ದೇಶದಲ್ಲಿ ಕೊವಿಡ್-19 ಸೋಂಕುಗಳು ಹೆಚ್ಚುತ್ತಿರುವ ಮಧ್ಯೆ, ಏಪ್ರಿಲ್ 14 ರ ನಂತರ ಕೊರೊನ ವೈರಸ್ ಹರಡುವಿಕೆಯನ್ನು ತಡೆಯಲು ಲಾಕ್‌ಡೌನ್ ವಿಸ್ತರಿಸಲಾಗುವುದು ಮತ್ತು ನಿರ್ಬಂಧಗಳನ್ನು ಒಂದೇ ಬಾರಿಗೆ ತೆಗೆದುಹಾಕಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸೂಚಿಸಿದ್ದಾರೆ.
ಸರ್ವ ಪಕ್ಷಗಳ ಮುಖಂಡರೊಂದಿಗಿನ ವಿಡಿಯೋ ಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ ಈ ಬಗ್ಗೆ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸುವುದಾಗಿ ಹೇಳಿದ್ದಾರೆ.
“ಪ್ರತಿಯೊಂದು ಜೀವವನ್ನೂ ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ. ದೇಶದ ಪರಿಸ್ಥಿತಿ ‘ಸಾಮಾಜಿಕ ತುರ್ತುಸ್ಥಿತಿಗೆ’ ಹೋಲುತ್ತದೆ, ಇಂದು ಕಠಿಣ ನಿರ್ಧಾರಗಳ ಅಗತ್ಯವಿದೆ ಹಾಗೂ ನಾವು ಜಾಗರೂಕರಾಗಿ ಮುಂದುವರಿಯಬೇಕು” ಎಂದು ಪ್ರಧಾನಿ ಹೇಳಿದರು.
ಕೊವಿಡ್-19 ರ ನಂತರ ಮತ್ತೆ ಬದುಕು ಒಂದೇ ಆಗಿರುವುದಿಲ್ಲ, ಮುಂದಿನ ದಿನಗಳಲ್ಲಿ “ಕೊರೊನಾ ಪೂರ್ವ ಮತ್ತು ಕೊರೊನಾ ನಂತರ” ಎಂದಿರುತ್ತದೆ ಎಂದು ಪ್ರಧಾನಿ ಹೇಳಿದರು.
“ಬೃಹತ್ ನಡೆಗಳು, ಸಾಮಾಜಿಕ ಹಾಗೂ ವೈಯಕ್ತಿಕ ಬದಲಾವಣೆಗಳು ಆಗಬೇಕಿದೆ” ಎಂದು ಅವರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜಕೀಯ ಮುಖಂಡರಿಗೆ ತಿಳಿಸಿದ್ದಾರೆ.
ಕೊವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು 130 ಕೋಟಿ ಜನರ ವ್ಯಾಪಕ ಲಾಕ್‌ಡೌನ್ ಏಪ್ರಿಲ್ 14 ರಂದು ಕೊನೆಗೊಳ್ಳುತ್ತದೆ. ಇದನ್ನು ವಿಸ್ತರಿಸಬೇಕೆ, ಬೇಡವೇ ಎಂಬ ಬಗ್ಗೆ ಪ್ರಧಾನಿ ಮೋದಿ ಈ ವಾರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಿರ್ಧಾರ ತೆಗೆದುಕೊಳ್ಳುವ ಮೊದಲು, ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳೊಂದಿಗೆ ಎರಡನೇ ಸಭೆ ನಡೆಸಲಿದ್ದಾರೆ.
ಅನೇಕ ರಾಜ್ಯಗಳು ಮತ್ತು ತಜ್ಞರು ಈಗಾಗಲೇ ಲಾಕ್‌ಡೌನ್ ವಿಸ್ತರಣೆಯನ್ನು ಕೋರಿದ್ದಾರೆ. ಲಾಕ್‌ಡೌನ್ ಇದ್ದರೂ ಕೊರೊನಾ ಪ್ರಕರಣಗಳು ವೇಗವಾಗಿ ಹರಡುತ್ತಿವೆ, ಜೊತೆಗೆ ಮುಂಬರುವ ವಾರಗಳಲ್ಲಿ ಸೋಂಕು ಗರಿಷ್ಠವಾಗಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ಈಗಾಗಲೆ ನೀಡಿದ್ದಾರೆ ಎಂದಿದ್ದಾರೆ.
ಶಾಲಾ-ಕಾಲೇಜುಗಳು ಮತ್ತು ಧಾರ್ಮಿಕ ಕೇಂದ್ರಗಳು ಇನ್ನೂ ಹೆಚ್ಚಿನ ವಾರಗಳವರೆಗೆ ಮುಚ್ಚಲ್ಪಡಬೇಕೆಂದು ಮಂತ್ರಿಗಳ ಗುಂಪು ನಿನ್ನೆ ಸೂಚಿಸಿತ್ತು. ರೈಲು ಪ್ರಯಾಣ, ಬಸ್ಸುಗಳು, ಮಹಾನಗರಗಳು ಮತ್ತು ಧಾರ್ಮಿಕ ಕೂಟಗಳನ್ನು ದೇಶದಲ್ಲಿ ಎಲ್ಲಿಯಾದರೂ ಅನುಮತಿಸುವ ಸಾಧ್ಯತೆಯಿಲ್ಲ. ದೇಶದಲ್ಲಿ ಕೊರೊನ ವೈರಸ್ ಪ್ರಕರಣಗಳ ಸಂಖ್ಯೆ 5,194 ಕ್ಕೆ ಏರಿದೆ ಹಾಗೂ 149 ಸಾವುಗಳು ಸಂಭವಿಸಿವೆ.


