ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಭಾರತದ ಪ್ರಜೆಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ದೇಶ ಕೊನೆಗೂ ಸ್ವತಂತ್ರವಾಯಿತು. ನಮ್ಮದೇ ರಾಜ್ಯಾಂಗ ರಚನೆಯಾಯಿತು. ಭಾರತ ಒಂದು ರಿಪಬ್ಲಿಕ್ ಆಯಿತು, ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ಎಲ್ಲ ರಾಜ್ಯಗಳು ಸ್ವತಂತ್ರವಾಗಿ ರಾಜ್ಯಾಂಗದ ಆಶಯಗಳಿಗನುಸಾರ ಕಾರ್ಯನಿರ್ವಹಿಸುತ್ತಾ ಅಧಿಕಾರ ಪಡೆದವು. ಸ್ವಾತಂತ್ರ್ಯ ಬಂದಾಗ ಭಾರತದ ಶೇ.20ರಷ್ಟು ಜನ ಮಾತ್ರ ಅಕ್ಷರಜ್ಞಾನ ಉಳ್ಳವರಾಗಿದ್ದರು. ಆದರೂ ಭಾರತದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪುರುಷರಿಗೂ ಸ್ತ್ರೀಯರಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಭಾರತದ ಈ ಮತದಾರರು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾದರು. ಅಂದು ಭಾರತದ 10 ಜನರಲ್ಲಿ 8 ಜನ ಬಡತನದ ಸೀಮಾರೇಖೆಯ ತಳಗಿದ್ದರು.
ಈ 70 ವರ್ಷಗಳಲ್ಲಿ ಅನೇಕ ವಿಚಾರಗಳಲ್ಲಿ ಭಾರತ ಪ್ರಗತಿ ಹೊಂದಿದೆ. ಚಂದ್ರಮಂಡಲಕ್ಕೆ ಲಗ್ಗೆ ಹಾಕಿದ್ದೇವೆ. ಸೂರ್ಯನ ಹೊರವಲಯದವರೆಗೆ ಹೋಗಿ ಅಧ್ಯಯನ ನಡೆಸುವ ಸಾಹಸಕ್ಕೆ ಕೈಹಾಕಿದ್ದೇವೆ. ಇಂದಿಗೂ ಭಾರತದಲ್ಲಿ ಶೇ.18ರಷ್ಟು ಜನ ಬಡತನದ ಸೀಮಾರೇಖೆಯ ತಳಗೆ ವಾಸಿಸುತ್ತಿದ್ದಾರೆ. ಅಂದರೆ ಇವರಿಗೆ ಎರಡು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. 13 ಪಂಚವಾರ್ಷಿಕ ಯೋಜನೆಗಳು ಜಾರಿಗೊಂಡಂತಾದರೂ ಬಡವ ಮತ್ತಷ್ಟು ಬಡವನಾಗಿದ್ದಾನೆ. ಶೇ.10ರಷ್ಟು ಜನರಿಗೆ ಪಂಚವಾರ್ಷಿಕ ಯೋಜನೆಗಳ ಲಾಭ ಲಭ್ಯವಾಗಿದೆ. ಪ್ರಧಾನಿ ಜವಾಹರಲಾಲ್ ನೆಹರು ಅವರು 1964ರಲ್ಲಿ ಹೋಮಿಬಾಬಾ ಅವರ ಮುಂದಾಳತ್ವದಲ್ಲಿ ಭಾರತ ಸ್ಪರ್ಧಾತ್ಮಕವಾಗಿ ಅನುಕೂಲಗಳನ್ನು ಪಡೆಯಲು ಸಮಿತಿಯೊಂದನ್ನು ರಚಿಸಿದರು. ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲು ಸಮಿತಿ ನಿರ್ಧರಿಸಿತು. ಆ ಮೂಲಕ ಭಾರತ ಆರ್ಥಿಕವಾಗಿ ಸದÀೃಢ ರಾಷ್ಟ್ರವಾಗುವ ಅವಕಾಶವಿದೆಯೆಂದು ಸಮಿತಿ ಅಭಿಪ್ರಾಯಪಟ್ಟಿತು. ಭಾರತ ಸಾಫ್ಟ್‍ವೇರ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು. ಸಾಫ್ಟ್‍ವೇರ್ ಉದ್ಯಮದಲ್ಲಿ ಭಾರತ ದಾಪುಗಾಲು ಹಾಕಿತು. ಲಕ್ಷಾಂತರ ಯುವಕ ಯುವತಿಯರಿಗೆ ಈ ಮೂಲಕ ಉದ್ಯೋಗಾವಕಾಶ ದೊರೆಯಿತು.
