ಸಿದ್ಧಾರ್ಥ ಭಾಟಿಯಾ
ಸಂಗ್ರಹಾನುವಾದ: ನಿಖಿಲ್ ಕೋಲ್ಪೆ
ನರೇಂದ್ರ ಮೋದಿ ಸರಕಾರವು ರಾತೋರಾತ್ರಿ ಜಾರಿಗೆ ತಂದ ನೋಟು ಅಮಾನ್ಯೀಕರಣದಿಂದ ಹಿಡಿದು, ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ವಿಧಿ 370ಯ ರದ್ದತಿ ಬಳಿಕ ಕಾಶ್ಮೀರದಲ್ಲಿ ಹೇರಲಾದ ಕಠಿಣ ಲಾಕ್‌ಡೌನ್ ಹಾಗೂ ಆರೋಪವೇ ಇಲ್ಲದೆ ಚುನಾಯಿತ ಜನಪ್ರತಿನಿಧಿಗಳ ಬಂಧನ ಮತ್ತು ಇದೀಗ ಅಪಾಯಕಾರಿ ಕೊರೋನ ವೈರಸನ್ನು ದೇಶದೊಳಗೆ ಬರಲು ಬಿಡುವ ಬೇಜವಾಬ್ದಾರಿ ತೋರಿ, ನಂತರ ಯಾವುದೇ ಕಾಲಾವಕಾಶ ನೀಡದೆ, ಯಾವುದೇ ಸಿದ್ಧತೆ ಇಲ್ಲದೇ, ದೇಶಾದ್ಯಂತ ಲಾಕ್‌ಡೌನ್ ಹೇರುವುದರ ಮೂಲಕ ಕೋಟ್ಯಂತರ ಜನರ ಜೀವನದ ಜೊತೆಗೆ ಚೆಲ್ಲಾಟ ಆಡಿದೆ.
ಆ ಮೂಲಕ ಈ ಸರಕಾರ ತನ್ನ ಅದಕ್ಷತೆ ಮಾತ್ರವಲ್ಲ, ಅಸೂಕ್ಷ್ಮ ಮತ್ತು ಅಮಾನವೀಯ ಮುಖವನ್ನೂ ತೋರಿಸಿದೆ. ಈ ವಿವಿಧ ಸಂದರ್ಭಗಳಲ್ಲಿ ಯಾವುದೇ ಯೋಜನೆಗಳಿಲ್ಲದೆ ಸರಕಾರ ಹೇಗೆ ಮುಂದಡಿ ಇಟ್ಟಿತ್ತು ಮತ್ತು ಅವು ವಿಫಲವಾದಾಗ ಜನರ ಸಂಕಷ್ಟಗಳ ಕುರಿತು ಹೇಗೆ ಅಮಾನವೀಯವಾಗಿ, ಯಾಂತ್ರಿಕವಾಗಿ ಪ್ರತಿಕ್ರಿಯಿಸಿತ್ತು ಎಂದು ಹಿಂದಿನ ಲೇಖನದಲ್ಲಿ ಚುಟುಕಾಗಿ ವಿವರಿಸಲಾಗಿತ್ತು.
ಇದನ್ನೂ ಓದಿ: ಕಾರ್ಯತಂತ್ರ ಮಾತ್ರವಲ್ಲ; ಮಾನವೀಯತೆಯೇ ಇಲ್ಲದ ಮೋದಿ ಸರಕಾರ
ಈಗ ದೇಶದಾದ್ಯಂತ ಹರಡುತ್ತಿರುವ ನೋವೆಲ್ರೋ ಕೊರೋನ ವೈರಸ್‌ಗೆ ಸಂಬಂಧಿಸಿದಂತೆ ಮೋದಿ ಸರಕಾರದ ಬೇಜವಾಬ್ದಾರಿ, ಅದಕ್ಷತೆ ಮತ್ತು ಅಮಾನವೀಯತೆಯ ಕುರಿತು ಈ ಬರಹದಲ್ಲಿ ಚುಟುಕಾಗಿ ನೋಡೋಣ.
