ಮಧ್ಯಪ್ರದೇಶ ರಾಜ್ಯಪಾಲರು ಸೋಮವಾರವೇ ವಿಶ್ವಾಸಮತ ಪರೀಕ್ಷೆ ನಡೆಸುವಂತೆ ಸ್ಪೀಕರ್‌ಗೆ ಸೂಚಿಸಿದ್ದು, ವಿಶ್ವಾಸಮತ ಯಾಚನೆಯನ್ನು “ಮುಂದೂಡಲು, ವಿಳಂಬ ಮಾಡಲು ಅಥವಾ ಅಮಾನತುಗೊಳಿಸಲು” ಸಾಧ್ಯವಿಲ್ಲ ಎಂದಿದ್ದಾರೆ.
ಕಮಲ್ ನಾಥ್ ಅವರ 15 ತಿಂಗಳ ಸರ್ಕಾರಕ್ಕೆ 22 ಕಾಂಗ್ರೆಸ್ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಮಧ್ಯಪ್ರದೇಶದ ಗವರ್ನರ್ ಲಾಲ್ಜಿ ಟಂಡನ್ ಅವರು ಬಹುಮತ ಪರೀಕ್ಷೆ ನಡೆಸುವಂತೆ ವಿಧಾನಸಭಾ ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿಗೆ ನಿರ್ದೇಶನ ನೀಡಿದ್ದಾರೆ.
“ಮಧ್ಯಪ್ರದೇಶದ ವಿಧಾನಸಭೆಯ ಅಧಿವೇಶನವು 2020ರ ಮಾರ್ಚ್ 16 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ, ಮತ್ತು ನಾನು ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ, ಮೊದಲು ನಡೆಸಬೇಕಾದ ಕೆಲಸ ಬಹುಮತ ಸಾಬೀತುಪಡಿಸುವುದಾಗಿದೆ” ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
“ವಿಶ್ವಾಸಮತ ಯಾಚನೆಯು ಗುಂಡಿಯನ್ನು ಒತ್ತುವ ಮೂಲಕ ನಡೆಯುತ್ತದೆ, ಬೇರೆ ಯಾವುದೇ ಮತದಾನ ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದರು.
ಆರು ಬಂಡಾಯ ಮಂತ್ರಿಗಳ ರಾಜೀನಾಮೆಯನ್ನು ಸ್ಪೀಕರ್ ಶನಿವಾರ ಅಂಗೀಕರಿಸಿದ್ದಾರೆ. ಈ ನಿರ್ಧಾರದಿಂದಾಗಿ ಸದನದಲ್ಲಿ ಬಹುಮತದ ಸಂಖ್ಯೆ 113ಕ್ಕೆ ಕುಸಿದಿದೆ. ಇದರಿಂದಾಗಿ 230 ಸದಸ್ಯರ ವಿಧಾನಸಭೆಯ ಬಲವು 222 ಕ್ಕೆ ಕುಗ್ಗಿದೆ. (ಇಬ್ಬರು ಶಾಸಕರ ಸಾವಿನಿಂದಾಗಿ ಎರಡು ಸ್ಥಾನಗಳು ಈಗಾಗಲೇ ಖಾಲಿ ಇದ್ದವು). ಕಾಂಗ್ರೆಸ್ ಸದನದಲ್ಲಿ 108 ಶಾಸಕರನ್ನು ಹೊಂದಿದ್ದು, ಏಳು ಮಿತ್ರ ಶಾಸಕರ ಬೆಂಬಲವಿದೆ. ಉಳಿದ ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದರೆ, ಕಾಂಗ್ರೆಸ್ ಬಲವು 90ಕ್ಕಿಂತ ಕಡಿಮೆಗೆ ಕುಸಿದು ಬಹುಮತಕ್ಕಿಂತ ಕೆಳಗಿರುತ್ತದೆ ಮತ್ತು 107 ಶಾಸಕರನ್ನು ಹೊಂದಿರುವ ಬಿಜೆಪಿ ದೊಡ್ಡ ಪಕ್ಷವಾಗಲಿದೆ.
ಅತೃಪ್ತ ಶಾಸಕರು ಪ್ರಸ್ತುತ ಬೆಂಗಳೂರಿನಲ್ಲಿ ಒಟ್ಟಿಗೆ ಸೇರಿದ್ದಾರೆ. ಬಿಜೆಪಿ ಅವರನ್ನು ಸೆರೆಯಲ್ಲಿಟ್ಟುಕೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಮುಖ್ಯಮಂತ್ರಿ ಕಮಲ್ ನಾಥ್ ಅವರು ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಶಾಸಕರ “ಬಿಡುಗಡೆ” ಮಾಡುವಂತೆ ಒತ್ತಾಯಿಸಿದ್ದಾರೆ.
“ದಯವಿಟ್ಟು ಕೇಂದ್ರ ಗೃಹ ಸಚಿವರಾಗಿ ನಿಮ್ಮ ಅಧಿಕಾರವನ್ನು ಬಳಸಿ ಅವರನ್ನು ಬಂಧಮುಕ್ತಗೊಳಿಸಿ. ಇದರಿಂದಾಗಿ ಬಂಧಿತರಾಗಿರುವ 22 ಕಾಂಗ್ರೆಸ್ ಶಾಸಕರು ಸುರಕ್ಷಿತವಾಗಿ ಮಧ್ಯಪ್ರದೇಶವನ್ನು ತಲುಪಬಹುದು ಮತ್ತು ಮಾರ್ಚ್ 16 ರಿಂದ ಪ್ರಾರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಯಾವುದೇ ಆಮಿಷ ಮತ್ತು ಭಯವಿಲ್ಲದೆ ಭಾಗವಹಿಸಬಹುದು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.


