Homeಮುಖಪುಟಕೊರೊನ ವಿರುದ್ಧ ಜಾಗತಿಕ ಹೋರಾಟದಲ್ಲಿ ದೇಶ ವಿದೇಶಗಳ ಕಾರ್ಯಾಚರಣೆಯ ಅವಲೋಕನ

ಕೊರೊನ ವಿರುದ್ಧ ಜಾಗತಿಕ ಹೋರಾಟದಲ್ಲಿ ದೇಶ ವಿದೇಶಗಳ ಕಾರ್ಯಾಚರಣೆಯ ಅವಲೋಕನ

- Advertisement -
- Advertisement -

ಕೊರೊನ ಸಾಂಕ್ರಾಮಿಕ ಇಡೀ ವಿಶ್ವದ ಮೇಲೆ ತನ್ನ ಹಿಡಿತ ಸಾಧಿಸಿದೆ. ಈ ವೈರಸ್ ಮೊದಲು ಕಾಣಿಸಿಕೊಂಡ ಚೈನಾದ ಹುಬೆ ಪ್ರಾಂತ್ಯದಲ್ಲಿ ಸಾಂಕ್ರಾಮಿಕ ತಹಬದಿಗೆ ಬಂದಿದೆ ಎಂಬ ವರದಿಗಳು ಬರುತ್ತಿದ್ದ ಸಮಯದಲ್ಲಿಯೇ, ಇಟಲಿ, ಅಮೇರಿಕಾ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇಟಲಿ ಇರಾನ್ ದೇಶಗಳಲ್ಲಿ ಇದು ವೇಗವಾಗಿ ಜನರನ್ನು ಬಲಿ ಪಡೆಯುತ್ತಿದೆ. ಕೆಲವು ವರ್ಷಗಳ ಹಿಂದೆ ಸಾರ್ಸ್ ಎಂಬ ಶ್ವಾಸಕೋಶ ಸಂಬಂಧಿ (ಕೊರೊನ ಸಂಬಂಧಿ ವೈರಸ್ ನಿಂದಲೇ ಹರಡುವ ಸಾಂಕ್ರಾಮಿಕ ಇದು) ರೋಗ ಹರಡಿದ್ದ ಬಹುತೇಕ ದೇಶಗಳು ಕೊರೊನ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸನ್ನದ್ಧವಾಗಿದ್ದವು. ಕೆಲವು ವಾರಗಳ ಕಾಲ ಭಾರತ ಕೂಡ ಮೈಮರೆತಂತೆ ಇತ್ತು. ಈಗ ಸಾಂಕ್ರಾಮಿಕ ಮೂರನೇ ಹಂತಕ್ಕೆ ಕಾಲಿಡುತ್ತಿದೆ ಎಂಬ ಭೀತಿಯ ಹಿನ್ನಲೆಯಲ್ಲಿ ಕೆಲವು ರಾಜ್ಯಗಳು ಚುರುಕಾಗಿ, ಇನ್ನು ಕೆಲವು ರಾಜ್ಯಗಳು ಇನ್ನೂ ಅಷ್ಟು ಜಾಗೃತಗೊಳ್ಳದೆ ಒಲ್ಲದ ಮನಸ್ಸಿನಿಂದಲೇ ಕ್ರಮ ತೆಗೆದುಕೊಳ್ಳುತ್ತಿವೆ.

ಕೊರೊನ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವುದಕ್ಕೆ ಜಾಗತೀಕರಣವನ್ನು ದೂರುವುದು ಸರಿಯಲ್ಲ ಎನ್ನುವ ಇಸ್ರೇಲಿನ ಇತಿಹಾಸದ ಪ್ರಾಧ್ಯಾಪಕ ಮತ್ತು ಚಿಂತಕ ಯುವಲ್ ನೋವಾ ಹರಾರಿ, ಇಂತಹ ಜಾಗತಿಕ ಬಿಕ್ಕಟ್ಟಿನಲ್ಲಿ ಜಾಗತೀಕರಣವನ್ನು ದೂರುವುದು ಅಥವಾ ದೇಶ ದೇಶಗಳ ಗಡಿಗಳನ್ನು ಮುಚ್ಚಿಕೊಳ್ಳುವುದು ಪರಿಹಾರ ಅಲ್ಲ ಎನ್ನುತ್ತಾರೆ. ಏರೋಪ್ಲೇನ್, ಹಡಗುಗಳು ಇಲ್ಲದ 14ನೆಯ ಶತಮಾನದಲ್ಲಿಯೇ ಒಂದು ದಶಕದಲ್ಲಿ ಪೂರ್ವ ಏಶಿಯಾ ಮತ್ತು ಯೂರೋಪ್‌ಗೆ ಹರಡಿದ್ದ ಬ್ಲಾಕ್ ಡೆತ್ ಎಂಬ ರೋಗ, ಆ ಭಾಗಗಳಲ್ಲಿ ನೆಲೆಸಿದ್ದ ಸುಮಾರು ಕಾಲು ಭಾಗ ಜನಸಂಖ್ಯೆಯನ್ನು (75 ದಶಲಕ್ಷದಿಂದ 200 ದಶಲಕ್ಷ) ಕೊಂದಿತ್ತು ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ.

