Homeಮುಖಪುಟಮಹಿಳೆ ಮತ್ತು ಬಿಕ್ಕಟ್ಟಿನ ಕಾಲದ ಸಂದಿಗ್ಧಗಳು! - ಮಲ್ಲಿಗೆ ಸಿರಿಮನೆ

ಮಹಿಳೆ ಮತ್ತು ಬಿಕ್ಕಟ್ಟಿನ ಕಾಲದ ಸಂದಿಗ್ಧಗಳು! – ಮಲ್ಲಿಗೆ ಸಿರಿಮನೆ

ತಾಯ್ತನದ ಸಾಕಾರ ಮೂರ್ತಿಗಳೆಂದು ವೈಭವೀಕರಿಸಲಾಗಿರುವ ಮಹಿಳೆಯರೂ ಕೂಡಾ, ‘ಅನ್ಯ’ ಸಮುದಾಯದವರೆಂದ ತಕ್ಷಣ ಎಷ್ಟು ಬೇಕಾದರೂ ಕ್ರೂರವಾಗಿ ವರ್ತಿಸುವ ಮನೋಭಾವವನ್ನೂ ಸಮರ್ಥಿಸುವ ಮಟ್ಟಕ್ಕೆ ಬಂದಿದ್ದಾರೆ?

- Advertisement -
- Advertisement -

ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಆಘಾತಕರವಾದ ಸರಣಿ ವಿದ್ಯಮಾನಗಳು ಸಂಭವಿಸಿದ್ದನ್ನು ಗಮನಿಸಿದ್ದೇವೆ. 2 ವರ್ಷಗಳ ಹಿಂದೆ ಉತ್ತರ ಪ್ರದೇಶದ ಉನ್ನಾವೋನಲ್ಲಿ, ಬಿಜೆಪಿಯ ಪ್ರಭಾವಿ ರಾಜಕಾರಣಿ ಮತ್ತು ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್, 18 ವರ್ಷದ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿದ. ಒಮ್ಮೆಯಲ್ಲ, ಹಲವು ಬಾರಿ ಆಕೆಯನ್ನು ತನ್ನ ಅಧಿಕಾರದ ಬಲದಿಂದ ಬಳಸಿಕೊಂಡ. ಈ ವಿಚಾರ ತಿಳಿದಾಗ ಅತ್ಯಾಚಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದರು. ಆದರೆ, ರಾಜಕಾರಣಿಯ ಹಣ ಮತ್ತು ಅಧಿಕಾರದ ದರ್ಪದ ಮುಂದೆ ಬಡವರ ಗೋಳು ಪೊಲೀಸರ ಕಿವಿಗೆ ಹೇಗಾದರೂ ಬೀಳಲು ಸಾಧ್ಯ?

ಕೆಲವು ತಿಂಗಳುಗಳ ಕಾಲ ಪ್ರಕರಣ ಕತ್ತಲಲ್ಲೇ ಇತ್ತು. ಸಂತ್ರಸ್ತೆ, ಆಕೆಯ ತಂದೆ ಮತ್ತು ಕುಟುಂಬದ ಹೋರಾಟದ ಫಲವಾಗಿ ಹೀಗೊಂದು ಪ್ರಕರಣ ನಡೆದಿದೆಯೆಂಬುದು ಜಗಜ್ಜಾಹೀರಾದಾಗ, ದೇಶಾದ್ಯಂತ ಆರೋಪಿಯ ಮೇಲೆ ಕ್ರಮ ನಡೆದಿಲ್ಲದ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಆಗ, ಪೊಲೀಸರು ಪ್ರಕರಣ ದಾಖಲಿಸಿಕೊಂಡರು, ಆದರೆ ಬಂಧಿಸಲಿಲ್ಲ. ಇದನ್ನೂ ಯುವತಿ ಪ್ರಶ್ನಿಸಿ ಕೋರ್ಟಿನ ಮೊರೆಹೋದಾಗ ನ್ಯಾಯಾಲಯದ ಆದೇಶದಂತೆ ಆತನನ್ನು ಕೊನೆಗೂ ಬಂಧಿಸಲಾಯಿತು. ಇಷ್ಟಕ್ಕೆ, ಆಕೆಯ ಹೋರಾಟ ಯಶಸ್ವಿಯಾಯಿತೆಂದು ಭಾವಿಸಲಾಗದು. ನಿಜವಾದ ಸಂಘರ್ಷಮಯ ದಿನಗಳು ಇದರ ನಂತರ ಆರಂಭವಾದವು. ಸೆಂಗರ್‌ನ ಬಂಧನದ ಕೆಲವು ವಾರಗಳಲ್ಲಿ ಅತ್ಯಾಚಾರಕ್ಕೆ ಗುರಿಯಾಗಿದ್ದ ಯುವತಿಯ ತಂದೆ ಅನುಮಾನಾಸ್ಪದವಾಗಿ ಸಾವಿಗೀಡಾದರು. ಆಕೆಗೆ ನಿರಂತರ ಜೀವಬೆದರಿಕೆಗಳು ಬರಲಾರಂಭಿಸಿದವು. ಉತ್ತರ ಪ್ರದೇಶದ ಬಿಜೆಪಿಯ ಬೇರೆ ಬೇರೆ ಸ್ತರಗಳ ನಾಯಕರು ಆಕೆಯನ್ನು ಬೆದರಿಸುವಂತಹ ಬಹಿರಂಗ ಹೇಳಿಕೆಗಳನ್ನು ನೀಡಲಾರಂಭಿಸಿದರು.

