Homeಮುಖಪುಟಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

ಒಕ್ಕಲಿಗರ ರಾಜಧಾನಿಯ ಮೇಲೆ ವೈದಿಕಶಾಹಿಯ ಕಣ್ಣು: ಮಂಡ್ಯಕ್ಕೇನು ಕಾದಿದೆ?

- Advertisement -
- Advertisement -

ಮಂಡ್ಯದ ಒಕ್ಕಲಿಗರು ಕುವೆಂಪು ಅವರ ಕಟ್ಟಾ ಅನುಯಾಯಿಗಳೇನೂ ಅಲ್ಲ. ಆದರೆ, ಇಲ್ಲಿನ ಮುಖ್ಯವಾಹಿನಿ ಪ್ರಜ್ಞೆಯು ವೈದಿಕಶಾಹಿಯ ಪದತಲದಲ್ಲಿ ಶರಣಾಗಿಲ್ಲ. ಅದು 30 ವರ್ಷಗಳ ಕೆಳಗೆ ಹೇಗೋ ಇಂದಿಗೂ ಹಾಗೆಯೇ ಇದೆ. ಇದೇ ಮಾತನ್ನು ರಾಜ್ಯದ ಉಳಿದೆಲ್ಲಾ ಜಿಲ್ಲೆಗಳ ವಿಚಾರದಲ್ಲಿ ಹೇಳುವ ಹಾಗಿಲ್ಲ. ಕಳೆದ 30 ವರ್ಷಗಳಲ್ಲಿ ಉಳಿದ ಜಿಲ್ಲೆಗಳ ಅಧ್ಯಾಪಕರು, ಸಾಹಿತಿಗಳ ಒಂದು ವಿಭಾಗ, ಪತ್ರಕರ್ತರು ಮತ್ತಿತರ ಸುಶಿಕ್ಷಿತ ವರ್ಗ ನಿಧಾನಕ್ಕೆ ವೈದಿಕರ ಬಾಲಂಗೋಚಿಗಳಾಗುತ್ತಾ ನಡೆದರು. ಅದರ ಭಾಗವಾಗಿ ಅಲ್ಲಿ ಆರೆಸ್ಸೆಸ್ ಚಿಂತನೆ ಹಾಗೂ ಬಿಜೆಪಿಯೂ ಬೆಳೆಯುತ್ತಾ ಸಾಗಿದವು. ಆದರೆ ಮಂಡ್ಯದಲ್ಲಿ ಇವ್ಯಾವುವೂ ಆಗಿರಲಿಲ್ಲ.