1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದೇ ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದ ಇಂಡೋನೇಷಿಯಾ, ಮೈನ್‍ಮಾರ್, ಶ್ರೀಲಂಕಾ, ದಕ್ಷಿಣ ಕೊರಿಯಾ, ಜೋರ್ಡಾನ್, ಇಸÉ್ರೀಲ್, ಚೈನಾ ಸ್ವಾತಂತ್ರ್ಯ ಪಡೆದವು. ಎರಡನೇ ಮಹಾಯುದ್ಧದಿಂದ ಜಪಾನ್ ಮತ್ತು ಜರ್ಮನಿ ಸಂಪೂರ್ಣ ನೆಲಕಚ್ಚಿದ್ದವು. ಮುಂದಿನ ದಶಕದಲ್ಲಿ ಸಿಂಗಪೂರ್ ಮತ್ತು ಮಲೇಷಿಯಾಗಳಲ್ಲಿ ಸ್ವತಂತ್ರ ದೇಶಗಳಾದವು.
ಭಾರತೀಯರ ಸರಾಸರಿ ಆಯಸ್ಸು ಈಗ 60 ವರ್ಷಗಳಾದರೆ ಇಂಡೋನೇಷಿಯಾದಲ್ಲಿ ಸರಾಸರಿ ಆಯಸ್ಸು ಈಗ 80ಕ್ಕೆ ಮೇಲ್ಪಟ್ಟು. ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಚಾರದಲ್ಲಿ ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಮಲೇಷಿಯಾ ಮತ್ತು ಸಿಂಗಪುರ್‍ಗಳಿಗಿಂತ ಭಾರತ ಬಹಳ ಹಿಂದೆ ಬಿದ್ದಿದೆ. 168 ರಾಷ್ಟ್ರಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ. ಸಿಂಗಾಪುರದ ಸರಾಸರಿ ಆದಾಯ ಭಾರತದ 25 ಪಟ್ಟು. ಏಷ್ಯಾದಲ್ಲಿ ಅತಿಕಡಿಮೆ ಬಡತನವಿರುವ ರಾಷ್ಟ್ರ ಮಲೇಷಿಯಾ. 1990ರವರೆಗೆ ಇಂಡೋನೇಷಿಯಾ ಶಿಕ್ಷಣ ಮತ್ತು ಆರೋಗ್ಯ ಬಾಬಿನಲ್ಲಿ ತುಂಬ ಹಣ ವ್ಯಯಮಾಡಿತು. ಅದರ ಫಲವಾಗಿ ಈಗ ಬಡತನ ಶೇ.10ಕ್ಕೆ ಇಳಿದಿದೆ. 70ರ ದಶಕದಲ್ಲಿ ಭಾರತ ಮತ್ತು ಚೈನಾದ ಸರಾಸರಿ ಆದಾಯ ಒಂದೇ ಆಗಿತ್ತು. ಈಗ ಚೈನಾದ ಸರಾಸರಿ ಆದಾಯ ಆಗಿನ ಹೋಲಿಕೆಯಲ್ಲಿ ಹನ್ನೆರಡು ಪಟ್ಟು ಹೆಚ್ಚಿದೆ. ಬೆಟ್ಟದ ತುದಿ ಮುಟ್ಟಬೇಕೆಂಬ ಕನವರಿಕೆಯೇ ಬೇರೆ, ಬೆಟ್ಟದ ಶಿಖರ ಏರಿ ಅದರ ಸುಖ ಅನುಭವಿಸುವುದೇ ಬೇರೆ.
