Homeಅಂತರಾಷ್ಟ್ರೀಯಕೊರೊನಾದಿಂದ ಉಂಟಾದ ಮಹಾನ್‌ ನಿರುದ್ಯೋಗ: ಅಮೇರಿಕದ ಜನರು ತಮ್ಮ ಅಹಂ ಬದಿಗಿಟ್ಟು ನೆರವು ಕೇಳುತ್ತಿದ್ದಾರೆ.

ಕೊರೊನಾದಿಂದ ಉಂಟಾದ ಮಹಾನ್‌ ನಿರುದ್ಯೋಗ: ಅಮೇರಿಕದ ಜನರು ತಮ್ಮ ಅಹಂ ಬದಿಗಿಟ್ಟು ನೆರವು ಕೇಳುತ್ತಿದ್ದಾರೆ.

ಕೊರೋನ ವೈರಸ್ಸಿನಿಂದಾಗಿ ತಮ್ಮ ಕೆಲಸವನ್ನು ಕಳೆದುಕೊಂಡಿರುವ ಅಮೆರಿಕದ ಹಲವು ಕಾರ್ಮಿಕರು ತಮ್ಮ ಜೀವಿತದಲ್ಲಿ ಮೊತ್ತ ಮೊದಲ ಬಾರಿಗೆ ಒಲ್ಲದ ಮನಸ್ಸಿನಿಂದ ದಾನವನ್ನು ಮತ್ತು ನಿರುದ್ಯೋಗಿಗಳಿಗೆ ನೀಡುವ ಸೌಲಭ್ಯಗಳನ್ನು ಕೋರುತ್ತಿದ್ದಾರೆ.

- Advertisement -
- Advertisement -

ಕೊರೋನ ದಾಳಿಯಿಂದ ಜಗತ್ತಿನ ಜನರೆಲ್ಲರೂ ಕಂಗಾಲಾಗಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬಂದ ವರದಿ ಅಲ್ಲಿಯ ಜನರ ಕಷ್ಟವನ್ನು ನಮಗೆ ಪರಿಚಯಿಸುತ್ತದೆ. ನಾವು ನಮ್ಮ ಆರ್ಥಿಕತೆಯನ್ನು ಅವರ ಹಾದಿಯಲ್ಲಿ ಕಟ್ಟಲು ಹೊರಟಿರುವುದರಿಂದ ನಮಗೆ ಇದು ಉಪಯುಕ್ತವಾಗಬಹುದೆಂದು, ಟಿ.ಎಸ್.ವೇಣುಗೋಪಾಲ್ ಅವರು ಅನುವಾದಿಸಿ ಹಂಚಿಕೊಂಡಿದ್ದಾರೆ.

ಕಾರಾ ಬಕ್ಲಿ, ನ್ಯೂಯಾರ್ಕ್ ಟೈಮ್ಸ್, 31 ಮಾರ್ಚಿ 2020

ಅನುವಾದ: ಟಿ.ಎಸ್.ವೇಣುಗೋಪಾಲ್

ದಕ್ಷಿಣ ಡೆಲ್ಲಾಸ್‌ನಲ್ಲಿ ಆಹಾರದ ಬ್ಯಾಂಕಿಗೆ ಒಂದು ಮಿನಿವ್ಯಾನ್, ಷವರ್ಲೆ ಟಾಹೋ, ಸೆಡಾನ್, ಪುರಾತನ ಜಾಗ್ವಾರ್ ಹೀಗೆ ಕಾರುಗಳು ಪ್ರವಾಹದೋಪಾದಿಯಲ್ಲಿ ಬಂದವು. ಈ ಕಾರುಗಳಲ್ಲಿ ಕುಳಿತಿದ್ದವರು ತಾವು ಇಲ್ಲಿಗೆ ಬರಬೇಕಾಗಬಹುದೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಹೀಗೆ ಬಂದವರಲ್ಲಿ ಲ್ಯಾಂಡ್‌ಸ್ಕೇಪರ್, ಪ್ರೌಢಶಾಲೆಯ ಆಡಳಿತಗಾರ, ಕಾಲೇಜು ವಿದ್ಯಾರ್ಥಿ, ಗುಮಾಸ್ತನೂ ಮತ್ತು ಲೆಸ್ಸಿಯಂತಹ ವೇರ್‌ಹೌಸ್ ಕಾರ್ಮಿಕ, ಹೀಗೆ ಯಾರ‍್ಯಾರೋ ಇದ್ದರು. ಇವರಲ್ಲಿ ಹೆಚ್ಚಿನವರು ಕ್ರಾಸ್ ರೋಡ್ಸ್ ಕಮ್ಯುನಿಟಿ ಸರ್ವಿಸಸ್‌ಗೆ ಮೊದಲ ಬಾರಿಗೆ ಬಂದಿದ್ದರು; ಅವರು ಹಿಂದೆಂದೂ ಅಲ್ಲಿಗೆ ಬಂದಿರಲಿಲ್ಲ. ಅವರೆಲ್ಲಾ ಕೊರೋನ ಮಹಾಮಾರಿಯಿಂದ ಆರ್ಥಿಕತೆ ನೆಲಕಚ್ಚಿದ್ದರಿಂದ ಕೆಲಸ ಕಳೆದುಕೊಂಡವರು.

