Homeಅಂಕಣಗಳುಮಾನವೀಯ ಭಾರತದ ಸುತ್ತ......

ಮಾನವೀಯ ಭಾರತದ ಸುತ್ತ……

- Advertisement -
- Advertisement -

ಮುದ್ದು ಕಂದಮ್ಮಗಳ ಮೇಲಿನ ಅತ್ಯಾಚಾರ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅದರ ವೀಡಿಯೋ ಮಾಡುವುದು, ಬಯಲು ಶೌಚ ಮಾಡಿದ ಪುಟ್ಟ ಮಗುವನ್ನು ಕೊಲ್ಲುವುದು, ಆಸ್ಪತ್ರೆಗಳು ಆಂಬುಲೆನ್ಸ್ ನೀಡದೆ ಶವವನ್ನು ಹೊತ್ತುಕೊಂಡು ನಡೆಯುವುದು.. ಇಂಥ ಅಮಾನವೀಯ ಕೃತ್ಯಗಳು ಒಂದೇ ಎರಡೇ? ಇದು ಮಕ್ಕಳಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡೀತು?

ದ.ಕ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟ ಮೇಲೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಕಾಣಿಸಿಕೊಂಡಾಗ ನಡೆಸಿದ ಸಂದರ್ಶನದಲ್ಲಿ ‘ರಾಷ್ಟ್ರೀಯವಾದ ಎಂದರೇನು?” ಎಂಬ ಪ್ರಶ್ನೆಯನ್ನು ಕೇಳಲಾಯಿತು.ಅದಕ್ಕವರು ‘ಮಾನವೀಯತೆಯೇ’ ರಾಷ್ಟ್ರೀಯವಾದ ಎಂದರು. ರಕ್ತದ ಹೊಳೆ ಹರಿಸುತ್ತಾ, ಪರಸ್ಪರ ದ್ವೇಷಿಸುತ್ತಾ, ದೇಶದ್ರೋಹಿಗಳನ್ನು ದೇಶಪ್ರೇಮಿಗಳನ್ನು ಅದಲು ಬದಲುಗೊಳಿಸಿ, ಅಲ್ಪ ಸಂಖ್ಯಾತರ ಉಚ್ವಾಸ ನಿಶ್ವಾಸಕ್ಕೂ ದೇಶಪ್ರೇಮದ ಪ್ರಮಾಣಪತ್ರ ತೋರಿಸಬೇಕೆಂಬುವುದೇ ರಾಷ್ಟ್ರೀಯವಾದವೆನ್ನುವ ಈ ವಿಷಮ ಕಾಲಘಟ್ಟದಲ್ಲಿ ‘ಮಾನವೀಯತೆಯೇ’ ರಾಷ್ಟ್ರೀಯವಾದ ಎಂಬುದು ಎಂಥ ಸುಂದರ ಪರಿಕಲ್ಪನೆ.

ದಯೆ, ಮಾನವೀಯತೆಯೆಂಬುದು ಒಂದಕ್ಕೊಂದು ಅಂತರ್‍ಸಂಬಂಧವುಳ್ಳದ್ದು. ಪವಿತ್ರ ಖುರಾನ್ ಹೀಗೆ ಬೋಧಿಸುತ್ತದೆ, “ಭೂಮಿಯಲ್ಲಿರುವವರ ಮೇಲೆ ನೀವು ಕರುಣೆ ತೋರಿರಿ. ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.” ಇನ್ನೊಂದು ಕಡೆ ಬಸವಣ್ಣನವರು, “ದಯವಿಲ್ಲದ ಧರ್ಮವಾವುದಯ್ಯ ದಯೆಯೇ ಧರ್ಮದ ಮೂಲವಯ್ಯ” ಎನ್ನುತ್ತಾರೆ. ಇನ್ನೊಂದೆಡೆ “ಕುಲ ಕುಲ ಕುಲವೆಂದು ಹೊಡೆದಾಡದಿರಿ. ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಎಂದು ಕನಕದಾಸರು ಪ್ರಶ್ನಿಸುತ್ತಾರೆ. ಬ್ರಾಹ್ಮಣರ ಅಗ್ರಹಾರದಿಂದ ಹೊರನಡೆದ ಕನ್ನಡದ ಆದಿ ಕವಿ ಪಂಪ “ಮಾನವ ಕುಲಂ ತಾನೊಂದೆ ವಲಂ” ಎನ್ನುತ್ತಾರೆ. ಭಾರತದ ಇಂದಿನ ಸ್ಥಿತಿಗತಿಯು ಇವೆಲ್ಲವನ್ನೂ ಅಪಹಾಸ್ಯ ಮಾಡುವಂತಿದೆ.