1520ರ ಮಹಾಮಾರಿ ಸ್ಮಾಲ್ ಪಾಕ್ಸ್ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕೊಂದಿತ್ತು. ಸಂಪರ್ಕ ಮಾರ್ಗಗಳು ಇವತ್ತಿನಷ್ಟು ವ್ಯಾಪಕವಾಗಿ ಇರದಿದ್ದ 1918 ರಲ್ಲಿ ಸ್ಪಾನಿಶ್ ಜ್ವರ ಭಾರತದ 5% ಜನರನ್ನು ಆಹುತಿ ತೆಗೆದುಕೊಂಡಿತ್ತು. ಆದುದರಿಂದ ದೇಶ ದೇಶಗಳ ನಡುವೆ ದೀರ್ಘ ಸಂಚಾರ ಇರದ ಶಿಲಾಯುಗಕ್ಕೆ ನಾವು ಹಿಂದಿರುಗುವುದಕ್ಕೆ ಸಾಧ್ಯವಿಲ್ಲದೆ ಇರುವುದರಿಂದ ಗಡಿಗಳನ್ನು ಮುಚ್ಚುವ ಕ್ರಮಕ್ಕಿಂತ ದೇಶಗಳ ಪರಸ್ಪರ ಸಹಕಾರ, ವೈಜ್ಞಾನಿಕ ಸಂಶೋಧನೆಯ ಮಾಹಿತಿ ವಿನಿಮಯ, ಅನ್ಯ ದೇಶಗಳ ಆರ್ಥಿಕತೆಯ ಮೇಲೆ ಬೀಳುವ ಪೆಟ್ಟಿನ ಹೊರೆಯನ್ನು ಇಳಿಸುವ ಉಪಕಾರ ಬುದ್ಧಿ ಹೆಚ್ಚು ಅವಶ್ಯಕ ಎನ್ನುತ್ತಾರೆ. ಹಿಂದಿನ ಮಹಾಮಾರಿಗಳನ್ನು ನಾವು ಗೆದ್ದಿದ್ದೂ ವೈಜ್ಞಾನಿಕ ಸಂಶೋಧನೆಯಿಂದ ಮತ್ತು ಅದನ್ನು ಎಲ್ಲರೊಂದಿಗೆ ಹಂಚಿಕೊಂಡ ಕ್ರಮದಿಂದ ಎಂದು ತಿಳಿಸುವ ಅವರು ಈ ಬಿಕ್ಕಟ್ಟಿನಲ್ಲಿ ವಿಶ್ವಕ್ಕೆ ಮಾದರಿಯಾಗಬಲ್ಲ, ದಾರಿ ತೋರಿಸಬಲ್ಲ ನಂಬಿಕಸ್ಥ ಮುಖಂಡನ (ದೇಶ – ದೇಶಗಳ ಒಕ್ಕೂಟ) ಅವಶ್ಯಕತೆ ಇದೆ ಎನ್ನುತ್ತಾರೆ.

