ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ದಲಿತ ಯುವತಿಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ವರದಿಯಾಗಿದೆ. ಹೋಳಿ ಹಬ್ಬದ ಕಾಮದಹನ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. ವಿಧಾನ ಸಭೆಯ ಅಧಿವೇಶನದಲ್ಲಿ ದೇಶದ ಸಂವಿಧಾನ, ಅಂಬೇಡ್ಕರ್ ಹಾಗೂ ಅಸ್ಪೃಶ್ಯತೆ ಕುರಿತು ಶಾಸಕರು, ಸಚಿವರು ಚರ್ಚೆ ನಡೆಸುತ್ತಿದ್ದರೆ ಇಲ್ಲಿ ದಲಿತರ ಸ್ವಾಭಿಮಾನ ಕಿತ್ತುಕೊಳ್ಳಲಾಗುತ್ತಿದೆ.
ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ ಕಾಮದಾಹನ ಮಾಡುವ ಸಂದರ್ಭ 11 ವರ್ಷದ ಗುಡದಪ್ಪ ಎನ್ನುವ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿದೆ. ಬಾಲಕನ ತಾಯಿ ಮರಿಯಮ್ಮ ಮತ್ತು ಸಹೋದರ ಸಂಬಂಧಿಗಳಾದ ಶೋಭಾ(13) ಮತ್ತು ಮಂಜುಳಾ(14) ಎಂಬ ಬಾಲಕಿಯರ ಮೇಲೆ ಕೂಡಾ ಹಲ್ಲೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಅಂಬೇಡ್ಕರ್ ಭಾವಚಿತ್ರಕ್ಕೆ ಕೂಡಾ ಕಲ್ಲು ಎಸೆಯಲಾಗಿದೆ ಎನ್ನಲಾಗಿದೆ.
ದೌರ್ಜನ್ಯಕ್ಕೊಳಗಾದ ದಲಿತರ ಮೇಲೆಯೆ ಮುನೀರಾಬಾದ್ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಘಟನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಂಜಿಗಾಲಪ್ಪ ಪ್ರಮುಖ ಕಾರಣ ಎಂಬ ಆರೋಪವಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕೊಪ್ಪಳ ತಾಲೂಕಿನ ಮೈನಹಳ್ಳಿಯಲ್ಲಿ ಕೂಡಾ ದಲಿತರು ದೌರ್ಜನ್ಯಕ್ಕೆ ಒಳಗಾಗಿದ್ದರು ಅಲ್ಲದೆ ದೌರ್ಜನ್ಯಕ್ಕೊಳಗಾದ 20 ಜನ ದಲಿತರ ಮೇಲೆಯೆ ಕೇಸು ದಾಖಲಿಸಲಾಗಿತ್ತು.
ಘಟನೆಯ ಬಗ್ಗೆ ವಿಠಪ್ಪ ಗೋರಂಟ್ಲಿ, ಭಾರದ್ವಜರವರ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ದಲಿತರ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಮುಂದುವರೆಯಲು ಪೋಲಿಸ್ ಅಧಿಕಾರಿಗಳು ಕೂಡಾ ಪ್ರಮುಖ ಕಾರಣರಾಗಿದ್ದಾರೆ. ಕೇಸ್, ಕೌಂಟರ್ ಕೇಸ್ ರಾಜಕೀಯ ನಡೆಯುವುದರಿಂದ, ದೌರ್ಜನ್ಯ ಮಾಡುವವರಿಗೆ, ಕಾಯ್ದೆಯ ಮತ್ತು ಪೋಲಿಸ್ ವ್ಯವಸ್ಥೆಯ ಭಯ ಇಲ್ಲವಾಗಿದೆ. ರಾಜಕೀಯ ಒತ್ತಡಕ್ಕೊಳಗಾಗುವ ಪೋಲಿಸ್ ಅಧಿಕಾರಿಗಳು ದೌರ್ಜನ್ಯಕ್ಕೊಳಗಾದ ದಲಿತರ ಮೇಲೆ ಸುಳ್ಳು ಕೇಸ್ ದಾಖಲಿಸುತ್ತಾರೆ. ಈ ಕಾರಣದಿಂದಲೇ ದೌರ್ಜನ್ಯ ಮಾಡುವ ದುರಹಂಕಾರಿಗಳಿಗೆ ಇನ್ನಷ್ಟು ಪುಷ್ಟಿ ದೊರೆತಂತಾಗುತ್ತದೆ ಎಂದು ಕರ್ನಾಟಕ ರೈತ ಸಂಘ (AIKKS)ದ ರಾಜ್ಯಾಧ್ಯಕ್ಷರಾದ ಡಿ.ಎಚ್ ಪೂಜಾರ್‌ರವರು ಆರೋಪಿಸಿದ್ದಾರೆ.


