Homeಮುಖಪುಟಪ್ರಿ ಕೆಜಿ ಸ್ಕೂಲೆಂಬ ವ್ಯಾಪಾರವೂ... : ತಾಯಿಯೆಂಬ ಗುರುವೂ...

ಪ್ರಿ ಕೆಜಿ ಸ್ಕೂಲೆಂಬ ವ್ಯಾಪಾರವೂ… : ತಾಯಿಯೆಂಬ ಗುರುವೂ…

ಪ್ರಿ.ಕೆಜಿ ಸ್ಕೂಲ್‌ಗಳ ಉದ್ದೇಶ ತಮ್ಮ ಖಜಾನೆ ತುಂಬಿಸುವುದಷ್ಟೇ ಹೊರತು ನಮ್ಮ ಮಕ್ಕಳನ್ನು ಉದ್ಧಾರ ಮಾಡಲಂತೂ ಅಲ್ಲ.

- Advertisement -
- Advertisement -

ಎಪ್ರಿಲ್ ತಿಂಗಳು ಬಂತೆಂದರೆ ಸಾಕು, ಮಕ್ಕಳ ಶಾಲಾ ದಾಖಲಾತಿಯ ಗದ್ದಲ ಪ್ರಾರಂಭವಾಗುತ್ತದೆ. ಒಂದೆಡೆ ಹೆತ್ತವರಿಗೆ ಖುಷಿ, ಜೊತೆಗೆ ಯಾವ ಶಾಲೆಗೆ ಸೇರಿಸಬೇಕೆನ್ನುವ ಗೊಂದಲ. ಇನ್ನೊಂದೆಡೆ ಶಾಲಾ ಶುಲ್ಕದ ತಲೆಬಿಸಿ ಇವೆಲ್ಲವೂ ಇತ್ತೀಚೆಗೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದರಿಂದ ನಾನೂ ಕೂಡಾ ಹೊರತಾಗಿಲ್ಲ. ನನ್ನಮ್ಮನಿಗೆ ಇದರ ಚಿಂತೆಯಿರಲಿಲ್ಲ. ನನ್ನ ಪುಟ್ಟ ಹಳ್ಳಿಯಲ್ಲಿ ಸರಕಾರಿ ಶಾಲೆ ಬಿಟ್ಟರೆ ಬೇರೆ ಆಯ್ಕೆಯೇ ಇರಲಿಲ್ಲ. ಈಗ ಹಾಗಲ್ಲ, ಹೆಜ್ಜೆಗೊಂದರಂತೆ ಪ್ರಿ-ಕೆಜಿ ಶಾಲೆಗಳು ತಮ್ಮ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿರುತ್ತವೆ. ಒಂದೆರಡು ಹಲ್ಲುಗಳು ಇಣುಕಿದರೆ ಸಾಕು, ಈ ಸ್ಕೂಲ್‌ಗಳು ಅಮ್ಮನ ಮಡಿಲಿನಿಂದ ಮಕ್ಕಳನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತವೆ.