ಇದೆಲ್ಲದರಾಚೆಗೂ, ಉನ್ನವೋ ಯುವತಿಯ ಹೋರಾಟ ಗಟ್ಟಿಯಾಗಿಯೇ ಮುಂದುವರೆದಾಗ, ಈಚೆಗೆ ಮೂರು ತಿಂಗಳುಗಳ ಹಿಂದೆ, ಕೋರ್ಟಿಗೆ ಹೋಗಿ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಆಕೆಯ ಕಾರು ಭೀಕರ ಅಪಘಾತಕ್ಕೆ ಗುರಿಯಾಯಿತು. ಅದಕ್ಕೆ ಕೆಲವು ದಿನಗಳ ಹಿಂದಷ್ಟೇ ಆರೋಪಿ ಶಾಸಕ ಸೆಂಗರ್ ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆಕೆಗೆ ಸರಿಯಾದ ಶಾಸ್ತಿಯಾಗಲಿದೆ ಎಂಬರ್ಥ ಬರುವಂತೆ ಮಾತನಾಡಿದ್ದ. ಕಾರಿನಲ್ಲಿ ಸಂತ್ರಸ್ತೆ, ಆಕೆಯ ವಕೀಲರು ಮತ್ತು ಬಂಧುಗಳಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವೋ ಸಂತ್ರಸ್ತೆ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ, ಈ ನಡುವೆ ಆಕೆಯ ಕಾರಿಗೆ ಆದ ಅಪಘಾತ ಆಕಸ್ಮಿಕವಲ್ಲ ಎಂಬ ಖಚಿತ ಅಭಿಪ್ರಾಯ ದೇಶಾದ್ಯಂತ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯದಿಂದ ಹೊರಗಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇದರ ಬೆನ್ನಲ್ಲೇ, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಹಾಕಿದ ವಿದ್ಯಮಾನ ಮತ್ತು ಅದರಿಂದಾಗಿ ಅಲ್ಲಿ ಉಂಟಾಗಿರುವ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವೂ ದೇಶದ ಸಂವೇದನಾಶೀಲರನ್ನು ಕಾಡುತ್ತಿದೆ. ಮಹಿಳೆ ಮತ್ತು ಮಕ್ಕಳ ಸ್ಥಿತಿ ಗಂಭೀರವಾಗಿರುವ ಬಗ್ಗೆ ವರದಿಗಳು ಸ್ವತಂತ್ರ ಸತ್ಯಶೋಧನಾ ತಂಡಗಳ ವರದಿಗಳಲ್ಲಿ ಕಂಡುಬರುತ್ತಿವೆ.

