Homeಕರ್ನಾಟಕಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

ಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

- Advertisement -
- Advertisement -

ವೆಂಕಟೇಶ್ ಪ್ರಸನ್ನ ಎಂಬ ಪೊಲೀಸ್ ಅಧಿಕಾರಿಯು ತನ್ನ ಭೂಗತ ಜಗತ್ತಿನ ಸಂಪರ್ಕ ಮತ್ತು ಶಾಮೀಲುದಾರಿಕೆಯ ಕಾರಣದಿಂದ ಈಗ ರಾಜ್ಯಾದ್ಯಂತ ಸುದ್ದಿಯಲ್ಲಿದ್ದಾರೆ. ಆದರೆ ಆತನನ್ನು ಬಲ್ಲ ಮಂಗಳೂರಿನ ಜನಕ್ಕೆ ಇದ್ಯಾವ ಹೊಸ ಸುದ್ದಿ ಎನಿಸಿ ಎಂದು ಮೂಗು ಮುರಿಯುತ್ತಿದ್ದಾರೆ. ಏಕೆಂದರೆ ರವಿ ಪೂಜಾರಿಯಂತಹ ಭೂಗತ ಡಾನ್‍ಗಳೊಂದಿಗಿನ ವೆಂಕಟೇಶ್ ಪ್ರಸನ್ನರ ಸಂಬಂಧವು ಮಂಗಳೂರಿನಲ್ಲಿದ್ದಾಗಲೇ ಗಟ್ಟಿಗೊಂಡಿದ್ದು. ಪೊಲೀಸ್ ಇಲಾಖೆಯೊಳಗೂ ಇದು ಜಗಜ್ಜಾಹೀರಾದ ವಿಚಾರವೇ.

ಶೃಂಗೇರಿ ತಾಲೂಕಿನ ಬ್ರಾಹ್ಮಣ ಕುಟುಂಬವೊಂದರ ವೆಂಕಟೇಶ್ ಪ್ರಸನ್ನರ ಸಂಬಂಧ ಭೂಗತ ಡಾನ್‍ಗಳೊಂದಿಗೆ ಮಾತ್ರವಿಲ್ಲ; ಅಷ್ಟೇ ಗಾಢ ಸಂಬಂಧವಿರುವುದು ಸಂಘಪರಿವಾರದ ಜೊತೆಗೂ ಆಗಿದೆ. ಒಂದು ಇನ್ನೊಂದನ್ನು ಪೊರೆಯುತ್ತಾ ಇದೆಯೆಂಬುದು ಇನ್ನೊಂದು ವಾಸ್ತವ. ಈ ಮೂರೂ ಅಂಶಗಳು (ವೆಂಕಟೇಶ್ ಪ್ರಸನ್ನ, ಸಂಘಪರಿವಾರ ಮತ್ತು ರವಿಪೂಜಾರಿಯಂತಹ ಭೂಗತ ಲೋಕದ ಜನ) ಒಂದಕ್ಕೊಂದು ಬೆಸೆದುಕೊಂಡಿವೆಯೆಂದು ಮಂಗಳೂರಿನಲ್ಲಿ ಒಮ್ಮೆ ದೊಡ್ಡ ಸುದ್ದಿಯಾಗಿದ್ದು ನೌಷಾದ್ ಖಾಸಿಂಯವರ ಕೊಲೆಯ ಸಂದರ್ಭದಲ್ಲಿ.

ವಿಪರ್ಯಾಸವೆಂದರೆ ಅದೇ ನೌಷಾದ್ ಖಾಸಿಂಯವರ ಕೊಲೆಯ ಆರೋಪಿ ದಿನೇಶ್ ಮತ್ತಿತರರನ್ನು ಇದೇ ವೆಂಕಟೇಶ್ ಪ್ರಸನ್ನ ಬೆಂಗಳೂರಿನಿಂದ ಎತ್ತಾಕಿಕೊಂಡು ಬಂದು ವಿಚಾರಣೆಗೆ ಗುರಿಯಾಗಿಸಿದರು ಎಂಬುದು ಆತನನ್ನು ತಕ್ಷಣದ ಆರೋಪಿ ಸ್ಥಾನದಿಂದ ವಿಮುಕ್ತನನ್ನಾಗಿಸಿತ್ತು. ಆದರೆ ಒಳಗಿನ ಸಂಗತಿ ಬೇರೆಯೇ ಆಗಿತ್ತು.

