ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸೋಂಕಿಗೆ ಒಳಗಾಗಿದ್ದ ಟೆಕ್ಕಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲೂ ಸಹ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕಾರ್ಖಾನೆಗಳಿಗೂ ಕಟ್ಟುನಿಟ್ಟಿನ ಆದೇಶ ರವಾನಿಸಿದೆ. ಸಾವಿರಾರು ಜನ ಒಟ್ಟಿಗೆ ಸೇರುವ ಕಾರ್ಖಾನೆ ಹಾಗೂ ಗಾರ್ಮೆಂಟ್ಸ್‌ಗಳಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದೆ.
ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯಾ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಮಾಲ್ ಗಳು, ಸಿನಿಮಾ ಥಿಯೇಟರ್‌ಗಳು, ಸಭೆ-ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಐಟಿ-ಬಿಟಿ ಸೇರಿದಂತೆ ಅನೇಕ ಖಾಸಗಿ ಕಂಪೆನಿಗಳು ತಮ್ಮ ನೌಕರರು ಮನೆಯಲ್ಲೇ ಕುಳಿತು ಕೆಲಸ ಮಾಡುವಂತೆ ಸೂಚಿಸಿದೆ. ಆದರೆ, ಕಾರ್ಖಾನೆ ಮತ್ತು ಗಾರ್ಮೆಂಟ್ಸ್‌ಗಳಿಗೆ ಈವರೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮವಹಿಸಿಲ್ಲ. ಹೀಗಾಗಿ ಕಾರ್ಖಾನೆಗಳಲ್ಲೂ ಸಹ ಸೂಕ್ತ ಕ್ರಮ ವಹಿಸಿ ಎಂದು ಕಾರ್ಮಿಕ ಇಲಾಖೆ ನೊಟೀಸ್ ನೀಡಿದೆ.
ಪೀಣ್ಯ, ಬೊಮ್ಮನಹಳ್ಳಿ, ಮತ್ತು ಬೆಂಗಳೂರಿನ ನಾಲ್ಕೂ ದಿಕ್ಕಿನಲ್ಲಿರುವ ದೊಡ್ಡದೊಡ್ಡ ಕಂಪನಿಗಳು, ಗಾರ್ಮೆಂಟ್ಸ್ ಮತ್ತು ಕಾರ್ಖಾನೆಗಳಿಗೆ ನೊಟೀಸ್ ನೀಡಲಾಗಿದ್ದು, ಕಾರ್ಖಾನೆಗಳು ಮತ್ತು ಗಾರ್ಮೆಂಟ್ಸ್ ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಪ್ರತಿಯೊಬ್ಬ ಕಾರ್ಮಿಕರಿಗೂ ಮಾಸ್ಕ್ ನೀಡಬೇಕು, ಕಡ್ಡಾಯವಾಗಿ ಎಲ್ಲಾ ಕಾರ್ಮಿಕರನ್ನೂ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು ಎಂದು ನೊಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಕಾರ್ಖಾನೆ ಮಾಲಿಕರು ಇದುವರೆಗೂ ಕಾರ್ಮಿಕರ ಹಿತದೃಷ್ಟಿಯಿಂದ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಹೀಗಾಗಿ ಕೊರೋನಾ ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಿರುವುದರಿಂದ ಸಂಬಳ/ವೇತನ ಸಹಿತ ರಜೆ ನೀಡಬೇಕು. ಚಿಕಿತ್ಸಾ ವೆಚ್ಚವನ್ನು ಸರ್ಕಾರ ಅಥವಾ ಕಾರ್ಖಾನೆ ಭರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.


