ಮೂಲ : ಇಂಗ್ಲೀಷ್ :ಮೃದುಲಾ ಮುಖರ್ಜಿ
ಅನುವಾದ: ಬಿ. ಶ್ರೀಪಾದ ಭಟ್
(ಕೃಪೆ : “JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು” ಕ್ರಿಯಾ ಮಾದ್ಯಮ ಪ್ರಕಟಿಸಿದ ಈ ಅನುವಾದಿತ ಪುಸ್ತಕದ ’ನಾಗರಿಕ ಸ್ವಾತಂತ್ರ್ಯಗಳು ಮತ್ತು ಭಾರತೀಯ ರಾಷ್ಟ್ರೀಯವಾದ’ ಲೇಖನದ ಆಯ್ದ ಎರಡನೇ ಭಾಗ)
ಭಾಗ -1 : ರಾಜದ್ರೋಹ ಕಾಯ್ದೆಯ ಇತಿಹಾಸ : ತಿಲಕ್ & ಗಾಂಧಿ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತೇಕೆ?
1908ರಲ್ಲಿ ತಿಲಕರ ಮತ್ತು 1922ರಲ್ಲಿ ಗಾಂಧೀಜಿ ಅವರ ಮೇಲೆ ರಾಜದ್ರೋಹದ ಪ್ರಕರಣ ದಾಖಲಿಸಿದಾಗಿನ ವ್ಯತ್ಯಾಸಗಳತ್ತ ನಿಮ್ಮ ಗಮನವನ್ನು ಸೆಳೆಯ ಬಯಸುತ್ತೇನೆ. ಈ ಅವಧಿಯಲ್ಲಿ ಭಾರತದ ರಾಷ್ಟ್ರೀಯ ಚಳುವಳಿ ಕ್ರಮಿಸಿದ ದೀರ್ಘ ಹಾದಿ ಹಾಗೂ ಗಾಂಧೀಜಿಯವರ ರಾಜಕಾರಣ ರಾಷ್ಟ್ರೀಯ ಚಳುವಳಿಗೆ ಕೊಟ್ಟ ಹೊಸ ನುಡಿಕಟ್ಟು ಮತ್ತು ಚೌಕಟ್ಟಿನ ಪ್ರಭಾವಗಳನ್ನು ಅದು ತೋರ್ಪಡಿಸುತ್ತದೆ. ಬ್ರಿಟಿಷರಿಗೆ ಅಂಜದ, ಜೈಲಿಗೆ ಹೋಗಲು ತಯಾರಿದ್ದ ಧೈರ್ಯವಂತರಾಗಿದ್ದ ಮಹಾನ್ ಚೇತನರಾದ ತಿಲಕರು ಸಹ ರಾಜದ್ರೋಹದ ಆಪಾದನೆ ವಿರುದ್ಧ ಗಟ್ಟಿ ಸಮರ್ಥನೆ ನೀಡುತ್ತಾರೆ. ಆದರೆ ಗಾಂಧೀಜಿ ಅವರು ‘ನಾನು ರಾಜದ್ರೋಹದ ಅಪರಾಧಿ ಎಂದು ಒಪ್ಪಿಕೊಳ್ಳುತ್ತೇನೆ. ಇದು ಸೈತಾನನ ಸರಕಾರ. ಇದನ್ನು ವಿರೋಧಿಸುವಲ್ಲಿ ನನಗೆ ಹೆಮ್ಮೆ ಇದೆ.’ ಎನ್ನುತ್ತಾರೆ. ಅನ್ಯಾಯಯುತ ಕಾನೂನುಗಳನ್ನು ಉಲ್ಲಂಘಿಸುವುದು ಮತ್ತು ಅದಕ್ಕೆ ಶಿಕ್ಷೆ ಅನುಭವಿಸಲು ತಯಾರಿರುವುದು ‘ನಾಗರಿಕ ಅವಿಧೇಯತೆ’ಯ ಹೊಸ ನುಡಿಕಟ್ಟು ಮತ್ತು ಚೌಕಟ್ಟಿನ ಕ್ರಮಗಳಾಗಿದ್ದವು.
ಗಾಂಧೀಜಿ ಅವರು ಬರಹಗಳಲ್ಲೂ ಚಳುವಳಿಯ ಕಾರ್ಯಾಚರಣೆಗಳಲ್ಲೂ ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ್ಯ, ಮತ್ತು (ರಾಜಕೀಯ ವಿರೋಧಿಗಳ ಜತೆ ಸೇರಿದಂತೆ) ಸಂವಾದದ ಮೌಲ್ಯಗಳಿಗೆ ಅಗಾಧವಾದ ಬದ್ಧತೆಯನ್ನು ಹೊಂದಿದ್ದರು. ಅಸಹಕಾರ ಚಳುವಳಿಯು ಉತ್ತುಂಗದಲ್ಲಿದ್ದಾಗ 1922ರ ಜನವರಿ ತಿಂಗಳಲ್ಲಿ ಅವರು ಯಂಗ್ ಇಂಡಿಯಾದಲ್ಲಿ ಬರೆದ ಲೇಖನದಲ್ಲಿ ‘ವಾಕ್ ಮತ್ತು ಸಂಘರಚನೆಯಸ್ವಾತಂತ್ರ್ಯ ನಮ್ಮೆಲ್ಲರ ಹಕ್ಕು. ಅದರ ಪರವಾಗಿ ನಿರಂತರವಾಗಿ ಹೋರಾಡಬೇಕಾಗಿದೆ. ನಮ್ಮ ಬದುಕಿನ ಜೊತೆ ಸಂಬಂಧಿಸಿದ ಈ ಪ್ರಾಥಮಿಕ ನಾಗರಿಕ ಸ್ವಾತಂತ್ರ್ಯಗಳ ರಕ್ಷಣೆಯನ್ನು ನಾವೆಲ್ಲ ಮಾಡಬೇಕಾಗಿದೆ, ಇದಕ್ಕಾಗಿ ನೀವು ಜೀವ ಕೊಡುವ ಪ್ರಮೇಯ ಬಂದರೆ ಹಿಂದುಮುಂದು ನೋಡಬೇಡಿ.’ ಎಂದು ಬರೆದರು. ಅಂದರೆ ಜೀವ ಕೊಟ್ಟು ರಕ್ಷಿಸುವಷ್ಟು ನಾಗರಿಕ ಸ್ವಾತಂತ್ರ್ಯದ ಹಕ್ಕು ಪ್ರಮುಖವಾದದ್ದು ಎಂದು ಅವರು ಭಾವಿಸಿದ್ದರು.