ನೌಷಾದ್ ಖಾಸಿಂಜಿ ಮಂಗಳೂರಿನ ಜನಪ್ರಿಯ ವಕೀಲರು. ಅದರಲ್ಲೂ ಬಡವರ ಪಾಲಿಗೆ ಆಪತ್ಬಾಂಧವ. ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ವಿವಿಧ ಕೇಸುಗಳಲ್ಲಿ ಬಂಧಿಸಿ ಭಯೋತ್ಪಾದಕ ಪಟ್ಟ ಕಟ್ಟುವುದು ಹೊಸದೇನಲ್ಲ. ಅಂತಹವರ ಪರವಾಗಿ ನ್ಯಾಯ ಕೊಡಿಸಲು ನೌಷಾದ್ ಎಂದೂ ಹಿಂಜರಿಯುತ್ತಿರಲಿಲ್ಲ. ಆ ಕಾರಣದಿಂದ ಮುಸ್ಲಿಂ ವಿರೋಧಿ ಮನಸ್ಥಿತಿಯ ಪೊಲೀಸರಿಗೂ ಅವರಿಗೂ ಶತ್ರುತ್ವವೂ ಬೆಳೆದಿತ್ತು. ಉಡುಪಿ ಎಂಎಲ್‍ಎ ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯರ ನಿಗೂಢ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಸಿಲುಕಿಸಲೆತ್ನಿಸಿದ್ದ ಅತುಲ್‍ರಾವ್ ಪರವೂ ನೌಷಾದ್ ವಾದಿಸಿದ್ದರು.

ಈ ಮಧ್ಯೆ ಮಂಗಳೂರಿನ ಭೂಗತ ಲೋಕದಲ್ಲಿ ಹಿಂದೂ ಮುಸ್ಲಿಂ ಗುಂಪುಗಳು ಬೇರೆ ತಲೆಯೆತ್ತಿದ್ದವು. ಟಿಪಿಕಲ್ ಮಂಗಳೂರು ಸಂಸ್ಕೃತಿಯ ಭಾಗವಾಗಿ. ಇದೇ ಮಂಗಳೂರು ಮೂಲದ ಡಾನ್‍ಗಳು ಬೆಂಗಳೂರು, ಮುಂಬೈಗಳಲ್ಲೆಲ್ಲಾ ಡಾನ್‍ಗಿರಿ ನಡೆಸಿ ದುಬೈ ಮತ್ತಿತರ ಅರಬ್ ದೇಶಗಳಲ್ಲಿ ತಲೆಮರೆಸಿಕೊಳ್ಳುವುದೂ ಹೊಸತಾಗಿರಲಿಲ್ಲ. ಅಂಥದ್ದೆಲ್ಲಾ ನಡೆಸಿ ನಂತರ ‘ಹಿಂದೂ ರಕ್ಷಕ’ರ ಅವತಾರವೆತ್ತಿ ಮತ್ತೆ ಇಲ್ಲಿ ‘ಮುಖ್ಯವಾಹಿನಿ’ ಸೇರಿಕೊಳ್ಳುವುದೂ ಹೊಸದಲ್ಲ.

ಇದೀಗ ಬಂಧಿತವಾಗಿರುವ ರವಿ ಪೂಜಾರಿಯದ್ದೂ ಅದೇ ಜಾಡು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೇಳಿಕೇಳಿ ರವಿ ಪೂಜಾರಿ ನೌಷಾದ್ ಖಾಸಿಂಜಿಯ ಮರ್ಡರ್ (ಏಪ್ರಿಲ್ 9, 2009) ಸಂದರ್ಭದಲ್ಲೇ ಕಮ್ಯುನಲ್ ಮಾಫಿಯಾದ ಭಾಗವಾಗಿದ್ದುದು ಸಾಬೀತಾಗಿತ್ತು. ಹಾಗಾಗಿಯೂ ವೆಂಕಟೇಶ್ ಪ್ರಸನ್ನರ ಹಸ್ತವೂ ಆ ಮರ್ಡರ್‍ನಲ್ಲಿತ್ತು ಎಂಬುದು ಆ ಸಂದರ್ಭದಲ್ಲಿ ಪ್ರತಿಭಟಿಸಿದವರ ಆಕ್ರೋಶದಲ್ಲಿ ಎದ್ದು ಕಾಣುತ್ತಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರು ಎಸ್‍ಪಿ ಆಗಿದ್ದ (ಆಗಿನ್ನೂ ಕಮೀಷನರೇಟ್ ಬಂದಿರಲಿಲ್ಲ) ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಐಜಿ ಗೋಪಾಲ್ ಹೊಸೂರ್ ಅವರ ಮೇಲೆ ವಿಪರೀತ ಒತ್ತಡವಿತ್ತು. ಸ್ಫೋಟವಾಗಲು ಕಾದು ಕುಳಿತಂತಿದ್ದ ಮಂಗಳೂರು, ಕೋಮು ಬಣ್ಣ ಪಡೆದುಕೊಳ್ಳುತ್ತಿದ್ದ ಭೂಗತ ಲೋಕ, ಸರ್ಕಾರ ನಡೆಸುತ್ತಿದ್ದದ್ದು ಬಿಜೆಪಿ – ಹೀಗಿರುವಾಗ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಿರಲಿಲ್ಲ. ಆದರೆ, ನೌಷಾದ್ ಖಾಸಿಂ ಕೊಲೆಗಾರರನ್ನು ಕೊಲೆಯಾದ 15 ದಿನಗಳಲ್ಲಿ ಬಂಧಿಸಲಾಯಿತು. ಬಂಧಿತರಾದ ದಿನೇಶ್ ಶೆಟ್ಟಿ, ರಿತೇಶ್ ಮತ್ತಿತರರೆಲ್ಲರೂ ರವಿ ಪೂಜಾರಿಯ ಸಹಚರರು ಎಂಬುದು ಖಚಿತವಾಗಿತ್ತು.