ಕ್ರಮಬದ್ಧವಾದ ಮತ್ತು ಮಾನವೀಯವಾದ ಪ್ರತಿಕ್ರಿಯೆಯ ಅಗತ್ಯವಿರುವ ಮಾರಣಾಂತಿಕ ನೋವೆಲ್ ಕೊರೋನ ವೈರಸ್ ಹರಡುವಿಕೆಯು- ಈ ಸರಕಾರ ಯೋಜನಾಬದ್ಧವಾಗಿ ಕೆಲಸ ಮಾಡುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಹಠಾತ್ತಾಗಿ ಹೇರಲಾದ ಲಾಕ್‌ಡೌನ್ ಒಂದು ಯೋಜನೆಯೇನಲ್ಲ. ಬಟ್ಟಲು-ಜಾಗಟೆ ಬಡಿಯಲು ಹೇಳುವುದು ಕೂಡಾ ಖಂಡಿತವಾಗಿಯೂ ಒಂದು ಯೋಜನೆ ಎಂದು ಹೇಳಿಸಿಕೊಳ್ಳುವ ಅರ್ಹತೆ ಹೊಂದಿಲ್ಲ.
ಎರಡನೆಯದಾಗಿ, ಅದರ ಸುತ್ತ ಎಲ್ಲಾ ರೀತಿಯ ಹುಸಿ ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಯ ಹುತ್ತವನ್ನು ಕಟ್ಟಲಾಯಿತು. “ಓಂ” ಎಂದು ಪಠಿಸುವುದರಿಂದ ಉಂಟಾಗುವ ಕಂಪನಗಳು ಇತ್ಯಾದಿ ಬುರುಡೆಗಳು ವಾಟ್ಸಾಪ್‌ನಲ್ಲಿ ಹರಿದಾಡಿದವು. ಇದು ಭಯಂಕರ ಯಶಸ್ಸು ಕಾಣುವುದರ ಮೂಲಕ, ಜನರ ಮಂದೆಯನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಮೋದಿಯ ಖ್ಯಾತಿ ಇನ್ನಷ್ಟು ವಿಸ್ತರಿಸಿತು. ಆದರೆ, ಕೇವಲ ನಾಲ್ಕು ಗಂಟೆಗಳ ಅವಕಾಶವನ್ನಷ್ಟೇ ನೀಡಿ ಹಠಾತ್ತಾಗಿ ಹೇರಿದ ಲಾಕ್‌ಡೌನ್- ಜನರ ಮೇಲೆ, ವಿಶೇಷವಾಗಿ ಬಡವರ ಮೇಲೆ ವಿನಾಶಕಾರಿ ಪರಿಣಾಮವನ್ನು ಉಂಟುಮಾಡಿತು.

ಕ್ರಮೇಣ, ಮಧ್ಯಮ ವರ್ಗದವರು ಕೂಡಾ ಕೆಲವು ಕಷ್ಟಗಳನ್ನು ಅನುಭವಿಸಬೇಕಾದರೂ, ಒಂದು ದಿನಚರಿಗೆ ಹೊಂದಿಕೊಂಡಿದ್ದಾರೆ. ಅವರಲ್ಲಿ ಕೆಲವರು ಮನೆಯಿಂದಲೇ ಕೆಲಸ ಮಾಡಬಹುದು. ಅವರಿಗೆ ವಿರಾಮದ ವೇಳೆ ಕಾಲ ಕಳೆಯಲು ಹಲವಾರು ಅವಕಾಶಗಳು ಇವೆ. ಸಾಮಾಜಿಕ ಜಾಲತಾಣಗಳು ನೆಟ್‌ಫ್ಲಿಕ್ಸ್ ಶಿಫಾರಸುಗಳಿಂದ ತುಂಬಿತುಳುಕುತ್ತಿವೆ. ಆದರೆ, ಬೀದಿಗೆ ಬಿದ್ದಿರುವ ಜನರನ್ನು ಮಾತ್ರ ಗುಂಪು ಸೇರಿಸಿ, ಪಶುಗಳ ಮಂದೆಗಳಂತೆ ಅವರ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ, ಸ್ಟೇಡಿಯಂಗಳಿಗೆ ತಳ್ಳಲಾಗುತ್ತಿದೆ. ಕ್ವಾರಂಟೈನ್ ಮಾಡಲಾಗುತ್ತಿದೆ. ಇವರನ್ನೆಲ್ಲಾ ಪ್ರತ್ಯೇಕಿಸಲಾಗುವುದು. ಆದರೆ, ಅವರಿಗೆ ಮುಂದೇನು ಕಾದಿದೆ?