ಮತ್ತೊಂದೆಡೆ, ದೇಶದ ಆರ್ಥಿಕ ವ್ಯವಸ್ಥೆ ಹದಗೆಡುತ್ತಾ ಹೋಗುತ್ತಿದೆ. ಈ ವಾರದ ಅಂಕಿಅಂಶಗಳು ತೋರುತ್ತಿರುವಂತೆ ದೇಶದ ನಿರುದ್ಯೋಗದ ಪ್ರಮಾಣ ಶೇ.8.5ಕ್ಕಿಂತ ಹೆಚ್ಚಾಗಿದೆ. ಹರ್ಯಾಣದಂತಹ ರಾಜ್ಯಗಳಲ್ಲಿ ಇದು ಶೇ.25ನ್ನೂ ದಾಟಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇದು ಬೇರೆ ಬೇರೆ ರೀತಿ ಇದ್ದರೂ, ಇಡೀ ದೇಶದಲ್ಲಿ ನಿರುದ್ಯೋಗ ಅತಿ ಹೆಚ್ಚು ಕಂಡುಬರುತ್ತಿರುವ ಸಮುದಾಯವೆಂದರೆ ಅದು ಮಹಿಳಾ ಸಮುದಾಯ.

ಇದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ. ಕಳೆದ ಎರಡು ದಶಕಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯುತ್ತಿರುವ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ. ಕೆಲವು ಅತಿ ಹಿಂದುಳಿದ ಪ್ರದೇಶಗಳನ್ನು ಬಿಟ್ಟರೆ, ಉನ್ನತ ಶಿಕ್ಷಣ ಪಡೆಯುತ್ತಿರುವ ಹೆಣ್ಣುಮಕ್ಕಳ ಸಂಖ್ಯೆಯೂ ಸಾಕಷ್ಟಿದೆ. ಆದರೆ, ಮಹಿಳೆಯರಿಗೆಂದು ದೊರೆಯುತ್ತಿರುವ ಉದ್ಯೋಗಗಳ ಗುಣಮಟ್ಟ ಬಹಳ ಕಡಿಮೆ ದರ್ಜೆಯದಾಗಿದೆ. ಬಹುಪಾಲು ಅಸಂಘಟಿತ ವಲಯದ ಅಸುರಕ್ಷಿತ ಉದ್ಯೋಗಗಳೆ ಮಹಿಳೆಯರಿಗೆ ಹೆಚ್ಚಾಗಿ ದೊರಕುವಂತಹವಾಗಿವೆ. ಇನ್ನಿತರ ಉದ್ಯೋಗಗಳ ಸಂಖ್ಯೆಯೇ ಬಹಳ ಕಡಿಮೆಯಾಗಿರುವುದು ಒಂದಾದರೆ, ಅವುಗಳನ್ನು ದೊರಕಿಸಿಕೊಳ್ಳಲಾರದ ರೀತಿಯಲ್ಲಿ ಅವುಗಳ ವ್ಯೂಹರಚನೆಯಿರುತ್ತದೆಂಬುದು ಮತ್ತೊಂದು ಕಾರಣ. ಉದಾಹರಣೆಗೆ, ಸಾಮಾನ್ಯ ಕುಟುಂಬಗಳ ಅನೇಕ ಹೆಣ್ಣುಮಕ್ಕಳು ಮದುವೆಯ ನಂತರ ಸಾಫ್ಟ್ವೇರ್ ಉದ್ಯೋಗಗಳನ್ನು ತ್ಯಜಿಸುತ್ತಾರೆ; ಏಕೆಂದರೆ, ಅವುಗಳ ಕೆಲಸದ ಸಮಯ ಸಾಮಾನ್ಯ ಕುಟುಂಬಗಳ ಹೆಣ್ಣುಮಕ್ಕಳ ಬದುಕಿಗೆ ಹೊಂದುವ ಹಾಗಿರುವುದಿಲ್ಲ; ಈತನಕ ಅದರಲ್ಲಿ ಮಹಿಳಾಪರವಾದ ದೃಷ್ಟಿಯಿಂದ ಬದಲಾವಣೆ ತರುವುದು ಸಾಧ್ಯವಾಗಿಲ್ಲ.