ಇನ್ನೊಂದು ಲೇಖನದಲ್ಲಿ “ಅದು ಯಾರನ್ನಾದರೂ ಘಾಸಿಗೊಳಿಸಿದರೂ ಅದು ಆಕ್ಷೇಪಾರ್ಹವಾಗುವುದಿಲ್ಲ ಎಂಬುದು ವಾಕ್ ಸ್ವಾತಂತ್ರ್ಯದ ಅರ್ಥ. ಪತ್ರಿಕೆಗಳು ಯಾವುದೇ ವಿಷಯದ ಮೇಲೆ ಅತ್ಯಂತ ಕಠಿಣವಾದ ಟೀಕೆಗಳನ್ನು ಮಾಡಿದಾಗಲೂ (ಅಥವಾ ವಿಷಯಗಳನ್ನು ತಪ್ಪಾಗಿ ಪ್ರತಿನಿಧಿಸಿದಾಗಲೂ) ಅದನ್ನು ಮನ್ನಿಸಲಾದರೆ ಮಾತ್ರ ನಿಜವಾದ ಪತ್ರಿಕಾ ಸ್ವಾತಂತ್ರ್ಯ ಇದೆ ಎನ್ನಬಹುದು. ಜನರ ಸಭೆಗಳು ಕ್ರಾಂತಿಕಾರಿ ಪ್ರಾಜೆಕ್ಟಿನ ಬಗೆಗೂ ಚರ್ಚೆ ನಡೆಸುವುದು ಸಾಧ್ಯವಾದಾಗ ಮಾತ್ರ ನಿಜವಾದ ಸಂಘರಚನಾ ಸ್ವಾತಂತ್ರ್ಯ ಇದೆ ಎನ್ನಬಹುದು.”
ನಂತರ ಬರೆದ ಮತ್ತೊಂದು ಲೇಖನದಲ್ಲಿ “ನಾಗರಿಕ ಸ್ವಾತಂತ್ರ್ಯಗಳಿಗಾಗಿ ನಡೆಸುವ ಹೋರಾಟ ತಂಬಾ ಮುಖ್ಯವಾಗಿದೆ. ಅಹಿಂಸೆಯ ಮೂಲಕ ನಡೆಸುವ ಈ ಹೋರಾಟವು ಸ್ವರಾಜ್ಯದತ್ತ ಮೊದಲ ಹೆಜ್ಜೆಯಾಗಿದೆ. ಇದು ರಾಜಕೀಯ ಮತ್ತು ಸಾಮಾಜಿಕ ಬದುಕಿನ ಉಸಿರಾಗಿದೆ. ಇದು ಸ್ವಾತಂತ್ರ್ಯದ ಬುನಾದಿಯಾಗಿದೆ. ಇಲ್ಲಿ ಹೊಂದಾಣಿಕೆಯ, ದುರ್ಬಲಗೊಳಿಸುವ ಪ್ರಶ್ನೆಯೇ ಇಲ್ಲ. ಇದು ಜೀವನದ ನೀರು ಇದ್ದಂತೆ” ಎಂದು ಬರೆದಿದ್ದರು. ಇಲ್ಲಿ ನೀರನ್ನು ನಾಗರಿಕ ಹಕ್ಕುಗಳೊಂದಿಗೆ ಹೋಲಿಸಿರುವುದು ಗಮನಾರ್ಹವಾಗಿದೆ. ನೀರಿಲ್ಲದೆ ಬದುಕಿಲ್ಲ, ಅದೇ ರೀತಿಯಲ್ಲಿ ನಾಗರಿಕ ಹಕ್ಕುಗಳು ಇಲ್ಲದೆ ಸ್ವರಾಜ್ಯವಿಲ್ಲ. ಇದನ್ನು ದುರ್ಬಲಗೊಳಿಸಬಾರದು. ನಾನು ಸ್ವಾತಂತ್ರ್ಯ ಕೊಡುತ್ತೇನೆ. ಆದರೆ ಅದರ ಮೇಲೆ ನಿಯಂತ್ರಣಗಳನ್ನು ಮಿತಿಗಳನ್ನು ಹೇರುತ್ತೇನೆ ಎಂದು ಹೇಳುವಂತಿಲ್ಲ ಎಂಬುದು, ಗಾಂಧೀಜಿಯ ಮಾತಿನ ಸಾರಾಂಶ. ಸುಪ್ರೀಂ ಕೋರ್ಟು ಸಹ ಸೆಕ್ಷನ್ 124ಎ ಕುರಿತತೀರ್ಪುಗಳಲ್ಲಿ ಅಹಿಂಸೆಯನ್ನು ಲಕ್ಷ್ಮಣರೇಖೆಯೆಂದು ತಿಳಿಸಿದೆ. ಈ ಲಕ್ಷಣರೇಖೆಯ ಒಳಗಿರುವವರೆಗೆ ಅಂದರೆ ಹಿಂಸೆಯಲ್ಲಿ ತೊಡಗದಿರುವವರೆಗೂ, ಕ್ರಾಂತಿಕಾರಿ ಪ್ರಾಜೆಕ್ಟಿನ ಕುರಿತು ಯಾರಾದರೂ ಚರ್ಚಿಸುತ್ತಿದ್ದರೂ, ಅವರ ಮೇಲೆ ರಾಜದ್ರೋಹದ ಆರೋಪ ಮಾಡುವಂತಿಲ್ಲ ಅಂತ ಸುಪ್ರೀಂ ಕೋರ್ಟು ಸಹ ಸೆಕ್ಷನ್ 124ಎ ನ್ನು ಅರ್ಥೈಸಿದೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿಯವರ ಶಿಷ್ಯರಾಗಿದ್ದ ಜವಹರಲಾಲ್ ನೆಹರೂ ಅವರೂ ಸಹ ನಾಗರಿಕ ಹಕ್ಕುಗಳ ಪರ ಬಲವಾದ ಸಮರ್ಥಕರರಾಗಿದ್ದರು. 1936ರಲ್ಲಿ ನೆಹರೂ ಅವರು ‘ನಾಗರಿಕ ಸ್ವಾತಂತ್ರ್ಯಗಳನ್ನು ದಮನ ಮಾಡಿದರೆ ದೇಶವು ತನ್ನೆಲ್ಲಾ ಚೈತನ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ಅದು ದುರ್ಬಲಗೊಂಡು ನಿರ್ಜೀವವಾಗುತ್ತದೆ’ ಎಂದು ಹೇಳಿದ್ದರು. 