ಎಲ್ಲಿ ಮಾನವೀಯತೆ ಇರುತ್ತದೆಯೋ ಅಲ್ಲಿ ಸೌಹಾರ್ದ ತನ್ನಿಂತಾನಾಗಿಯೇ ನೆಲೆಗೊಳ್ಳುತ್ತದೆ. ತನ್ಮೂಲಕ ಸುಂದರ ದೇಶ ನಿರ್ಮಾಣವಾಗುತ್ತದೆ. 2014ರ ಡಿಸೆಂಬರ್ ತಿಂಗಳಲ್ಲಿ ನಾನು ನನ್ನವರು ಮತ್ತು ನಮ್ಮ ಆತ್ಮೀಯರಾದ ಭೂಮಿಗೌಡ ಸರ್ ಮತ್ತು ಸಬೀಹಾ ಮೇಡಂ ಜೊತೆಯಾಗಿ ಯಾದಗಿರಿ ಜಿಲ್ಲೆಯ ತಿಂಥಣಿ ಎಂಬ ಪುಟ್ಟ ಹಳ್ಳಿಗೆ ಭೇಟಿ ನೀಡಿದ್ದೆವು. ಕೃಷ್ಣಾ ನದಿಯ ತಟದಲ್ಲಿರುವ ಈ ತಿಂಥಣಿ ಮುಈನುದ್ದೀನ್- ಮೋನಪ್ಪಯ್ಯ ಎಂಬ ಸೂಫಿ-ಶರಣರ ಸಂಗಮ ಕ್ಷೇತ್ರವಿರುವ ಕುಗ್ರಾಮ. ಜಾತಿ ಧರ್ಮದ ಕೆಸರಿನಲ್ಲಿ ಅದ್ದಿ ತೆಗೆಯದ ಶುದ್ಧ, ಮುಗ್ಧ ಮನಸ್ಸುಗಳನ್ನು ನಾನಲ್ಲಿ ಕಂಡೆ. ಅಲ್ಲಿದ್ದ ವ್ಯಕ್ತಿಯೊಬ್ಬರಲ್ಲಿ ತಮಾಷೆಗೆಂದು “ಮಂಗಳೂರಿಗೆ ಬರ್ತೀರೇನ್ರಿ?” ಎಂದು ಕೇಳಿದೆ. ಅದಕ್ಕವರು “ಬರಕ್ಕಿಲ್ಲಾರಿ, ವಾಲದ್ಮನಿ(ಹೊಲದ) ಕೆಲಸ ಐತ್ರಿ” ಅಂದರು.

ಅವರಿಗೆ ಅವರ ದನ-ಕರು-ಆಡು-ಕುರಿ-ದುಡಿಮೆ ಬಿಟ್ಟರೆ ಬೇರೆ ಪ್ರಪಂಚವೊಂದಿದೆಯೆಂದು ಗೊತ್ತಿರದಷ್ಟು ಆ ಹಳ್ಳಿ ಜನ ಮುಗ್ಧರಾಗಿದ್ದರು.

ತಾವಾಯಿತು ತಮ್ಮ ಪಾಡಾಯಿತು ಎಂದು ತಮ್ಮ ಪಾಡಿಗೆ ದುಡಿಯುತ್ತಿದ್ದ ಅಲ್ಲಿನ ಮನುಜರಲ್ಲಿ ನಾನು ಸುಂದರ ಭಾರತವನ್ನು ಕಂಡೆ.