ಒಕ್ಕಲಿಗ ಪ್ರಾಧಾನ್ಯತೆ ಮಂಡ್ಯಕ್ಕೆ ಮಾತ್ರ ಸೀಮಿತವಾದದ್ದೇನಲ್ಲ. ದಕ್ಷಿಣದ ಏಳೆಂಟು ಜಿಲ್ಲೆಗಳಲ್ಲಿ ಒಕ್ಕಲಿಗರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರು. ಹಾಸನ ಮತ್ತು ರಾಮನಗರಗಳು ‘ಒಕ್ಕಲಿಗ ಪಕ್ಷ’ವೆಂದು ಹೆಸರಾದ ಜೆಡಿಎಸ್‍ನ ನಾಯಕರುಗಳನ್ನು ಸತತವಾಗಿ ಆರಿಸಿ ಕಳಿಸಿದ ಜಿಲ್ಲೆಗಳು. ಆದರೂ ಮಂಡ್ಯವೇ ಈ ವಿದ್ಯಮಾನದ ರಾಜಧಾನಿ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯಲು ದಕ್ಷಿಣ ಕರ್ನಾಟಕದಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ. ಬಿಜೆಪಿ ಪ್ರಬಲವಾಗುವುದೆಂದರೆ ಕೆಲವು ವಿರೋಧ ಪಕ್ಷಗಳ ನಾಯಕರುಗಳನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಮಾತ್ರವಲ್ಲಾ. ತನ್ನ ಐಡಿಯಾಲಜಿಯನ್ನೂ ಅಲ್ಲಿ ಸ್ಥಾಪಿಸುವುದು. ಹಾಗೆ ಮಾಡಿದಾಗ ಮಾತ್ರ ಈ ಸಾರಿ ದಕ್ಷಿಣ ಕನ್ನಡದಲ್ಲಿ ಆದಂತೆ ಯಾರನ್ನೇ ಚುನಾವಣೆಗೆ ನಿಲ್ಲಿಸಿದರೂ ಅಲ್ಲಿಂದ ಗೆದ್ದು ಬರುವಂತೆ ಮಾಡಿಕೊಳ್ಳಬಹುದು. ಈ ಎಲ್ಲಾ ದೃಷ್ಟಿಯಿಂದ ಆರೆಸ್ಸೆಸ್‍ಗೆ ತನ್ನ ಚಿಂತನೆಯನ್ನು ಹರಡಲು ಮಂಡ್ಯ ಮತ್ತು ಸುತ್ತಲಿನ ಜಿಲ್ಲೆಗಳು ಬಹುಮುಖ್ಯ. ಕನಕಪುರದಲ್ಲಿ ಏಸು ಪ್ರತಿಮೆಯ ವಿಚಾರದಲ್ಲಿ ಗಲಭೆ ಎಬ್ಬಿಸಲು ಕಲ್ಲಡ್ಕ ಪ್ರಭಾಕರ ಭಟ್ಟರೇ ರಂಗಕ್ಕಿಳಿದಿರುವುದೂ ಆ ಉದ್ದೇಶದಿಂದಲೇ. ಈಗ ‘ಅವರು ಬಂದು ಇಲ್ಲಿ ಏನು ಮಾಡಿಕೊಳ್ಳಲೂ ಸಾಧ್ಯವಿಲ್ಲ’ ಎಂಬಂತೆ ವರ್ತಿಸುತ್ತಿರುವ ಡಿ.ಕೆ.ಬ್ರದರ್ಸ್‍ಗೆ ಇನ್ನು ನಾಲ್ಕೈದು ವರ್ಷಗಳಲ್ಲೇ ಆಘಾತವಾಗುವಂತೆ ಅವರ ವಿರುದ್ಧ ಅಲೆ ಬೀಸುವಂತೆ ಮಾಡುವುದು ಸಂಘಪರಿವಾರಕ್ಕೆ ಕಷ್ಟವಿಲ್ಲ.

ಅದೇ ರೀತಿ ಮಂಡ್ಯದ ಮೇಲೆ ಆರೆಸ್ಸೆಸ್‍ನ ಕಣ್ಣು ಬಿದ್ದಿರುವುದಕ್ಕೂ ಇದೇ ಕಾರಣವಿದೆ. ಮೊದಲು ಅವರು ಗುರಿ ಮಾಡಿಕೊಂಡಿದ್ದು ಆದಿಚುಂಚನಗಿರಿ ಮಠದ ಮೇಲೆ. ಮೂಲತಃ ನಾಥಪರಂಪರೆಗೆ ಸೇರಿದ ಈ ಮಠವು ಅವೈದಿಕ ನೆಲೆಯದ್ದಾಗಿತ್ತು. ಆದರೆ ಎಲ್ಲಾ ಬ್ರಾಹ್ಮಣೇತರ ಜಾತಿಗಳಿಗೂ, ಅದರಲ್ಲೂ ಅಂತಹ ಮಠಗಳಿಗೆ ತಾವು ಬ್ರಾಹ್ಮಣಶಾಹಿಯ ಜೊತೆಗೆ ಗುರುತಿಸಿಕೊಂಡರೇನೇ ಮಾನ್ಯತೆ ಎಂಬ ಭಾವನೆ. ಇದು ಕೀಳರಿಮೆಯಿಂದ ಕೂಡಿದ್ದೋ ಅಥವಾ ಅಧಿಕಾರದ ಹಂಬಲದಿಂದ ಬಂದಿದ್ದೋ ಹೇಳುವುದು ಕಷ್ಟ. ಹೀಗಾಗಿ ಬಾಲಗಂಗಾಧರನಾಥರನ್ನೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕಷ್ಟವಾಗಿರಲಿಲ್ಲ.