ಹಿಂದೆಲ್ಲಾ ಮಕ್ಕಳಿಗೆ ಐದು ವರ್ಷವಾಗುತ್ತಲೇ ಅಂಗನವಾಡಿಗೆ ಸೇರಿಸಿ, ಆರು ವರ್ಷ ತುಂಬಿದಾಗ ಶಾಲೆಗೆ ದಾಖಲಿಸುವ ಪರಿಪಾಠವಿತ್ತು. ಅಲ್ಲಿಯವರೆಗೆ ಅಮ್ಮನ ಸೆರಗು ಹಿಡಿದು ನೇತಾಡುತ್ತಲೇ ಕಾಲಕಳೆಯುತ್ತಿದ್ದರು. ಅಂಗನವಾಡಿಗೂ ಹೋಗುತ್ತಿದ್ದುದು ಆಗೊಮ್ಮೆ ಈಗೊಮ್ಮೆ. ಮನೆಗೆಲಸಕ್ಕಾಗಿ ಯಂತ್ರಗಳಿಲ್ಲದ ಕಾಲದಲ್ಲಿ ಅಮ್ಮಂದಿರು ಸ್ವಯಂ ಯಂತ್ರಗಳಾಗಿ ದುಡಿಯುತ್ತಿದ್ದರು. ಬಿಡುವಿಲ್ಲದ ದಿನಚರಿಯ ನಡುವೆಯೂ, ವಯಸ್ಸಿಗೆ ಒಂದು ವರ್ಷದ ಅಂತರವಿರುತ್ತಿದ್ದ ಐದಾರು ಮಕ್ಕಳಿಗೂ ತಮ್ಮ ಸಮಯವನ್ನು ಮೀಸಲಾಗಿಡುತ್ತಿದ್ದರು. ಮಕ್ಕಳ ಜೊತೆ ಮುಕ್ತವಾಗಿ ಮಾತನಾಡುತ್ತಾ, ಕಥೆ ಹೇಳುತ್ತಾ, ಜೊತೆ ಸೇರಿ ಆಟವಾಡುತ್ತಾ ಮುಗ್ಧ ಮನಸ್ಸುಗಳ ನಡುವಿನ ಕೊಂಡಿಯನ್ನು ಭದ್ರಗೊಳಿಸುತ್ತಿದ್ದರು. ಎಷ್ಟು ಕಿರಿಕಿರಿಯುಂಟಾದರೂ ಒಂದು ಹಂತದವರೆಗೆ ಅವರನ್ನು ದೂರವಿರಿಸುವ ಪ್ರಯತ್ನ ಮಾಡುತ್ತಿರಲಿಲ್ಲ.

ಮಕ್ಕಳಿಗೆ ನೀಡಬೇಕಾದ ಸಮಯವು ಅವರ ಹಕ್ಕಾಗಿರುತ್ತದೆ. ಈಗ ನಮ್ಮಲ್ಲಿ ಧಾರಾಳ ಸಮಯವಿದೆ. ಆದರೆ ಒಂದಿಷ್ಟು ಹೊತ್ತು ಮಕ್ಕಳ ಜೊತೆ ಕಳೆಯಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಒಂದಿಬ್ಬರು ಮಕ್ಕಳು ಇರುವುದಾದರೂ ಸಂಭಾಳಿಸುವುದು ಬಹಳ ಕಷ್ಟ ಎನ್ನುವುದು ಬಹುತೇಕ ತಾಯಂದಿರು ಆಗಾಗ ಹೇಳುತ್ತಿರುವ ಮಾತು. ಇದಕ್ಕೆ ಪರಿಹಾರವನ್ನು ಪ್ರಿ-ಕೆಜಿ ಸ್ಕೂಲ್‌ಗಳು ನೀಡಿವೆ. ಅದರಂತೆ ತಮ್ಮ ಪುಟಾಣಿ ಮಕ್ಕಳನ್ನು ಪ್ರಿ-ಕೆಜಿ ಸ್ಕೂಲ್‌ಗಳ ಬಾಗಿಲಿಗೆ ನೂಕಿ ಬಿಡುತ್ತಾರೆ. ಒಂದಿಷ್ಟು ಹೊತ್ತು ಮಕ್ಕಳೊಡನೆ ಬೆರೆತು ನೋಡಿ, ಅವರ ಸೃಜನಶೀಲ ಮನಸ್ಸು ನಮ್ಮಲ್ಲಿ ಅಚ್ಚರಿಯುಂಟುಮಾಡುತ್ತದೆ. ತುಂಟಾಟಗಳು ದಿನದ ಜಂಜಾಟಗಳಿಗೆ ನಿರಾಳತೆಯನ್ನು ಒದಗಿಸುತ್ತದೆ. ಹಠ, ಕೀಟಲೆ, ಚೇಷ್ಟೆ ಇವೆಲ್ಲಾ ಮಕ್ಕಳಲ್ಲಿರುವ ಸಹಜ ಗುಣಗಳು. ಅವುಗಳ ಅಭಿವ್ಯಕ್ತಿ ಕೂಡಾ ಅವರ ಹಕ್ಕಾಗಿರುತ್ತದೆ. ಅದಕ್ಕಾಗಿ ಪುಟ್ಟ ಮಕ್ಕಳನ್ನು ಅಮ್ಮನ ಮಡಿಲಿಂದ ದೂರವಿಡುವುದು ಎಷ್ಟು ಸರಿ?