1940ರಲ್ಲಿ ‘ನಾವು ಏನು ಬಯಸುತ್ತೇವೆ ಅದು ಮಾತ್ರ ಪ್ರಕಟಗೊಳ್ಳಬೇಕೆನ್ನುವುದು ಪತ್ರಿಕಾ ಸ್ವಾತಂತ್ರ್ಯವಲ್ಲ. ಒಬ್ಬ ಸರ್ವಾಧಿಕಾರಿ ಸಹ ಇಂತಹ ಸ್ವಾತಂತ್ರ್ಯ ಕೊಡಲು ಸಿದ್ಧವಿರುತ್ತಾನೆ. ನಮಗೆ ಇಷ್ಟವಿಲ್ಲದಅಭಿಪ್ರಾಯಗಳ ಸಾರ್ವಜನಿಕ ಅಭಿವ್ಯಕ್ತಿ, ನಮ್ಮ ಉದ್ದೇಶಕ್ಕೆ ಬಾಧಕವಾಗಬಹುದಾದ ಟೀಕೆಗಳನ್ನು ಸಹ ಪ್ರಕಟಿಸಲು ಪತ್ರಿಕೆಗಳಿಗೆ ಅವಕಾಶ ಕೊಡುವುದುಪತ್ರಿಕಾ ಮತ್ತು ನಾಗರಿಕ ಸ್ವಾತಂತ್ರ್ಯಗಳ ಜೀವಾಳವಾಗಿದೆ’ ಎಂದು ಬರೆದಿದ್ದಾರೆ.

ನಮ್ಮ ಆಚರಣೆ ಈ ನಿಜವಾದ ನಾಗರಿಕ ಹಕ್ಕುಗಳ ಮಾನದಂಡಗಳೊಂದಿಗೆ ಹೋಲಿಸಿದಾಗ ಅರ್ಥಪೂರ್ಣವಾಗಿದಯೇ ಎಂಬುದನ್ನು ನಾವು ಸಹ ಆತ್ಮಪರೀಕ್ಷೆ ಮೂಲಕ ತಿಳಿದುಕೊಳ್ಳಬೇಕಾಗಿದೆ. ಆರ್ಥಿಕ ಸಮಾನತೆ ಮತ್ತು ಸಮಾಜವಾದದಷ್ಟೇ ಪ್ರಾಮುಖ್ಯತೆಯನ್ನು ನಾಗರಿಕ ಸ್ವಾತಂತ್ರ್ಯಗಳಿಗೆ ನೀಡಿದ ನೆಹರೂ ಅವರು 1931ರಲ್ಲಿ ಕರಾಚಿ ಗೊತ್ತುವಳಿಯನ್ನು ರಚಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಘರಚನೆಯ ಸ್ವಾತಂತ್ರ್ಯವನ್ನು ಖಾತರಿಗೊಳಿಸಿದ ಈ ಗೊತ್ತುವಳಿಯು ಸಂವಿಧಾನದ ಪೂರ್ವಸೂಚಕವಾಗಿತ್ತು. ನೆಹರೂ ಅವರೇ 1936ರಲ್ಲಿ ‘ಇಂಡಿಯನ್ ಯೂನಿಯನ್ ಆಫ್ ಸಿವಿಲ್ ಲಿಬರ್ಟಿಸ್’ (ಭಾರತದ ನಾಗರಿಕ ಸ್ವಾತಂತ್ರ್ಯಗಳ ಒಕ್ಕೂಟ)ವನ್ನು ಒಂದು ಪಕ್ಷಾತೀತ ಪಂಥಾತೀತ ಸಂಘಟನೆಯಾಗಿ ಸ್ಥಾಪಿಸುವುದರ ಹಿಂದೆ ಪ್ರಮುಖ ಶಕ್ತಿಯಾಗಿದ್ದರು. ನೆಹರೂ ಅವರು ಮುಂದೆಯೂ ಈ ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದನ್ನು ಹೇಳುತ್ತಾ ಹೋದರೆ ರಾತ್ರಿಯೇ ಕಳೆದು ಹೋಗಬಹುದು.
ಈಗ ನಾನು ನಾಗರಿಕ ಸ್ವಾತಂತ್ರ್ಯಗಳನ್ನು ಸೈದ್ಧಾಂತಿಕವಾಗಿ ಬೆಂಬಲಿಸುವ ಮಾತ್ರವಲ್ಲ, ಪ್ರಾಯೋಗಿಕವಾಗಿ ರಕ್ಷಿಸುವ ಕೆಲವು ಉದಾಹರಣೆಗಳನ್ನು ಕೊಡಬಯಸುತ್ತೇನೆ. ಇವು ತೀವ್ರ ಭಿನ್ನಾಭಿಪ್ರಾಯ ಇರುವ, ರಾಜಕೀಯ ವಿರೋಧಿಗಳ ನಾಗರಿಕ ಸ್ವಾತಂತ್ರ್ಯಗಳನ್ನು ಸಹ ರಕ್ಷಿಸಲು ಧಾವಿಸುವ ಉದಾಹರಣೆಗಳು. ನಿಮಗೆ ಮೀರತ್ ಪಿತೂರಿ ಕುರಿತು ತಿಳಿದಿರಬಹುದು. ಭಾರತದಲ್ಲಿ 1920ರ ದಶಕದಲ್ಲಿ ಎಡಪಂಥೀಯರ ಚಟುವಟಿಕೆಗಳು ಹೆಚ್ಚುತ್ತಿರುವುದರ ಕುರಿತು, ದುಡಿಯುವ ವರ್ಗಗಳ ನಡುವೆ ಎಡಪಂಥೀಯರು ಪ್ರಬಾವಶಾಲಿಯಾಗುತ್ತಿರುವುದರ ಕುರಿತು ಬ್ರಿಟೀಶರಿಗೆ ಆತಂಕವಿತ್ತು.
