Homeಮುಖಪುಟಹರಡುತ್ತಿರುವ ಕೊರೊನಾ: ಈ ಸಂದರ್ಭದಲ್ಲಿ ಸರ್ಕಾರವೇನು ಮಾಡಬೇಕು? ಜನರೇನು ಮಾಡಬೇಕು?

ಹರಡುತ್ತಿರುವ ಕೊರೊನಾ: ಈ ಸಂದರ್ಭದಲ್ಲಿ ಸರ್ಕಾರವೇನು ಮಾಡಬೇಕು? ಜನರೇನು ಮಾಡಬೇಕು?

ಮೂರನೇ ಹಂತವೆಂದರೇನು? ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು? ಸೋಂಕು ಶಂಕಿತರು ಯಾರು? ಕೇಂದ್ರವು ಎಲ್ಲಿಂದ ಹಣ ತರಬೇಕು ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಡಾ.ವಾಸು ಎಚ್.ವಿ. ತಪ್ಪದೇ ಓದಿ

- Advertisement -
ಮೂರನೇ ಹಂತವೆಂದರೇನು?
- Advertisement -

ಎಲ್ಲರಿಗೂ ಗೊತ್ತಿರುವಂತೆ ಈ ವೈರಸ್ ಸೋಂಕು ಆರಂಭವಾದದ್ದು ಚೀನಾದ ಹುವಾನ್ ಪ್ರಾಂತದಲ್ಲಿ. ಅಲ್ಲಿಂದ ಜಗತ್ತಿನ ಬೇರೆ ಬೇರೆ ಕಡೆಗೆ ಅದು ಹರಡಿದೆ. ಭಾರತಕ್ಕೂ ಸೋಂಕು ಬಂದಿದ್ದು ವಿಮಾನದಲ್ಲಿ ಪ್ರಯಾಣ ಮಾಡಿ ಬಂದವರಿಂದಲೇ. ಅವರಿಂದ ಅವರ ಜೊತೆ ಸಂಪರ್ಕ ಹೊಂದಿದ್ದ ಸಮೀಪವರ್ತಿಗಳಿಗೆ ಬಂದಿದೆ. ಹೊರಗಿನಿಂದ ಬಂದದ್ದು ಮೊದಲ ಹಂತವಾದರೆ, ಅವರ ಸುತ್ತಲಿನವರಿಗೆ ಹರಡಿದ್ದು ಎರಡನೇ ಹಂತ. ಮೂರನೇ ಹಂತ ಸಂಬಂಧವೇ ಇಲ್ಲದ ಮಿಕ್ಕೆಲ್ಲರಿಗೆ ಹರಡುವುದು. ಇದುವರೆಗೆ ಅಂತಹ ರೋಗಿಗಳು ಪತ್ತೆಯಾಗಿರುವುದು ಕಡಿಮೆ. ಆದರೆ, ಕೊರೊನಾ ಸೋಂಕು ಇದೆಯಾ ಎಂಬ ಪರೀಕ್ಷೆ ನಡೆದಿರುವುದೇ ಮೊದಲೆರಡು ಬಗೆಯವರಿಗಾದ್ದರಿಂದ ಮಿಕ್ಕವರಿಗೂ ಹರಡಿದೆ ಎಂತಲೇ ಭಾವಿಸಬೇಕು ಎಂಬುದು ತಜ್ಞರ ಅಭಿಪ್ರಾಯ. ದಿನೇ ದಿನೇ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿರುವಾಗ ಮತ್ತು ಸೋಂಕು ಪತ್ತೆಯಾಗುವ ಮುಂಚೆ ಅವರಲ್ಲಿ ಕೆಲವರು ಸಾಕಷ್ಟು ಕಡೆ ಓಡಾಡಿದ್ದಾರೆ ಎಂಬುದೂ ಪತ್ತೆಯಾಗುತ್ತಿರುವುದರಿಂದ ಮೂರನೇ ಹಂತದಲ್ಲಿ ಲಕ್ಷಾಂತರ ಜನರಲ್ಲಿ ಸೋಂಕು ಹರಡಿರಬಹುದು ಎನ್ನಲಾಗುತ್ತಿದೆ.

ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು?