ಮಂಗಳೂರನ್ನು ಕೋಮು ಸೂಕ್ಷ್ಮ ಪ್ರದೇಶ ಎನ್ನುತ್ತಾರೆ. ಅಂಧ ವೃದ್ಧೆ ಮುಸ್ಲಿಮ್ ತಾಯಿಯನ್ನು ಹಿಂದೂ ಯುವಕನೋರ್ವ ಕೈಹಿಡಿದು ರಸ್ತೆ ದಾಟಿಸುವುದನ್ನು ನಾನು ಪ್ರತ್ಯಕ್ಷ ಕಂಡಿದ್ದೇನೆ. ನನ್ನವರ ಕ್ಲಿನಿಕಿಗೆ ನಡೆದಾಡಲು ಸಾಧ್ಯವಾಗದ ವೃದ್ಧ ಹಿಂದೂ ಮಾತೆಯರನ್ನು ಎತ್ತಿಕೊಂಡು ತರುವ ಮುಸ್ಲಿಂ ಆಟೋ ಚಾಲಕರನ್ನೂ ಕಂಡಿದ್ದೇನೆ. ಇಲ್ಲಿ ಮಾನವೀಯ ಮೌಲ್ಯಗಳ ಮೂಲಕ ಸಹೋದರತೆ ಕೈಜೋಡಿಸಿದಾಗ ನನಗೆ ಭಾರತ ಸುಂದರವಾಗಿ ಗೋಚರಿಸಿತು.

ನಾನು ಹೈಸ್ಕೂಲ್ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪಡೆದದ್ದು ಕನ್ಯಾನ ಸರಕಾರಿ ಕಾಲೇಜಿನಲ್ಲಿ. ನನ್ನೂರು ಕುಳಾಲು ಎಂಬ ಪುಟ್ಟ ಹಳ್ಳಿ. ಈ ಹಳ್ಳಿಯಿಂದ ನಾವು ಸುಮಾರು ಮೂರು ನಾಲ್ಕು ಮೈಲಿ ನಡೆದು ಕಲೆಂಜಿಮಲೆ ಕಾಡನ್ನು ದಾಟಿ ಕನ್ಯಾನ ಸೇರುತ್ತಿದ್ದೆವು. ನನ್ನೊಡನೆ ವಿಭಿನ್ನ ಜಾತಿ ಧರ್ಮಗಳ ಏಳೆಂಟು ಮಂದಿ ಗೆಳೆಯ- ಗೆಳತಿಯರ ದಂಡಿತ್ತು. ನಾವೆಲ್ಲಾ ಸಮಾನ ವಯಸ್ಕರು, ಸಮಾನ ದುಃಖಿಗಳಾಗಿದ್ದೆವು. ಅದರಲ್ಲಿ ಒಬ್ಬಳು ತೀರಾ ಬಡತನದಲ್ಲಿದ್ದಳು. ಮಧ್ಯಾಹ್ನದ ಊಟಕ್ಕೆ ಅವಳಲ್ಲಿ ಏನೂ ಇರುತ್ತಿರಲಿಲ್ಲ. ಆಗೆಲ್ಲಾ ನಾವು ಮಧ್ಯಾಹ್ನವಾಗುತ್ತಲೇ ನಮ್ಮ ಬುತ್ತಿ ತೆರೆದು ಅವಳಿಗೂ ಉಣಿಸುತ್ತಿದ್ದೆವು. ಇದನ್ನು ನಮಗ್ಯಾರೂ ಹೇಳಿಕೊಟ್ಟಿರಲಿಲ್ಲ. ನಾವು ಬೆಳೆದ ಪರಿಸರವೇ ಹಾಗಿತ್ತು. ಈಗ ಅವಳು ಮೊದಲಿನಂತಿಲ್ಲ. ಮಾತಾಡುತ್ತಿಲ್ಲವೆಂದಲ್ಲ ಹಿಂದಿನ ಆ ಆತ್ಮೀಯತೆ ಇಲ್ಲ. ಇದನ್ನು ಕಂಡಾಗ ಇದು ನನ್ನ ಭಾರತವಲ್ಲವೆಂದು ಮನಸ್ಸು ಜೋರಾಗಿ ಚೀರತೊಡಗುತ್ತದೆ.

