Homeಮುಖಪುಟಕಣ್ಮರೆಯಾದ ಕನ್ನಡಪ್ರಜ್ಞೆ ಪಾಪು

ಕಣ್ಮರೆಯಾದ ಕನ್ನಡಪ್ರಜ್ಞೆ ಪಾಪು

- Advertisement -
- Advertisement -

ಕರ್ನಾಟಕದಲ್ಲಿ ದೀರ್ಘಾಯುಷಿಗಳ ದೊಡ್ಡ ಪಟ್ಟಿಯೇ ಇದೆ. ಸರ್‍ಎಂವಿ, ಎ.ಎನ್. ಮೂರ್ತಿರಾವ್, ಸಿದ್ಧಗಂಗಾಸ್ವಾಮಿಜಿ, ಎಚ್.ಎಸ್.ದೊರೆಸ್ವಾಮಿ-ಹೀಗೆ. ಶತಾಯುಷ್ಯವು ಶಿಸ್ತಿನ ಜೀವನ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿ. ಆದರೆ ಈ ಹಿರಿಯರು ಕೊನೆಯತನಕ ಮನಸ್ಸನ್ನು ಆರೋಗ್ಯಕರವಾಗಿ ಇರಿಸಿಕೊಂಡಿದ್ದರೇ? ನಾಡಿನ ಆರೋಗ್ಯಕ್ಕೆ ಅವರ ಕ್ರಿಯಾಶೀಲತೆ ಮತ್ತು ಚಿಂತನೆಯ ಕೊಡುಗೆ ಏನು ಎಂಬ ಪ್ರಶ್ನೆ ಹಾಕಿಕೊಂಡರೆ, ಕೆಲವೊಮ್ಮೆ ದುಗುಡವಾಗುತ್ತದೆ. ಕಾರಣ, ಬಾಳಿನ ಕೊನೆಯ ದಿನಗಳಲ್ಲಿ ವಿಷದ ಚಿಂತನೆಗಳ ಜತೆ ತಮ್ಮನ್ನು ಜೋಡಿಸಿಕೊಂಡವರು ಇದ್ದಾರೆ. ವಯಸ್ಸು ಹೆಚ್ಚಾದಂತೆ, ಯಾರಾದರೂ ಉಪಯೋಗಿಸುವ ಆಯುಧವಾಗುವ ಹಿರಿಯರೂ ಉಂಟು. ಆದರೆ ಕೆಲವರು ಹಾಗಲ್ಲ. ತಮ್ಮ ಲೋಕದೃಷ್ಟಿಯನ್ನು ಕಡೆತನಕ ನಿಚ್ಚಳವಾಗಿ ಇರಿಸಿಕೊಂಡಿರುತ್ತಾರೆ. ಮೂರ್ತಿರಾಯರನ್ನು ಅವರ ಶತಮಾನದ ಹೊಸಿಲಲ್ಲಿರುವಾಗ ನಾನು ಸಂದರ್ಶನ ಮಾಡಿದೆ. ವಿಸ್ಮಯವಾಯಿತು. ಅವರ ವೈಚಾರಿಕ ಧೀಮಂತಿಕೆ, ಪ್ರಖರತೆ ಹಾಗೆಯೇ ಉಳಿದಿದ್ದವು. ಈ ಮಾತನ್ನು ಪಾಟೀಲ ಪುಟ್ಟಪ್ಪನವರಿಗೂ ಹೇಳಬಹುದು.

ಒಂದು ಶತಮಾನದ ಬಾಳುವೆಯಲ್ಲಿ ಪುಟ್ಟಪ್ಪನವರು ಪತ್ರಕರ್ತರಾಗಿ ಆಕ್ಟಿವಿಸ್ಟಾಗಿ ಕನ್ನಡ ಕರ್ನಾಟಕವನ್ನು ಹಲವು ಬಗೆಯಲ್ಲಿ ಕಟ್ಟುವ ಕೆಲಸ ಮಾಡಿದರು. ಅವರ ವ್ಯಕ್ತಿತ್ವದಲ್ಲಿ ಪತ್ರಿಕಾಪ್ರಜ್ಞೆ, ರಾಜಕೀಯ ಪ್ರಜ್ಞೆಗಳಿದ್ದವು. ಕರ್ನಾಟಕ ಪ್ರಜ್ಞೆ, ವೈಚಾರಿಕ ಪ್ರಜ್ಞೆಗಳಿದ್ದವು. ಜಾತ್ಯತೀತ ಪ್ರಜ್ಞೆ ಮತ್ತು ಹಾಸ್ಯಪ್ರಜ್ಞೆಗಳಿದ್ದವು.