ಲಾಕ್ ಡೌನ್ ಕಾರಣಕ್ಕೆ ದೆಹಲಿಯಿಂದ ಉತ್ತರ ಪ್ರದೇಶದ ಬರೇಲಿಗೆ ನಡೆದುಬಂದ ವಲಸೆ ಕಾರ್ಮಿಕರಿಗೆ ಪ್ರಾಣಿಗಳಿಗಿಂತಲೂ ಕಡೆಯಾಗಿ ರಾಸಾಯನಿಕ ಔಷಧಿ ಸಿಂಪಡಿಸಿತ್ತಿರುವ ಯುಪಿ ಪೊಲೀಸರ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.
Posted by Naanu Gauri on Monday, March 30, 2020
ಅವರನ್ನು ವೈದ್ಯಕೀಯವಾಗಿ ಪರೀಕ್ಷಿಸುವ, ಆಹಾರ ಒದಗಿಸುವ ಜವಾಬ್ದಾರಿ ಹೊರುವವರು ಯಾರು? ನಂತರ ಮುಂದಿನ ಹಂತದಲ್ಲಿ ಅವರಿಗೆ ಸಾರಿಗೆ ಒದಗಿಸಿ, ಅವರವರ ಹಳ್ಳಿಗಳಲ್ಲಿರುವ ಮನೆಗಳಿಗೆ ತಲಪಿಸುವವರು ಯಾರು? ಲಾಕ್‌ಡೌನ್‌ನಿಂದ ಸಣ್ಣ ಉದ್ದಿಮೆಗಳು ಜರ್ಝರಿತವಾಗಿರುವಾಗ, ಎಂದಾದರೂ ಅವರ ಉದ್ಯೋಗ ಅವರಿಗೆ ಮರಳಿ ಸಿಕ್ಕೀತೆ? ಲಾಕ್‌ಡೌನ್‌ನ ಆಘಾತವನ್ನು ಕಡಿಮೆ ಮಾಡಲು ಮತ್ತು ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಯೋಜನೆಯೇನಿದೆ?
ಈ ಕ್ಷಣದಲ್ಲಿ ಸೋಂಕಿನ ಮತ್ತು ಸಾವಿನ ಪ್ರಕರಣಗಳು ಹೆಚ್ಚಿದಲ್ಲಿ ಉಂಟಾಗಬಹುದಾದ ವೈದ್ಯಕೀಯ ತುರ್ತುಸ್ಥಿತಿಯನ್ನು ನಿಭಾಯಿಸುವುದು ಮೊದಲ ಆದ್ಯತೆಗಳಲ್ಲಿ ಒಂದು. ನಮ್ಮ ವೈದ್ಯರು ಮತ್ತು ದಾದಿಯರು ಯಾವುದೇ ಸೂಕ್ತ ಸುರಕ್ಷಾ ಸಾಧನಗಳಿಲ್ಲದೇ ಹಗಲೂರಾತ್ರಿ ದುಡಿಯುತ್ತಿದ್ದಾರೆ.
ಆದರೆ ಅಷ್ಟೇ ಮುಖ್ಯವಾದುದು ಎಂದರೆ, ಹಠಾತ್ ಲಾಕ್‌ಡೌನ್‌ನ ಪರಿಣಾಮವಾಗಿ ಈಗ ಉಂಟಾಗಿರುವ ಪೂರೈಕೆ ಅಡಚಣೆಗಳನ್ನು ನಿವಾರಿಸುವುದು. ಟ್ರಕ್ಕುಗಳು ಹೆದ್ದಾರಿಗಳಲ್ಲಿ ಸಿಕ್ಕಿಬಿದ್ದಿವೆ. ಸರಕುಗಳನ್ನು ತುಂಬಿಸಿ ಇಳಿಸುವ ಕಾರ್ಮಿಕರು ಮಾಯವಾಗಿದ್ದಾರೆ. ಸರಕುಗಳು ಅಂಗಡಿಗಳನ್ನು ಮುಟ್ಟುತ್ತಿಲ್ಲ. ರಾಜ್ಯಗಳು ಮುಚ್ಚಿರುವ ತಮ್ಮ ಗಡಿಗಳನ್ನು ತೆರೆಯಲು ಹಿಂಜರಿಯುತ್ತಿರುವುದರಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಮಾತ್ರ ಸಾಧ್ಯ.