ಕೊರೊನ ಸಾಂಕ್ರಾಮಿಕ ಇನ್ನೂ ಆರಂಭಿಕ ಹಂತದಲ್ಲಿ ಇರುವಾಗ ಜಗತ್ತಿನಲ್ಲಿ “ನಾವೇ ಮೊದಲು” ಎಂದು ಹೇಳಿಕೊಳ್ಳುವ ಅಮೇರಿಕಾ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವುದೇ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳದೆ ಉಡಾಫೆ ಮಾತುಗಳನ್ನಾಡುತ್ತಾ ಕಾಲ ಕಳೆದರು. ಇವತ್ತು ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿಯೇ ವಿಶ್ವದ ಒಟ್ಟು ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಶೇಕಡಾ 5 ಪ್ರಕರಣಗಳು (ಮಾರ್ಚ್ 22ರ ದಿನಕ್ಕೆ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು) ಇವೆ. ಅಲ್ಲಿ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ನೆರವು ಸಿಗದೇ ತೀವ್ರ ಒತ್ತಡದಲ್ಲಿ ಇರುವ ವರದಿಗಳು ಬರುತ್ತಿವೆ. ಬಹುಷಃ ಚೈನಾದಲ್ಲಿ ಸುಮಾರು ಎರಡು ತಿಂಗಳುಗಳಿಂದ ತೆಗೆದುಕೊಂಡ ಕ್ರಮಗಳ ಬಗ್ಗೆ, ಅಲ್ಲಿ ವೈದ್ಯಕೀಯ ಸಿಬ್ಬಂದಿ ರೂಪಿಸಿದ್ದ ಪ್ರೋಟೋಕಾಲ್ ಗಳ ಬಗ್ಗೆ ಪರಸ್ಪರ ಈ ಎರಡು ದೇಶಗಳು ಮಾತನಾಡಿಕೊಂಡಿದ್ದರೆ ಅಮೆರಿಕಾದಲ್ಲಿ ಸೋಂಕು ಈ ಪರಿ ರೋಸಿಸುತ್ತಿರಲಿಲ್ಲವೇನೋ!

ಚೈನಾದಲ್ಲಿ ಸೋಂಕು ಪ್ರಾರಂಭವಾದಾಗ ಈ ರೋಗದ ಬಗ್ಗೆ ಮಾಹಿತಿಯನ್ನು ತಡೆದಿಟ್ಟಿದ್ದೂ ಕೂಡ ಇದರ ಬಗ್ಗೆ ಹೆಚ್ಚು ಸಂಶೋಧನೆ ಮಾಡಲು ಸಾಧ್ಯವಾಗದೆ, ಈ ವೈರಸ್ಸಿನ ಲಕ್ಷಣಗಳನ್ನು ತಿಳಿದುಕೊಳ್ಳುವುದಕ್ಕೆ ಹಿನ್ನಡೆಯಾಗಿರುವ ಸಾಧ್ಯತೆ ಹೆಚ್ಚಿದೆ. ಯಾವುದೇ ಸಾಂಕ್ರಾಮಿಕಗಳ ಸಮಯದಲ್ಲಿ ದೇಶಗಳು ಸರ್ಕಾರಗಳು ಮತ್ತು ಸಾರ್ವಜನಿಕರು ಸಂಪೂರ್ಣ ಪಾರದರ್ಶಕತೆಯನ್ನು ಮೆರೆಯುವುದು ಮುಖ್ಯ. ಈ ಹೊಸ ರೋಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ ವುಹಾನ್ ಪ್ರಾಂತ್ಯದ ವೈದ್ಯರ ವಿರುದ್ಧ ಅಲ್ಲಿನ ಪೊಲೀಸರು ಶಿಸ್ತು ಕ್ರಮ ತೆಗೆದುಕೊಂಡಿದ್ದರು. ಆ ವೈದ್ಯ ಕೋವಿದ್-2019 ಸೋಂಕಿಗೆ ಬಲಿಯಾಗಿದ್ದರು.

ವೈದ್ಯ ಲೀ ವೆನ್‌ಲಿಂಗ್‌

ಇತ್ತೀಚೆಗಷ್ಟೇ ಚೈನಾ ಸರ್ಕಾರ ತನ್ನ ತಪ್ಪು ಒಪ್ಪಿಕೊಂಡು ಆ ವೈದ್ಯರ ಕುಟುಂಬದ ಕ್ಷಮೆ ಕೋರಿತ್ತು. ಚೈನಾದ ಆಡಳಿತ ಕಮ್ಯುನಿಸ್ಟ್ ಪಕ್ಷ ಅಮೆರಿಕಾದ ಜೊತೆಗೆ ನಡೆಸುವ ಶೀತಲ ಸಮರದ ಭಾಗವಾಗಿ ಮತ್ತು ಅಲ್ಲಿನ ಅಧ್ಯಕ್ಷರ ಇತ್ತೀಚಿನ ಕ್ರಮಗಳಿಂದ (ತಾನು ಬದುಕಿರುವವರೆಗೂ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಅನುವಾಗುವಂತೆ ಸಂವಿಧಾನ ಬದಲಿಸಿಕೊಂಡಿರುವ ಕ್ರಮ) ಇಡೀ ವಿಶ್ವವನ್ನೇ ಅಪನಂಬಿಕೆಯಿಂದ ನೋಡುತ್ತದೆ. ಕೊರೊನ ರೋಗದ ಬಗ್ಗೆ ಮಾಹಿತಿ ನೀಡಿದ ಎಷ್ಟೋ ವಿದೇಶಿ ಪತ್ರಕರ್ತರನ್ನು ಚೈನಾ ಹಿಂದಕ್ಕೆ ಕಳಿಸಿತ್ತು. ಇಂತಹ ಅಪನಂಬಿಕೆಗಳು, ಆರ್ಥಿಕ ಸಮರಗಳನ್ನು ಮೀರಿ ಹೋರಾಡುವ ಸಂದರ್ಭ ಇದು ಎಂದು ಎಲ್ಲ ದೇಶಗಳು ತಿಳಿಯಬೇಕಿದೆ.