ಪುಟ್ಟಪ್ಪನವರು ಅಷ್ಟೇನು ಪ್ರಭಾವಶಾಲಿಯಲ್ಲದ ಹಲವಾರು ಪತ್ರಿಕೆ ನಡೆಸಿದವರು. ಆದರೆ ಅವು ಅವರ ವಿಚಾರಗಳ ವಾಹಕವಾಗಿದ್ದವು. ಕನ್ನಡಪ್ರಜ್ಞೆಯ ಪ್ರತೀಕವಾಗಿದ್ದ ಅವರ ಪತ್ರಿಕೆಗಳ ಹೆಸರು `ಪ್ರಪಂಚ’ `ವಿಶ್ವವಾಣಿ’. ಇದು ಕನ್ನಡತನವನ್ನು ವಿಶ್ವಾತ್ಮಕತೆ ಚೌಕಟ್ಟಿನಲ್ಲಿಟ್ಟು ನೋಡುವ ಅವರ ದೃಷ್ಟಿಯ ಸಂಕೇತಗಳಿರಬಹುದು. ಅವರಿಗೆ ಜಗತ್ತಿನ ಚರಿತ್ರೆ ಗೊತ್ತಿತ್ತು. ಅವರಷ್ಟು ಚಾರಿತ್ರಿಕ ಪ್ರಜ್ಞೆಯುಳ್ಳ ಸಂಪಾದಕರು ನಮ್ಮಲ್ಲಿ ಕಡಿಮೆ. ಕರ್ನಾಟಕದ ವಿಷಯದಲ್ಲಿ ಅಪಾರ ತಿಳಿವಳಿಕೆಯಿದ್ದ ಇನ್ನೊಬ್ಬ ಸಂಪಾದಕರೆಂದರೆ ರಘುರಾಮ ಶೆಟ್ಟರು. ಇವರಿಬ್ಬರೂ ನೆನಪಿನಿಂದಲೇ ಕರ್ನಾಟಕದ ರೈಲ್ವೆಹಾದಿಯ ಉದ್ದ, ರಸ್ತೆಗಳು, ಬಜೆಟ್ಟಿನ ಮೊತ್ತ ಇತ್ಯಾದಿಯನ್ನು ಉಲ್ಲೇಖಿಸಿ ಬರೆಯಬಲ್ಲವರಾಗಿದ್ದರು. ಇಷ್ಟಾಗಿ ಪುಟ್ಟಪ್ಪನವರಿಗೆ ತಮಗೆ ಸಾಹಿತ್ಯಲೋಕವು ಬರೆಹಗಾರರಾಗಿ ಮನ್ನಿಸುತ್ತಿಲ್ಲವೆಂಬ ಬೇಸರವಿತ್ತು. ಲೇಖಕರಾಗಿ ಅವರು ಬಹಳ ದೊಡ್ಡ ಬರೆಹಮಾಡಿದವರಲ್ಲ. ಆದರೆ ಜನರಲ್ಲಿ ತಿಳಿವಳಿಕೆ ಕೊಡುವ ಪ್ರಜ್ಞೆ ಮೂಡಿಸುವ ಉಪಯುಕ್ತವಾದ ಬರೆಹವನ್ನು ಮಾಡಿದರು.

ಪುಟ್ಟಪ್ಪನವರು ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು ಸಂಸತ್ತಿನಲ್ಲಿ ಏನು ಮಾತಾಡಿದರು ಎಂಬುದನ್ನು ಯಾರಾದರೂ ಶೋಧಿಸಬೇಕಿದೆ. ಪುಟ್ಟಪ್ಪನವರಿಗೆ ಇಂಗ್ಲಿಷಿನ ಮೇಲೆ ಹಿಡಿತ ಚೆನ್ನಾಗಿತ್ತು. ಅದರ ಮೂಲಕ ಅವರು ತಮ್ಮಕಾಲದ ಅನೇಕ ರಾಜಕಾರಣಿಗಳ ಜತೆ ಸಂಪರ್ಕ ಸಾಧಿಸಿದ್ದರು. ಇಂದಿರಾ ಒಳಗೊಂಡಂತೆ ಬಹಳಷ್ಟು ರಾಜಕಾರಣಿಗಳ ಜತೆ ಅವರಿಗೆ ನಂಟಿತ್ತು. ಇಂದಿರಾ ಪ್ರಿಯರಾದ ಅವರು ಇಂದಿರಾರ ಫೋಟೊವನ್ನು `ಪ್ರಪಂಚ’ ಪತ್ರಿಕೆಯ ಮುಖಪುಟದಲ್ಲಿ ಅಚ್ಚುಹಾಕುತ್ತಿದ್ದರು. ಆದರೆ ಅವರಲ್ಲಿ ಯುದ್ಧತಂತ್ರವುಳ್ಳ ರಾಜಕಾರಣಿಯ ವ್ಯಕ್ತಿತ್ವ ಇರಲಿಲ್ಲ. ಅವರೊಬ್ಬ ವ್ಯಗ್ರಗೊಂಡ ಪತ್ರಕರ್ತರಾಗೇ ಕಾಣುತ್ತಿದ್ದರು. ಅವರ ರಾಜಕೀಯ ವಿಶ್ಲೇಷಣೆಯಲ್ಲಾದರೂ ಕರಾರುವಾಕ್ಕಾದ ಮಾಹಿತಿ ಇರುತ್ತಿತ್ತೇ ಹೊರತು, ಆಳವಾದ ರಾಜಕೀಯ ತತ್ವಶಾಸ್ತ್ರವಲ್ಲ.

ಪಾಫು ಜೊತೆ ರಹಮತ್ ತರೀಕೆರೆ

ಪುಟ್ಟಪ್ಪನವರು ಮೂಲತಃ ಒಬ್ಬ ಕನ್ನಡ ಆಕ್ಟಿವಿಸ್ಟ್. ಅವರ ಬರೆಹ ಮತ್ತು ಮಾತಿನಲ್ಲಿ ಅತಿಹೆಚ್ಚು ಬಳಕೆಯಾಗಿರುವ ಶಬ್ದಗಳು ಕನ್ನಡ ಮತ್ತು ಕರ್ನಾಟಕ. `ನಮ್ಮ ದೇಶ ನಮ್ಮಜನ’ `ನನ್ನದು ಈ ಕನ್ನಡ ನಾಡು’ `ಕರ್ನಾಟಕದ ಕಥೆ’ ಇತ್ಯಾದಿ ಅವರ ಕೃತಿಗಳ ಹೆಸರಲ್ಲೂ ಇದನ್ನು ಕಾಣಬಹುದು. ಅವರೊಬ್ಬ ಕರ್ನಾಟಕ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಿದ್ದ ಚಿಂತಕರಾಗಿದ್ದರು. ಅವರ ನಾಡಪ್ರಜ್ಞೆ ಕೇವಲ ಅಧ್ಯಯನದಿಂದ ಬಂದಿದ್ದಲ್ಲ. ಏಕೀಕರಣ ಮತ್ತು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ ಅನುಭವದಿಂದ ಬಂದಿದ್ದು. ಬಸವಣ್ಣ, ಬೇಂದ್ರೆ, ಬಿಎಂಶ್ರೀ, ರಾಹ.ದೇಶಪಾಂಡೆ, ಶಂಬಾ ಜೋಶಿ, ಆಲೂರು ವೆಂಕಟರಾವ್, ಬೇಂದ್ರೆ, ಅನಕೃ, ಕುವೆಂಪು ಮುಂತಾದವರ ಚಿಂತನೆಯಿಂದ ರೂಪುಗೊಂಡಿದ್ದು; ತೋಂಟದಾರ್ಯ ಸ್ವಾಮಿ, ರಾಜಕುಮಾರ್, ಚಂಪಾ, ಚನ್ನವೀರ ಕಣವಿ, ಕಲಬುರ್ಗಿ ಅವರೊಡಗೂಡಿ ಮಾಡಿದ ಕನ್ನಡ ಚಳವಳಿಯಿಂದ ರೂಪುಗೊಂಡಿದ್ದು. ಮಹಾರಾಷ್ಟ್ರದಲ್ಲಿರುವ ಕನ್ನಡದ ಊರುಗಳ ಪಟ್ಟಿ, ಮರಾಠಿಯಲ್ಲಿರುವ ಕನ್ನಡ ಶಬ್ದಗಳ ಪಟ್ಟಿ ಅವರ ತುಟಿಗಳ ತುದಿಯಲ್ಲಿತ್ತು. ಬೆಳಗಾವಿ ಗಡಿಸಮಸ್ಯೆಯಲ್ಲಿ ಅವರು ಮಾತಾಡಿದರೆ ಅದು ಕೊನೆಯ ಮಾತಾಗಿರುತ್ತಿತ್ತು. ಅವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದಾಗ ಅವರ ಕನ್ನಡಪ್ರಜ್ಞೆಗೆ ಆಡಳಿತಾತ್ಮಕ ಅವಕಾಶವೂ ಸಿಕ್ಕಿತು.