ನಿಮ್ಮ ಮನೆಯೊಳಗೆ ಸೋಂಕು ಶಂಕಿತರು ಇದ್ದರೆ ಅದನ್ನು ಮುಚ್ಚಿಡಬಾರದು. ಕೂಡಲೇ ವೈದ್ಯರಿಗೆ ತೋರಿಸಬೇಕು. ಯಾವುದೇ ಸರ್ಕಾರೀ ಆಸ್ಪತ್ರೆ ಅಥವಾ ಸರ್ಕಾರವು ಈಗಾಗಲೇ ಎಲ್ಲೆಲ್ಲಿ ಚಿಕಿತ್ಸೆ ಇದೆಯೆಂದು ಪ್ರಕಟಪಡಿಸಿದೆಯೋ ಅಲ್ಲೆಲ್ಲಾ ಹೋಗಬಹುದು. ಸೋಂಕು ಇದೆ ಎಂದು ಗೊತ್ತಾದರೆ ಮೂರು ರೀತಿಯಲ್ಲಿ ವಿಂಗಡಿಸಿ ವಿಶೇಷ ಆಸ್ಪತ್ರೆ ಅಥವಾ ಇತರೆ ಆಸ್ಪತ್ರೆ ಅಥವಾ ಮನೆಯಲ್ಲೇ ಇರಿ ಎಂದು ಸೂಚಿಸಲಾಗುತ್ತದೆ. ಇದು ಅನಿವಾರ್ಯ. ಆ ರೋಗಿಗೂ, ಅವರ ಸುತ್ತಲಿನವರಿಗೂ ಮತ್ತು ಇಡೀ ಸಮುದಾಯಕ್ಕೂ. ಯಾರು ಎಲ್ಲಿದ್ದರೆ ಉತ್ತಮ ಎಂಬ ವಿವೇಚನೆಯನ್ನು ತಜ್ಞರಿಗೆ ಬಿಡುವುದೇ ಸರಿಯಾದ್ದರಿಂದ ಯಾವುದೇ ರೀತಿಯಲ್ಲಿ ಗಾಬರಿಗೊಳಗಾಗದೇ ಆ ಪ್ರಕಾರವೇ ನಡೆದುಕೊಳ್ಳಬೇಕು.

ಉಳಿದಂತೆ ಈಗಾಗಲೇ ಪ್ರಚಾರವಾಗಿರುವ ಹಾಗೆ ಸಾಮಾಜಿಕ ಅಂತರ ಕಾಪಾಡುವುದು, ಕೈ ತೊಳೆಯುವುದು, ಸೀನುವಾಗ, ಕೆಮ್ಮುವಾಗ ಕರವಸ್ತ್ರ ಅಡ್ಡ ಹಿಡಿಯುವುದು ಇತ್ಯಾದಿ ಎಚ್ಚರಿಕೆಗಳನ್ನು ಪಾಲಿಸಬೇಕು. ಇದಲ್ಲದೇ ಒಟ್ಟಾರೆ ಸಾಮಾಜಿಕ ಸಂಪರ್ಕವೇ ಕಡಿಮೆ ಮಾಡುವ ರೀತಿಯಲ್ಲಿ ಸರ್ಕಾರವು ಸೂಚಿಸಿರುವ ಲಾಕ್‍ಡೌನ್ ಸೂತ್ರವನ್ನೂ ಪಾಲಿಸಬೇಕು.

ಸೋಂಕು ಶಂಕಿತರು ಯಾರು?

ಸೋಂಕು ಇರುವ ಪ್ರದೇಶಗಳಿಂದ ಬಂದವರು, ಅವರಿಗೆ ಸಮೀಪವಿದ್ದು ಅದಕ್ಕೆ ಎಕ್ಸ್‍ಪೋಸ್ ಆದವರು ಮತ್ತು ಈ ಈ ಲಕ್ಷಣಗಳಿರುವವರು – ಕೆಮ್ಮು, ಗಂಟಲು ನೋವು, ಜ್ವರ, ಉಸಿರಾಟದ ತೊಂದರೆ ಮತ್ತು ಕೆಲವರಲ್ಲಿ ಬೇಧಿ ವಿಪರೀತ ಬೇಧಿ. ಕೆಲವರಲ್ಲಿ ನೆಗಡಿಯೂ ಇರಬಹುದು. ಸಾಮಾನ್ಯವಾಗಿ ಈ ಸೋಂಕು ತಗುಲಿದವರಿಗೆ ಈ ಮೇಲಿನ ಲಕ್ಷಣಗಳು ವಿಪರೀತವೇ ಇರುತ್ತದಾದರೂ, ಕಡಿಮೆ ಪ್ರಮಾಣದಲ್ಲೂ ಇರುವುದು ಸಾಧ್ಯ. ಇವರೆಲ್ಲರನ್ನೂ ಸೋಂಕು ಇರಬಹುದಾದವರು ಎಂದೇ ಭಾವಿಸಿ ಮೇಲೆ ಹೇಳಲಾದ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು.