ಬಾಂಬೆನಲ್ಲಿ ಗಿರಣಿ ಕಾಮಗಾರ್ ಯೂನಿಯನ್ ಸ್ಥಾಪನೆ, ಪಂಜಾಬ್‍ನಲ್ಲಿ ಕಿರ್ತಿ ಕಿಸಾನ್ ಪಕ್ಷ, ಬಂಗಾಳದಲ್ಲಿ ಕಿಸಾನ್ ಮಜ್ದೂರ್ ಪಕ್ಷ ಗಳನ್ನು ಒಳಗೊಡಂತೆ ದೇಶದಲ್ಲೆಡೆ ಕೂಲಿ ಕಾರ್ಮಿಕರ ಸಂಘಟನೆ ಸಕ್ರಿಯವಾಗಿದ್ದು ಬ್ರಿಟೀಶರಿಗೆ ಚಿಂತೆ ಶುರುವಾಗಿತ್ತು. 1927-1929ರ ನಡುವೆ ಎಡಪಂಥೀಯರ ಸಂಘಟನೆ ಬಿರುಸಾಗಿ ವ್ಯಾಪಿಸಿಕೊಂಡಿತ್ತು. ಸಮಾಜವಾದಿ ಸಿದ್ಧಾಂತಗಳಿಗೆ ಬದ್ದರಾಗಿದ್ದ ಸುಭಾಷಚಂದ್ರ ಬೋಸ್ ಮತ್ತು ನೆಹರೂ ಅವರು ದೇಶದಾದ್ಯಂತ ಯೂತ್ ಲೀಗ್‍ನ ಘಟಕಗಳನ್ನು ಪ್ರಾರಂಭಿಸಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಎಡಪಂಥೀಯ ಚಟುವಟಿಗೆಗಳ ಕುರಿತು ಬ್ರಿಟೀಶ್ ಸರಕಾರ ಕಳವಳಗೊಂಡಿತ್ತು. ಟ್ರೇಡ್ ಯೂನಿಯನ್ ನಾಯಕರನ್ನು ಒಳಗೊಂಡಂತೆ, ರಾಜಕೀಯ ನಾಯಕರು ಮತ್ತು ಭಾರತದಲ್ಲಿ ಟ್ರೇಡ್ ಯೂನಿಯನ್ ಪ್ರಾರಂಭಿಸಲು ಬಂದಂತಹ ಬ್ರಿಟೀಶ್ ಕಮ್ಯುನಿಸ್ಟರನ್ನು ಬಂಧಿಸಿತ್ತು. ಇವರನ್ನೆಲ್ಲ ಉತ್ತರ ಪ್ರದೇಶದ ಸಣ್ಣ ಪಟ್ಟಣವಾದ ಮೀರತ್ ಜೈಲಿನಲ್ಲಿ ಕೂಡಿ ಹಾಕಲಾಗಿತ್ತು. ಕೂಡಲೆ ಅದು ‘ಮೀರತ್ ಪಿತೂರಿ ಪ್ರಕರಣ’ವೆಂದು ದೇಶದ್ಯಾಂತ ಹೆಸರಾಯಿತು. ಈ ಬಂಧನದ ಮೂಲಕ ಎಡಪಂಥೀಯ, ಸಮಾಜವಾದಿ ನಾಯಕರನ್ನು ದೇಶದ ಇತರೆ ಸಂಘಟನೆಗಳಿಂದ ಪ್ರತ್ಯೇಕಿಸಿದ್ದೇವೆಂದು, ಎಡ ಹಾಗೂ ರಾಷ್ಟ್ರೀಯ ಚಳುವಳಿಯನ್ನು ಒಡೆಯುವಲ್ಲಿ ಸಫಲರಾಗಿದ್ದೇವೆಂದು ಬ್ರಿಟೀಶರು ಭಾವಿಸಿದ್ದರು.
ಎಡ ನಾಯಕರನ್ನು ದೀರ್ಘ ಬಂಧನಕ್ಕೆ ಒಳಪಡಿಸಿ ಎಡ ಚಳುವಳಿಯನ್ನು ನಾಶ ಮಾಡಬಹುದು ಎಂದು ಯೋಜಿಸಿದ್ದರು. (ಸರಕಾರದ ಈ ಚಿಂತನೆ ಸಮಕಾಲೀನ ಸಂದರ್ಭಕ್ಕೂ ಅನ್ವಯಿಸುತ್ತದೆ.) ಆದರೆ ನೆಹರೂ, ಎಂ.ಎ.ಅನ್ಸಾರಿ ಮತ್ತು ಎಂ.ಸಿ.ಚಾಗ್ಲ ಈ ಹೋರಾಟಗಾರರ ಪ್ರಕರಣಗಳನ್ನು ಕೈಗೆತ್ತಿಕೊಂಡು ಕಮ್ಯುನಿಸ್ಟರನ್ನು ಬೆಂಬಲಿಸುತ್ತೇವೆ ಎಂದು ನ್ಯಾಯವಾದಿಗಳಾಗಿ ಕೋರ್ಟಿನಲ್ಲಿ ವಾದ ಮಂಡಿಸಲು ಮುಂದಾದರು. ಗಾಂಧೀಜಿ ಸ್ವತಃ ಮೀರತ್ ಜೈಲಿನಲ್ಲಿ ಎಡಪಂಥೀಯ ನಾಯಕರನ್ನು ಭೇಟಿಯಾಗಿ ಅವರಿಗೆ ಸೌಹಾರ್ದ ಬೆಂಬಲ ವ್ಯಕ್ತಪಡಿಸಿದರು. ನೆಹರೂ ಅವರು ಭಗತ್ ಸಿಂಗ್ ಅವರನ್ನು ಸಹ ಜೈಲಿನಲ್ಲಿ ಬೇಟಿಯಾಗಿ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ಕೋರ್ಟಿನಲ್ಲಿ ಎಡಪಂಥೀಯರ ಹೇಳಿಕೆಗಳು ಮತ್ತು ಅವರ ಪರವಾಗಿ ನೆಹರೂ ಮತ್ತಿತರು ಮಂಡಿಸಿದ ವಾದ, ಪ್ರತಿವಾದಗಳು ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಮೊಟ್ಟ ಮೊದಲ ಬಾರಿಗೆ ಜನಸಾಮಾನ್ಯರಿಗೆ ಕಮ್ಯುನಿಸ್ಟ್ ವಿಚಾರಗಳ ಕುರಿತು ಮಾಹಿತಿ ಅದರಿಂದಲೇ ದೊರಕಿತು.