ಅದೇ ಕನ್ಯಾನದಲ್ಲಿ ನಾರಾಯಣಣ್ಣನೆಂಬ ಒಬ್ಬ ಮುಗ್ಧ ಹಳ್ಳಿಗ ಒಂದು ಪುಟ್ಟ ಕಿರಾಣಿ ಅಂಗಡಿಯಿಟ್ಟುಕೊಂಡಿದ್ದರು. ಅವರಿಗೆ ಕಲೆಂಜಿಮಲೆ ದಾಟಿ ಬರುವ ನಮ್ಮ ಈ ಸೇನೆಯನ್ನು ಕಂಡರೆ ತುಂಬಾ ಅಕ್ಕರೆ. ಅವರು ಶಾಲಾ ಮಕ್ಕಳಿಗಾಗಿ ಕುಡಿಯಲೆಂದು ಮಣ್ಣಿನ ಮಡಕೆಯಲ್ಲಿ ತುಂಬಿಸಿಡುತ್ತಿದ್ದ ನೀರನ್ನು ಕುಡಿಯದೆ, ಒಂದಿಷ್ಟು ಹೊತ್ತು ಹರಟದೆ ನಾವು ಕಾಡು ದಾಟಿದ್ದಿಲ್ಲ. ಶನಿವಾರ ಶಾಲೆ ಬಿಡುವುದು ಮಧ್ಯಾಹ್ನವಾದದ್ದರಿಂದ ಆ ಉರಿಬಿಸಿಲಿಗೆ ಬೆಟ್ಟ ಸದೃಶ ಕಾಡು ದಾಟುವುದು ತ್ರಾಸವಾಗುತ್ತಿತ್ತು. ಇದನ್ನರಿತ ಅವರು ಒಂದು ದೊಡ್ಡ ಬಾಟಲಿಯಲ್ಲಿ ನೀರು ಮತ್ತು ಒಂದಿಷ್ಟು ತಿನಿಸುಗಳನ್ನೂ ಕಟ್ಟಿಟ್ಟು ನಮಗಾಗಿ ಕಾಯುತ್ತಿದ್ದರು. ಅದಕ್ಕಾಗಿ ಅವರು ಒಂದು ರೂಪಾಯಿಯೂ ತೆಗೆದುಕೊಳ್ಳುತ್ತಿರಲಿಲ್ಲ. ಮನುಷ್ಯತ್ವಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೆನಿಸದು.

ಪಿ.ಯು.ಸಿ ಮುಗಿಸಿದಮೇಲೆ ನಾನು ಆ ಕಡೆ ತಲೆಹಾಕಿರಲೇ ಇಲ್ಲ. ಇತ್ತೀಚೆಗೆ ಅವರ ನೆನಪು ತುಂಬಾ ಕಾಡತೊಡಗಿದಾಗ ನನ್ನವರಲ್ಲಿ “ರೀ, ನಾರಾಯಣಣ್ಣನನ್ನು ನೋಡಿ ಬರೋಣವೇ?” ಎಂದು ಕೇಳಿದೆ. ಅದಕ್ಕೊಪ್ಪಿದ ಅವರು ನನ್ನನ್ನು ಕನ್ಯಾನಕ್ಕೆ ನಾನು ನಡೆದು ಹೋಗುತ್ತಿದ್ದ ದಾರಿಯಾಗಿಯೇ ಕರೆದೊಯ್ದರು. ದಾರಿಯುದ್ದಕ್ಕೂ ಎಲ್ಲವೂ ಬದಲಾಗಿರುವುದನ್ನು ನಾನು ಗಮನಿಸಿದೆ. ಹಳೇ ಕಾಡ ನಡುವಿನ ಕಾಲುದಾರಿಗೆ ಕಾಂಕ್ರೀಟು ಬಂದಿತ್ತು.