ಇದರಾಚೆಗೂ, ಲಭ್ಯವಿರುವ ಬಹುಪಾಲು ಉದ್ಯೋಗಗಳೇ ಅಸಂಘಟಿತ ವಲಯಕ್ಕೆ ಸೇರಿದವಾಗಿದ್ದು, ಉದ್ಯೋಗಸ್ಥ ಮಹಿಳೆಯರಲ್ಲಿ ಶೇ.93ರಷ್ಟು ಇಂತಹ ಉದ್ಯೋಗಗಳಲ್ಲಿದ್ದಾರೆಂದು ಅಧ್ಯಯನಗಳು ಹೇಳುತ್ತಿವೆ. ಮನೆಕೆಲಸದ ಕಾರ್ಮಿಕರು, ಲೈಂಗಿಕ ಕಾರ್ಯಕರ್ತರು, ಕಟ್ಟಡ ಕಾರ್ಮಿಕರು- ಇವೇ ಮೊದಲಾದ ಅಸಂಖ್ಯಾತ ಉದ್ಯೋಗಗಳಲ್ಲಿರುವ ಹೆಣ್ಣುಮಕ್ಕಳಿಗೆ ಉದ್ಯೋಗದ ಸ್ಥಿತಿಗತಿ ದಿನೇ ದಿನೇ ಗಂಭೀರವಾಗುತ್ತಿದೆ. ಜೊತೆಗೆ, ವಲಸೆ, ಕೌಟುಂಬಿಕ ಛಿದ್ರೀಕರಣದಂತಹ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಮಹಿಳೆಯರು ಅನೇಕ ಬಗೆಯ ಲೈಂಗಿಕ-ಕೌಟುಂಬಿಕ ಹಿಂಸಾಚಾರಗಳಗೆ ತುತ್ತಾಗುತ್ತಿರುವುದು ಹೆಚ್ಚುತ್ತಿದೆ.

ದಮನಿತ ಸಮುದಾಯಗಳ ಮಹಿಳೇಯರ ಸಮಸ್ಯೆಗಳ ಭಾರ ಇನ್ನೂ ಹೆಚ್ಚು. ಒಂದೆಡೆ ಹೆಚ್ಚುತ್ತಿರುವ ಸಾಮಾಜಿಕ ಸಂಕ್ಷೋಭೆಯಿಂದ ದಲಿತ, ಆದಿವಾಸಿ, ಮುಸ್ಲಿಂ, ದಲಿತ ಕ್ರಿಶ್ಚಿಯನ್ ಸಮುದಾಯಗಳ ಹೆಣ್ಣುಮಕ್ಕಳು ಹೆಚ್ಚೆಚ್ಚು ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಮಾತ್ರವಲ್ಲ; ಆ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಆ ಸಮುದಾಯಗಳಿಗೆ ‘ಪಾಠ’ ಕಲಿಸಿ, ‘ದೇಶಭಕ್ತಿ’ ಕಲಿಸಿ, ಹದ್ದುಬಸ್ತಿನಲ್ಲಿಡಲು ಸರಿಯಾದ ಮಾರ್ಗ ಎಂಬಂತಹ ಅಮಾಣವೀಯವಾದ ಸಮರ್ಥನೆಗಳು ಜನಸಾಮಾನ್ಯರ ಮನಸ್ಸುಗಳನ್ನೂ ತಲುಪಿರುವುದನ್ನು ಕಾಣುತ್ತೇವೆ. ಕಾಶ್ಮೀರದ 8ರ ಹರೆಯದ ಅಲೆಮಾರಿ ಸಮುದಾಯದ ಮುದ್ದುಮಗುವನ್ನು ದೇವಸ್ಥಾನದಲ್ಲಿ ಕೂಡಿಹಾಕಿ ದಿನಗಟ್ಟಲೆ ಕ್ರೂರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಲು ಬಿಡದೆ, ಹಿಂದೂ ಧರ್ಮದ ರಕ್ಷಕರೆಂದು ಕರೆದುಕೊಳ್ಳುವ ಸಂಘಟನೆಗಳು ಗಲಾಟೆ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಕಿವಿಗಪ್ಪಳಿಸಿದ್ದು ಇದೇ ವಾದ!