1942ರ ಆಗಸ್ಟ್‌ನಲ್ಲಿ ಗಾಂಧೀಜಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಬ್ರಿಟೀಷರ ವಿರುದ್ದ ‘ಕ್ವಿಟ್ ಇಂಡಿಯಾ’ ಚಳುವಳಿ ಹಮ್ಮಿಕೊಂಡಿತ್ತು. ‘ಬ್ರಿಟೀಷರೆ ಭಾರತ ಬಿಟ್ಟು ತೊಲಗಿ’ ಎಂದು ಕರೆ ಕೊಡಲಾಯಿತು. ಆಗ ಎರಡನೇ ಮಹಾಯುದ್ಧ ನಡೆಯುತ್ತಿದ್ದುದರಿಂದ ಕ್ರೂರ ದಮನಕಾರಿ ಕಾನೂನುಗಳು ಜಾರಿಲ್ಲಿದ್ದವು. ಸಾರ್ವಜನಿಕ ಸಭೆಗಳು ಸೇರಿದಂತೆ ಎಲ್ಲಾ ರಾಜಕೀಯ ಚಟುಟವಟಿಕೆಗಳ ಮೇಲೆ ನಿಷೇಧವಿತ್ತು. ಬಾಂಬೆಯ ಗೊವಾಲಿಯಾ ಟ್ಯಾಂಕ್ ಬಳಿಯ ಮೈದಾನದಲ್ಲಿ 250-300 ಸದಸ್ಯರಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಸೇರಿತ್ತು. ಆದರೆ ನಿಷೇಧಗಳನ್ನು ಲೆಕ್ಕಿಸದೆ ಸಾವಿರಾರು ಜನ ಇದರಲ್ಲಿ ಭಾಗವಹಿಸಿ ಅದೊಂದು ಬಹಿರಂಗ ಸಮಾವೇಶದಂತಾಯಿತು. ಅದೆ ಸಂದರ್ಭದಲ್ಲಿ ಎರಡನೆ ಮಹಾಯುದ್ದ ನಿರ್ಣಾಯಕ ಹಂತದಲ್ಲಿತ್ತು.
ಭಾರತೀಯ ಕಮ್ಯುನಿಸ್ಟರು ಈ ಕ್ವಿಟ್ ಇಂಡಿಯಾ ಚಳುವಳಿಯನ್ನು ವಿರೋಧಿಸಿದ್ದರು. ಏಕೆಂದರೆ ಜರ್ಮನಿ, ಇಟಲಿಯನ್ನು ಫ್ಯಾಸಿಸ್ಟ್ ಕೂಟವನ್ನು ಸೋಲಿಸಲು ಬ್ರಿಟನ್, ಸೋವಿಯತ್ ಒಕ್ಕೂಟ ಎರಡು ಕೂಡಾ ಇದ್ದ ಫ್ಯಾಸಿಸ್ಟ್-ವಿರೋಧಿ ಕೂಟವನ್ನು ಎರಡನೆ ಮಹಾಯುದ್ದದಲ್ಲಿ ಭಾರತದ ಜನತೆ ಬೆಂಬಲಿಸಬೇಕೆಂದು ಅವರ ನಿಲುವಾಗಿತ್ತು. ಆಗ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ 13 ಕಮ್ಯುನಿಸ್ಟ್ ನಾಯಕರಿದ್ದರು. ಆದರೆ 10-15 ಸಾವಿರ ಜನ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆ ಸಮಾವೇಶದಲ್ಲಿ ‘ಭಾರತ ಬಿಟ್ಟು ತೊಲಗಿ’ ನಿರ್ಣಯವನ್ನು ಮಂಡಿಸಲಾಯಿತು.ಆಗಲೇ ಗಾಂಧೀಜಿಯವರು ‘ಮಾಡು ಇಲ್ಲವೆ ಮಡಿ’ ಎನ್ನುವ ಪ್ರಸಿದ್ಧ ಜನಪ್ರಿಯ ಭಾಷಣ ಮಾಡಿದರು. ಆದರೆ ಈ ಸಮಾವೇಶದಲ್ಲಿ ಭಾಗವಹಿಸಿದ ಕಮ್ಯುನಿಸ್ಟ್ ನಾಯಕರು ಈ ಕ್ವಿಟ್ ಇಂಡಿಯಾ ನಿರ್ಣಯಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಮತಗಣನೆ ಆಗಬೇಕೆಂದು ಒತ್ತಾಯಿಸಿದರು. ಮತಕ್ಕೆ ಹಾಕಿದಾಗ 13 ಕಮ್ಯುನಿಸ್ಟರು ಮಾತ್ರ ನಿರ್ಣಯದ ವಿರುದ್ಧವಿರುವುದು ತಿಳಿಯಿತು.
