನೂ ಸಾಕಾಗಿಲ್ಲ. “It is not enough for Goodenough”.

  • ಡಾ. ಟಿ.ಎಸ್. ಚನ್ನೇಶ್

ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್, ಬೆಂಗಳೂರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...