ಇದೇಕೆ ಸಾಮಾನ್ಯ ಜನರೂ ಕೂಡಾ ಹೀಗೆ ಜಾತಿ-ಧರ್ಮದ ಹೆಸರಿನಲ್ಲಿ ಕ್ರೂರಿಗಳಾಗುತ್ತಿದ್ದಾರೆ? ಅದರಲ್ಲೂ ತಾಯ್ತನದ ಸಾಕಾರ ಮೂರ್ತಿಗಳೆಂದು ವೈಭವೀಕರಿಸಲಾಗಿರುವ ಮಹಿಳೆಯರೂ ಕೂಡಾ, ‘ಅನ್ಯ’ ಸಮುದಾಯದವರೆಂದ ತಕ್ಷಣ ಎಷ್ಟು ಬೇಕಾದರೂ ಕ್ರೂರವಾಗಿ ವರ್ತಿಸುವ ಮನೋಭಾವವನ್ನೂ ಸಮರ್ಥಿಸುವ ಮಟ್ಟಕ್ಕೆ ಬಂದಿದ್ದಾರೆ? ಇವು ಕೆಲವು ಮೂಲಭೂತ ಪ್ರಶ್ನೆಗಳಾಗಿವೆ.

ಮುಖ್ಯವಾಗಿ, ಮಹಿಳೆಯರೂ ಕೂಡಾ ಸಮಾಜದ ಘಟಕಗಳೇ ಆಗಿದ್ದಾರೆ ಮತ್ತು ‘ಮಹಿಳೆ’ ಎಂದಾಕ್ಷಣ ಅದು ಇನ್ನಿತರ ಎಲ್ಲ ಬೆಳವಣಿಗೆಗಳಿಂದ ಬೇರ್ಪಟ್ಟ ಒಂದು ಅಸ್ಮಿತೆಯಲ್ಲ ಎಂಬುದನ್ನು ಅರಿತುಕೊಳ್ಲಬೇಕಿದೆ. ಒಬ್ಬ ಮಹಿಳೆ, ಏಕಕಾಲದಲ್ಲಿ ಮಹಿಳೆಯೆಂಬ ಗುರುತಿನ ಜೊತೆಗೆ, ತನ್ನ ಜಾತಿ, ಧರ್ಮ, ಭಾಷೆ, ಪ್ರದೇಶ, ರಾಜಕೀಯ ನಿಲುವು-ಹೀಗೆ ಅನೇಕ ಇತರ ಬಗೆಯ ಗುರುತುಗಳನ್ನೂ ಹೊಂದಿರುತ್ತಾಳೆ. ಆಯಾ ಗುರುತುಗಳ ಕಾರಣಕ್ಕೆ ನಿರ್ದಿಷ್ಟ ಅಭಿಪ್ರಾಯಗಳು ಮತ್ತು ವರ್ತನೆಗಳನ್ನು ಹೊಂದಿರುತ್ತಾರೆ. ಹಾಗೆಯೇ, ಅವರವರ ಸಾಮಾಜಿಕ ಗುರುತಿಗೆ ಅನುಗುಣವಾಗಿ ಸಮಸ್ಯೆಗಳನ್ನು ಪರಿಭಾವಿಸುವ ರೀತಿಯೂ ಬೇರೆಬೇರೆಯಾಗಿರುತ್ತದೆ. ಅದನ್ನು ಮೀರಿ, ಮಹಿಳೆಯರನ್ನು ಇಡೀ ಮಹಿಳಾ ಸಮುದಾಯದ ಎಲ್ಲ ಥರದ ಸಮಸ್ಯೆಗಳಿಗೂ ಸ್ಪಂದಿಸುವಂತಹ ರೀತಿಯಲ್ಲಿ ಮುನ್ನಡೆಸಬೇಕಾದರೆ, ಅದಕ್ಕೆ ತಕ್ಕ ವೈಚಾರಿಕ ಕ್ರಾಂತಿಯೇ ಇಂದು ಬೇಕಾಗಿದೆ.