ಬಾಲ್ಯವೆಂಬುದು ಮಕ್ಕಳ ಹಕ್ಕು. ಅದನ್ನವರು ಸಹಜವಾಗಿಯೇ ಆಸ್ವಾಧಿಸಬೇಕು. ಅದನ್ನು ಕಸಿಯುವ ಹಕ್ಕು ಹೆತ್ತವರಿಗೂ ಇಲ್ಲ. ಒಂದು ವರ್ಷ ಬಳಪ ಬಳಸದೆ ಆಡುತ್ತಾ, ನಲಿಯುತ್ತಾ ಕಲಿಯುವುದು, ಪರ್ಯಾವರಣ ನಡಿಗೆ (ನೇಚರ್ ವಾಕ್), ಇಂಗ್ಲಿಷ್ ಕಲಿಕೆ ಇತ್ಯಾದಿ ಬಣ್ಣ ಬಣ್ಣಗಳ ಆಮಿಷಗಳ ಮೂಲಕ ಮೂವತ್ತು ಸಾವಿರದಿಂದ ಎಪ್ಪತ್ತು ಸಾವಿರದವರೆಗೂ ಈ ಪ್ರಿ ಕೆ.ಜಿ.ಸ್ಕೂಲ್‌ಗಳು ಶುಲ್ಕ ಪೀಕಿಸುತ್ತವೆ. ಶ್ರೀಮಂತರಷ್ಟೇ ಅಲ್ಲ, ಮಧ್ಯಮ ವರ್ಗದ ಹೆತ್ತವರೂ ಅವರ ಆಮಿಷಕ್ಕೆ ಬಲಿ ಬೀಳುತ್ತಾರೆ. ಹೇಗಾದರೂ ಸಾಲ, ಸೋಲ ಮಾಡಿ ಹಣ ಹೊಂದಿಸಿ ಅಲ್ಲಿಗೆ ದಾಖಲಿಸುತ್ತಾರೆ. ಉಳ್ಳವರಿಗೆ ಇದು ಪ್ರತಿಷ್ಟೆಯಾದರೆ ಮಧ್ಯಮ ವರ್ಗದವರಿಗೆ ಪ್ರಿ ಕೆ.ಜಿ.ಸ್ಕೂಲ್‌ಗಳಿಗೆ ಕಳಿಸದಿದ್ದರೆ ಎಲ್ಲಿ ತಮ್ಮ ಮಕ್ಕಳು ಹಿಂದುಳಿದು ಬಿಡುತ್ತಾರೋ ಎಂಬ ಆತಂಕ. ಒಂದರ್ಥದಲ್ಲಿ ಇವೆಲ್ಲವೂ ಎದೆಹಾಲಿಗೆ ಇಂಗ್ಲಿಷ್ ಬೆರೆಸುವ ವ್ಯಾಮೋಹ. ಇಂಗ್ಲಿಷ್ ಕಲಿಯುವುದು ತಪ್ಪಲ್ಲ. ಆದರೆ ಅತಿಯಾದ ಇಂಗ್ಲಿಷಿನ ವ್ಯಾಮೋಹದಿಂದಾಗಿ ಮಾತೃಭಾಷೆಯೇ ಸರಿಯಾಗಿ ಮಾತನಾಡಲು ಬಾರದ ಎಷ್ಟೋ ಮಕ್ಕಳಿದ್ದಾರೆ. ಸಂವಹನದ ತೊಡಕಿನಿಂದಾಗಿ ಮನೆಯಲ್ಲಿ ಹಿರಿಯರೊಂದಿಗೆ ವ್ಯವಹರಿಸಲು ಬಾರದೇ ಸಂಬಂಧಗಳು ಶಿಥಿಲಗೊಳ್ಳುತ್ತವೆ.