ಈಗಂತೂ ಈ ವಿಚಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಗೌರಿ ಲಂಕೇಶ್ ಮರ್ಡರ್ ಕೇಸಿನಲ್ಲಿ ಬಂಧಿತನಾಗಿರುವ ಹೊಟ್ಟೆ ನವೀನನನ್ನು ಸನಾತನ ಸಂಸ್ಥೆಯ ಸುಜಿತ್ ಅಲಿಯಾಸ್ ಪ್ರವೀಣ್ ಮಾತಾಡಿಸಿ ಗೌರಿ ಲಂಕೇಶ್ ಹತ್ಯೆಯ ಯೋಜನೆಯ ಸುದ್ದಿ ತಿಳಿಸಿದ್ದು ವಿಜಯನಗರದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದಾಗಲೇ. ಅಲ್ಲಿ ಹಿಂದೂ ಜನಜಾಗೃತಿ ಸಮಿತಿ ಎಂಬ ಸನಾತನ ಸಂಸ್ಥೆಯ ಸೋದರ ಸಂಘಟನೆಯ ಕಾರ್ಯಕ್ರಮಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆರೆಸ್ಸೆಸ್ ಮತ್ತು ಸನಾತನ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರಿಸಿಕೊಂಡರೂ, ಅಸಲೀ ಸತ್ಯ ಗೊತ್ತಿದ್ದವರಿಗೆಲ್ಲಾ ಗೊತ್ತಿದೆ.

ಗೌರಿ ಲಂಕೇಶರ ಹತ್ಯೆಯ ಕೇಸಿನ ವಿಚಾರಣೆಯಲ್ಲಿ ಹೊಟ್ಟೆ ನವೀನನನ್ನು ಇಲ್ಲಿಯೇ ಮಾತಾಡಿಸಲಾಯಿತು ಎಂಬುದು ಚಾರ್ಜ್‍ಶೀಟ್‍ನಲ್ಲಿ ಪ್ರಸ್ತಾಪವಾದ ನಂತರವೂ, ಈ ಮಠದಲ್ಲಿ ಎರಡು ಸಭೆಗಳು ನಡೆದಿವೆ. ಜಯಂತ್ ಬಾಲಾಜಿ ಅತಾವಳೆ ಸನಾತನ ಸಂಸ್ಥೆಯ ಸ್ಥಾಪಕನ ಜಯಂತಿಯು 2019ರ ಮೇ 18ರಂದು ನಡೆಯಿತು ಮತ್ತು ಆ ಕಾರ್ಯಕ್ರಮದಲ್ಲಿ ಮಠದ ಉಸ್ತುವಾರಿ ಸೌಮ್ಯನಾಥ ಸ್ವಾಮೀಜಿಯೂ ಪಾಲ್ಗೊಂಡು ಭಾಷಣ ಮಾಡಿದರು. ಅದರಲ್ಲಿ ಅತಾವಳೆಯನ್ನೂ ಹೊಗಳಿ ಮಾತಾಡಿದರು. ಅವರ ಸಾರ್ಥಕ ಬದುಕು ಮತ್ತು ಮಾರ್ಗದರ್ಶನವು ಹಿಂದೂ ಸಮಾಜಕ್ಕೆ ಬೇಕೆಂದು ಹೇಳಿದರು. ಅಂದ ಹಾಗೆ ಈ ಹೊಟ್ಟೆ ನವೀನ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಡುಗ ಮತ್ತು ಇದೀಗ ಪಶ್ಚಾತ್ತಾಪ ಪಡುತ್ತಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಒಕ್ಕಲಿಗರ ಮೇಲೆ ಕೇಂದ್ರೀಕರಿಸಬೇಕು ಎಂಬ ಉದ್ದೇಶ ಇರುವುದರಿಂದ ಮತ್ತು ಆ ಕೆಲಸವನ್ನು ಇದುವರೆಗೆ ಆರ್.ಅಶೋಕ್ ಯಶಸ್ವಿಯಾಗಿ ಮಾಡಿಲ್ಲ ಹಾಗೂ ಸಿ.ಟಿ.ರವಿ ಮೈಸೂರು ಭಾಗದಲ್ಲಿ ಇದನ್ನು ಮಾಡುವುದು ಸುಲಭವಿಲ್ಲ ಎಂಬ ಕಾರಣದಿಂದಲೇ ಬೆಂಗಳೂರಿನ ಸಿ.ಎನ್.ಅಶ್ವತ್ಥನಾರಾಯಣರನ್ನು ಉಪಮುಖ್ಯಮಂತ್ರಿ ಮಾಡಲಾಗಿದೆ ಎಂಬುದನ್ನೂ ಇಲ್ಲಿ ಗಮನಿಸಬೇಕು.