ಪುಟ್ಟಪ್ಪನವರ ಕರ್ನಾಟಕತ್ವದ ಪ್ರಜ್ಞೆಯು ಮೊದಲ ಘಟ್ಟದಲ್ಲಿ ಮಹಾರಾಷ್ಟ್ರದ ಭಾಷಾ ದುರಭಿಮಾನಿಗಳೊಡನೆ ಸಂಘರ್ಷದಿಂದ ರೂಪುಗೊಂಡಿತು. ಏಕೀಕರಣದ ಬಳಿಕ ಅದು ಬೆಂಗಳೂರಲ್ಲಿ ಕೇಂದ್ರಿಕರಣಗೊಂಡ ಅಧಿಕಾರ ವ್ಯವಸ್ಥೆಯ ಜತೆಗಿನ ಸಂಘರ್ಷಗಳೊಂದಿಗೆ ರೂಪುಗೊಂಡಿತು. ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುವುದನ್ನು ಸದಾ ವಿರೋಧಿಸುತ್ತಿದ್ದರು. ತಮ್ಮ ಅನುಭವ ಜ್ಞಾನ ಮತ್ತು ಚಳವಳಿಗಾರಿಕೆ ಬಲದಿಂದ ರಾಜಕಾರಣಿಗಳನ್ನು ಗದರಿಸಿ ಮಾತಾಡಬಲ್ಲವರಾಗಿದ್ದರು. ಉತ್ತರ ಕರ್ನಾಟಕದ ಅನೇಕ ಲೇಖಕರಂತೆ ಅವರು ಬೆಂಗಳೂರಿಗೆ ತಮ್ಮ ಆವಾಸವನ್ನು ಬದಲಿಸಲಿಲ್ಲ. ಹುಬ್ಬಳ್ಳಿ ಧಾರವಾಡಗಳಲ್ಲಿ ನೆಲೆನಿಂತಿದ್ದೇ ಅವರ ಶಕ್ತಿಯ ಗುಟ್ಟಾಗಿತ್ತು. ಅವರೊಮ್ಮೆ ನಾನು ಅಧ್ಯಕ್ಷನಾಗಿದ್ದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲು ಬಂದಿದ್ದರು. ಅವರ ಕೊರಳಿಗೆ ಕೆಂಪುಹಳದಿ ಬಣ್ಣದ ಕನ್ನಡ ಬಾವುಟದ ಶಾಲನ್ನು ಹಾಕಿ ಸ್ವಾಗತಿಸಲಾಯಿತು. ಕೂಡಲೇ ಅವರು `ನನ್ನ ಕೊಳ್ಳಿಗೆ ಈ ಹಾವನ್ನು ಹಾಕಬೇಡಿ’ ಎಂದವರೇ,ಅದನ್ನು ಕಿತ್ತು ಉಂಡೆಮಾಡಿ ನೆಲಕ್ಕೆ ಒಗೆದರು. ಬೆಂಗಳೂರಿನ ಕನ್ನಡ ಕಾರ್ಯಕರ್ತರು ಕರ್ನಾಟಕದ ಬೇರೆ ಪ್ರಾಂತ್ಯದವರನ್ನು ಕೇಳದೆ ರೂಪಿಸಿದ ಧ್ವಜವಿದು ಎಂಬುದು ಅವರ ಕೋಪಕ್ಕೆ ಕಾರಣ. ಗಂಗಾವತಿ ಸಾಹಿತ್ಯ ಸಮ್ಮೇಳನದಲ್ಲಿ ಸಿಪಿಕೆಯುವರು ನಾನು ಬಿಜಾಪುರವನ್ನು ಇನ್ನೂ ನೋಡಿಲ್ಲ ಎಂದು ಹೇಳಿದ್ದನ್ನು ಕೇಳಿ, ಅವರು ಮೈಸೂರಿನವರ ಕರ್ನಾಟಕ ಪ್ರಜ್ಞೆಯ ಸಂಕುಚಿತನವನ್ನು ಕಟುವಾಗಿ ಟೀಕಿಸಿದರು.