ಇಪ್ಪತ್ತೇಳರ ಹರೆಯದ ಎರಡು ಮಕ್ಕಳ ತಂದೆ ಹಾಗೆ ಲೆಸ್ಸಿ ಕೂಡ ಉದ್ಯೋಗ ಕಳೆದುಕೊಂಡವನೆ. ಅವನ ಕಾರಿನ ಡಿಕ್ಕಿಗೆ ಕೈಗವುಸು ಧರಿಸಿದ್ದ ಉಗ್ರಾಣದ ಕೆಲಸಗಾರ ಆಹಾರದ ಡಬ್ಬವೊಂದನ್ನು ಇಡುತ್ತಿದ್ದಾಗ, “ನಿಜವಾಗಿಯಾದರೂ ನಾನಿದನ್ನು ಎಂದೂ ಮಾಡಬೇಕಾಗಿರಲಿಲ್ಲ. ಆದರೆ ಇದನ್ನೆಲ್ಲಾ ನನ್ನ ಮಕ್ಕಳಿಗಾಗಿ ಮಾಡಬೇಕಾಗಿದೆ” ಎಂದು ನೋವು ತೋಡಿಕೊಂಡ. ಅವನು ಪಕ್ಕದ ಮನೆಯವರೊಂದಿಗೆ ಆಹಾರಕ್ಕಾಗಿ ಅಲ್ಲಿಗೆ ಬಂದಿದ್ದ.

ನೂರಾರು, ಸಾವಿರಾರು ಅಮೆರಿಕನ್ನರು ತಮ್ಮ ಜೀವಮಾನದಲ್ಲಿ ಮೊತ್ತ ಮೊದಲಬಾರಿ ಹೀಗೆ ಸಹಾಯ ಕೇಳುತ್ತಿದ್ದಾರೆ. ಹೀಗೆ ಕೇಳುತ್ತಿರುವವರಲ್ಲಿ ಲಾಸ್ ಅಂಜಲಿಸ್‌ನ ಉಗುರುಗಳ ತಂತ್ರಜ್ಞರಿಂದ ಹಿಡಿದು ಫೋರ್ಟ್ ಲಾಡರ್‌ಡೇಲ್‌ನ ವಿಮಾನ ನಿಲ್ದಾಣದ ಕಾರ್ಮಿಕರು, ಫೀನಿಕ್ಸ್ನ ಬಾರ್ ಟೆಂಡರ್‌ಗಳಿಂದ ಮೊದಲ್ಗೊಂಡು ಮಿನ್ನೆಸೋಟದ ಹಿಂದಿನ ರಿಯಾಲಿಟಿ ಷೋದ ಸ್ಪರ್ಧಿಗಳವರೆಗೆ ಹಲವು ಬಗೆಯ ಜನರಿದ್ದಾರೆ. ನಾಚಿಕೆ ಅಪಮಾನಗಳನ್ನು ಬದಿಗಿಟ್ಟು, ಇದಕ್ಕಿಂತಲೂ ಹೀನಾಯವಾದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವವರ ಬಗ್ಗೆ ಪಾಪಪ್ರಜ್ಞೆಯಿಂದ ವಿಸ್ಮಯಗೊಳ್ಳುತ್ತಾ, ಅವರು ತಾವು ನಿರುದ್ಯೋಗಿಗಳೆಂದು ಅರ್ಜಿ ಹಾಕಿಕೊಳ್ಳುತ್ತಿದ್ದಾರೆ. ಗೋಫಂಡ್‌ಮಿ ಸಂಸ್ಥೆಯ ಸಹಾಯ ಕೇಳುತ್ತಿದ್ದಾರೆ, ಇನ್‌ಸ್ಟಾಗ್ರಾಂ ಮೂಲಕ ಹಣ ಕೊಡಿ ಎಂದು ಕೇಳುತ್ತಿದ್ದಾರೆ. ತಮ್ಮಷ್ಟೇ ಕಷ್ಟದಲ್ಲಿ ಇರುವ ಸಹೋದ್ಯೋಗಿಗಳು ನೀಡುತ್ತಿರುವ ಸಹಾಯವನ್ನು ಮಾತಿಲ್ಲದೆ ಸ್ವೀಕರಿಸುತ್ತಿದ್ದಾರೆ ಮತ್ತು ತುಂಬಾ ದೊಡ್ಡ ಸಂಖ್ಯೆಯಲ್ಲಿ ಆಹಾರದ ಬ್ಯಾಂಕುಗಳ ಬಳಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದೆಂದೂ ಹೀಗಾಗಿರಲಿಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಬ್ಯಾಂಕುಗಳು ಹೆಣಗಾಡುತ್ತಿವೆ. ಏಕೆಂದರೆ ಆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರಲ್ಲಿ ಹೆಚ್ಚಿನವರು ನಿವೃತ್ತರು ಮತ್ತು ಈಗ ಸುರಕ್ಷತೆಯ ಕಾರಣದಿಂದಾಗಿ ಮನೆಯಲ್ಲೇ ಉಳಿದಿದ್ದಾರೆ.