ಆಗ ಗಾಂಧೀಜಿಯವರು “ಈ ನಿರ್ಣಯವನ್ನು ವಿರೋಧಿಸಿದ 13 ಜನ ಕಮ್ಯುನಿಸ್ಟ್ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. ಈ ವಿರೋಧಕ್ಕಾಗಿ ನೀವು ನಾಚಿಕೆ ಪಡಬೇಕಾಗಿಲ್ಲ. ನಾವು ಅಲ್ಪಸಂಖ್ಯಾತರಾಗಿದ್ದರೂ, ಜನ ನಮ್ಮನ್ನು ಗೇಲಿ ಮಾಡಿದರೂ ಸಹ ಸ್ಥೈರ್ಯ ಕಳೆದುಕೊಳ್ಳಬಾರದೆಂದು ನಾವೆಲ್ಲ ಕಳೆದ ಇಪ್ಪತ್ತು ವರ್ಷಗಳ ಹೋರಾಟದಿಂದ ಕಲಿತಿದ್ದೇವೆ. ನಮ್ಮ ನಂಬಿಕೆಗಳು ಸರಿಯೆಂದು ಗಟ್ಟಿಯಾಗಿ ದನಿಯೆತ್ತಲೆಬೇಕು. ನಾನು ಕಳೆದ ಹದಿನೈದು ವರ್ಷಗಳಿಂದ ಕಲಿಯಲು ಪ್ರಯತ್ನಿಸುತ್ತಿದ್ದ ಈ ಗುಣಗಳನ್ನು ಮೈಗೂಡಿಸಿಕೊಂಡಿರುವ ನನ್ನ ಕಮ್ಯುನಿಸ್ಟ್ ಮಿತ್ರರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು. ತಮ್ಮ ಈ ಭಾಷಣದ ಮೂಲಕ ಗಾಂಧೀಜಿ ಭಿನ್ನಮತೀಯರಿಗೂ ಸಹ ತಮ್ಮ ಅಬಿಪ್ರಾಯ ವ್ಯಕ್ತಪಡಿಸುವ ಎಲ್ಲಾ ಹಕ್ಕುಗಳಿವೆ ಎಂದು ಮನನ ಮಾಡಿಕೊಟ್ಟರು. ಕ್ವಿಟ್ ಇಂಡಿಯಾ ಚಳುವಳಿಯನ್ನು ಬೆಂಬಲಿಸುತ್ತಿದ್ದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳ ನಡುವೆ ಈ ಹದಿಮೂರು ಕಮ್ಯುನಿಸ್ಟ್ ನಾಯಕರಿಗೆ ರಕ್ಷಣೆಯನ್ನೂ ಕೊಟ್ಟರು. ರಾಷ್ಟ್ರೀಯ ಚಳುವಳಿಯ ಉನ್ನತ ನಾಯಕರಾದ ಗಾಂಧೀಜಿ ಹೀಗೆ ನಾಗರಿಕ ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ ಪಾಠಗಳನ್ನು ಜನರಿಗೆ ಮಾಡಿದರು. ಅದನ್ನು ನೆಹರೂ ಅವರು ಮುಂದುವರೆಸಿದರು. ಪ್ರಜಾಪ್ರಭುತ್ವವೆಂದರೆ ಬರಿಯ ಪಾರ್ಲಿಮೆಂಟು ಅಲ್ಲ. ಬರಿಯ ಚುನಾವಣೆಯಲ್ಲ. ಅಂತಿಮವಾಗಿ ಅದು ಸಂವಾದವನ್ನು ಒಳಗೊಂಡಿರುತ್ತದೆ, ಇಲ್ಲಿ ಭಿನ್ನ ದನಿಗಳಿಗೂ ಗೌರವ, ಸ್ವೀಕೃತಿ ಇರುತ್ತದೆ. ಅವರಿಗೂ ಸೂಕ್ತ ವೇದಿಕೆ ಕಲ್ಪಿಸಲಾಗುತ್ತದೆ ಎಂಬುದು ಅವರ ನಿಲುವಾಗಿತ್ತು.
ಗಾಂಧೀಜಿಯವರಿಂದ ನಾವು ಕಲಿಯಬೇಕಾದ ಪಾಠವೆಂದರೆ ಶತ್ರುಗಳ ಮೇಲೆ ದಾಳಿ ಮಾಡಬಾರದು. ಬದಲಿಗೆ ವ್ಯವಸ್ಥೆಯ ವಿರುದ್ದ ದಾಳಿ ಮಾಡಬೇಕು. ಗಾಂಧೀಜಿಯವರ ಪ್ರಕಾರ ಭಾರತೀಯರು ಬ್ರಿಟೀಶರ ವಿರುದ್ದ, ಬ್ರಿಟೀಶ ಅಧಿಕಾರಿಗಳ ವಿರುದ್ದ ಹೋರಾಡುತ್ತಿಲ್ಲ, ಬದಲಿಗೆ ಬ್ರಿಟೀಶರ ಸಾಮ್ರಾಜ್ಯಶಾಹಿ ವಿರುದ್ದ ಹೋರಾಡುತ್ತಿದ್ದಾರೆ. 1942 ರ ಕ್ವಿಟ್ ಇಂಡಿಯಾ ಚಳುವಳಿ ಉತ್ತುಂಗದಲ್ಲಿದ್ದಾಗ ನಡೆದಒಂದು ಗಲಭೆಯಲ್ಲಿ ಬ್ರಿಟೀಶ್ ಸೈನಿಕನೊಬ್ಬ ಗಂಭೀರವಾಗಿ ಗಾಯಗೊಂಡ. ಆದರೆ ಚಳುವಳಿಯಲ್ಲಿದ್ದ ಭಾರತೀಯರು ಆತನನ್ನು ಕೂಡಲೆ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿದರು. ಇದರಿಂದ ಅಚ್ಚರಿಗೊಂಡವರಿಗೆ ‘ನಮ್ಮ ರಾಷ್ಟ್ರೀಯತೆ ಬ್ರಿಟೀಶರನ್ನು ವಿರೋಧಿಸುವುದಿಲ್ಲ, ನಮ್ಮ ವಿರೋಧವು ಬ್ರಿಟೀಶ್ ಆಡಳಿತ ವಿರುದ್ದ ಮಾತ್ರ’ ಎಂದು ಅವರು ವಿವರಿಸಿದರು. ಇಂತಹ ನೂರಾರು ಕತೆಗಳಿವೆ.
ನಾಗರಿಕ ಸ್ವಾತಂತ್ರ್ಯಗಳಿಗಾಗಿ ಹೋರಾಟದ ಪರಂಪರೆ ನಮ್ಮ ದೇಶದಲ್ಲಿ ಎಷ್ಟು ದೀರ್ಘವಾಗಿ ಆಳವಾಗಿ ಗಟ್ಟಿಯಾಗಿದೆಯೆಂದರೆ ಅದನ್ನು ನಾಶ ಮಾಡುವುದು ಸುಲಭವಲ್ಲ. ಜೆ.ಎನ್.ಯು ಹೋರಾಟಕ್ಕೆ ಲಭ್ಯವಾಗುತ್ತಿರುವ ವ್ಯಾಪಕ ಸ್ವಯಂಸ್ಫ್ಫೂರ್ತ ಬೆಂಬಲ ನೋಡಿದರೆ ಅದು ತಿಳಿಯುತ್ತದೆ.