ಕಾನೂನಿಗೆ ವಿರುದ್ಧವಾಗಿ ಜಮೀನು ಕಬಳಿಸುವುದು, ಅಕ್ರಮದ ಡಿನೋಟಿಫಿಕೇಷನ್ ಹೊರಡಿಸುವುದು, ಸೈನ್ಯಕ್ಕೆ ಆಯುಧಗಳನ್ನು ಕೊಳ್ಳುವುದರಲ್ಲೂ ಲಂಚ ನುಂಗುವುದು, ತರಂಗಾಂತರಗಳನ್ನು ನೀತಿ ನಿಯಮವಿಲ್ಲದೆ ಮಾರಾಟ ಮಾಡುವುದು. ಆಟ, ಮನರಂಜನೆ, ಕ್ರೀಡೆಗಳ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಸೂರೆಮಾಡುವುದು. ಅದಾನಿ, ಅಂಬಾನಿ ಮುಂತಾದ ಭ್ರಷ್ಟ ಉದ್ಯಮಿಗಳ ಸಾಲಮನ್ನಾ ಮಾಡುವುದು… ಇವು ಇಂದಿನ ಪ್ರಚಲಿತ ವಿದ್ಯಮಾನಗಳು. ಬಡತನ ನಿವಾರಣೆಯ ಯೋಜನೆಗಳ ಹೆಸರಿನಲ್ಲಿ ಲೂಟಿ ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರತಿವರ್ಷ ಅಧಿಕಾರಿಗಳು ಸುಮಾರು 90000 ಕೋಟಿ ರೂ.ಗಳ ಲೂಟಿ ಮಾಡುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಹೆಸರಿನಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚಿಗೆ ರಾಷ್ಟ್ರ ಖರ್ಚು ಮಾಡುತ್ತದೆ. ರಾಷ್ಟೀಯ ಆರೋಗ್ಯ ಯೋಜನೆ ನೆಪದಲ್ಲಿ 1000 ಕೋಟಿ ಖರ್ಚು ಬೀಳುತ್ತದೆ. ಬಂಡವಾಳ ಪರದೇಶಗಳಿಗೆ ಹಾರಿಹೋಗುವುದು 462 ಬಿಲಿಯನ್ ರೂಗಳು. ಭ್ರಷ್ಟ ಉನ್ನತಾಧಿಕಾರಿಗಳು ಕದಿಯುವುದು 92000 ಕೋಟಿ ರೂಗಳು. ಇವೆಲ್ಲ ಕಪ್ಪು ಹಣವಾಗಿ ಪರಿವರ್ತನೆಯಾಗುತ್ತದೆ. ಅಧಿಕಾರದ ದುರುಪಯೋಗದ ಕಾರಣದಿಂದ, ಮಂತ್ರಿಗಳು, ಅಧಿಕಾರಿಗಳು, ಶಾಸಕರುಗಳ ಲೂಟಿಯ ಕಾರಣದಿಂದ ದೇಶದ ಆರ್ಥಿಕ ಪ್ರಗತಿ ಹಿಮ್ಮೆಟ್ಟುತ್ತಿದೆ. ಇದು ವಾಸ್ತವ.