ನಮ್ಮ ನಾರಾಯಣಣ್ಣನೂ ಬದಲಾಗಿರಬಹುದೇ ಎಂಬ ಆತಂಕ ನನ್ನೊಳಗಿತ್ತು. ಕನ್ಯಾನ ಪೇಟೆ ತಲುಪಿದೊಡನೆ ರಸ್ತೆ ಬದಿಯಲ್ಲಿ ಮಾವಿನ ಕಾಯಿ ಹೆಕ್ಕುತ್ತಾ ನಿಂತಿದ್ದ ನಾರಾಯಣಣ್ಣನನ್ನು ಕಂಡೆ. ಅದು ರಸ್ತೆ ಎಂಬುದನ್ನೂ ನೋಡದೆ ‘ನಾರಾಯಣಣ್ಣಾ…” ಎಂದು ಕೂಗಿದೆ. ಕತ್ತು ತಿರುಗಿಸಿ ನೋಡಿದ ಅವರು “ಏರ್,ಮಿಸ್ರಿಯನಾ?” (ಯಾರು ಮಿಸ್ರಿಯನಾ?) ಎಂದು ತುಳುವಿನಲ್ಲಿ ಕೇಳಿದರು. ಏನಾಶ್ಚರ್ಯ! ಅವರು ನನ್ನ ಧ್ವನಿಯಿಂದಲೇ ನನ್ನನ್ನು ಗುರುತಿಸಿಬಿಟ್ಟಿದ್ದರು. ಅಷ್ಟು ವರ್ಷಗಳೇ ಕಳೆದರೂ ಅವರು ನಮ್ಮನ್ನು ಮರೆತಿರಲಿಲ್ಲ. ನೇರ ಅವರ ಅಂಗಡಿಗೆ ಕರೆದೊಯ್ದು ನನ್ನ ಜೊತೆಗಿರುತ್ತಿದ್ದ ಗೆಳೆಯ ಗೆಳತಿಯರ ಹೆಸರನ್ನೆಲ್ಲಾ ಒಂದೇ ಉಸಿರಿಗೆ ಹೇಳಿ ಅವರ ಕುರಿತೆಲ್ಲಾ ವಿಚಾರಿಸಿದರು. ಅವರ ಸ್ಮರಣ ಶಕ್ತಿ ಅದೆಷ್ಟು ಅದ್ಭುತವಾಗಿತ್ತೆಂದರೆ ನನ್ನ ಇಷ್ಟದ ತಿಂಡಿ ಯಾವುದೆಂದು ನೆನಪಿಟ್ಟಿದ್ದ ಅವರು ಭರಣಿಯಿಂದ ನೆಲಗಡಲೆ ಚಿಕ್ಕಿಗಳನ್ನು ತೆಗೆದು ನನಗೆ, ನನ್ನವರಿಗೆ ಮತ್ತು ನಮ್ಮ ಮಗಳಿಗೆ ಕೊಟ್ಟು ಕೇಳಿದರು “ಇದು ಬಾಲ್ಯದಲ್ಲಿ ನಿನ್ನ ಇಷ್ಟದ ತಿಂಡಿಯಲ್ವಾ..?”

ಹಿಂದಿನ ಅದೇ ಆತಿಥ್ಯ ಆ ದಿನವೂ ನಮಗೆ ದೊರಕಿತು. ಅವರು ಸ್ವತಃ ಚಹಾ ಮಾಡಿಕೊಟ್ಟು, ತಿಂಡಿ ತಿನಿಸು ಮತ್ತು ಮಾವಿನ ಹಣ್ಣುಗಳನ್ನು ನಮಗೆ ತಿನ್ನಲು ಕೊಟ್ಟರು. ಹಾಗೆ ನೋಡನೋಡುತ್ತಲೇ ಮಕ್ಕಳ ದಂಡೊಂದು ಬಂದು ನಾವು ಹಿಂದೆ ಕುಡಿಯುತ್ತಿದ್ದ ಅದೇ ಮಣ್ಣಿನ ಮಡಕೆಯಿಂದ ನೀರು ಕುಡಿಯತೊಡಗಿದರು.

ಸುತ್ತ ಮುತ್ತಲಿನವರೆಲ್ಲಾ ನಮ್ಮನ್ನೇ ಗಮನಿಸುತ್ತಿದ್ದರೂ ನಾವು ನಮ್ಮದೇ ಲೋಕದಲ್ಲಿ ಸುಮಾರು ಒಂದು ಘಂಟೆ ಕಾಲ ಹರಟಿದೆವು. ಮಾತನಾಡುತ್ತಲೇ ಒಂದು ಪುಟ್ಟ ಪ್ಲಾಸ್ಟಿಕ್ ಲಕೋಟೆಯಿಂದ ಫೋಟೊವೊಂದನ್ನು ಹೊರತೆಗೆದು ನನಗೆ ತೋರಿಸಿದರು. ಅದು ಅವರ ಹೆಂಡತಿ ಮತ್ತು ಪುಟ್ಟ ಕಂದನ ಭಾವ ಚಿತ್ರವಾಗಿತ್ತು. ಅದು ‘ಸುಕನ್ಯಾ’ ಯೋಜನೆಗಾಗಿ ತೆಗೆಸಿದ್ದೆಂದೂ ಹೇಳಿಕೊಂಡರು. ಅದೇ ಆತ್ಮೀಯತೆ, ಅದೇ ಮುಗ್ಧತೆ ಒಂದಿನಿತೂ ಮಾಸಿರಲಿಲ್ಲ. ಕೊನೆಗೆ ಹೊರಡಲನುವಾದಾಗ ಅವರ ಕಣ್ಣಂಚು ತೇವಗೊಂಡಿತು. ಜೊತೆಗೆ ನನ್ನದೂ. ಹಿಂದಿರುಗುತ್ತಲೇ ನಾನಂದೆ ‘ರೀ, ನನ್ನ ಭಾರತ ಬದಲಾಗಲಿಲ್ಲ. ಇದು ನನ್ನ ಭಾರತ.”

ನನಗಿನ್ನೂ ಸರಿಯಾಗಿ ನೆನಪಿದೆ. ನಮ್ಮೂರಿನಲ್ಲಿ ದಲಿತ ಸಮುದಾಯದ “ಪೂವಮ್ಮ” ಎಂಬ ಹೆಸರಿನ ಅಜ್ಜಿಯೊಬ್ಬರಿದ್ದಾರೆ. ಆಕೆ ನನಗೆ ಉದ್ದ ತಲೆಕೂದಲಿಗಾಗಿ ಕಾಡಿನಿಂದ ಕೆಲವು ಬೇರು ಮತ್ತು ಸೊಪ್ಪುಗಳನ್ನು ತಂದು ಕಡೆದು ಎಣ್ಣೆ ಮಾಡಿ ಕೊಡುತ್ತಿದ್ದರು. ಈಗ ಆಕೆಗೆ ತೀರಾ ಕಣ್ಣು ಕಾಣಿಸುವುದಿಲ್ಲ. ಆಕೆ ಈಗಲೂ ನನ್ನ ಧ್ವನಿ ಕೇಳಿ ನನ್ನನ್ನು ಗುರುತಿಸುತ್ತಾಳೆ. ಹತ್ತಿರ ಕೂರಿಸಿ ತಲೆ ನೇವರಿಸುತ್ತಾಳೆ. ನಮ್ಮಲ್ಲಿ ಕೆಲ ದಲಿತ ಹುಡುಗರು ಭಜರಂಗಿಗಳಾದರೆ ಇಂತಹ ಅಪ್ಪಟ ಮಾನವ ಪ್ರೇಮಿ ಅಜ್ಜಿಯನ್ನು ಕಂಡು ಆಕೆಯ ಪ್ರೀತಿ ಅನುಭವಿಸಿದ ನಾನೆಂತು ಒಂದಿಡೀ ಸಮುದಾಯವನ್ನು ದ್ವೇಷಿಸಲಿ…?

ನನ್ನ ನೆರೆಮನೆಯ ವ್ಯಕ್ತಿಯೊಬ್ಬನಿಗೆ ಮುಸ್ಲಿಮರನ್ನು ಕಂಡರೆ ಅಷ್ಟಕ್ಕಷ್ಟೇ. ಆತನ ಆ ಧೋರಣೆಗೆ ಕಾರಣ ಆತನ ರಾಜಕೀಯ ಹಿನ್ನೆಲೆ. ಆದರೆ ಅವನೊಳಗೂ ಒಂದು ಮನುಷ್ಯ ಹೃದಯವಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ನಮ್ಮನೆ ಬಾವಿಯ ನೀರು ಬತ್ತಿದಾಗಲೆಲ್ಲಾ ನಮಗೆ ನೀರು ಕೊಡುವವನು ಇದೇ ವ್ಯಕ್ತಿ. ಇದಕ್ಕೆ ಕಾರಣವೂ ಅಷ್ಟೇ ಸ್ಪಷ್ಟ. ಆತ ರಾಜಕೀಯವಾಗಿ ಮುಸ್ಲಿಂ ದ್ವೇಷಿಯಾಗಿದ್ದರೂ ಬಾಲ್ಯದಲ್ಲಿ ಆತ ಕಂಡ ಮಾನವೀಯ ಮೌಲ್ಯಗಳು, ಸೌಹಾರ್ದದ ಚೌಕಟ್ಟು ಆತನನ್ನು ಅದರಾಚೆ ದಾಟಲು ಬಿಡುವುದೇ ಇಲ್ಲ. ನಾವು ಬೆಳೆಯುವ ವಾತಾವರಣ ಯಾವ ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಆತ ಒಳ್ಳೆಯ ನಿದರ್ಶನ. ಎಳೆಯ ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ. ಯಾವ ರೂಪ ಕೊಡುತ್ತೇವೆಯೋ ಅದೇ ರೀತಿ ರೂಪ ಪಡೆದುಕೊಳ್ಳುತ್ತದೆ. ಹಿಂದೆಲ್ಲಾ ಹಿರೀಕರು ಬಾಳಿದ್ದು ಸಹಜ ಬದುಕು. ಅಲ್ಲಿ ಮನುಷ್ಯತ್ವ, ಪ್ರೀತಿ, ಸಹೋದರತೆ ಇತ್ತು. ಈಗೆಲ್ಲಾ ದಿನಪತ್ರಿಕೆ, ನ್ಯೂಸ್ ಚಾನೆಲ್, ಸಾಮಾಜಿಕ ಜಾಲತಾಣಗಳನ್ನು ತೆರೆದು ನೋಡಿದೊಡನೆ ಕಾಣ ಸಿಗುವುದು ಮಾನವೀಯತೆಯ ಸಮಾಧಿಯ ಮೇಲೆ ನಿಂತು ಆರ್ಭಟಿಸುತ್ತಿರುವ ಕ್ರೌರ್ಯ. ಮುದ್ದು ಕಂದಮ್ಮಗಳ ಮೇಲಿನ ಅತ್ಯಾಚಾರ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಅದರ ವೀಡಿಯೋ ಮಾಡುವುದು, ಬಯಲು ಶೌಚ ಮಾಡಿದ ಪುಟ್ಟ ಮಗುವನ್ನು ಕೊಲ್ಲುವುದು, ಆಸ್ಪತ್ರೆಗಳು ಆಂಬುಲೆನ್ಸ್ ನೀಡದೆ ಶವವನ್ನು ಹೊತ್ತುಕೊಂಡು ನಡೆಯುವುದು.. ಇಂಥ ಅಮಾನವೀಯ ಕೃತ್ಯಗಳು ಒಂದೇ ಎರಡೇ? ಇದು ಮಕ್ಕಳಲ್ಲಿ ಯಾವ ರೀತಿಯ ಪರಿಣಾಮವನ್ನುಂಟು ಮಾಡೀತು?

ಇಂತಹ ಅಪ್ಪಟ ಮನುಷ್ಯ ಪ್ರೇಮಿ ಮನಸ್ಸುಗಳು ಇಂದಿಗೂ ಇವೆ.. ಆದರೆ ನಮ್ಮ ನಡುವೆ ಸೃಷ್ಟಿಸಲಾದ ಕಂದರ ಇವೆಲ್ಲವನ್ನೂ ಸಂಶಯದಿಂದ ನೋಡುವಂತೆ ಮಾಡುತ್ತಿದೆ. ಭಾರತವೆಂದರೆ ಬರಿಯ ಭೌಗೋಳಿಕ ಪ್ರದೇಶವಲ್ಲ. ದೇಶವೆಂದರೆ ಇಲ್ಲಿನ ಜನತೆ. ಮನಸ್ಸುಗಳನ್ನು ಬೆಸೆಯುವುದರಿಂದ ಮಾತ್ರ ಸುಂದರ ಭಾರತ ನಿರ್ಮಾಣ ಸಾಧ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...