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿನಂತೆ ಲಕ್ಷ ಸುರಿದರೂ ತಾಯಿಗಿಂತ ಮಿಗಿಲಾದ ಗುರುವನ್ನು ಈ ಪ್ರಿ ಕೆ.ಜಿ. ಶಾಲೆಗಳು ಒದಗಿಸಲು ಸಾಧ್ಯವೇ..? ಮನೆಯ ಹೊರಗಡೆ ಆಡಲು ಬಿಟ್ಟಾಗ ಬೀಳುತ್ತಾ, ಏಳುತ್ತಾ ಆಡುವಾಗ ಕಣ್ಣಿಗೆ ಕಾಣಿಸುವ ಆಕಾಶ, ಪ್ರಾಣಿ ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಮರಗಿಡಗಳು, ಗಾಳಿ – ಬೆಳಕು, ಮೋಡ ಇವುಗಳಿಗೆಲ್ಲಾ ನೇಚರ್ ವಾಕ್ ಎಂಬ ಹೆಸರನ್ನಿಟ್ಟು ಮಾಡುವ ವ್ಯಾಪಾರಕ್ಕೆ ದುಡ್ಡು ಸುರಿಯಬೇಕೇ..? ಪ್ರಕೃತಿಯ ಬಗ್ಗೆ ಮಕ್ಕಳಿಗೆ ವಿಶೇಷ ಕುತೂಹಲವಿರುತ್ತದೆ. ಅವರದೇ ಆದ ಆಲೋಚನೆಗಳು, ಕಲ್ಪನೆಗಳು ಇರುತ್ತವೆ. ಇದನ್ನು ಪ್ರಿ.ಕೆ.ಜಿ.ಸ್ಕೂಲ್‌ಗಳು ಇಲ್ಲವಾಗಿಸುತ್ತವೆ. ತಾಯಿಯ ಸೆರಗು ಹಿಡಿದು ಬಾಲದಂತೆ ಹಿಂಬಾಲಿಸುವಾಗ ಕಲಿಯುವ ವಸ್ತುಗಳ ಹೆಸರು, ಹಣ್ಣು-ತರಕಾರಿಗಳ ಹೆಸರು, ಬಣ್ಣಗಳು ಇತ್ಯಾದಿಗಳನ್ನೆಲ್ಲಾ ಅರಿತುಕೊಳ್ಳಲು ಪ್ರಿ ಕೆ.ಜಿ.ಸ್ಕೂಲ್‌ಗಳು ಬೇಕೇ..?