ಕೊಲೆಯ ವಿರುದ್ಧ ಸಿಡಿದೆದ್ದಿದ್ದ ಪ್ರತಿಭಟನಾಕಾರರು ಸುಮ್ಮನಾದರೂ ನೌಷಾದ್‍ರ ಸೀನಿಯರ್ ಪುರುಷೋತ್ತಮ್ ಪೂಜಾರಿಯವರು ಸುಮ್ಮನಾಗಲಿಲ್ಲ. ಈ ಕೊಲೆಯಲ್ಲಿ ವೆಂಕಟೇಶ್ ಪ್ರಸನ್ನ ಮತ್ತು ಇನ್ನಿಬ್ಬರು ಇನ್ಸ್‍ಪೆಕ್ಟರ್‍ಗಳ ಪಾತ್ರವಿದೆಯೆಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ ಸಿಬಿಐ ತನಿಖೆ ನಡೆಯಬೇಕೆಂದು ಹೈಕೋರ್ಟ್‍ನವರೆಗೆ ಹೋಗಿದ್ದರು. ಅಷ್ಟರಲ್ಲಾಗಲೇ (2011) ತನಿಖೆ ಸಾಕಷ್ಟು ಮುಂದುವರೆದಿದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧದ ಕೇಸನ್ನು ಹೈಕೋರ್ಟು ಕೈಬಿಟ್ಟಿತ್ತು. ಆದರೆ, 2015ರ ನವೆಂಬರ್‍ನಲ್ಲಿ ಇತರ ಆರೋಪಿಗಳಿಗೆ ಶಿಕ್ಷೆಯೂ ಆಯಿತು. ಅವರೇ ಮರ್ಡರರ್ಸ್ ಎಂದು ಕೋರ್ಟು ಎತ್ತಿ ಹಿಡಿದಿತ್ತು.

ಸದರಿ ಕೇಸಿನಲ್ಲಿ ಮಂಗಳೂರು ಪೊಲೀಸರು ತೋರಿದ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನೌಷಾದ್ ಅವರು ರಷೀದ್ ಮಲಬಾರಿ ಎಂಬ ಛೋಟಾ ಶಕೀಲ್‍ನ ಸಹವರ್ತಿಯ ವಕೀಲರಾಗಿದ್ದುದರಿಂದ ಅವರ ಮರ್ಡರ್ ನಡೆದಿತ್ತು. ಇದೇ ನೌಷಾದ್ ಒಬ್ಬ ಪ್ರಸಿದ್ಧ ಮಾನವಹಕ್ಕು ವಕೀಲರಾಗಿಯೂ ಹೆಸರು ಮಾಡಿದ್ದರು. ಸಹಜವಾಗಿ ಪೊಲೀಸರು ಇಂಥವರ ವಿರುದ್ಧ ಇರುತ್ತಾರೆ. ಆದರೆ, ಮಂಗಳೂರಿನ ಅಧಿಕಾರಿಗಳ ತಂಡ ಬೆನ್ನುಬಿದ್ದು ಕೊಲೆಗಾರರನ್ನು ಹಿಡಿದರು. ದಿನೇಶ್ ಮತ್ತಿತರರೇ ಕೊಲೆಗಾರರು ಎಂಬುದು ಕಾಲ್ ರೆಕಾಡ್ರ್ಸ್ ಮತ್ತು ಲೊಕೇಶನ್ ವಿವರಗಳಿಂದ ಶೇ.99ರಷ್ಟು ಖಚಿತವಾದ ಮೇಲೆ ಬೆಂಗಳೂರಿಗೆ ಹೋಗಿ ಹಿಡಿದು ತಂದಿದ್ದಷ್ಟೇ ವೆಂಕಟೇಶ್ ಪ್ರಸನ್ನ. ಹಾಗೆ ನೋಡಿದರೆ ಭೂಗತ ಲೋಕದ ಜೊತೆಗೆ ನಂಟು ಹೊಂದಿರುವ ಇಂತಹ ಅಧಿಕಾರಿಗಳು ಬಹಳ ಚುರುಕಾಗಿಯೂ ಇರುತ್ತಾರೆ. ತಮ್ಮದೇ ಸಂಪರ್ಕ ಬಳಸಿ ಕೆಲವು ಕೇಸುಗಳನ್ನು ಸುಲಭದಲ್ಲಿ ಬಗೆಹರಿಸುತ್ತಾರೆ. ಇನ್ನೆಷ್ಟೋ ಕೇಸುಗಳಲ್ಲಿ ಬರೀ ಡೀಲ್‍ಗಳು ಆಗುತ್ತವೆ.

