ಕೇರಳದ ಒಂದೇ ಕುಟುಂಬದ ಐದು ಜನರು ಕರೋನಾ ವೈರಸ್ ಭಾದಿತರಾಗಿದ್ದಾರೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 39 ಕ್ಕೆ ಏರಿದೆ. ಈ ಕುಟುಂಬದ ಮೂವರು ಇತ್ತೀಚೆಗೆ ಇಟಲಿಗೆ ಭೇಟಿ ನೀಡಿದ್ದರು. ಇದು ಅತೀ ಹೆಚ್ಚು ಕರೋನಾ ವೈರಸ್ ಪ್ರಕರಣವಿರುವ ರಾಷ್ಟ್ರಗಳಲ್ಲಿ ಒಂದಾಗಿದೆ .
“ಕುಟುಂಬವು ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರಯಾಣದ ಬಗ್ಗೆ ಹೇಳದೆ ಇದ್ದರಿಂದ ಅವರನ್ನು ಪರೀಕ್ಷಿಸಿರಲಿಲ್ಲ, ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಲಿ ನಿರಾಕರಿಸಿದ್ದರು ಹಾಗಾಗಿ ಅವರನ್ನು ಮನವೊಲಿಸಬೇಕಾಯಿತು” ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದರು. ಸೋಂಕಿತರು ಪತ್ತನಂತಿಟ್ಟ ಜಿಲ್ಲೆಯ ನಿವಾಸಿಗಳಾಗಿದ್ದು ಎಲ್ಲರನ್ನು ಪತ್ತನಂತಿಟ್ಟ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಇಟಲಿಗೆ ಪ್ರಯಾಣಿಸಿ ಅಲ್ಲಿಂದ ಮರಳಿದ ನಂತರ ಮೂವರು ಕೆಲವು ಸಂಬಂಧಿಕರನ್ನು ಭೇಟಿ ಮಾಡಿದ್ದರು. ಅವರ ಸಂಬಂಧಿಕರು ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಇಟಲಿಗೆ ಪ್ರಯಾಣಿಸಿದ ಕುಟುಂಬವನ್ನು ಸಹ ದಾಖಲಿಸಲಾಯಿತು” ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ಭಾರತದ ಮೊದಲ ಮೂರು ಕರೋನಾ ವೈರಸ್ ಪ್ರಕರಣಗಳು ಕೇರಳದಿಂದ ವರದಿಯಾಗಿತ್ತು. ವುಹಾನ್‌ನ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದ ಈ ಮೂವರು ರೋಗಿಗಳು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಇಟಲಿಯಲ್ಲಿ ಸುಮಾರು 6000 ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 225 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕರೋನಾ ವೈರಸ್ 95 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹರಡಿದೆ. ಈಗಾಗಲೇ 3,500 ಕ್ಕೂ ಹೆಚ್ಚು ಜನರು ಇದಕ್ಕೆ ಬಲಿಯಾಗಿದ್ದಾರೆ.