ಚೈನಾದಲ್ಲಿ ಈಗ ಈ ಸಾಂಕ್ರಾಮಿಕ ಹರಡುವಿಕೆ ತಹಬದಿಗೆ ಬಂದಿದೆ ಎಂದು ತಿಳಿಯಲಾಗುತ್ತಿದೆ. ಇಲ್ಲಿಯವರೆಗೂ ಅತಿ ಹೆಚ್ಚು ಸೋಂಕು ಕಂಡಿದ್ದು ಇದೆ ದೇಶದಲ್ಲಿ. ಸುಮಾರು 80 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ, 70 ಸಾವಿರಕ್ಕೂ ಹೆಚ್ಚು ಜನ ಗುಣಮುಖರಾಗಿ, 3270 ಜನ ಮೃತಪಟ್ಟಿದ್ದಾರೆ. ಪ್ರಾದೇಶಿಕವಾಗಿ ಸೋಂಕು ಹರಡುತ್ತಿಲ್ಲ ಎಂದು ಚೈನಾ ತಿಳಿಸಿದೆ. ಚೀನಾದಲ್ಲಿ ಕಾಣಿಸಿಕೊಂಡ ಎಷ್ಟೋ ದಿನಗಳ ನಂತರ ಇಟಲಿಯಲ್ಲಿ (ಮೊದಲ ಸೋಂಕು ಜನವರಿ ಕೊನೆಯಲ್ಲಿ ಪತ್ತೆಯಾಗಿತ್ತು) ಕೊರೊನಾ ಕಾಣಿಸಿಕೊಂಡರೂ, ಮಾರ್ಚ್ 23ರ ಹೊತ್ತಿಗೆ, 60 ಸಾವಿರ ಜನಕ್ಕೆ ಸೋಂಕು ತಗಲಿ 5476 ಜನ ಮೃತಪಟ್ಟಿದ್ದಾರೆ. ಇಟಲಿ ಎಡವಿದ್ದು ಎಲ್ಲಿ ಎಂಬ ಪ್ರಶ್ನೆಗಳನ್ನು ತಜ್ಞರು ಕೇಳಿಕೊಳ್ಳುತ್ತಿದ್ದಾರೆ.

ಕೊರೊನ ಸೋಂಕು ಯೂರೋಪ್ ಮತ್ತು ಅಮೆರಿಕಾದಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭವಾದ ಮೇಲೆ, ಈ ಸೋಂಕು ಹರಡುವ ವ್ಯಾಪಕತೆಯನ್ನು ಮತ್ತು ವೇಗವನ್ನು ನಿಧಾನಿಸುವುದು ಅತಿ ಮುಖ್ಯ ಎಂಬುದು ಹಲವರ ಅಭಿಪ್ರಾಯವಾಗಿತ್ತು.

ಇದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನರು ಗುಂಪು ಸೇರುವ ಎಲ್ಲ ಸಭೆ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರುವುದು, ರೋಗಿಗಳ ಪ್ರತ್ಯೇಕತೆಗೆ ಮತ್ತು ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವುದು, ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಾಗುವ ಸಲಕರಣೆಗಳನ್ನು ಹೆಚ್ಚಿನ ಮಟ್ಟದಲ್ಲಿ ಶೇಖರಿಸಿಕೊಳ್ಳುವುದು ಮತ್ತು ಇಂತಹ ತೀವ್ರ ಕ್ರಮಗಳಿಂದ ಆರ್ಥಿಕತೆಗೆ ಹೊಡೆತ ಬಿದ್ದು ತೊಂದರೆಗೆ ಒಳಗಾಗುವ ಬಡವರು, ಮನೆಮಠ ಇಲ್ಲದವರ ದಿನನಿತ್ಯದ ಜೀವನಕ್ಕೆ ಪರಿಹಾರ ನೀಡುವ ಕ್ರಮಗಳು ಹೀಗೆ ದೇಶಗಳು ಚುರುಕಾಗಬೇಕಿತ್ತು. ಆದರೆ ಇದನ್ನು ಕಾರ್ಯಗತ ಮಾಡುವಲ್ಲಿ ಸಿಂಗಾಪೂರ್, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳನ್ನು ಬಿಟ್ಟರೆ ಬೇರೆ ದೇಶಗಳು ಸಫಲವಾಗಿದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ದಕ್ಷಿಣ ಕೊರಿಯಾದಲ್ಲಿ ಸೋಂಕು ತಗಲಿದವರಲ್ಲಿ ಮೃತರಾದವರ ಅನುಪಾತ ಸುಮಾರು 1.5%. ಒಟ್ಟಾರೆ ವಿಶ್ವದಾದ್ಯಂತ ಈ ಸಾವಿನ ಅನುಪಾತ ಸುಮಾರು 4.5 % ಇದೆ. ಇನ್ನು ಸಿಂಗಾಪುರ್ ನಲ್ಲಿ ಈ ಸೋಂಕು ಹರಡುವುದನ್ನೇ ವ್ಯಾಪಕಾಗಿ ಮಟ್ಟ ಹಾಕಿದ್ದು ಇಲ್ಲಿಯವರೆಗೂ 455 ಜನಕ್ಕೆ ಸೋಂಕು ತಗಲಿದ್ದರೆ, ಮೃತರ ಸಂಖ್ಯೆ 2. ರಷ್ಯಾ ಕೂಡ ಕೊರೊನ ಸೋಂಕು ಹರಡದಂತೆ ತೆಗೆದುಕೊಂಡಿರುವ ಕ್ರಮ ಫಲ ಕೊಟ್ಟಿತ್ತಿದೆ ಎನ್ನಲಾಗುತ್ತಿದೆ. ಚೈನಾ ಜೊತೆಗಿನ 2800 ಕಿಮೀ ಗಡಿಯನ್ನು ಮುಚ್ಚಿದ್ದು ಕೂಡ ಸೋಂಕು ವ್ಯಾಪಕವಾಗಿ ಹರಡದಂತೆ ತಡೆದಿದೆ ಎಂಬ ವರದಿಗಳು ಇದ್ದಾವಾದರೂ, ಆಂತರಿಕವಾಗಿ ಹೆಚ್ಚು ಹರಡದಂತೆ ತೆಗೆದುಕೊಂಡಿರುವ ಕ್ರಮಗಳು ಹೆಚ್ಚು ಮುಖ್ಯವಾಗಿ ಕಾಣುತ್ತವೆ.