ಇಂತಹ ವೆಂಕಟೇಶ್ ಪ್ರಸನ್ನ ಇದೀಗ ಬೆಂಗಳೂರಿನಲ್ಲಿ ಎಸಿಪಿ ಮತ್ತು ಭೂಗತ ಪಾತಕಿ ರವಿ ಪೂಜಾರಿಯ ಮಾಹಿತಿದಾರ ಎಂಬ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಸ್ವತಃ ಪೊಲೀಸ್ ಕಮೀಷನರ್ ಭಾಸ್ಕರರಾವ್ ಈ ಕುರಿತು ಡಿಜಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ಇಲಾಖಾ ವಿಚಾರಣೆ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ವೆಂಕಟೇಶ್ ಪ್ರಸನ್ನ ರವಿ ಪೂಜಾರಿಗೆ ತಿಳಿಸುತ್ತಿದ್ದರು ಎಂಬುದು ಹೊಸ ಆರೋಪ. 2016ರಲ್ಲಿ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ ಕುರಿತು ಆಂಬಿಡೆಂಟ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

ಇದೇ ಕಾರಣಕ್ಕೆ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಅವರು ಮತ್ತೆ ಸಿಸಿಬಿಗೇ ಬಂದಿದ್ದರು. ಈಗ ಮತ್ತೊಮ್ಮೆ ಅದೇ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. ಅಂದರೆ ರವಿ ಪೂಜಾರಿಯಂತಹ, ಕರ್ನಾಟಕವೊಂದರಲ್ಲೇ 97 ಪ್ರಕರಣದಲ್ಲಿ ಆರೋಪಿಯಾಗಿರುವ ಆರೋಪಿಯ ಜೊತೆಗೆ ಸಖ್ಯ ಇದೆ ಎನ್ನುವ ಅಧಿಕಾರಿಗೆ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದರೆ ಸಾಕೇ ಎನ್ನುವುದನ್ನು ಇಲಾಖೆಯೇ ಉತ್ತರಿಸಬೇಕಿದೆ.