ಮೆಟ್ ಕೌನ್ಸಿಲ್ ಅನ್ನುವುದು ನ್ಯೂಯಾರ್ಕ್ ನಗರದಲ್ಲಿ ಆಹಾರ ಮತ್ತು ವಸತಿಯ ಸಹಾಯವನ್ನು ನೀಡುವ ನಾನ್‌ಪ್ರಾಫಿಟ್ ಸಂಸ್ಥೆ. ಅದರ ಚೀಫ್ ಎಕ್ಸಿಕ್ಯುಟಿವ್ ಡೇವಿಡ್ ಗ್ರೀನ್ ಫೀಲ್ಡ್ ಹೇಳುತ್ತಾರೆ, “ಆರಂಭದಲ್ಲಿ ರೀಟೇಲ್ ಕಾರ್ಮಿಕರು, ಅಡಿಗೆಯವರು, ವೇಯ್ಟರ್‌ಗಳು ಮತ್ತು ಹೋಟೆಲ್ ಮಾಲಿಕರು ಸಹಾಯ ಕೇಳಿಕೊಂಡು ಬಂದರು. ಈಗ ಹೋದ ವಾರ ಕಾನೂನು ಉದ್ದಿಮೆಗಳ ಉದ್ಯೋಗಿಗಳು ಬಂದರು. ಅವರಲ್ಲಿ ಹೆಚ್ಚಿನವರಿಗೆ ನಿರುದ್ಯೋಗ ಎಂದರೆ ಏನೆಂದೇ ತಿಳಿಯದು.”

