ಕೊರೊನ ವೈರಸ್ ಸೋಂಕಿನ ಕಾರಣವಾಗಿ ಸರಕಾರಿ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟ ಜನರ ಬೇಸರ ಕಳೆಯುವ ಉದ್ದೇಶದಿಂದ ಸರಕಾರದಿಂದ ಓದಲು ಪುಸ್ತಕಗಳನ್ನು ಒದಗಿಸಲಾಗುತ್ತಿದ್ದು. ಅವುಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣಗಳ ಸಂಗ್ರಹ ಕೂಡಾ ಸೇರಲಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.
“ನಾವು ಈ ಭಾಷಣಗಳ ಪ್ರತಿಗಳನ್ನು ವಿವಿಧ ಗಣ್ಯರಿಗೆ, ಶಾಲೆಗಳಿಗೆ ಹಾಗೂ ಕಾಲೇಜುಗಳಿಗೆ ವಿವಿಧ ಸಂದರ್ಭಗಳಲ್ಲಿ ವಿತರಿಸುತ್ತಿದ್ದೇವೆ, ಈಗ ಇವುಗಳನ್ನು ದೇಶದ ಎಲ್ಲ ಸಂಪರ್ಕತಡೆ(ಕ್ವಾರೆಂಟೈನ್) ಕೇಂದ್ರಗಳಲ್ಲಿ ವಿತರಿಸಬಹುದು” ಎಂದು ಮೂಲಗಳು ತಿಳಿಸಿವೆ.
ಕೊರೊನ ವೈರಸ್ ಹರಡುವುದನ್ನು ತಡೆಯಲು ಭಾರತದಲ್ಲಿ ಪ್ರತ್ಯೇಕವಾಗಿ ಇರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಮಹರಾಷ್ಟ್ರ ಸರಕಾರ ಪ್ರತ್ಯೇಕವಾಗಿರುವವರನ್ನು ಗುರುತಿಸಲು ಈಗಾಗಲೇ ಜನರ ಕೈಗೆ ಮುದ್ರೆಯೊತ್ತುತ್ತಿದೆ.
ಡಿಸೆಂಬರ್ ನಲ್ಲಿ ಚೀನಾದ ವುವಾನ್ ನಗರದಲ್ಲಿ ಪತ್ತೆಯಾದ ಕೊರೊನಾ ವೈರಸ್ ಈಗಾಗಲೇ ವಿಶ್ವದಾದ್ಯಂತ ಹರಡಿದೆ. ಭಾರತದಲ್ಲಿ ಈಗಾಗಲೆ ಮೂರು ಸೋಂಕು ಪೀಡಿತರು ಸಾವನ್ನಪ್ಪಿದ್ದಾರೆ. ಅಲ್ಲದೆ ದೇಶದಾದ್ಯಂತ 151 ಪ್ರಕರಣಗಳಲ್ಲಿ 134 ಜನರು ಸೋಂಕಿನಿಂದ ಬಳಲುತಿದ್ದಾರೆ.