ಸರ್ಕಾರದ ಮೇಲೆ ಒತ್ತಡ ಹಾಕುವುದೂ ಅಗತ್ಯ

ಸರ್ಕಾರವು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಕೆಲವು ರಾಜ್ಯ ಸರ್ಕಾರಗಳು ಅತ್ಯುತ್ತಮವಾದ ಕ್ರಮಗಳನ್ನು ತೆಗೆದುಕೊಂಡಿವೆ. ಆದರೆ, ಕೇಂದ್ರ ಸರ್ಕಾರ ಹಾಗೂ ಇನ್ನೂ ಹಲವು ರಾಜ್ಯ ಸರ್ಕಾರಗಳು ಮಾಡಬೇಕಾದ್ದೆಲ್ಲವನ್ನೂ ಮಾಡಿದಂತೆ ಕಾಣುತ್ತಿಲ್ಲ. ಹಲವು ಸರ್ಕಾರಗಳ ಮುಖ್ಯಸ್ಥರು ಪ್ರತಿದಿನ ತಾವೇ ಜನರಿಗೆ ಅಪ್‍ಡೇಟ್ ನೀಡುತ್ತಿದ್ದಾರೆ. ಎಷ್ಟು ಹಣಕಾಸನ್ನು ಇದಕ್ಕಾಗಿ ಎತ್ತಿಟ್ಟಿದ್ದೇವೆ, ಯಾವ ರೀತಿಯ ವೈದ್ಯಕೀಯ ಸೌಲಭ್ಯವನ್ನು ಹೊಂದಿದ್ದೇವೆ ಮತ್ತು ಹೊಸದಾಗಿ ಸಿದ್ಧಗೊಳಿಸುತ್ತಿದ್ದೇವೆ, ಮನೆಗಳಲ್ಲೇ ಇರಬೇಕಾದರೆ ಉಂಟಾಗುವ ಆರ್ಥಿಕ ನಷ್ಟ ಮತ್ತು ಇತರ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ ಹೇಗೆ ನೆರವಿಗೆ ಬರಲಿದೆ ಇವೆಲ್ಲವನ್ನೂ ತಿಳಿಸುವುದು ಸರ್ಕಾರದ ಕರ್ತವ್ಯವಾಗಿದೆ. ಅದನ್ನು ಮಾಡದ ಸರ್ಕಾರಗಳ ಮೇಲೆ ಒತ್ತಡ ತರುವುದು ಬಹಳ ಮುಖ್ಯ.

ದಿನಗೂಲಿ ಕೆಲಸ ಮಾಡುವವರು ಸೇರಿದಂತೆ ಎಷ್ಟೋ ಜನರು ಲಾಕ್‍ಡೌನ್‍ನ ಸಂಕಷ್ಟವನ್ನು ಭರಿಸಲಾಗದೇ ಹೋಗಬಹುದು. ಹಾಗಾಗಿ ಅವರುಗಳಿಗೆ ನೆರವಾಗುವುದು ಸರ್ಕಾರದ್ದೂ ಕರ್ತವ್ಯ, ಉಳ್ಳವರದ್ದೂ ಕರ್ತವ್ಯ. ಆ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು, ಸಂಬಂಧಪಟ್ಟವರ ಮೇಲೆ ಒತ್ತಡವನ್ನೂ ತರಬೇಕು. ಅವರಿರುವ ಕಡೆಗೆ ಆಹಾರ ಪದಾರ್ಥಗಳನ್ನು ತಲುಪಿಸುವುದು, ಉಚಿತ ಆರೋಗ್ಯ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದಷ್ಟೇ ಅಲ್ಲದೇ ಇತರ ಖರ್ಚುಗಳಿಗೆ ನಗದನ್ನು ಸಿಗುವಂತೆ ಮಾಡಲೇಬೇಕು. ಇಲ್ಲದಿದ್ದಲ್ಲಿ ಬಹಳ ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಉಲ್ಬಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಪ್ರಪಂಚದಲ್ಲಿ ಕೊರೊನಾ ಶುರುವಾದಾಗಲೇ ಭಾರತದಲ್ಲಿ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್‍ಗಳ ವಿರುದ್ಧ ಲಕ್ಷ ಲಕ್ಷ ಜನರು ಬೀದಿಗಿಳಿದರು. ಭಾರತದಲ್ಲಿ ಸೋಂಕು ಶುರುವಾಗುವ ಹೊತ್ತಿಗೆ ಅವು ಕಡಿಮೆಯಾಗಿದ್ದವು ಮತ್ತು ಸೋಂಕು ಶುರುವಾಗಿದೆ ಎಂದು ಗೊತ್ತಾದ ನಂತರ ಹೋರಾಟವನ್ನು ನಿಲ್ಲಿಸಿದರು. ಅನಗತ್ಯವಾಗಿದ್ದು, ಮತೀಯ ಕಾರಣಗಳಿಗಾಗಿ ದೇಶದ ಸರ್ಕಾರವು ಜಾರಿ ಮಾಡಲು ಹೊರಟಿರುವ ಎನ್‍ಪಿಆರ್ ಮತ್ತು ಮನೆಗಣತಿಯು ದೇಶದೆಲ್ಲೆಡೆ ಏಪ್ರಿಲ್ 1ರ ನಂತರ ಆರಂಭವಾಗಲಿದೆ. ಕರ್ನಾಟಕದಲ್ಲಿ ಏಪ್ರಿಲ್ 15ರಿಂದ ಆರಂಭವಾಗುವ ಸೂಚನೆ ಈಗಾಗಲೇ ಸಿಕ್ಕಿದೆ. ಪೌರತ್ವ ಕಳೆದುಕೊಳ್ಳುವುದೆಂದರೆ ಅದು ನಾಗರಿಕ ಸಾವು ಆಗಿರುತ್ತದಾದ್ದರಿಂದ, ಕೊರೊನಾದಿಂದ ಉಂಟಾಗುವ ಕಷ್ಟನಷ್ಟಗಳನ್ನು ಲೆಕ್ಕಿಸದೇ ಮತ್ತೆ ಜನರು ಬೀದಿಗಿಳಿಯುವ ಸಾಧ್ಯತೆ ಇದ್ದೇ ಇದೆ. ಅದು ಉಂಟು ಮಾಡಬಹುದಾದ ಪರಿಣಾಮ ಅಷ್ಟಿಷ್ಟಲ್ಲ. ಹೀಗಾಗಿ ಎನ್‍ಪಿಆರ್‌ ಅನ್ನು ರದ್ದುಗೊಳಿಸಿ, ಮನೆಗಣತಿಯನ್ನು ಮುಂದೂಡಲು ಎಲ್ಲರೂ ಸರ್ಕಾರಗಳನ್ನು ಒತ್ತಾಯಿಸಬೇಕಿದೆ.