ಪುಟ್ಟಪ್ಪನವರು ಪ್ರಖರ ವಿಚಾರವಾದಿಗಳಾಗಿದ್ದರು. ತಾವು ನಂಬಿದ ತತ್ವಗಳ ವಿಷಯದಲ್ಲಿ ಕಡೆತನಕವೂ ನಿಷ್ಠುರತೆ ಉಳಿಸಿಕೊಂಡಿದ್ದರು. ಅವರಲ್ಲಿ ಬಸವಪ್ರಜ್ಞೆ ಬಲವಾಗಿತ್ತು. ಅದರ ಬಲದಿಂದ ಲಿಂಗಾಯತ ಸ್ವಾಮಿಗಳನ್ನು ಸಹ ಟೀಕಿಸಿ ಮಾತಾಡಬಲ್ಲವರಾಗಿದ್ದರು. ಅವರು ಕರ್ನಾಟಕದ ರಸೆಲ್ ಇದ್ದಂತೆ. ಸಾರ್ವಜನಿಕ ಬದುಕಿನಲ್ಲಿರುವ ಮೌಢ್ಯಗಳನ್ನು ಗೇಲಿ ಮಾಡುತ್ತಿದ್ದರು. ಕೋಮುವಾದವನ್ನು ಬಿಢೆಯಿಲ್ಲದೆ ಟೀಕಿಸುತ್ತಿದ್ದರು. ಹಾಗೆ ಟೀಕಿಸಿ ಬದುಕಬಲ್ಲ ಛಾತಿಯೂ ಅವರಿಗಿತ್ತು. ಅವರ ವಿರುದ್ಧ ಮಾತಾಡಲು ಮತೀಯವಾದಿಗಳು ಅಂಜುತಿದ್ದರು. ಅವರಿಗೆ ಬಸವಪ್ರಶಸ್ತಿ ಬಂದಿದ್ದು ಬಹಳ ತಡವಾಗಿತ್ತು. ಅದನ್ನು ಸ್ವೀಕರಿಸಲು ನಿರಾಕರಿಸುವವರಂತೆ ಅವರು ಸ್ವೀಕಾರ ಕಾರ್ಯಕ್ರಮದ ಎರಡು ದಿನ ಮುಂಚೆಯೇ ನಿರ್ಗಮಿಸಿದರು

ಕರ್ನಾಟಕದಲ್ಲಿ ಅತಿಹೆಚ್ಚಿನ ಭಾಷಣಗಳನ್ನು ಮಾಡಿದವರಲ್ಲಿ ಪಾಟೀಲ ಪುಟ್ಟಪ್ಪನವರೂ ಒಬ್ಬರು. ಕುಪ್ಪಳ್ಳಿಯ ಪುಟ್ಟಪ್ಪನವರು ಭಾಷಣ ಮಾಡಲು ಹಿಂಜರಿಯುತ್ತಿದ್ದರೆ, ಈ ಪುಟ್ಟಪ್ಪನವರು ಸ್ವಾರಸ್ಯಕರವಾಗಿ ಗಂಟೆಗಟ್ಟಲೆ ಭಾಷಣ ಮಾಡಬಲ್ಲವರಾಗಿದ್ದರು. ಅವರ ನೆನಪಿನ ಶಕ್ತಿ ಅಗಾಧ. ನೆನಪಿನ ಗಣಿಯಿಂದ ವ್ಯಕ್ತಿಯ ಸ್ಥಳ ದಿನಾಂಕ ಸಮೇತ ಅವರು ತಮ್ಮ ಭಾಷಣದಲ್ಲಿ ಘಟನೆಗಳ ಉಲ್ಲೇಖ ಮಾಡುತ್ತಿದ್ದರು. ಮೊದಲ ಸಲ ಕೇಳುವವರಿಗೆ ಹೊಸತು ಅನಿಸುತ್ತಿತ್ತು. ಆದರೆ ಅವರು ಹಳೆಯ ಸರಕನ್ನು ಪುನರುಕ್ತಿ ಮಾಡುತ್ತಿದ್ದಾರೆ ಎಂದು ಎರಡನೇ ಸಲ ತಿಳಿಯುತ್ತಿತ್ತು. ಕೆಲವೊಮ್ಮೆ ಸಮಯಪ್ರಜ್ಞೆಯಿಲ್ಲದೆ ಅವರು ಮಾತಾಡುತ್ತಿದ್ದರು. ನಡುವೆ ನಿಲ್ಲಿಸಲು ಚೀಟಿಕೊಟ್ಟರೆ ಸಿಡಿಮಿಡಿ ಮಾಡುತ್ತಿದ್ದರು. ಅತಿಯಾದ ಸಭಾಕಾರ್ಯಕ್ರಮಗಳು ಅವರ ಚಿಂತನಶೀಲತೆ ಅಂತರ್ಮುಖತೆಗಳನ್ನು ಕಳೆದಿದ್ದವು. ನೆನಪುಗಳ ಒಜ್ಜೆಯು ಹೊಸ ಚಿಂತನೆ ಕುಡಿಯೊಡೆಯಂತೆ ತಡೆದಿತ್ತು. ಕೆಲವೊಮ್ಮೆ ಬರೆಹ ಮತ್ತು ಭಾಷಣದಲ್ಲಿ ಅವರು ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳು, ಸಭಾಮರ್ಯಾದೆಗೂ ಸನ್ನಿವೇಶದ ಗಂಭೀರತೆಗೂ ವ್ಯತಿರಿಕ್ತವಾಗಿದ್ದವು. ಅತಿಯಾದ ಮಾತಿನಿಂದ ಅವರು ದಣಿದಿದ್ದರು. ಜನರನ್ನೂ ದಣಿಸಿದ್ದರು. ಮೌನವಿಲ್ಲದ ಅತಿಯಾದ ಮಾತು ಬರೆಹಗಳ ಸಮಸ್ಯೆಯಿದು.

