ಬಿಬಿಎಂಪಿ ವಿಭಜನೆ ಕಾರ್ಯವು ನೆನೆಗುದಿಗೆ ಬಿದ್ದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆಡಳಿತದ ಹಿತ ದೃಷ್ಟಿಯಿಂದ 4-5 ವಿಭಾಗಗಳನ್ನು ಮಾಡಬೇಕೆಂಬ ಬೇಡಿಕೆ ರಾಷ್ಟ್ರಪತಿ ಮುಂದಿದೆ. ರಾಜ್ಯ ಸರ್ಕಾರ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ತಿದ್ದುಪಡಿ ಮಸೂದೆ ಅಂಗೀಕರಿಸಿ ರಾಷ್ಟ್ರಪತಿಗಳಿಗೆ ಕಳಿಸಿಕೊಟ್ಟಿದೆ. ಆದರೂ ಈವರೆಗೆ ಅಂಕಿತ ಬಿದ್ದಿಲ್ಲ.ಇದರ ನಡುವೆಯೇ ಬಿಬಿಎಂಪಿ ಕ್ಷೇತ್ರಗಳ ಪುನರ್ ವಿಂಗಡಣೆ ಕರಡನ್ನು ಪ್ರಕಟಿಸಿದ್ದು ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿಲ್ಲ. ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ ಅಭಿಪ್ರಾಯ ಕೇಳಿಲ್ಲ. ವಾರ್ಡ್ ಸಮಿತಿಗಳು ಇದ್ದರೂ ಅವುಗಳಿಂದ ಮಾಹಿತಿ ಪಡೆದಿಲ್ಲ. ರಾಜಕೀಯ ಪಕ್ಷಗಳಿಂದಲೂ ಅಭಿಪ್ರಾಯ ಕೇಳಿಲ್ಲ. ಪಾರದರ್ಶಕತೆ ಕಾಪಾಡಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಕಾರ್ಯವನ್ನು ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದು ಅವಾಂತರ ಸೃಷ್ಟಿಗೆ ಕಾರಣವಾಗಿದೆ. ಆ ಖಾಸಗಿ ಸಂಸ್ಥೆ ಕೇವಲ ಜನಸಂಖ್ಯೆಯನ್ನಾಧರಿಸಿ ಕ್ಷೇತ್ರ ಪುನರ್ ವಿಂಗಡನೆ ಮಾಡಿದೆಯೇ ಹೊರತು ಸೂಕ್ತವಾಗಿ, ಸಮರ್ಪಕವಾಗಿ ಮತ್ತು ವೈಜ್ಞಾನಿಕವಾಗಿ ರೂಪಿಸಿಲ್ಲ ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ.
ಕ್ಷೇತ್ರ ಪುನರ್ ವಿಂಗಡಣೆಗೆ ಬೇಕಾದ ಮಾರ್ಗಸೂಚಿಯನ್ನು ಅನುಸರಿಸಿಲ್ಲ. ವಾರ್ಡ್ ಗಡಿ ನಿರ್ಧರಿಸುವಾಗ ರಾಜಕಾಲುವೆ, ಮಳೆನೀರು ಕಾಲುವೆ ಮತ್ತು ಮುಖ್ಯರಸ್ತೆಗಳನ್ನು ಪರಿಗಣಿಸಿಲ್ಲ. ಈಗಿರುವ ಕ್ಷೇತ್ರ ಪುನರ್ ವಿಂಗಡಣೆ ಕರಡಿನಲ್ಲೂ ಒಂದು ಬಿಬಿಎಂಪಿ ವಾರ್ಡ್ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸೇರ್ಪಡೆಯಾಗಿದೆ. 45 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ಎಂಬುದು ಸದುದ್ದೇಶದಿಂದ ಕೂಡಿದ್ದರೂ ಈಗಿರುವ ಕಾಯ್ದೆಯಲ್ಲಿ ಸರಿಪಡಿಸಲು ಅಸಾಧ್ಯ. ಕ್ಷೇತ್ರಗಳು ಅವೈಜ್ಞಾನಿಕತೆಯಿಂದ ಕೂಡಿವೆ. ಇದನ್ನು ಕೂಡಲೇ ಸರಿಪಡಿಸಬೇಕು ಅದುವರೆಗೂ ವಾರ್ಡ್ ಪುನರ್ ರಚನೆ ತಡೆಹಿಡಿಯಬೇಕು ಎಂದು ಸಿಪಿಎಂ ಮುಖಂಡ ಕೆ.ಎನ್.