ಕೇಂದ್ರವು ಎಲ್ಲಿಂದ ಹಣ ತರಬೇಕು ಎನ್ನುವುದನ್ನು ಮುಂದಿಡಲೇಬೇಕು

ಸಾಮಾನ್ಯವಾಗಿ ದಿಢೀರನೇ ಉದ್ಭವಿಸುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು ಬೇರೆ ಬೇರೆ ರೀತಿಯ ಸೆಸ್‍ಗಳನ್ನು ಹಾಕುವುದು, ತೆರಿಗೆ ಏರಿಸುವುದನ್ನು ಮಾಡುತ್ತದೆ. ಆದರೆ ಇದೀಗ ದೇಶಕ್ಕೆ ದೇಶವೇ ಲಾಕ್‍ಡೌನ್ ಸ್ಥಿತಿಯಲ್ಲಿರುವಾಗ ಯಾರಿಗೆ ತೆರಿಗೆ ಹಾಕುತ್ತದೆ? ಅದರಿಂದ ಉಂಟಾಗಬಹುದಾದ ಭೀತಿ ಯಾವ ರೀತಿಯದ್ದಿರಬಹುದು? ಇದನ್ನು ಸೂಕ್ತವಾಗಿ ನಿಭಾಯಿಸುವ ಅಗತ್ಯವಿದೆ. ಹಾಗಾಗಿ ಸರ್ಕಾರವು ತನ್ನ ತುರ್ತುನಿಧಿಯಿಂದ ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡಬಾರದು, ಫ್ಲೈಓವರ್ ಕಟ್ಟುವಂತಹ ಅದೆಷ್ಟೋ ಕಾಮಗಾರಿಗಳನ್ನು ರದ್ದುಗೊಳಿಸಿ ಹಣವನ್ನು ಇದರ ನಿರ್ವಹಣೆಗೆ ಹಾಕಬೇಕು. ಜೊತೆಗೆ ಭಾರೀ ದೊಡ್ಡ ಕುಬೇರರು ತಮ್ಮ ಸಂಪತ್ತಿನ ಒಂದಷ್ಟು ಪಾಲನ್ನು ಇದಕ್ಕಾಗಿ ಕೊಡಬೇಕು. ಅದನ್ನು ಸರ್ಕಾರವು ಕಾನೂನು ಕ್ರಮಗಳ ಮುಖಾಂತರವೇ ಮಾಡಬೇಕು. ಇದೂ ಸಹಾ ಜನರ ಒತ್ತಾಯದಿಂದಷ್ಟೇ ಆಗುವ ಕೆಲಸವಾಗಿದೆ. ಹಾಗಾಗಿ ಈ ಕುರಿತೂ ಜನರು ಸಮಷ್ಟಿಯಾಗಿ ಮಾತಾಡಬೇಕು. ಲಭ್ಯವಿರುವ (ಸಾಮಾಜಿಕ ಇತ್ಯಾದಿ) ಮಾಧ್ಯಮಗಳ ಮೂಲಕ ಇದನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಆಗಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...