ವೈಯಕ್ತಿಕವಾಗಿ ನಾನು ಪುಟ್ಟಪ್ಪನವರ ಸಂಪರ್ಕಕ್ಕೆ ಬಂದಿದ್ದು ವಿಚಿತ್ರ ಪ್ರಕರಣದ ಮೂಲಕ. ಅವರು ಜನಪ್ರಿಯ ವಾರಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದರು. ಒಮ್ಮೆ `ಇಂಗ್ಲಿಷಿನ ದುರವಸ್ಥೆ’ ಎಂಬ ಅಂಕಣವನ್ನು ಓದಿದೆ. ಅದರಲ್ಲಿ ಇಂಗ್ಲಿಷನ್ನು ತಪ್ಪಾಗಿ ಮಾತಾಡುವ ಹಲವಾರು ಪ್ರಕರಣಗಳನ್ನು ಉಲ್ಲೇಖಿಸಿ, ಅವರನ್ನು ಗೇಲಿ ಮಾಡಲಾಗಿತ್ತು. ನಾನು ಹೀಗೆ ಗೇಲಿಮಾಡುವ ಮನಸ್ಸು ಕನ್ನಡದ್ದಾಗಿರಲು ಸಾಧ್ಯವಿಲ್ಲ. ಇಂಗ್ಲಿಷಿನ ಮಾನಸಿಕ ಗುಲಾಮಗಿರಿಯನ್ನು ಬಯಸುವಂಥದ್ದು ಎಂದು ಕಟುವಾಗಿ ಬರೆದೆ. ಅವರು ನನ್ನನ್ನು ಕಾರ್ಯಕ್ರಮವೊಂದರಲ್ಲಿ ಕಂಡು ಪ್ರತ್ಯೇಕ ಕರೆಸಿಕೊಂಡರು. ತಮ್ಮ ಲೇಖನದಲ್ಲಿ ನಾನು ತೋರಿಸಿದ ಅಸೂಕ್ಷ್ಮತೆ ಇದೆಯೆಂದು ಒಪ್ಪಿಕೊಂಡರು. ದೊಡ್ಡವರಾದ ಅವರ ಈ ನಡೆ ನನಗೆ ಸೋಜಿಗ ಹುಟ್ಟಿಸಿತು.

ಪುಟ್ಟಪ್ಪನವರು ತುಂಬುಬಾಳನ್ನು ಬಾಳಿದ್ದಾರೆ; ಕನ್ನಡ ಕರ್ನಾಟಕಕ್ಕೆ ತಮ್ಮ ಬಾಳನ್ನು ಸವೆಸಿ ನಿರ್ಗಮಿಸಿದ್ದಾರೆ. ಅವರಿಗೆ ನಮಸ್ಕಾರಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...