ಕೊರೊನ ವೈರಸ್‌ನಿಂದ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೇರಳ ಅಲ್ಲಿನ ಜನರಿಗೆ ₹20,000 ಕೋಟಿ ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ, ಆರೋಗ್ಯ ಸೇವೆ, ಸಾಲಕ್ಕೆ ನೆರವು, ಮಾಸಾಶನ, ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ, ಉಚಿತ ದಿನಸಿ, ಕಡಿಮೆ ದರದಲ್ಲಿ ಊಟ, ಬಾಕಿ ಮರುಪಾವತಿ, ಪರಿಹಾರ ಮೊತ್ತಗಳು ಸೇರಿವೆ. ಕೇರಳದ ಈ ನಡೆ ನಮಗೆ ಮಾದರಿಯಾಗಬಾರದೇಕೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೇರಳದಲ್ಲಿ 26 ಕೊರೊನಾ ಪ್ರಕರಣ ವರದಿಯಾಗಿದ್ದರೆ ಕರ್ನಾಟಕದಲ್ಲಿ 15 ಪ್ರಕರಣಗಳು ವರದಿಯಾಗಿವೆ. ಅಂದರೆ ರಾಜ್ಯದಲ್ಲಿ ಮಹಾಮಾರಿಯ ಬಗೆಗಿನ ಆತಂಕ, ಭೀತಿ ಕೇರಳಕ್ಕಿಂತಲೂ ಭಿನ್ನವೇನಲ್ಲ. ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡುತ್ತಿದೆ. ಸದ್ಯ ಬಡ ವರ್ಗದ ಮೇಲೆ ಇದು ನೇರ ಪರಿಣಾಮ ಬೀರುತ್ತಿದೆ. ರಾಜ್ಯವೂ ಕೇರಳ ಮಾದರಿಯ ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊರೊನ ವಿರುದ್ಧ ಹೋರಾಡಲು 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ ಕೇರಳ ಸಿಎಂ ವಿಜಯನ್
ಆರೋಗ್ಯ ಸೇವೆಗೆ ಹೆಚ್ಚಿನ ಹಣ, ಬ್ಯಾಂಕ್ ಸಾಲಗಳ ತಿಂಗಳ ಕಂತು ಮುಂದೂಡಿಕೆ, ಬಡ್ಡಿ ಮನ್ನಾ, ಮಾಸಾಶನ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಅನುದಾನ, ಪರಿಹಾರ ಘೋಷಣೆಯಂಥ ನಿರ್ಧಾರಗಳನ್ನು ನಾವೂ ಕೈಗೊಳ್ಳಬೇಕು. ಆರ್ಥಿಕ ದುರ್ಬಲರಿಗೆ ನೆರವಾಗುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬಬೇಕು. ಜೊತೆಗೆ ಕೊರೋನಾ ವೈರಸ್ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್‌ನಿಂದ ಎದುರಾದ ನಿರ್ಬಂಧಗಳಿಂದಾಗಿ ದಿನಗೂಲಿ ನೌಕರರು, ಬೀದಿ ಬದಿ ವ್ಯಾಪಾರಿಗಳು ಹೆಚ್ಚು ಬಾಧಿತರಾಗಿದ್ದಾರೆ. 2 ತಿಂಗಳ ಅವರ ಬದುಕಿಗೆ ನೆರವಾಗುವಂತೆ ಸರ್ಕಾರ ಕಾರ್ಯಕ್ರಮ ರೂಪಿಸಬೇಕು. ಆಟೋ, ಕ್ಯಾಬ್ ಚಾಲಕರ ಬ್ಯಾಂಕ್ ಲೋನ್ ಕಂತು ಪಾವತಿಗೆ 2 ತಿಂಗಳ ವಿನಾಯಿತಿ ಕಲ್ಪಿಸಬೇಕು. ಈ ಮೂಲಕ ಸರ್ಕಾರ ಬಡವರ ಪರ ನಿಲುವು ತಾಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