ಹಣಕಾಸಿನ ವಹಿವಾಟನ್ನು ನಮ್ಮ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ರಾಷ್ಟ್ರದ ಆದಾಯದ 1/6ರಷ್ಟು ಹಣ ಭಾರತದ 2/3ರಷ್ಟು ಜನಸಂಖ್ಯೆಗೆ ಹಂಚಿಕೆಯಾಗುತ್ತಿದೆ. 5/6ರಷ್ಟು ಆದಾಯ 1/3 ರಷ್ಟು ಜನರ ಪಾಲಾಗುತ್ತದೆ. ಸರ್ಕಾರದ ಒಟ್ಟು ಆದಾಯಕ್ಕೂ ಮಾಡುವ ಖರ್ಚಿಗೂ ಮಧ್ಯೆ ದೊಡ್ಡ ಕಂದರ ನಿರ್ಮಾಣವಾಗಿದೆ. ಸರ್ಕಾರದ ಸಾಧನೆಗೂ ವ್ಯಕ್ತಿಗಳ ನಿರೀಕ್ಷೆಗಳಿಗೂ ಅಜಗಜಾಂತರ. ಆಹಾರಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ಸಾಮಾನ್ಯರ ಕಷ್ಟ ಅರ್ಥವಾಗುತ್ತಲೇ ಇಲ್ಲ. ಈಚೆಗೆ ಸರ್ಕಾರದ ಸಾಲದ ಪಟ್ಟಿ ಹೆಚ್ಚಿದೆ. ಬಡ್ಡಿ ಕಟ್ಟಲು ಬಜೆಟ್‍ನಲ್ಲಿ ಪ್ರತಿವರ್ಷ ಬಜೆಟ್‍ನ ಶೇ.23ರಷ್ಟು ಹಣವನ್ನು ತೆಗೆದಿಡುತ್ತದೆ. ಸರ್ಕಾರ ದಿನಕ್ಕೆ 1600 ಕೋಟಿ ಸಾಲ ಮಾಡುತ್ತದೆ. ಆಹಾರ ಪದಾರ್ಥಗಳ ಹಂಚಿಕೆಯಲ್ಲಿ ಮೋಸ, ಅಳತೆಯಲ್ಲಿ ಮೋಸ, ಆಹಾರಧಾನ್ಯಗಳ ಕಳ್ಳ ಸಾಗಾಣಿಕೆಯಿಂದ ಸರ್ಕಾರಕ್ಕೆ 40000 ಕೋಟಿ ರುಪಾಯಿಗಳ ನಷ್ಟವಾಗುತ್ತದೆ. ಕಳೆದ 10 ವರ್ಷಗಳಿಂದಲೂ ಪ್ರತಿ ವರ್ಷ ಇಷ್ಟೊಂದು ನಷ್ಟವುಂಟಾಗುತ್ತಿದೆ.
ಈ ಎಲ್ಲ ಅನಿಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದ ತುರ್ತು ನಮ್ಮ ಕಣ್ಣೆದುರಿಗಿರುವಾಗಲೇ, ಈಗ ಹಿಂದು ಸೇವಾಸಂಸ್ಥೆಯ ಹೆಸರಿನಲ್ಲಿ ಭಯೋತ್ಪಾದಕರನ್ನು ಬೆಳೆಸಲಾಗುತ್ತಿದೆ. ಅವರಿಗೆ ಧರ್ಮದ ಅಫೀಮು ತಿನ್ನಿಸಿ ಯುವಕರ ತಲೆಕೆಡಿಸಿ ಸಮಾಜದಲ್ಲಿ ದ್ವೇಷಭಾವನೆ ಬೆಳೆಸಲು ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ದೇಶದಾದ್ಯಂತ ಅಶಾಂತಿ, ಗೊಂದಲ, ಹಿಂಸೆ, ಭಯೋತ್ಪಾದನೆ ಹರಡಲು ಮತಾಂಧ ಸಂಸ್ಥೆಗಳು ಹಿಂದೂ ಹೆಸರಿನಲ್ಲಿ ರೂಪತಾಳಿರುವುದು ಒಂದು ಭಯಾನಕ ಬೆಳವಣಿಗೆ.
ಒಟ್ಟಿನಲ್ಲಿ ಸಮಾಜದಲ್ಲಿ ಒಂದು ಅಲ್ಲೋಲಕಲ್ಲೋಲ ಪರಿಸ್ಥಿತಿ ಉದ್ಭವವಾಗುತ್ತಿದೆ. ಸಮಾಜದ ಇತರ ಪಿಡುಗುಗಳ ವಿರುದ್ಧ ಹೋರಾಡುವುದರ ಜೊತೆಗೆ ಈ ದುಷ್ಟ ಭಯೋತ್ಪಾದನೆಯ ಪ್ರವೃತ್ತಿಯನ್ನು ತಡೆಗಟ್ಟುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯವಾಗಿದೆ.
ರಾಷ್ಟ್ರ ಸಾಗಿದ ದೂರವೆಷ್ಟು?
- Advertisement -
- Advertisement -
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ


