“ಬಿಜೆಪಿ ಸಹವಾಸ, ಜನಸಾಮಾನ್ಯರಿಗೆ ಉಪವಾಸ.. ಕಾರು, ಬೈಕು ಮ್ಯೂಸಿಯಂನಲ್ಲಿ, ಸೈಕಲ್ ಬಂಡಿ ರೋಡಿನಲ್ಲಿ, ಬಿಜೆಪಿ ನಿನ್ನ ಕಾಲದಲ್ಲಿ” ಎಂಬಂತಹ ಬ್ಯಾನರ್ ಫ್ಲೆಕಾರ್ಡುಗಳನ್ನಿಡಿದು, ಸೈಕಲ್ ಮತ್ತು ಕುದುರೆ ಬಂಡಿ ಮೇಲೆ ಸವಾರಿ ಮಾಡುವ ಮೂಲಕ ಆಪ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಖಂಡಿಸಿ ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಆನಂದ್ ರಾವ್ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯ ಬಜೆಟ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕ್ರಮವಾಗಿ ₹ 1.59 ಹಾಗೂ 1.60 ಕ್ಕೆ ಏರಿಸಿರುವುದನ್ನು ಖಂಡಿಸಿ ಧಿಕ್ಕಾರ ಕೂಗಿದರು.
ಖಾಲಿಯಾಗಿರುವ ಬೊಕ್ಕಸವನ್ನು ಭರ್ತಿ ಮಾಡಲು ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವುದು ಯಾವ ನ್ಯಾಯ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ಈ ಹಿಂದಿನ ಸಮ್ಮಿಶ್ರ ಸರ್ಕಾರ ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇವಲ 10 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಆಕಾಶ ಭೂಮಿ ಒಂದಾಗುವಂತೆ ಕೂಗಾಡಿದ್ದ ಇದೇ ಬಿಜೆಪಿ ಮಂದಿ ಇಂದು ಬಾಯಿಗೆ ಕಡುಬು ತುರುಕಿ ಕೊಂಡಿರುವುದನ್ನು ನೋಡಿದರೆ, ‘ತಾನು ಕಳ್ಳ ಪರರನ್ನು ನಂಬ’ ಎನ್ನುವ ಸ್ಥಿತಿಯನ್ನು ಬಿಜೆಪಿಯವರು ತಲುಪಿದ್ದಾರೆ ಎನ್ನಬಹುದು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಕಿಡಿಕಾರಿದರು.
15 ನೇ ಹಣಕಾಸು ಆಯೋಗದ ಅನುದಾನ ಹಾಗೂ ಕೇಂದ್ರದ ತೆರಿಗೆಯಲ್ಲಿ ರಾಜ್ಯಕ್ಕೆ ಬರುವ ಪಾಲು ಕಡಿತ ಆಗಿದೆ. ಜಿಎಸ್‌ಟಿ ಪರಿಹಾರವೂ ಸಹ ಕಡಿಮೆ ಆಗಿದ್ದು ಇದರಿಂದ ರಾಜ್ಯಕ್ಕೆ ಸುಮಾರು ₹ 15 ಸಾವಿರ ಕೋಟಿ ನಷ್ಟವಾಗಿದೆ. ಇದರ ಪರಿಣಾಮ, ಸಾರ್ವಜನಿಕರು ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಮೇಲೆ ಸಾಗಾಣೆ ವೆಚ್ಚ ಹೆಚ್ಚಾಗಿ, ಇವುಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿಯೂ ಬಿಜೆಪಿ, ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ‘ಸ್ವರ್ಗ’ ಮಾಡಲಾಗುವುದು, ‘ಸಿಂಗಾಪುರ’ ಮಾಡಲಾಗುವುದು ಎನ್ನುತ್ತಿದ್ದ ಜನ ಪ್ರತಿನಿಧಿಗಳ ಗಾಢ ನಿದ್ದೆಯಿಂದ ಇನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ ಎಂದು ಟೀಕಿಸಿದರು.
ನೀ ಹೊಡೆದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎನ್ನುವ ಒಪ್ಪಂದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಬಂದಂತೆ ಕಾಣುತ್ತಿದೆ. ಜನಸಾಮಾನ್ಯರು ಸಂಕಷ್ಟದಲ್ಲಿದ್ದರೂ ಇದುವರೆಗೂ ಸಹ ಈ ಎರಡೂ ಪಕ್ಷಗಳು ದಿವ್ಯ ಮೌನವಹಿಸಿರುವುದು ನೋಡಿದರೆ ಯಾರಿಗೂ ಜನರ ಹಿತಾಸಕ್ತಿ ಇಲ್ಲವೇ ಇಲ್ಲ ಎನ್ನಬಹುದು ಎಂದರು.
ಪ್ರಪಂಚದ 4ನೇ ಅತೀದೊಡ್ಡ ಗುಜುರಾತಿನ ತೈಲ ಘಟಕವನ್ನು ಸಂಪೂರ್ಣವಾಗಿ ರಿಲಯನ್ಸ್ ಕಂಪೆನಿಗೆ ಸಬ್ಸಿಡಿ ಆಧಾರದಲ್ಲಿ ನಡೆಸಲು ಅನುಮತಿ ನೀಡಿರುವ ಮೋದಿ ಸರ್ಕಾರ, ದೇಶದ ಬಡ ಜನರ ಬೆನ್ನಿನ ಮೇಲೆ ಬಾರ ಹಾಕಿ, ಹಾಕಿ ಗೂನಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ತೆರಿಗೆ ಹೆಚ್ಚಳದ ಮೂಲಕ ತೈಲ ಕಂಪನಿಗಳ ಒಡೆಯರ ಜೇಬು ತುಂಬಿಸುತ್ತಿರುವ ಈ ಕ್ರಮವನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು. ಬಡ ಮತ್ತು ಮಧ್ಯಮ ವರ್ಗದ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳು ಈ ಬಜೆಟ್‌ಗೆ ಅನುಮೋದನೆ ನೀಡಬಾರದು ಎಂದು ಅವರು ಆಗ್ರಹಿಸಿದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಸ್ಥಳಿಯ ಮುಖಂಡರಾದ ಸೀತಾರಂ ಗುಂಡಪ್ಪ, ಆಯೂಬ್ ಖಾನ್, ಜಗದೀಶ್ ಚಂದ್ರ, ಲಕ್ಷ್ಮಿಕಾಂತ್ ರಾವ್, ಶರತ್ ಖಾದ್ರಿ, ಚನ್ನಪ್ಪ ಗೌಡ, ರವಿಚಂದ್ತ, ಫೀರೋಜ್ ಖಾನ್ ಮುಂತಾದವರು ಭಾಗವಹಿಸಿದ್ದರು.