ಇಂದಿನವರೆಗೆ ಮಹಿಳೆಯ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ಥಾನಮಾನ, ಹೆಚ್ಚೂ ಕಡಿಮೆ ನಗಣ್ಯವೆನಿಸುವಂತಿದೆ. ಮಹಿಳೆಯರು ಬೆರಳೆಣಿಕೆಯ ಸಂಖ್ಯೆಯಲ್ಲಿ ರಾಜಕಾರಣದ ಮುಖ್ಯಧಾರೆಯಲ್ಲಿ ಕಾಣುವುದು ಮಾತ್ರವಷ್ಟೇ ಅಲ್ಲ, ಅವರ ಸಮಸ್ಯೆಗಳನ್ನು ಈ ರಾಜಕೀಯ ವ್ಯವಸ್ಥೆ ಕೈಗೆತ್ತಿಕೊಳ್ಳುವ ರೀತಿಯಲ್ಕೂ ಇದು ಕಾಣುತ್ತದೆ. ಈ ಎಲ್ಲ ಬೃಹತ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಇರುವುದು, ಎಲ್ಲ ಭಿನ್ನತೆಗಳ ನಡುವೆ ಸೇರುವ ಬಿಂದುಗಳನ್ನು ಮಹಿಳಾ ಸಮುದಾಯ ಗುರುತಿಸಿಕೊಳ್ಳುತ್ತಾ, ಒಗ್ಗೂಡುತ್ತಾ ಹೋಗುವುದರಲ್ಲಿ ಮಾತ್ರ. ಬೇರೆ ಬೇರೆ ಗುರುತುಗಳಿಂದ ಈ ಸಮಾಜದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವ ಮಹಿಳೆಯರು, ತಮ್ಮ ನೆಲೆಯಿಂದ ಮಾತ್ರವಲ್ಲದೆ, ಎದುರಿರುವ ಮತ್ತೊಬ್ಬ ಮಹಿಳೆಯ ನೆಲೆಯಿಂದ ಸಮಾಜವನ್ನು ಕಾಣಲು ಸಾಧ್ಯವಾಗಬೇಕು. ಇದಕ್ಕೆ ಬೇಕಾದ ವೈಚಾರಿಕ ಎಚ್ಚರಕ್ಕೆ ಅಡಿಪಾಯ ಹಾಕುವ ಕೆಲಸ ಅತ್ಯಗತ್ಯವಾಗಿ ಈಗ ಆಗಬೇಕಾಗಿದೆ.

ಇಂತಹ ಬೃಹತ್ ಸಾಮುದಾಯಿಕ ಜಾಗೃತಿ ಅಷ್ಟು ವೇಗವಾಗಿ ಮತ್ತು ಸುಲಭವಾಗಿ ಆಗುವಂತಹ ಕೆಲಸ ಖಂಡಿತ ಅಲ್ಲ. ಆದರೆ, ಅದಕ್ಕೆ ಬೇಕಾದ ಪೂರ್ವತಯಾರಿ ಮತ್ತು ಅಡಿಪಾಯ ಹಾಕುವ ಕೆಲಸವಾಗಿ ಈಗಿನಿಂದ ನಡೆಯಬೇಕಾಗುತ್ತದೆ. ಆದ್ದರಿಂದಲೇ, ಬೇರೆ ಬೇರೆ ದಿಕ್ಕಿನಿಂದ ಮಹಿಳೆಯರ ಅನೇಕ ರೀತಿಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವ ಎಲ್ಲ ಸಾಮಾಜಿಕ ಸಂಘಟನೆಗಳ ನಡುವಿನ ಸಮನ್ವಯ ಇಂದು ನಡೆಯಬೇಕಾದ ಬಹುಮುಖ್ಯವಾದ ಪ್ರಕ್ರಿಯೆ. ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂದಂತಹ ರೀತಿಗಳಲ್ಲಿ, ಆ ದಿಕ್ಕಿನಲ್ಲಿ ಇಡಲಾಗುತ್ತಿರುವ ಪ್ರತಿ ಹೆಜ್ಜೆಯೂ ಬಹಳ ಮಹತ್ವದ್ದು. ಈ ಬಗೆಯ ಪ್ರಯತ್ನಗಳು ಇನ್ನೂ ಹೆಚ್ಚಬೇಕು ಮತ್ತು ಗುಣಾತ್ಮಕವಾಗಿ ವಿಸ್ತರಿಸಬೇಕು. ಆ ಹೊಣೆಗಾರಿಕೆಯನ್ನು ಈ ಕಾಲಘಟ್ಟ ಸಾಮಾಜಿಕ ಅರಿವುಳ್ಳ ಪ್ರತಿಯೊಬ್ಬ ಮಹಿಳೆಯ ಹೆಗಲ ಮೇಲೂ ಹೊರೆಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...