ಹಿಂದೆ ಈಶಾನ್ಯ ರಾಜ್ಯಗಳ ಜನರು ಸಶಸ್ತ್ರ ಸೇನಾ ಪಡೆಗಳ ಕಣ್ಗಾವಲಿನಲ್ಲಿ ಜೀವಿಸುತ್ತಿದ್ದರು. ನಾವು ಅಧಿಕಾರಕ್ಕೆ ಬಂದ ಮೇಲೆ ಈಶಾನ್ಯ ರಾಜ್ಯಗಳು ಸೇನಾ ಹಿಡಿತದಿಂದ ಮುಕ್ತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಅಸ್ಸಾಂಗೆ ಭೇಟಿ ನೀರಿರುವ ಪ್ರಧಾನಿ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ ಈಶಾನ್ಯ ರಾಜ್ಯಗಳು ಈಗ ಸೇನೆಯಿಂದ ಮುಕ್ತವಾಗಿವೆ. ಹಿಂದೆ ಇಲ್ಲಿ ವ್ಯಾಪಾರಿಗಳು ಬಂಡವಾಳ ಹೂಡಲು ಒಪ್ಪುತ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ ಎಂದು ವಿವರಿಸಿದರು.
ಈಶಾನ್ಯ ರಾಜ್ಯಗಳ ಸಾವಿರಾರು ಯುವಕರು ತಮ್ಮ ನೆಲದಲ್ಲೇ ನಿರಾಶ್ರಿತರಂತೆ ಬದುಕುತ್ತಿದ್ದರು. ನಾವು ಅಧಿಕಾರ ಹಿಡಿದ ನಂತರ ಅಲ್ಲಿನ ಜನರಿಗೆ ಸಂಪೂರ್ಣ ಪುನರ್ವಸತಿ ಸೌಲಭ್ಯ ಕಲ್ಪಿಸಿರುವುದರಿಂದ ಬದಲಾವಣೆ ಗಾಳಿ ಬೀಸಿದೆ. ಒಂದು ಅವಧಿಯಲ್ಲಿ ಜನರು ಇಲ್ಲಿಗೆ ಬರಲು ಹೆದರುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲ. ಮುಂದೆ ಈಶಾನ್ಯ ರಾಜ್ಯಗಳು ಪ್ರವಾಸಿ ತಾಣಗಳಾಗಲಿವೆ. ಇಂತಹ ಬದಲಾವಣೆ ಕ್ಷಣಾರ್ಧಲ್ಲಿ ಆಯಿತೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇಲ್ಲ ಎಂದರು.
#WATCH: PM Narendra Modi addresses a public meeting in Kokrajhar, Assam. #BodoPeaceAccord https://t.co/SZKDOKI9oG
— ANI (@ANI) February 7, 2020
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಶಿಕ್ಷಣ, ಕೌಶಲ್ಯ ಮತ್ತು ಕ್ರೀಡೆಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಅದರ ಭಾಗವಾಗಿ ಇಂತಹ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವು ಈಶಾನ್ಯ ಭಾಗದ ವಿದ್ಯಾರ್ಥಿಗಳಿಗಾಗಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಹಾಸ್ಟೆಲ್ ನಿರ್ಮಿಸಿದ್ದೇವೆ. ಹೊಸ ರೈಲ್ವೆ ನಿಲ್ದಾಣ, ಹೊಸ ರೈಲ್ವೆ ಮಾರ್ಗಗಳು, ಹೊಸ ವಿಮಾನ ನಿಲ್ದಾಣಗಳು, ಹೊಸ ಜಲಮಾರ್ಗಗಳು ಮತ್ತು ಇಂಟರ್ ನೆಟ್ ಸಂಪರ್ಕ ಕಲ್ಪಿಸಿದ್ದೇವೆ ಎಂದು ತಿಳಿಸಿದರು.
ನಾವು ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ಮಾತ್ರವಲ್ಲ, ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಕಳೆದ ಬಾರಿ 9 ಸಾವಿರ ಕೋಟಿ ರೂಪಾಯಿ ವೆಚ್ಚದ ಗ್ಯಾಸ್ ಗ್ರಿಡ್ ಯೋಜನೆ ಜಾರಿಗೊಳಿಸಿದ್ದೇವೆ. ಬೋಗಿ ಸೇತುವೆ ನಿರ್ಮಾಣ ಮಾಡಿದ್ದೇವೆ. ಈ ಸೇತುವೆ ಲಕ್ಷಾಂತರ ಮಂದಿಗೆ ಸಂಪರ್ಕ ಸೇತುವೆಯಾಗಿದೆ ಎಂದು ಹೇಳಿದರು.
ಕಳೆದ 3-4 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ 3 ಸಾವಿರ ಕಿಲೋ ಮೀಟರ್ ರಸ್ತೆಯನ್ನು ನಿರ್ಮಿಸಿದ್ದೇವೆ. 13ನೇ ಹಣಕಾಸು ಆಯೋಗದಲ್ಲಿ ಈಶಾನ್ಯ ರಾಜ್ಯಗಳಿಗೆ 90 ಸಾವಿರ ಕೋಟಿ ವೆಚ್ಚ ಮಾಡಲಾಗಿತ್ತು. 14ನೇ ಹಣಕಾಸು ಆಯೋಗದ ನಂತರ ನಾವು ಅಧಿಕಾರಕ್ಕೆ ಬಂದಿದ್ದೇವೆ. ನಾವು 3 ಲಕ್ಷ ಕೋಟಿಗೆ ಹೆಚ್ಚಿಸಿದ್ದೇವೆ. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದೇವೆ. ಈಶಾನ್ಯ ರಾಜ್ಯಗಳ ರೈಲ್ವೆ ಮಾರ್ಗಗಳನ್ನು ಬ್ರಾಡ್ ಬಾಂಡ್ ಗೆ ಬದಲಾವಣೆ ಮಾಡಿದೆ. ಹಳೆಯ ವಿಮಾನ ನಿಲ್ದಾಣವನ್ನು ಆಧುನೀಕರಣಗೊಳಿಸಿದೆ ಎಂದು ಅಭಿವೃದ್ಧಿ ಕೆಲಸಗಳ ಪಟ್ಟಿ ಮಾಡಿದರು.
ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1,500 ಕೋಟಿ ರೂಪಾಯಿಯ ವಿಶೇಷ ಅಭಿವೃದ್ಧಿ ಪ್ಯಾಕೇಜ್ ನೀಡುವುದಾಗಿ ಘೋಷಣೆ ಮಾಡಿದರು.