ಇವೆಲ್ಲವನ್ನೂ ಸ್ವಲ್ಪವೇ ಯೋಜನೆಯ ಮೂಲಕ ತಡೆಗಟ್ಟಲು ಸಾಧ್ಯವಿತ್ತು. ಮೊದಲಿಗೆ, ಲಾಕ್‌ಡೌನ್‌ಗೆ ಮೊದಲು ಅಷ್ಟು ಅಲ್ಪ ಸಮಯಾವಕಾಶ ಕೊಡಬೇಕಾದ ಅಗತ್ಯವಿತ್ತೆ? ಈಗಲೂ ಈ ವೈರಸ್ ಮತ್ತು ಅದರ ನಂತರದ ಪರಿಣಾಮಗಳನ್ನು ಎದುರಿಸಲು ಸರಕಾರವು ಸ್ಪಷ್ಟವಾಗಿ ಯೋಚಿಸಿ ಯೋಜನೆಯನ್ನು ರೂಪಿಸಿದರೆ, ಈ ವಿಪತ್ತನ್ನು ನಿಭಾಯಿಸಬಹುದು.
ಆದರೆ, ಅಂತಹಾ ಒಂದು ಯೋಜನೆಯಾಗಲೀ, ಕಾರ್ಯತಂತ್ರವಾಗಲೀ ಇರುವ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಈ ರೀತಿಯ ದಿಢೀರ್ ನಿರ್ಧಾರಗಳ ಮಾದರಿಯನ್ನು ಗಮನಿಸಿದಲ್ಲಿ ಒಂದು ಸ್ಪಷ್ಟವಾದ ಪ್ರಶ್ನೆ ಎದುರಿಗೆ ಬರುತ್ತದೆ. ಅದೆಂದರೆ, ಮೋದಿ ಸರಕಾರದಲ್ಲಿ ಯಾರೂ, ಅಥವಾ ಸ್ವತಃ ಮೋದಿಯೂ ಇಂತಹಾ ಎಡೆಬಿಡಂಗಿ ನಿರ್ಧಾರಗಳಿಗೆ ಮಾನವರು ತೆರಬೇಕಾದ ಬೆಲೆಯ ಬಗ್ಗೆ ಯೋಚಿಸುವುದೇ ಇಲ್ಲವೆ? ಮಹಾರಾಜನಂತೆ ಘೋಷಣೆ ಮಾಡುವುದು, ಬೆಂಕಿ ಆರಿಸುವ ಧೀರ ತಾನೆಂಬಂತೆ ಪೋಸು ಕೊಡುವುದು ಖಂಡಿತವಾಗಿಯೂ ಆತನ ಭಕ್ತರನ್ನು ಮೆಚ್ಚಿಸಬಹುದು. ಆದರೆ, ಆತ ತನ್ನ ದಿಢೀರ್ ನಿರ್ಧಾರಗಳಿಂದ ಜನರಿಗೆ ಉಂಟಾಗುವ ಸಂಕಷ್ಟಗಳ ಬಗ್ಗೆ ಯೋಚಿಸಿರಲೇಬೇಕು ಅಲ್ಲವೇ?
ಈ ಕುರಿತು ಆತ ಯೋಚಿಸದೇ ಇದ್ದರೆ, (ಕಳೆದ ಕೆಲವು ವರ್ಷಗಳಲ್ಲಿ ನಡೆದ ಘಟನೆಗಳು ಇಂತಹಾ ಗಂಭೀರವಾದ ಸಂಶಯಗಳನ್ನು ಹುಟ್ಟುಹಾಕಿವೆ.) ಅವರಿಗೆ ಜನರಲ್ಲಿ ಆತಂಕ ಉಂಟುಮಾಡುವುದು ಇಷ್ಟದ ಕೆಲಸ ಎಂಬ ತೀರ್ಮಾನಕ್ಕೆ ಬರಲು ಮಾತ್ರ ಸಾಧ್ಯ.
ಯಾಕೆಂದರೆ, ಅದು ತಮ್ಮ ಮೌಲ್ಯ ಕಳೆದುಕೊಂಡ ನೋಟುಗಳನ್ನು ಬದಲಾಯಿಸುವುದಾಗಿರಬಹುದು, ತಮ್ಮ ಪೌರತ್ವ ಸಾಬೀತುಪಡಿಸುವ ದಾಖಲೆಗಳಿಗಾಗಿ ಕಂಬದಿಂದ ಕಂಬಕ್ಕೆ ಅಲೆದಾಡುವುದಿರಬಹುದು, ಅಥವಾ ಇದೀಗ ಭಯಾತಂಕಗಳಿಂದ ತುಂಬಿದ ಜನರು ಪೊಲೀಸರ ಅಮಾನವೀಯ ಲಾಠಿ ಏಟು ತಿನ್ನುತ್ತಾ, ಹೊಟ್ಟೆಗೇನಾದರೂ ಸರಿಹೊಂದಿಸಲು ಪರದಾಡುತ್ತಿರುವುದು ಇಂತಹಾ ಸಂಶಯಕ್ಕೆ ಕಾರಣವಾಗಿದೆ. ಇವುಗಳೆಲ್ಲವೂ ಹೆಚ್ಚಾಗಿ ಬಡವರನ್ನೇ ಕಾಡಿವೆ. ತಾವು ಬೆವರು ಸುರಿಸಿ ಗಳಿಸಿದ ಹಣವನ್ನು ಬದಲಾಯಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿ ಬಂದವರು ಹೆಚ್ಚಾಗಿ ಅವರೇ. ಈ ಬಿಕ್ಕಟ್ಟು ಕೊನೆಗೊಂಡರೂ ಉದ್ಯೋಗ, ಜೀವನೋಪಾಯ ಕಳೆದುಕೊಂಡು ಬದುಕನ್ನು ಎದುರಿಸಬೇಕಾದವರೂ ಅವರೇ.
ಜೀವನಾವಶ್ಯಕ ವಸ್ತುಗಳಾದ ಹಣ್ಣು ತರಕಾರಿ ಮಾರುತ್ತಿದ್ದ ಜನರ ಮೇಲೆ ಹಲ್ಲೆ ನಡೆಸಿ ರಸ್ತೆಗೆ ಸುರಿದು ಅಮಾನವೀಯತೆ ಮೆರೆದ ಗುಜರಾತ್ ಪೊಲೀಸರ ಮತ್ತೊಂದು ವಿಡಿಯೊ ಮನಕಲಕುತ್ತಿದೆ…
Posted by Naanu Gauri on Tuesday, March 31, 2020
ನೂರಾರು ಮೈಲಿ ನಡೆದಾದರೂ ತಮ್ಮ ಹಳ್ಳಿಗಳಿಗೆ ಸೇರಲು ಪ್ರಯತ್ನಿಸಿದ ಹತಾಶ ಜನರನ್ನೇ ಜವಾಬ್ದಾರಿ ಇಲ್ಲದರೆಂದು ನಿಂದಿಸಿ, ಶಾಪ ಹಾಕುತ್ತಿರುವು ನಾವು ಬದುಕುತ್ತಿರುವ ನಿರ್ದಯಿ ಕಾಲಕ್ಕೆ ಸರಿಹೊಂದುವಂತೆಯೇ ಇದೆ. ಕೋವಿಡ್-19 ಹರಡಿದರೆ, ಅವರನ್ನೇ ದೂರಲಾಗುವುದು. ಅವರನ್ನು ನಗರಗಳಲ್ಲಿ ಸೇರಿಸಿಕೊಳ್ಳಲಾರರು. ತಮ್ಮ ಹಳ್ಳಿಗಳಲ್ಲಿಯೂ ಅವರನ್ನು ಸಂಶಯದಿಂದ ಕಾಣಲಾಗಬಹುದು. ಸರಕಾರ-ರಾಷ್ಟ್ರ ಕೈಬಿಟ್ಟ, ಸಮಾಜ ತಿರಸ್ಕರಿಸಿದ ಈ ಜನರು ತಮ್ಮ ಸ್ವಂತ ನೆಲದಲ್ಲೇ ಮನೆಯಿಲ್ಲದ ನಿರಾಶ್ರಿತರಾಗಲಿದ್ದಾರೆ.
ಕೃಪೆ: ‘ದಿ ವೈರ್’