ಈ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಮತೀಯ ದನಿಗಳಿಗೆ ಸೂಕ್ತ ಗೌರವಗಳ ಕಾರಣದಿಂದಲೇ ನಮಗೆ ಸ್ವಾತಂತ್ರ್ಯ ಹೋರಾಟದಲ್ಲಿ ಯಶಸ್ಸು ದೊರಕಿದೆ. ರಾಷ್ಟ್ರೀಯ ಚಳುವಳಿಯಲ್ಲಿ ಹಲವು ಭಿನ್ನ ದನಿಗಳಿದ್ದರೂ ಅವು ಕೆಲವು ವಿಷಯಗಳ ಕುರಿತು ಐಕ್ಯತೆ ಹೊಂದಿದ್ದರಿಂದ ಇದು ಸಾಧ್ಯವಾಗಿದೆ. ಗಾಂಧೀಜಿ ನಾಯಕತ್ವದ ಕಾಂಗ್ರೆಸಿಗೂ ಕಮ್ಯುನಿಸ್ಟರಿಗೂ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಕಮ್ಯುನಿಸ್ಟರು ಕೆಲವೊಮ್ಮೆ ಕಾಂಗ್ರೆಸಿನೊಳಗೆ ಕೆಲಸ ಮಾಡಿದರೆ ಕೆಲವೊಮ್ಮೆ ಹೊರಗೆ ಹೋಗುತ್ತಿದ್ದರು. ಅವರು ಕಾರ್ಮಿಕರನ್ನು, ರೈತರನ್ನು. ವಿದ್ಯಾರ್ಥಿ-ಯುವಜನರನ್ನು ಅವರದ್ದೇ ಸಮಸ್ಯೆಗಳ ಸುತ್ತ ಸಂಘಟಿಸಿದರು. ಇವೆಲ್ಲ ಜನವಿಭಾಗಗಳನ್ನು ಸ್ವಾತಂತ್ರ್ಯ ಹೋರಾಟದ ಮುಖ್ಯಧಾರೆಗೂ ತಂದರು. ಸವಿನಯ ಕಾಯಿದೆಭಂಗ ಮತ್ತು ಸತ್ಯಾಗ್ರಹಗಳಲ್ಲೂ ಭಾಗವಹಿಸಿದರು. ಅದೇ ರೀತಿ ಕಾಂಗ್ರೆಸಿನೊಳಗೂ ಹಲವು ಭಿನ್ನಮತಗಳಿದ್ದವು. ಏಕೆ ನೆಹರೂ-ಗಾಂಧೀಜಿ ಅವರ ನಡುವೆ ಹಲವು ಭಿನ್ನಮತಗಳಿದ್ದವು. ನೆಹರೂ ಅವರ ಆತ್ಮಕತೆ ಓದಿ. ಅದರಲ್ಲಿ ಅರ್ಧದಷ್ಟು ಗಾಂಧೀಜಿಯವರ ಬಗ್ಗೆ ಮೆಚ್ಚಿಗೆ ಇದ್ದರೆ, ಇನ್ನರ್ಧ ಟೀಕೆ-ವಿಮರ್ಶೆಗಳೂ ಇವೆ.
ಗಾಂಧೀಜಿ ಹತ್ಯೆಗೀಡಾಗುವುದಕ್ಕಿಂತ ಮೊದಲಿನ ಒಂದು ವರ್ಷದ ಕಾಲ ಅವರು ಪ್ರದರ್ಶಿಸಿದ ಧೈರ್ಯ ಪ್ರತಿಯೊಬ್ಬರಿಗೂ ಮಾದರಿಯಾಗಬೇಕಾಗಿದೆ. 1946ರಲ್ಲಿಪೂರ್ವ ಬಂಗಾಳದ ನೌಖಾಲಿಯಲ್ಲಿ ಮತೀಯ ಗಲಭೆಗಳು ತೀವ್ರ ಸ್ವರೂಪದಲ್ಲಿದ್ದು ಹಿಂಸೆ ತಾಂಡವವಾಡುತ್ತಿತ್ತು. ಆದರೆ ಇದನ್ನು ಲೆಕ್ಕಿಸದೆ ಗಾಂಧೀಜಿ ಅಲ್ಲಿಗೆ ನವೆಂಬರ್ 4, 1946ರಂದು ಭೇಟಿ ನೀಡಿದರು. ಇದು ಮುಸ್ಲಿಂ ಬಹುಸಂಖ್ಯಾತ ಪ್ರದೇಶವಾಗಿತ್ತು. ಗಾಂಧೀಜಿಯವರ ಈ ಭೇಟಿಯನ್ನು ಸರಕಾರ ಬೆಂಬಲಿಸಲಿಲ್ಲ, ಜನತೆ ಬೆಂಬಲಿಸಲಿಲ್ಲ. ಆದರೆ ಗಾಂಧೀಜಿ ಎದೆಗುಂದಲಿಲ್ಲ. ಇದು ನನ್ನ ದೇಶ. ಇವರು ನನ್ನ ಜನ. ನಾನು ಇವರೊಂದಿಗೆ ಮಾತನಾಡಬಯಸುತ್ತೇನೆ, ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದರು. ಕೋಮುಗಲಭೆ-ಪಿಡಿತ ನೌಖಾಲಿಯಲ್ಲಿ ನಾಲ್ಕು ತಿಂಗಳು ವಾಸವಿದ್ದರು. ಗಲಬೆಗ್ರಸ್ತ ಓಣಿಗಳಲ್ಲಿ, ಹಳ್ಳಿಗಳಲ್ಲಿ ನಡೆದು ಸಂತ್ರಸ್ತರೊಂದಿಗೆ ಬೆರೆತು ಅವರನ್ನು ಸಂತೈಸಿದರು. ಅದೇ ಸಂದರ್ಭದಲ್ಲಿ ಅವರ ಮೇಲೆ ಚಪ್ಪಲಿ ಎಸೆಯಲಾಯಿತು, ಮಲವನ್ನು ಎರಚಲಾಯಿತು. ಆದರೂ ಎದೆಗುಂದದ ಗಾಂಧೀಜಿ ‘ನಿಮಗಿಷ್ಟ ಬಂದಂತೆ ನಡೆದುಕೊಳ್ಳಿ. ನನ್ನ ದೇಹವನ್ನು ದಂಡಿಸಿ, ಹಲ್ಲೆ ಮಾಡಿ, ನನ್ನ ಜನ ನನ್ನ ವಿರುದ್ದ ಈ ರೀತಿ ವರ್ತಿಸುತ್ತಿದ್ದಾರೆಂದರೆ ನನ್ನಲ್ಲಿಯೆ ಏನೋ ತಪ್ಪಿರಬಹುದು’ ಎಂದರು. ಕ್ರಮೇಣ ಗಲಭೆಯಲ್ಲಿ ತೊಡಗಿದ್ದ ಜನ ಗಾಂಧೀಜಿಯವರ ಮಾತುಗಳನ್ನು ಆಲಿಸತೊಡಗಿದರು. ಪ್ರತಿ ದಿನ ಸಂಜೆ ಅವರು ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. ಅಲ್ಲಿಗೆ ಯಾರೂ ಬರಬಹುದಿತ್ತು. ಅಲ್ಲಿಗೆ ಜನ ಬರಲಾರಂಭಿಸಿದರು. ನೌಖಾಲಿ ಮಾತ್ರವಲ್ಲ, ಬಂಗಾಳದ ಹಲವು ಕಡೆ ಇಂತಹ ಪ್ರಾರ್ಥನಾ ಸಭೆಗಳು ನಡೆದವು. ಕೆಲವು ಇಂತಹ ಸಭೆಗಳಲ್ಲಿ ಎರಡು ಲಕ್ಷ ಜನ ಭಾಗವಹಿಸಿದ ಉದಾಹರಣೆಗಳಿವೆ.
ಆಗಸ್ಟ್ 15, 1947ರಂದು ದೇಶ ಸ್ವಾತಂತ್ರ್ಯದ ಬಗ್ಗೆ ಸಂಭ್ರಮಿಸುತ್ತಿದ್ದಾಗ ಗಾಂಧೀಜಿ ಎಲ್ಲಿದ್ದರು? ಅವರು ದೆಹಲಿಯಲ್ಲಿರಲಿಲ್ಲ. ಗಾಂಧೀಜಿಯವರಿಗೆ ಭಾರತ ಸ್ವಾತಂತ್ರ್ಯ ಗಳಿಸಿದ್ದರ ಬಗ್ಗೆ ಹೆಮ್ಮೆ ಇಲ್ಲವೆಂದಲ್ಲ. ತನ್ನ ಕೆಲಸ ಬೇರೆಲ್ಲೋ, ತನ್ನ ಆದ್ಯತೆ ಬೇರೆ ಏನೋ ಎಂದು ಅವರು ತಿಳಿದಿದ್ದರು ಅಷ್ಟೇ. ಬಂಗಾಳದ ಮುಖ್ಯಮಂತ್ರಿ ಸುಹ್ರಾವರ್ಡಿ ಗಾಂಧೀಜಿಯನ್ನು ಕಲ್ಕತ್ತದಲ್ಲಿ ಬಂದು ಕೆಲಕಾಲ ಇರಬೇಕೆಂದು ಕೋರಿದ್ದರು. ಏಕೆಂದರೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶ ವಿಭಜನೆಗೊಂಡಿತ್ತು. ಇದರ ಅನುಸಾರ ಕಲ್ಕತ್ತ ಭಾರತಕ್ಕೆ ಸೇರ್ಪಡೆಯಾಯಿತು. ಆಗ ಕಲ್ಕತ್ತ ನಗರದಲ್ಲಿ ಮತೀಯ ಗಲಭೆಗಳಸೂಚನೆ ಇತ್ತು. ವಿಭಜನೆಯ ನಂತರ ಸುಹ್ರಾವರ್ಡಿ ಅವರ ಸರಕಾರಕ್ಕೆ ಯಾವುದೇ ಅಧಿಕಾರವಿರಲಿಲ್ಲ. ಅಲ್ಲದೆ 1946ರ ಕಲ್ಕತ್ತೆಯ ಅಗಾಧ ಹತ್ಯೆಗಳಿಗೆ ಪ್ರತೀಕಾರವಾಗಿ ದಂಗೆಗಳಾಗಬಹುದೆಂದು ಅವರಿಗೆ ಭಯವಿತ್ತು.ಅದಕ್ಕೆ ಪ್ರತಿಕ್ರಿಯಿಸುತ್ತಾ ಗಾಂಧೀಜಿಯವರು ಸುಹ್ರಾವರ್ಡಿ ಅವರಿಗೆ ‘ನೀವು ನನ್ನೊಂದಿಗೆ ಒಂದೆ ಸೂರಿನಡಿ ಇರಬೇಕು, ಇದಕ್ಕೆ ಒಪ್ಪಿದರೆ ನಾನು ನಿಮ್ಮೊಂದಿಗೆ ಬರುತ್ತೇನೆ’ ಎಂದರು. ನಂತರ ಆಗಸ್ಟ್ 15ರಂದು ತಮ್ಮ ವಿರೋಧಿ ಸುಹ್ರಾವರ್ಡಿ ಅವರ ಕೈ ಹಿಡಿದುಕೊಂಡು ಕಲ್ಕತ್ತದ ಓಣಿಗಳಲ್ಲಿ ಸಂಚರಿಸಿದರು. ವಿಚಾರಗಳ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಯಾವುದೇ ಸಾಮ್ಯತೆ ಇರಲಿಲ್ಲ. ಆದರೆ ಗಾಂಧೀಜಿ ತಮ್ಮ ವಿರೋಧಿಯೊಂದಿಗೂ ಸಂವಾದ ನಡೆಸಿದ್ದರು. ನಾವು ಈ ಪರಂಪರೆಯನ್ನು ಮುಂದುವರೆಸಬೇಕು. ಇದನ್ನು ಕಾಪಾಡಬೇಕು.
(24 ಫೆಬ್ರುವರಿ, 2016)