ಈ ಬಿಕ್ಕಟ್ಟು ಅಮೇರಿಕೆಯ ಎರಡು ಸಿದ್ಧಾಂತಗಳನ್ನು ಪರಸ್ಪರ ಮುಖಾಮುಖಿಯಾಗಿಸುತ್ತಿದೆ – ಒಂದು ಐಕ್ಯತೆಯನ್ನು ಸಾರುವ E Pluribus Unum  ಎಂಬ ಧ್ಯೇಯ ಮತ್ತು ಎರಡನೆಯದಾಗಿ ಕಠಿಣ ಪರಿಶ್ರಮಕ್ಕೆ ಫಲವಿದ್ದೇ ಇದೆ ಎಂಬ ಆಳವಾದ ನಂಬಿಕೆ. ಒಳ್ಳೆಯ ದಿನಗಳಲ್ಲಿ ಇವೆರಡೂ ಸಿದ್ಧಾಂತಗಳೂ ಒಟ್ಟೊಟ್ಟಿಗೆ ಇದ್ದವು. ಇಂದು ಇವೆರಡಕ್ಕೂ ಪರೀಕ್ಷೆಯ ಕಾಲ. ಹೊಸದಾಗಿ ನಿರುದ್ಯೋಗಿಯಾದವರಿಗೆ ತಮ್ಮನ್ನು ಕುರಿತ ಮತ್ತು ತಮ್ಮ ದೇಶವನ್ನು ಕುರಿತ ನಂಬಿಕೆಗಳನ್ನು ಪುನರ್‌ಮೌಲ್ಯಮಾಪನ ಮಾಡಿಕೊಳ್ಳುವುದಕ್ಕೆ ಇದು ಒತ್ತಾಯಿಸುತ್ತಿದೆ. ಮಿನ್ನೆಸೋಟದ ಸೈಂಟ್ ಲೂಯಿ ಪಾರ್ಕಿನಲ್ಲಿ 61 ವರ್ಷದ ತಂತ್ರಜ್ಞ ಸ್ಕಾಟ್ ಸೋಯಿಷ್ ಮೊತ್ತ ಮೊದಲ ಬಾರಿಗೆ ನಿರುದ್ಯೋಗಿ ಅನುಕೂಲತೆಗಳಿಗಾಗಿ ಅರ್ಜಿ ಹಾಕಿಕೊಳ್ಳುತ್ತಿದ್ದಾನೆ. ಒಂದು ವಾರದಲ್ಲಿ ನಿರುದ್ಯೋಗ ಭತ್ಯೆಗಾಗಿ 33 ಲಕ್ಷ ಜನ ಅರ್ಜಿ ಹಾಕಿಕೊಂಡಿದ್ದಾರೆ. ಈ ಸಂಖ್ಯೆ ಈವರೆಗಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. ಯಜಮಾನರ ಪೇ ರೋಲ್ ತೆರಿಗೆಗಳನ್ನು ಬಳಸಿಕೊಂಡು ಕೊಡುತ್ತಿರುವ ಸಹಾಯವನ್ನು ಕೇಳುವಂತಹ ಜನರು ಸೋಮಾರಿಗಳು, ಅವರು ಶ್ರಮಪಟ್ಟು ದುಡಿಯುತ್ತಿಲ್ಲ ಎಂದು ಈವರೆಗೆ ಆಳವಾಗಿ ನಂಬಿದ್ದ ಸ್ಕಾಟ್ ಈಗ ತನ್ನ ನಂಬಿಕೆಯನ್ನು ಬಿಡಬೇಕಾಯಿತು. “ನಿಜವಾಗಿ ಹೇಳಬೇಕೆಂದರೆ, ಜನರಿಗೆ ಬೇರೆ ಆಯ್ಕೆಯೇ ಇಲ್ಲ. ಅವರನ್ನು ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದು ಹೇಳಿಬಿಟ್ಟರೆ ಯಾರಾದರೂ ಏನು ಮಾಡುತ್ತಾರೆ?” ಎಂದು ಸ್ಕಾಟ್ ಸೋಯಿಷ್ ಕೇಳುತ್ತಾನೆ.

ಲಾಸ್ ಅಂಜಲಿಸ್‌ನಲ್ಲಿ 29ರ ಹರೆಯದ ಉಗುರಿನ ತಂತ್ರಜ್ಞೆ ಸಮಂತಾ ಪಸಾಯೆ ತಾನು ಕೆಲಸ ಮಾಡುತ್ತಿದ್ದ ಸಲೋನ್ ಮುಚ್ಚಿಹೋದ ಮೇಲೆ ಏನಾದರೂ ಒಂದಿಷ್ಟು ದಾನ ನೀಡುವಂತೆ ಇನ್‌ಸ್ಟಾಗ್ರಾಂ ಮೂಲಕ ಕೇಳಿಕೊಂಡಳು. “ನಾನು ಯಾರ ಸಹಾಯವನ್ನೂ ಕೇಳುವವಳಲ್ಲ. ಎಲ್ಲವನ್ನೂ ನನ್ನಷ್ಟಕ್ಕೇ ಸ್ವತಂತ್ರವಾಗಿ ಮಾಡಿಕೊಳ್ಳುವವಳು. ಆದರೆ ಈ ಹೊತ್ತಿನಲ್ಲಿ ನನ್ನ ಅಭಿಮಾನವನ್ನು ಬದಿಗಿಡಬೇಕಾಯಿತು.” ಎಂದು ಹೇಳಿದಳು.

41 ವರ್ಷದ, ಎರಡು ಮಕ್ಕಳ ತಂದೆ ಕಾಡ್ರಿಂಗ್ಟನ್ ಫುಡ್ ಬ್ಯಾಂಕಿಗೆ ಹೋದ. ಆದರೆ ಅಲ್ಲೂ ಸ್ಟಾಕ್ ಖಾಲಿಯಾಗಿತ್ತು. ಮತ್ತೆ ಕಳೆದ ವಾರ, ಬೇಗನೇ ಹೋಗಿದ್ದ. ಆದರೆ ಇವನು ಹೋಗುವ ಮೊದಲೇ ಜನ ಸೇರಿದ್ದರು. ಒಂದು ಬ್ಯಾಗ್ ಬೀನ್ಸ್ ಮಾತ್ರ ಉಳಿದಿತ್ತು. ಸ್ನೇಹಿತರು 100 ಡಾಲರ್ ಸೇರಿಸಿಕೊಟ್ಟರು. ಅದೂ ಈಗ ಹೆಚ್ಚು ಕಮ್ಮಿ ಮುಗಿದಿದೆ. ಈಗ ದಿನಕ್ಕೆ ಒಂದು ಹೊತ್ತು ತಿಂದುಕೊಂಡಿದ್ದಾನೆ. ಎರಡು ಬ್ರೆಡ್ ಚೂರಿನ ನಡುವೆ ಫಿಲ್ಲಿಂಗನ್ನು ಕಲ್ಪಿಸಿಕೊಂಡು ತಿನ್ನುತ್ತಿದ್ದಾನೆ. “ಪ್ರತಿ ವಾರ 1500 ಡಾಲರ್‌ನಿಂದ 2000 ಡಾಲರನ್ನು ದುಡಿಯುತ್ತಿದ್ದವನು ಈ ಸ್ಥಿತಿಗೆ ಇಳಿದಿದ್ದೇನೆ” ಎನ್ನುತ್ತಾನೆ.