ಉಮೇಶ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಅಧ್ಯಯನ ಮಾಡಿ ನೀಡಿರುವ ವರದಿಯನ್ನೂ ಪರಿಗಣಿಸಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಟ್ಟದಷ್ಟು ಸಮಸ್ಯೆಗಳು ಇವೆ. ಅವುಗಳ ಪರಿಹಾರಕ್ಕಾಗಿ ಕ್ಷೇತ್ರಗಳನ್ನು ವೈಜ್ಞಾನಿಕವಾಗಿ ಪುನರ್ ವಿಂಗಡಿಸುವ ಕೆಲಸ ಮಾಡಬಹುದಿತ್ತು. ಕೆಎಂಸಿಎಆರ್ ಮಸೂದೆಗೆ ಇದುವರೆಗೂ ಅಂಕಿತ ದೊರಕಿಲ್ಲ. ಬಿಬಿಎಂಪಿ ವಿಭಜನೆಗೆ ಜೆಡಿಎಸ್ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೇ ಮಸೂದೆ ಅಂಗೀಕರಿಸಿ ರಾಷ್ಟ್ರಪತಿಗೆ ಕಳಿಸಿ ವರ್ಷಗಳೇ ಕಳೆದರೂ ಅಂಕಿತ ಬಿದ್ದಿಲ್ಲ. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ತಿದ್ದುಪಡಿ ಮಸೂದೆ ಕಾಯ್ದೆಯಾಗಿದ್ದರೆ 10 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ನಂತೆ ಪುನರ್ ವಿಂಗಡೆ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಉದ್ದೇಶಿತ ಕ್ಷೇತ್ರ ಮರು ವಿಂಗಡಣೆಯ ಪ್ರಸ್ತಾಪದಲ್ಲಿ ಅನೇಕ ಗಂಭೀರ ಲೋಪದೋಷಗಳು ಕಂಡುಬಂದಿವೆ. ಪಾಲಿಕೆಯು ಸದುದ್ದೇಶದಿಂದ ಮಾಡಲಾಗಿರುವ ಕ್ರಮ ಗುಣಾತ್ಮಕ ಫಲಿತಾಂಶಗಳನ್ನು ನೀಡುವ ಬದಲು ಅಭಿವೃದ್ಧಿಗೆ ತೊಡಕಾಗಬಹುದಾದ ಸಾಧ್ಯತೆಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆಎಂಸಿಎಆರ್ ಗೆ ಅಂಕಿತ ಪಡೆದು ಅದರ ಆಧಾರದಲ್ಲಿ ಬಿಬಿಎಂಪಿಯನ್ನು ಪುನರ್ ರಚಿಸಿ ಚಿಕ್ಕವಾರ್ಡ್‌ಗಳ ರಚನೆಗೆ ಅನುವುಗೊಳಿಸಬೇಕೆಂಬ ಮಾತುಗಳು ಕೇಳಿಬಂದಿವೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಬೆಂಗಳೂರು ನಿವಾಸಿ ಡಾ.ಭಾನು ಪ್ರಕಾಶ್, ಸ್ಲಂಗಳನ್ನು ಮೂರ್ನಾಲ್ಕು ಭಾಗ ಮಾಡಿದ್ದಾರೆ. ಮುಸ್ಲಿಮರು, ದಲಿತರು ಮತ್ತು ತಮಿಳರು ಹೆಚ್ಚು ಇರುವ ಪ್ರದೇಶಗಳಲ್ಲಿ ಅವರನ್ನು ಮೂರು ವಾರ್ಡ್‌ಗೆ ಹಂಚಿಕೆ ಮಾಡಿದ್ದಾರೆ. ಇದರಿಂದ ಈ ಸಮುದಾಯ ತನಗೆ ಬೇಕಾದ ಕಾರ್ಪೋರೇಟರ್ ಅನ್ನು ಆಯ್ಕೆ ಮಾಡಿಕೊಳ್ಳಲಾಗದಂತೆ ಕ್ರಮ ವಹಿಸಲಾಗಿದೆ. ಒಂದು ಗಲ್ಲಿ ಒಂದು ವಾರ್ಡ್ ಸೇರಿದರೆ ಎದುರು ಮನೆ ಮತ್ತೊಂದು ವಾರ್ಡ್‌ಗೆ ಸೇರಿದೆ. ಕುಡಿಯುವ ನೀರಿನ ಪೈಪ್ ಲೈನ್ ಒಂದೇ ಆಗಿರುತ್ತದೆ. ನೀರು ಬರದಿದ್ದರೆ ಯಾರಿಗೆ ಪೋನ್ ಮಾಡಬೇಕು ಎಂಬ ಸಮಸ್ಯೆ ಕಾಡುತ್ತದೆ. ದಲಿತರು, ಮುಸ್ಲಿಮರು, ತಮಿಳರು ಹೆಚ್ಚಾಗಿರುವ ನಾಲ್ಕು ಓಣಿಗಳನ್ನು ಕಟ್ ಮಾಡಿ ಬೇರೆ ವಾರ್ಡ್‌ಗೆ ಸೇರಿಸಿದ್ದಾರೆ. ಇದರ ಹಿಂದೆ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುವಂತೆ ತಂತ್ರ ಹೆಣೆಯಲಾಗಿದೆ ಎಂದಿದ್ದಾರೆ.