ಭಾರತಕ್ಕೆ ಮೊದಲು ಕರೊನ ಸೋಂಕು ಆಗಮಿಸಿದ್ದು ಕೇರಳ ರಾಜ್ಯಕ್ಕೆ. ಈ ಮೊದಲೇ 2018ರಲ್ಲಿ  ಬಾವುಲಿಯಿಂದ  ಮನುಷ್ಯ ದೇಹಕ್ಕೆ ಹರಡಿದ್ದ ನಿಫಾ ವೈರಸ್ ಸಾಂಕ್ರಾಮಿಕವನ್ನು ಆರಂಭಿಕ ಹಂತದಲ್ಲಿಯೇ ನಿಗ್ರಹಿಸಿದ್ದ ಅನುಭವ ಕೇರಳ ರಾಜ್ಯಾಡಳಿತಕ್ಕೆ ಇತ್ತು. ಜನವರಿ 30 ರಿಂದ ಫೆಬ್ರವರಿ 3 ರೊಳಗೆ ಚೈನಾದಿಂದ ಆಗಮಿಸಿದ್ದವರಲ್ಲಿ ಮೂರು ಜನರಲ್ಲಿ ಕೋವಿದ್-2019 ವೈರಸ್ ಪತ್ತೆಯಾಗಿದ್ದ ಹಿನ್ನಲೆಯಲ್ಲಿ ಕೇರಳ ಸರ್ಕಾರದ ಆಡಳಿತ ಬಹಳ ಚುರುಕಾಗಿ ಮೂವರಿಗೂ ಯಶಸ್ವಿ ಚಿಕಿತ್ಸೆ ನೀಡಿ ಸಾಂಕ್ರಾಮಿಕ ಹರಡದಂತೆ ಎಚ್ಚರಿಕೆ ವಹಿಸಿತ್ತು. ಅಂದಿನಿಂದ ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸುವುದು, ಸೋಂಕು ಇರುವುವರನ್ನು ಪ್ರತ್ಯೇಕಗೊಳಿಸಿ ಅವರಿಗೆ ಚಿಕಿತ್ಸೆ ನೀಡುವುದು, ವಿದೇಶಿ ಪ್ರಯಾಣಕರಿಗೆ ಸೋಂಕಿನ ಲಕ್ಷಣ ಇಲ್ಲದೆ ಇದ್ದರೂ ಅವರು 14 ದಿನಗಳ ಕಾಲ ಪ್ರತ್ಯೇಕವಾಗಿ ಇರುವಂತೆ ನೋಡಿಕೊಳ್ಳಲು ಕ್ರಮ ತೆಗೆದುಕೊಳ್ಳುವುದು, ರೋಗಿಗಳು ಪ್ರಾದೇಶಿಕವಾಗಿ ಇತರರನ್ನು ಸಂಪರ್ಕಿಸಿದ್ದರೆ ಅವರ ಗುರುತು ಪತ್ತೆ ಹಚ್ಚಲು ಕಾರ್ಯಪಡೆ ರಚಿಸಿ ಕಾರ್ಯಸನ್ನದ್ಧವಾಗಿದ್ದು ಹೀಗೆ ಹಲವು ಕ್ರಮಗಳನ್ನು ತೆಗೆದುಕೊಂಡು ಸೋಂಕಿನ ಮೊದಲನೇ ಮತ್ತು ಎರಡನೇ ಹಂತದಲ್ಲಿಯೇ ಯಶಸ್ವಿಯಾಗಿತ್ತು. ಮಾರ್ಚ್ 23 ಕ್ಕೆ ಸುಮಾರು 52000 ಜನರನ್ನು ಕೇರಳ ಸರ್ಕಾರ ಪರಿವೀಕ್ಷಣೆಯಲ್ಲಿ ಇಟ್ಟಿದೆ. ಇದರಿಂದ ಎಲ್ಲಾ ರಾಜ್ಯಗಳು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇತ್ತು. ಆದರೆ ಸುಮಾರು ಒಂದು ತಿಂಗಳ ಸಮಯ ವ್ಯರ್ಥ ಮಾಡಿದ್ದು, ಮೂರನೇ ಹಂತದಲ್ಲಿ, ಸಾಂಕ್ರಾಮಿಕ ರೋಗ ತಡೆ ಕಾಯ್ದೆಯನ್ನು ಹಾಕಿ, ಜನರ ಮೇಲೆ ನಿರ್ಬಂಧ ಹೇರುವ ಪರಿಸ್ಥಿತಿಗೆ ಉಳಿದ ರಾಜ್ಯಗಳು ಬಂದು ನಿಂತಿವೆ.

ರಾಜ್ಯ ಸರ್ಕಾರಗಳ ಪಾಡು ಇದಾದರೆ, ಕೆಂದ್ರ ಸರ್ಕಾರದ ಕ್ರಮಗಳು ಯಾವುದೇ ಭರವಸೆ ನೀಡಿಲ್ಲ. ಆರಂಭದಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ಸಮಾರಂಭ ಮತ್ತು ವಿದೇಶಿ ಪ್ರವಾಸಗಳಿಂದ ದೂರ ಉಳಿದದ್ದು ಸಾಂಕೇತಿಕವಾಗಿ ಒಳ್ಳೆಯ ಸಂದೇಶವನ್ನು ಜನರಿಗೆ ಕಳುಹಿಸಿತೆ ಹೊರತು, ಕೊರೊನ ಹುಟ್ಟಿಸುವ ಆರ್ಥಿಕ ಸಂಕಷ್ಟದಲ್ಲಿ, ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆ ಯಾವುದೇ ಭರವಸೆಯನ್ನು ಜನತೆಗೆ ನೀಡಿಲ್ಲ. ಅಂದಂದಿನ ವ್ಯಾಪಾರ ವಹಿವಾಟಿನ ಮತ್ತು ಗಳಿಕೆಯ ಮೇಲೆ ಜೀವನ ನಡೆಸುವ ಕೆಳಮಧ್ಯಮ ಮತ್ತು ಬಡ ಜನರು, ಜೀವನೋಪಾಯಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ಮಾತುಗಳು ಇಲ್ಲ, ಯೋಜನೆಗಳು ಇಲ್ಲವೇ ಇಲ್ಲ.