ಅಮೆರಿಕೆಯಲ್ಲಿ 19ನೇ ಶತಮಾನದಲ್ಲಿ ಧಾರ್ಮಿಕ ಸಂಸ್ಥೆಗಳು ಪ್ರಾರಂಭಿಸಿದ್ದ ವಲಸಿಗರ ಸಹಾಯ ಗುಂಪುಗಳ ಮೂಲಕ ದಾನಕೊಡುವ ದೀರ್ಘವಾದ ಪರಂಪರೆ ಇತ್ತು. ಜೊತೆಗೆ 20ನೇ ಶತಮಾನದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಇದ್ದವು. ಹಾಗಿದ್ದಾಗ್ಯೂ ಇಂದಿಗೂ ನಿಷ್ಠುರವಾದ ವ್ಯಕ್ತಿವಾದವೇ ಅಮೆರಿಕೆಯ ರಾಷ್ಟ್ರೀಯ ಅಸ್ಮಿತೆಯ ಮುಖ್ಯ ಲಕ್ಷಣವಾಗಿದೆ.

ಅಮೇರಿಕೆಯ ಆಲಿಸ್ ಫೊದರ್‌ಗಿಲ್ ಪ್ರಕಾರ “ಅಮೇರಿಕೆಯ ಬಹುಪಾಲು ಜನ ತಾವು ಸ್ವಾವಲಂಬಿಗಳು ಮತ್ತು ಸ್ವತಂತ್ರರು ಎಂದು ಭಾವಿಸಿಕೊಳ್ಳುವುದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.” ಆಲಿಸ್ ಫೊದರ್‌ಗಿಲ್ ವರ್ಮೋಂಟ್ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕಿ. ಆಕೆ ನೈಸರ್ಗಿಕ ದುರಂತಗಳು ಮಾನವನ ಮೇಲೆ ಮಾಡುವ ಪರಿಣಾಮವನ್ನು ಕುರಿತು ಅಧ್ಯಯನ ಮಾಡಿದ್ದಾರೆ. ಆಕೆ ಹೇಳುವಂತೆ ಯಾರಿಗೆ ತುಂಬಾ ನೆರವು ಬೇಕೊ ಅವರೇ ನೆರವನ್ನು ಕೇಳಲು ನಾಚಿಕೆಪಟ್ಟುಕೊಳ್ಳುತ್ತಿದ್ದಾರೆ. ಉತ್ತರ ಡಕೋಟದಲ್ಲಿ ಪ್ರವಾಹದಿಂದ ಅಪಾರ ಹಾನಿಗೊಳಗಾಗಿ ಸಂಕಟಕ್ಕೆ ಸಿಲುಕಿದ ಮಹಿಳೆಯರನ್ನು ಅಧ್ಯಯನ ಮಾಡಿದಾಗ, ಅದರಲ್ಲಿ ತುಂಬಾ ಸಂಕಟಕ್ಕೆ ಸಿಕ್ಕವರು ಮಧ್ಯಮ ವರ್ಗದವರು ಮತ್ತು ಕಾರ್ಮಿಕ ಮಹಿಳೆಯರು. ಆದರೆ ಅವರು ತಮ್ಮ ಅಂತಸ್ತಿಗೆ ಚ್ಯುತಿಯಾಗುತ್ತದೆ ಅನ್ನುವ ಗಾಬರಿಯಿಂದ ಸಾರ್ವಜನಿಕ ನೆರವನ್ನು ಬಯಸಲಿಲ್ಲ. ಅವರಿಗೆ ಬಡವರಾಗಿ ಕಾಣಿಸಿಕೊಳ್ಳುವುದು ಇಷ್ಟವಿರಲಿಲ್ಲ. ತಾವು ಒಲ್ಲದ ಮನಸ್ಸಿನಿಂದ ನೆರವನ್ನು ಸ್ವೀಕರಿಸುತ್ತಿದ್ದೇವೆ ಎಂಬುದನ್ನು ಉಳಿದವರಿಗೆ ಹಾಗೂ ತಮಗೇ ಸ್ಪಷ್ಟಪಡಿಸಿಕೊಳ್ಳಲು ಹೆಣಗುತ್ತಿದ್ದಾರೆ. ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಉದಾಹರಣೆಗೆ, ದಾನಕೊಟ್ಟ ವಸ್ತುಗಳಿಗೆ ಹಣವನ್ನು ಕೊಡುತ್ತೇವೆ ಅನ್ನುವುದು, ಅವರಿಗೆ ಸರ್ಕಾರ ಕೊಟ್ಟ ಟ್ರೈಲರುಗಳನ್ನು “ಮನೆ” ಅಂತ ಒಪ್ಪಿಕೊಳ್ಳದೆ ಇರುವುದು, ಇತ್ಯಾದಿ.