ಮಕ್ಕಳ ಮನಸ್ಸೆಂಬುದು ಬಹಳ ಸೂಕ್ಷ್ಮ. ಈ ವಿಚಾರವನ್ನು ಅಮ್ಮಂದಿರು ನೆನಪಿಟ್ಟುಕೊಳ್ಳಲೇಬೇಕು. ನಾವು ಹೇಳಿದಂತೆಲ್ಲಾ ಅವರು ಕೇಳದಿರಬಹುದು. ಆದರೆ ನಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನಮಗರಿವಿಲ್ಲದೇ ಅನುಸರಿಸುತ್ತಾರೆ. ಅವರ ಕಲಿಕೆ ಪ್ರಾರಂಭವಾಗುವುದೇ ಇಲ್ಲಿಂದ. ಇದು ಅವರ ಸರ್ವತೋಮುಖ ಬೆಳವಣಿಗೆಗೆ ಗಟ್ಟಿ ಅಡಿಪಾಯ ಹಾಕುತ್ತದೆ. ಹಾಗಿರುವಾಗ ನಾವಿಡುವ ಪ್ರತೀ ಹೆಜ್ಜೆಯೂ ಜಾಗರೂಕತೆಯಿಂದ ಕೂಡಿರಬೇಕು. ಇಂತಹ ಸಂದರ್ಭದಲ್ಲಿ ಮಕ್ಕಳನ್ನು ದೂರ ಮಾಡಿದರೆ ಅವರು ಇದೆಲ್ಲದರಿಂದಲೂ ವಂಚಿತರಾಗುತ್ತಾರೆ. ಮಕ್ಕಳ ಸ್ವಭಾವವೇ ಹಾಗೆ. ಪ್ರತಿಯೊಂದನ್ನು ತಾಯಿಯಲ್ಲಿ ಪ್ರಶ್ನಿಸುತ್ತಲೇ ಇರುತ್ತಾರೆ. ಒಂದಕ್ಕೆ ಉತ್ತರಿಸಿದರೆ ಇನ್ನೊಂದು, ಅದಕ್ಕೆ ಉತ್ತರಿಸಿದರೆ ಮತ್ತೊಂದು, ಮಗದೊಂದು ಪ್ರಶ್ನೆಗಳು. ಉತ್ತರಿಸಿ ಸಾಕು ಸಾಕಾಗುವಷ್ಟು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿರುತ್ತಾರೆ. ಒಂದು ವೇಳೆ ಅತೀ ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಿ ಕೆ.ಜಿ.ಸ್ಕೂಲ್‌ಗಳಿಗೆ ಕಳಿಸಿದರೆ ಅವರ ಆ ಪ್ರಶ್ನಿಸುವ ಸ್ವಭಾವವೇ ಕುಂಠಿತಗೊಂಡು ಕ್ರಮೇಣ ನಿಂತು ಹೋಗುತ್ತದೆ, ಶಿಸ್ತಿನ ಹೆಸರಲ್ಲಿ ಮಾಯವಾಗುತ್ತದೆ. ಅಲ್ಲಿರುವ ಅಷ್ಟೂ ಮಕ್ಕಳು ಪ್ರಶ್ನೆಗಳನ್ನು ಕೇಳುತ್ತಾ, ಮಾತನಾಡುತ್ತಾ ಇದ್ದರೆ ಶಿಕ್ಷಕಿಯಾದರೂ ಏನು ಮಾಡಲಾದೀತು..?

ತಾಯಿಯೊಬ್ಬಳು ತನ್ನ ಮಗುವಿನ ಮನಸ್ಸನ್ನು ಅರ್ಥೈಸಿದಂತೆ ಬೇರೆ ಯಾರೇ ಆದರೂ ಅರ್ಥೈಸಲು ಸಾಧ್ಯವೇ..? ಎಳವೆಯಲ್ಲಿ ಕಲಿತದ್ದು ಬಂಡೆಯ ಮೇಲೆ ಕೆತ್ತಿದಂತೆ. ದೊಡ್ಡವರಾದ ಮೇಲೆ ಕಲಿತದ್ದು ನೀರಿನ ಮೇಲೆ ಬರೆದಂತೆ. ಹಾಗೆಂದು ಮಕ್ಕಳ ಇತಿಮಿತಿಗಳನ್ನು ಕಡೆಗಣಿಸಿ ಪುಟ್ಟ ಮೆದುಳಿಗೆ ಸಿಕ್ಕಿದ್ದೆಲ್ಲವನ್ನೂ ತುಂಬಲು ಹೋದರೆ ಅದು ಅವರ ಮನಸ್ಸಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುವುದನ್ನು ಮರೆಯಬಾರದು.