ಮಾರ್ಚ್ 22 ಭಾನುವಾರ ಜನ ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಎಂಬ ಸಾಂಕೇತಿಕ ಕ್ರಮ ಮತ್ತು ಸಂಜೆ ಐದು ಘಂಟೆಗೆ ಚಪ್ಪಾಳೆ ಹೊಡೆದು ಗಂಟೆ ಜಾಗಟೆಗಳನ್ನು ಬಾರಿಸಿ ಎಂಬ ಜನಪ್ರಿಯ ಕರೆ ಮಿಶ್ರ ಯಶಸ್ಸು ಪಡೆದಿವೆ. ಜನ ಸ್ವಯಂಪ್ರೇರಿತ ಬಂದ್ ಮಾಡಿದ್ದನ್ನು ಅನುಸರಿಸಿ ಹಲವು ರಾಜ್ಯ ಸರ್ಕಾರಗಳು ಏಳೆಂಟು ದಿನಗಳ ಕಾಲ ಜನರು ಗುಂಪು ಸೇರದೆ ಇರಲು ಹಲವು ಗಂಭೀರ ಕ್ರಮಗಳನ್ನು ತೆಗೆದುಕೊಂಡಿವೆ ಮತ್ತು ನಿರ್ಬಂಧವನ್ನು ಹೇರಿವೆ. ಗಂಟೆ ಜಾಗಟೆ ಬಾರಿಸಿ ಎನ್ನುವ ಸಂದೇಶ ಅತ್ತ ಹಲವು ವೈರಲ್ ಫೇಕ್ ಸುದ್ದಿಗಳಿಗೆ ಅವಕಾಶ ಮಾಡಿಕೊಟ್ಟಿದ್ದು, ಶಬ್ದದಿಂದಲೇ ಕೊರೊನಾ ಓಡಿಸಬಹುದು ಎಂಬ ಅವೈಜ್ಞಾನಿಕ ಮೂಢನಂಬಿಕೆಗಳಿಗೆ ಕಾರಣವಾಗಿ ಜನ ಮತ್ತೆ ಗುಂಪಿನಲ್ಲಿ ರಸ್ತೆಗೆ ಇಳಿದು ಭಜನೆ ಮಾಡುವಂತೆ ಮಾಡಿದೆ.

ಅತ್ತ ಅರವಿಂದ್ ಕೆಜ್ರಿವಾಲ್ ಸರ್ಕಾರಿ ಆಸ್ಪತ್ರೆಗಳ ಕುಂದುಕೊರತೆಗಳನ್ನು ತಕ್ಷಣವೇ ನೀಗಿಸಿ ಹೆಚ್ಚಿನ ವೆಂಟಿಲೇಟರ್‌ಗಳು ಮತ್ತು ಇತರ ಅಗತ್ಯ ಸಲಕರಣೆಗಳ ತ್ವರಿತ ಶೇಖರಣೆಗೆ ಮುಂದಾಗಿದ್ದಾರೆ. ಇಲ್ಲಿ ಯಡಿಯೂರಪ್ಪನವರ ಸರ್ಕಾರ ಕೂಡ, ವಿಕ್ಟೋರಿಯಾ ಆಸ್ಪತ್ರೆಯನ್ನು 1700 ಹಾಸಿಗೆಗಳ ಕೊರೊನ ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ. ಬಡ ಜನರಿಗೆ ಸಹಕಾರಿ ಕೆಂದ್ರಗಳಿಂದ ಎರಡು ತಿಂಗಳ ರೇಶನ್ ನನ್ನು ಮುಂಗಡವಾಗಿ ಕೊಡುವುದಾಗಿ ಘೋಷಿಸಿದ್ದಾರೆ. ಮಾರ್ಚ್ 23 ರಂದು ಇಂದಿರಾ ಕ್ಯಾಂಟೀನ್ ನಲ್ಲಿ ಬಡವರಿಗೆ ಉಚಿತ ಊಟ ನೀಡುವುದಾಗಿ ಘೋಷಿಸಿರುವ ಸುದ್ದಿಯೂ ಮೂಡುತ್ತಿದೆ. ರೇಶನ್ ಕಾರ್ಡ್ ಇಲ್ಲದ, ಸೂರಿಲ್ಲದ ಜನರ ಅಳು ಕೇಳುವವರು ಯಾರು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಇಲ್ಲವಾಗಿದೆ.