ಜೀವನದಲ್ಲೇ ಮೊದಲ ಬಾರಿಗೆ ದಾನಕೇಳಲು ಬಂದವರು “ಕ್ಷಮಿಸಿ, ಆದರೆ ನನಗೆ ಸಹಾಯ ಮಾಡಬಹುದಾ? ನನ್ನನ್ನು ಕ್ಷಮಿಸಿ, ಆದರೆ ನನಗೆ ಆಹಾರ ಬೇಕು, ನನ್ನನ್ನು ಕ್ಷಮಿಸಿ, ಆದರೆ ನನಗೆ ಬಾಡಿಗೆ ಬೇಕು, ನನ್ನನ್ನು ಕ್ಷಮಿಸಿ, ಆದರೆ ನನಗೆ ಸಹಾಯ ಬೇಕು” ಅಂತ ಕ್ಷಮೆ ಯಾಚಿಸುವ ದನಿಯಲ್ಲಿ ಕೇಳುತ್ತಾರೆ ಎನ್ನುತ್ತಾರೆ ಮೆಟ್ ಕೌನ್ಸಿಲಿನ ಗ್ರೀನ್‌ಫಿಲ್ಡ್.

ಕೆಲವರಂತೂ ಸೌಲಭ್ಯವನ್ನು ಕೇಳಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವುದಕ್ಕೂ ಎರಡೆರಡು ಬಾರಿ ಯೋಚಿಸುತ್ತಾರೆ. ತಮಗೆ ಅರ್ಹತೆಯಿದ್ದರೂ ತಮಗಿಂತಲೂ ಹೆಚ್ಚು ಅವಶ್ಯಕತೆ ಇರುವವರು ಇರಬಹುದು ಅನ್ನುವ ಯೋಚನೆ ಈ ರೀತಿ ಹಿಂದೇಟು ಹಾಕುವುದಕ್ಕೆ ಕಾರಣವಿರಬಹುದೇ?

36 ವರ್ಷದ ಕಿರ್ಕ್ ಡಿವಿಂಡ್ಟ್, ಮಿನ್ನೆಸೋಟದ ಬ್ರೂಕ್ಲಿನ್ ಪಾರ್ಕಿನಲ್ಲಿ ಒಬ್ಬ ಟ್ರೈನರ್, “ದಿ ಬ್ಯಾಚುಲರ್” ಎಂಬ ಟೆಲಿವಿಷನ್ ಫ್ರಾಂಚೈಸ್‌ನಲ್ಲಿ ಮೂರು ಬಾರಿ ಸ್ಪರ್ಧಿಸಿದ್ದವನು. ಅವನ ಕಾರ್ಯಕ್ರಮಗಳೆಲ್ಲಾ ರದ್ದಾದ ಮೇಲೆ ಅವನ ವ್ಯಾಪಾರ ಸ್ಥಗಿತಗೊಂಡಿತು. ಸ್ವಲ್ಪ ಉಳಿತಾಯ ಇತ್ತು. ಅವರ ಅಮ್ಮ ನಿರುದ್ಯೋಗಿ ಭತ್ಯೆಗೆ ಅರ್ಜಿ ಸಲ್ಲಿಸಲು ಒತ್ತಾಯಿಸಿದಾಗ ಅವನು ಹಿಂದೇಟು ಹಾಕಿದ. “ಅರ್ಜಿ ಹಾಕಬಹುದಾದ ಎಷ್ಟೋ ಜನರಿಗಿಂತ ನಾನು ಉತ್ತಮ ಸ್ಥಿತಿಯಲ್ಲಿದ್ದೇನೆ” ಅಂದ, ಆದರೆ “ಅದಕ್ಕೆ ನಾನೇನು ಮಾಡುವುದು?” ಅರ್ಜಿ ಹಾಕಲು ನಿರ್ಧರಿಸಿದ.