ಹಿಂದೊಮ್ಮೆ ನನ್ನ ಮಾತೃಭಾಷೆ ಬ್ಯಾರಿಯಲ್ಲಿ ಪ್ರಿ ಕೆಜಿ ಸ್ಕೂಲ್‌ಗಳ ಬಗ್ಗೆ ಲೇಖನ ಬರೆದಾಗ ಹಲವು ಅಮ್ಮಂದಿರು ನನ್ನ ಮೇಲೆ ಕಿಡಿಕಾರಿದರು ಹಾಗೂ ಪ್ರಿ ಕೆಜಿ ಸ್ಕೂಲ್ ಪದ್ಧತಿಯನ್ನು ಸಮರ್ಥಿಸಿಕೊಂಡಿದ್ದರು. ಹಲವು ಪ್ರಿ.ಕೆ.ಜಿ.ಸ್ಕೂಲ್‌ಗಳ ಆಡಳಿತ ಮಂಡಳಿಗೂ ತಲುಪಿಸಿದ್ದರು. ನಾನು ಈಗಲೂ ನನ್ನ ಅದೇ ಪ್ರತಿಪಾದನೆಗೆ ಬದ್ಧಳಾಗಿದ್ದೇನೆ. ಪ್ರಿ.ಕೆಜಿ ಸ್ಕೂಲ್‌ಗಳ ಉದ್ದೇಶ ತಮ್ಮ ಖಜಾನೆ ತುಂಬಿಸುವುದಷ್ಟೇ ಹೊರತು ನಮ್ಮ ಮಕ್ಕಳನ್ನು ಉದ್ಧಾರ ಮಾಡಲಂತೂ ಅಲ್ಲ.


ಇದನ್ನೂ ಓದಿ: ಈ ಹೊತ್ತಿನಲ್ಲಿ ʼಹಳ್ಳಿ ಮಕ್ಕಳʼ ಕುರಿತು: ಒಂದು ರಚನಾತ್ಮಕ ಆಲೋಚನೆ – ಕೆ.ಪಿ.ಸುರೇಶ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...

ಜಾರ್ಖಂಡ್| ವಾಮಾಚಾರ ಆಚರಣೆಗೆ ಅಪ್ರಾಪ್ತ ಬಾಲಕಿ ಬಲಿ; ತಾಯಿ ಸೇರಿದಂತೆ ಮೂವರ ಬಂಧನ

ಜಾರ್ಖಂಡ್‌ನ ಹಜಾರಿಬಾಗ್ ಬಳಿಕ ಕುಸುಂಭ ಗ್ರಾಮದಲ್ಲಿ ಬಲಿದಾನದ ಆಚರಣೆಯಲ್ಲಿ ಕತ್ತು ಹಿಸುಕಿ ಕೊಂದ ಹದಿಹರೆಯದ ಹುಡುಗಿಯ 35 ವರ್ಷದ ತಾಯಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಜೊತೆಗೆ, ಮಾಂತ್ರಿಕ ಮತ್ತು ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ...

ಪ. ಬಂಗಾಳ | ಎಸ್‌ಐಆರ್ ಕರ್ತವ್ಯದಲ್ಲಿದ್ದ ನ್ಯಾಯಾಧೀಶರನ್ನು ಒತ್ತೆಯಾಳಾಗಿಟ್ಟುಕೊಂಡ ಆರೋಪ : ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಪಡೆಗಳ ನಿಯೋಜನೆಗೆ ನಿರ್ದೇಶನ

ನಿನ್ನೆ (ಏ.1) ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರತಿಭಟನೆಯ ವೇಳೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯದಲ್ಲಿ ತೊಡಗಿದ್ದ ನ್ಯಾಯಾಂಗ ಅಧಿಕಾರಿಗಳನ್ನು ಪ್ರತಿಭಟನಾಕಾರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ....

ಉತ್ತರ ಪ್ರದೇಶ| ಮುಸ್ಲಿಂ ಯುವಕನನ್ನು ಥಳಿಸಿ ದರೋಡೆ ಮಾಡಿದ ಗುಂಪು; ಹಿಂದೂ ಶ್ಲೋಕ ಪಠಿಸುವಂತೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಹಿಂದುತ್ವವಾದಿ ಗುಂಪೊಂದು ಮುಸ್ಲಿಂ ಯುವಕನನ್ನು ನಿರ್ದಯವಾಗಿ ಥಳಿಸಿ, ಅವಮಾನಿಸಿ, ಹಿಂದುತ್ವ ಶ್ಲೋಕಗಳನ್ನು ಪಠಿಸುವಂತೆ ಒತ್ತಾಯಿಸಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ 'ಕ್ಲಾರಿಯನ್ ಇಂಡಿಯಾ' ವರದಿ ಮಾಡಿದೆ. ಮಾರ್ಚ್ 28...

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...