ಕೊನೆಗೊಂದು ಮಾತು: ಕೇಂದ್ರ ಸರ್ಕಾರ ಕಾಶ್ಮೀರದ ಸಂಪರ್ಕ ಸಾಧನಗಳನ್ನು ಹಲವು ದಿನಗಳಿಂದ ಕಡಿತಗೊಳಿಸಿದೆ. ನಿರ್ಬಂಧ ತೆಗೆದಿದ್ದೀವಿ ಎಂದು ಹೇಳಿದರೂ, ಅದರ ಬಗ್ಗೆ ಸಂಪೂರ್ಣ ಹಾಗೂ ಸ್ಪಷ್ಟ ಮಾಹಿತಿ ಇಲ್ಲ. ಅತ್ತ ಇರಾನ್ ಕೊರೊನಾ ರೋಗಕ್ಕೆ ಹೆಚ್ಚು ಪೀಡಿತವಾಗಿರುವ ದೇಶಗಳಲ್ಲಿ ಒಂದು. ಕಾಶ್ಮೀರದ ವಿದ್ಯಾರ್ಥಿಗಳು ಇರಾನ್ ನಲ್ಲಿ ಓದುತ್ತಿರುವ ಸನ್ನಿವೇಶದಲ್ಲಿ ಅಲ್ಲಿಂದ ಅವರ ರಕ್ಷಣೆ ಮಾಡುವ ಹೊಣೆಯೂ ನಮ್ಮದೇ. ಇಂತಹ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಕೊರೊನ ಬಗ್ಗೆ ಪಾರದರ್ಶಕವಾದ ಮಾಹತಿ ಹೆಚ್ಚು ಅಗತ್ಯ.

ಜನಗಳು ತಮಗೆ ಇರಬಹುದಾದ ರೋಗ ಲಕ್ಷಣಗಳ ಬಗ್ಗೆ ಸರ್ಕಾರದ ವೈದ್ಯಾಧಿಕಾರಿಗಳಿಗೆ ಹೇಳಿಕೊಳ್ಳುವ ಪಾರದರ್ಶಕತೆ ಎಷ್ಟು ಮುಖ್ಯವೋ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುತ್ತಿರುವ ಪರೀಕ್ಷೆಗಳು, ಅದರಿಂದ ಹೊರಹೊಮ್ಮುತ್ತಿರುವ ಫಲಿತಾಂಶಗಳು, ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪಾರದರ್ಶಕವಾಗಿರುವುದು ಮತ್ತು ಜನರ ನೋವನ್ನು ಆಲಿಸಿ, ಸಲಹೆಗಳನ್ನು ತೆಗೆದುಕೊಳ್ಳುವುದು ಮುಖ್ಯ . ಕೊನೆಗೆ ತಜ್ಞರು ಹೇಳುವಂತೆ ಹೆಚ್ಚು ಹೆಚ್ಚೂ ಇನ್ನೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿ ಅವರಿಗೆ ಅಗತ್ಯ ಚಿಕಿತ್ಸೆ ಕೊಡುವುದೇ ಈ ಸಾಂಕ್ರಾಮಿಕದ ವಿರುದ್ಧ ಹೋರಾಡುವುದಕ್ಕೆ ಪರಿಣಾಮಕಾರಿ ಮಾರ್ಗ. ದೇಶ ದೇಶಗಳು ಈ ಬಿಕ್ಕಟ್ಟಿನಲ್ಲಿ ಪರಸ್ಪರ ಬೆಂಬಲಿಸುವುದು ಎಷ್ಟು ಮುಖ್ಯವೋ, ನಮ್ಮ ದೇಶದ ರಾಜ್ಯಗಳು ಕೂಡ ಈ ಸಮಯದಲ್ಲಿ ಜೊತೆಗೂಡಿ ಕೊರೊನ ವಿರುದ್ಧ ಹೋರಾಡಬೇಕಿದೆ.

ಇದನ್ನೂ ಓದಿ: ಹರಡುತ್ತಿರುವ ಕೊರೊನಾ: ಈ ಸಂದರ್ಭದಲ್ಲಿ ಸರ್ಕಾರವೇನು ಮಾಡಬೇಕು? ಜನರೇನು ಮಾಡಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...