ಫಿನಿಕ್ಸ್‌ನಲ್ಲಿ ರೇವನ್ ಗ್ರೀನ್ ಅನ್ನುವಳು 28 ವರ್ಷ ತಾಯಿ. ಇಬ್ಬರು ಪುಟ್ಟ ಹೆಣ್ಣು ಮಕ್ಕಳ ಜೊತೆ ಒಂಟಿಯಾಗಿದ್ದಾಳೆ. ತನ್ನ ಮೂರೂ ಕೆಲಸಗಳನ್ನು ಕಳೆದುಕೊಂಡು ಒಂದೇ ವಾರದಲ್ಲಿ ಗೋಫಂಡ್‌ಮಿಗೆ ಶರಣಾಗಿದ್ದಾಳೆ. ಅವಳಲ್ಲಿದ್ದ ಹಣ ಕೆಲವು ದಿನಗಳ ದಿನಸಿಗೆ ಸಾಲುತ್ತಿತ್ತು. ಆದರೆ ಕಾರಿಗೆ ಹಣ ಕೊಡಬೇಕಾಗಿ ಬಂದು ಪೂರ್ತಿ ಪಾಪರ್ ಆಗಿಬಿಟ್ಟಿದ್ದಾಳೆ. ಅವಳು ಆ ಸೌಲಭ್ಯಕ್ಕೆ ಅರ್ಹಳೋ ಇಲ್ಲವೋ ಅನ್ನುವುದೂ ಅವಳಿಗೆ ಗೊತ್ತಿಲ್ಲ. ಅವಳು ಗೋಪಂಢ್‌ಮಿ ಪೇಜ್ ಪ್ರಾರಂಭಿಸಿ 1500 ಡಾಲರ್ ಹಣಕ್ಕಾಗಿ ಕೇಳಿಕೊಂಡಿದ್ದಾಳೆ. ನೆರವು ಕೇಳಬೇಕಲ್ಲ ಅಂತ ಕಸಿವಿಸಿಗೊಂಡಿದ್ದಾಳೆ. ಸಾಮಾಜಿಕ ತಾಣದಲ್ಲಿ ಅದನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾಳೆ. “ನಾನು ಹೀಗೆ ಸಂಕಟದಲ್ಲಿದ್ದೇನೆ ಅಂತ ಜನಕ್ಕೆ ಗೊತ್ತಾಗುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ” ಎನ್ನುತ್ತಾಳೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಗೋಪಂಡ್‌ಮಿಗೆ ಬಂದ ಡೊನೇಷನ್ ಎಲ್ಲಾ ಖಾಲಿಯಾಗಿದೆ.

ಪರಿಸ್ಥಿತಿಯಲ್ಲಿ ಆದ ದಿಢೀರ್ ಬದಲಾವಣೆಯಿಂದ ಅಮೇರಿಕಕ್ಕೆ ಹೋಗುವ ಕನಸಿನ ಸುತ್ತಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ವಲಸೆಗಾರರರಿಗೆ ತುಂಬಾ ಕಷ್ಟವಾಗಿರಬೇಕು.

48 ವಯಸ್ಸಿನ ಅಲೆಕ್ಸಾ ರೋಟಾರು ಬೆವರ್ಲಿ ಹಿಲ್‌ನಲ್ಲಿ ಒಬ್ಬ ಸಿನಿಮಾ ನಿರ್ಮಾಪಕ ಮತ್ತು ನಟ. ಅವನು ತನ್ನ 21ನೇ ವಯಸ್ಸಿನಲ್ಲಿ ರೊಮೇನಿಯವನ್ನು ಬಿಟ್ಟು ಬಂದ. “ಒಂದು ಕಮ್ಯುನಿಸ್ಟ್ ದೇಶದಿಂದ ಬಂದ ನನಗೆ ಕ್ಷೇಮ ರಾಜ್ಯದ ಕಲ್ಪನೆ ತುಂಬಾ ಸ್ವಾಭಾವಿಕ. ನಾನು ಅಮೇರಿಕಾಕ್ಕೆ ಬಂದಾಗ ನನಗೆ ಇದರ ಅವಶ್ಯಕತೆ ಬರುತ್ತದೆ ಅಂದುಕೊಂಡಿರಲಿಲ್ಲ.” ತನ್ನ ಇಡೀ ಉದ್ಯೋಗ ನೆಲಕಚ್ಚಿದ ಮೇಲೆ ಈಗ ಅವನು ನಿರುದ್ಯೋಗ ಭತ್ಯೆಗಾಗಿ ಅರ್ಜಿ ಹಾಕಲು ಯೋಚಿಸುತ್ತಿದ್ದಾನೆ. ತಾನು ಕಟ್ಟಬೇಕಾದ ಹಣದ ಬಗ್ಗೆ ಅವನಿಗೆ ಚಿಂತೆಯಾಗಿದೆ. “ನನಗೆ ಸ್ವಲ್ಪ ಮುಜುಗರವಾಗುತ್ತಿತ್ತು. ನನ್ನ ಮಗನ ಚಿಂತೆಯಿಂದ ಈಗ ಮುಜುಗರವನ್ನು ಮೀರಿಕೊಂಡಿದ್ದೇನೆ” ಎನ್ನುತ್ತಾನೆ.