ಇವೆಲ್ಲದರ ಮುಂದುವರೆದ ಭಾಗವಾಗಿಯೇ ಮಂಡ್ಯದಿಂದ ಕೇವಲ 3 ಕಿ.ಮೀ. ದೂರವಿರುವ ಸಾತನೂರಿನಲ್ಲಿ ಇದೀಗ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಎಂಬ ಸಂಘಪರಿವಾರದ ಅಷ್ಟು ಪ್ರಚಾರದಲ್ಲಿಲ್ಲದ ಅಂಗಸಂಘಟನೆಯೊಂದು ‘ರಾಷ್ಟ್ರೀಯವಾದಿಗಳ ಸಮ್ಮೇಳನ’ವನ್ನು ಆಯೋಜಿಸಿದೆ. ಅದರಲ್ಲಿ ಪೌರತ್ವ ಕಾಯ್ದೆಯ ವಿಚಾರದಿಂದ ಹಿಡಿದು, ಟಿಪ್ಪು ಮತ್ತು ಮೇಲುಕೋಟೆಯ ತನಕ ಹತ್ತು ಹಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕಳೆದ ತಿಂಗಳು (ಫೆ.23) ನಡೆದ ಈ ಕಾರ್ಯಕ್ರಮದಲ್ಲಿ ‘ಕಾವೇರಿ ಡಿಬೇಟ್’ ಕುರಿತಾದ ಕ್ರಿಯಾಯೋಜನೆಯನ್ನು ಮಂಡಿಸಲಾಗಿದೆ. ಅಂದರೆ ಕಾವೇರಿ ಬೆಲ್ಟ್‌ಅನ್ನು ಕೇಂದ್ರೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಮಗೆ ಬೇಕಾದ ಕಥನವನ್ನು ಸೃಷ್ಟಿಸುವ ಕೆಲಸ ಯೋಜಿತವಾಗಿ ಸಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸಂಘಪರಿವಾರದ ಬೆಳವಣಿಗೆಗೆ ಬೇಕಾದ ವ್ಯವಸ್ಥಿತ ಯೋಜನೆಯೊಂದು ಸದ್ದಿಲ್ಲದೇ ಜಾರಿಯಾಗುತ್ತಿದೆ ಎಂಬುದನ್ನು ಮೇಲಿನ ಹಲವು ಸಂಗತಿಗಳು ಬಿಚ್ಚಿಡುತ್ತಿವೆ. ಹತ್ತು ಹಲವು ಬಗೆಯಲ್ಲಿ ವಿಘಟಿತವಾಗಿರುವ ‘ಮಂಡ್ಯ ಪ್ರಜ್ಞೆ’ಯ ಪ್ರತಿನಿಧಿಗಳು ಇದನ್ನು ವ್ಯವಸ್ಥಿತವಾಗಿ ಎದುರಿಸಬಲ್ಲರೇ ಎಂಬುದು ಮುಂದಿನ ದಿನಗಳಲ್ಲಿ ತೀರ್ಮಾನವಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...