ದುರಂತವೆಂದರೆ ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ‘ವಿಶೇಷ ಸ್ಥಾನ’ಗಳನ್ನು ಪಡೆದಿರುತ್ತಾರೆ. ಅವರ ‘ಕನೆಕ್ಷನ್’ಗಳು ಹಿರಿಯ ಅಧಿಕಾರಿಗಳಿಗೂ ಬೇಕಿರುತ್ತವೆ. ಎಲ್ಲವನ್ನೂ ಅಧಿಕೃತ ಮಾರ್ಗಗಳಿಂದಲೇ ಮಾಡಲಾಗದಾಗ ಅವರು ಇಂಥವರನ್ನೂ ಬಳಸುತ್ತಾರೆ. ನೋಡುನೋಡುತ್ತಲೇ ಇವರುಗಳು ಸೂಪರ್‍ಕಾಪ್‍ಗಳೆಂಬ ಬಿರುದುಗಳನ್ನೂ ಪಡೆದುಕೊಂಡಿರುತ್ತಾರೆ. ಪೊಲೀಸ್ ಇಲಾಖೆ, ಕಳ್ಳದಂಧೆಗಳು, ಕೊಲೆಗಡುಕ ಮಾಫಿಯಾಗಳು ಇವೆಲ್ಲವೂ ಎಂದೆಂದೂ ಇರುವಂಥವೇ ಮತ್ತು ಅವುಗಳ ಬಗ್ಗೆ ಕ್ರೈಮ್ ಸುದ್ದಿ ಮಾಡುವವರು ಬರೆಯುತ್ತಾ ಅವನ್ನು ರೋಚಕಗೊಳಿಸುತ್ತಾ ಹೋಗುವುದೂ ಇಂದಿನ ನಾರ್ಮೆಲ್ಸಿ ಎಂದಾಗಿಬಿಟ್ಟಿದೆ. ಇವುಗಳ ಹಿಂದೆ ಕರಾಳಲೋಕದ ಆಟಗಳು ಸಾಕಷ್ಟಿರುತ್ತದೆ; ಯಾರ್ಯಾರದ್ದೋ ಬದುಕುಗಳು ಮುರುಟಿ ಹೋಗುತ್ತವೆ ಎಂಬುದು ‘ಸಭ್ಯಲೋಕ’ವಾದ ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮಗಳಿಗೂ ಬೇಡವಾಗಿಬಿಟ್ಟರೆ ಅಲ್ಲಿಗೆ ಎಲ್ಲವೂ ಆಟ ಮಾತ್ರವೇ ಆಗಿಬಿಡುತ್ತದೆ. ಎನ್‍ಕೌಂಟರ್ ಸ್ಪೆಷಲಿಸ್ಟುಗಳು ಕೆಲವೊಮ್ಮೆ ದಂಧೆಗಳನ್ನೂ ನಡೆಸುತ್ತಿರುತ್ತಾರೆ. ಅವರನ್ನು ತೆಗಳುವ ಮತ್ತು ಹೊಗಳುವ ಎರಡೂ ಬಗೆಯ ಪತ್ರಕರ್ತರೂ ಇರುತ್ತಾರೆ. ಈ ದುರಂತವನ್ನು ಬಿಚ್ಚಿಡಲು ಹೋಗುವವರು ನೂರು ಸಾರಿ ಯೋಚಿಸುವ ವಾತಾವರಣವಿದೆ.

ಇವೆಲ್ಲಕ್ಕೂ ಮಿಗಿಲಾದ ಅಪಾಯವಿರುವುದು ಸದರಿ ಪೊಲೀಸ್ ಅಧಿಕಾರಿಗಳು ಕಮ್ಯುನಲ್ ಮಾಫಿಯಾದ ಭಾಗವಾಗುವುದು. ಸರ್ಕಾರವೂ ಅದಕ್ಕೆ ಪೂರಕವಾಗಿಬಿಟ್ಟರೆ ಕಥೆ ಮುಗಿದಂತೆಯೇ. ವೆಂಕಟೇಶ್ ಪ್ರಸನ್ನರ ಲಿಂಕುಗಳು ಈ ರೀತಿ ಹಲವು ಎಳೆಗಳನ್ನು ತೋರುತ್ತಿವೆ. ಒಂದೇ ಪತ್ರಿಕೆಯ ಬಾಕ್ಸ್ ಐಟಮ್ಮಿನಲ್ಲಿ ಅವರ ಪರವಾದ ಸುದ್ದಿಯೂ, ಮುಖ್ಯ ಭಾಗದಲ್ಲಿ ಅವರ ಕರಾಳ ಮುಖವನ್ನು ತೋರುವ ಸುದ್ದಿ ಬರಲು ಈ ಸಿಕ್ಕುಗಳೂ ಕಾರಣವಾಗಿದೆ. ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಇಂಥವು ಬೆಳೆಯಲು ಬಿಡದಿದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR | ಸೆಕ್ಸ್ ವರ್ಕರ್ಸ್, ಅವರ ಮಕ್ಕಳ ಬಳಿ ದಾಖಲೆಗಳಿಲ್ಲ : ಮಹಾರಾಷ್ಟ್ರ ಸಿಇಒಗೆ ಪತ್ರ ಬರೆದ ರಾಷ್ಟ್ರೀಯ ಸಂಸ್ಥೆ

ದಾಖಲಾತಿ ಮತ್ತು ಪರಿಶೀಲನೆ ಅಗತ್ಯತೆಗಳ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಲೈಂಗಿಕ ಕಾರ್ಯಕರ್ತೆಯರು ಮತ್ತು ಅವರ ಮಕ್ಕಳನ್ನು ಹೊರಗಿಡದಂತೆ ನೋಡಿಕೊಳ್ಳಲು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು...

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...