38 ವಯಸ್ಸಿನ ಅರ್ನೆಸ್ಟ್ ವರ್ಜಿಲ್ ಹೈಟಿಯಿಂದ ತನ್ನ ಹೆಂಡತಿಯ ಜೊತೆಯಲ್ಲಿ 2012ರಲ್ಲಿ ಇಲ್ಲಿಗೆ ಬಂದ. ವಿರಾಮವೇ ಇಲ್ಲದೆ ದುಡಿದ. ಎರಡು ಕಡೆ ಕೆಲಸ ಮಾಡುತ್ತಿದ್ದ. ಒಂದು ವಿಮಾನ ನಿಲ್ದಾಣದಲ್ಲಿ ವೀಲ್‌ಛೇರ್ ಸಹಾಯಕನಾಗಿ ಮತ್ತು ಇನ್ನೊಂದು ವಿದೇಶದಿಂದ ಪ್ರಯಾಣಿಕರಿಗೆ ಕಸ್ಟಮರ್ ಸಪೋರ್ಟ್ ನೀಡುವುದು. ಅವನ ಪತ್ನಿ ಕೂಡ ದುಡಿಯುತ್ತಿದ್ದಳು. ಅವರು ಕಷ್ಟಪಟ್ಟು ಒಂದು ಮನೆ ಕೊಳ್ಳುವುದಕ್ಕೆಂದು ಉಳಿಸಿ, ಕಳೆದ ವರ್ಷ ಒಂದು ಮನೆಯನ್ನು ಕೊಂಡರು. ಅಲ್ಲಿ ಅವರ ಮೂರು ಮಕ್ಕಳನ್ನು ಸಾಕುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಇಬ್ಬರೂ ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ.

ಬ್ಯಾಂಕಿಗೆ ಹಣವನ್ನು ಪಾವತಿಸಲು ಸ್ವಲ್ಪ ಸಮಯ ಬೇಕು ಎಂದು ಕೇಳಿಕೊಳ್ಳಬೇಕಲ್ಲಾ ಎಂದು ವರ್ಜಿಲ್‌ನ ಹೆಂಡತಿ ಅಳುತ್ತಿದ್ದಳು. ವರ್ಜಿಲ್ ಈಗಲೂ ಆಹಾರದ ಕೂಪನ್ನಿಗೆ ಮತ್ತು ನಿರುದ್ಯೋಗದ ಅನುಕೂಲಕ್ಕೆ ಪ್ರಯತ್ನಿಸುತ್ತಿದ್ದಾನೆ. ಫುಡ್ ಬ್ಯಾಂಕಿಗೆ ಹೋದರೆ ವೈರಾಣು ಬರಬಹುದೇನೋ ಅನ್ನುವ ಗಾಬರಿ ಅವನಿಗೆ. ಅವರಿಗೆ ಹಿಂದೆಂದೂ ಇಂತಹ ನೆರವಿನ ಅವಶ್ಯಕತೆ ಬಂದೇ ಇರಲಿಲ್ಲ. ನಾವೂ ಬರಿದಾಗಿಬಿಟ್ಟಿದ್ದೇವೆ. “ಇವೆಲ್ಲಾ ನಮಗೆ ಅಭ್ಯಾಸವೇ ಇಲ್ಲ. ಅಮೇರಿಕೆಯ ಕನಸು ಈಡೇರಬೇಕಾದರೆ ತುಂಬಾ ತುಂಬಾ ಕಷ್ಟ ಪಡಬೇಕು ಅಂತ ಗೊತ್ತಿತ್ತು. ಆದರೆ ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಬೇಕು ಅನ್ನುವ ಅಂದಾಜು ಇರಲಿಲ್ಲ. ನಮಗೆ ಬೇರೆ ಆಯ್ಕೆಯೇ ಇಲ್ಲ, ಇನ್ಯಾವ ದಾರಿಯೂ ಇಲ್ಲ್ಲ” ಎನ್ನುತ್ತಾನೆ ವರ್ಜಿಲ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...