Homeಮುಖಪುಟಪ್ರಧಾನಿ ಮೋದಿಯ ಗಿಮಿಕ್‌ಗಳನ್ನು ಪ್ರತಿಪಕ್ಷಗಳೂ ಮಾಡಬಾರದೇಕೆ?

ಪ್ರಧಾನಿ ಮೋದಿಯ ಗಿಮಿಕ್‌ಗಳನ್ನು ಪ್ರತಿಪಕ್ಷಗಳೂ ಮಾಡಬಾರದೇಕೆ?

ಜನರು ಮನೆಯಲ್ಲಿ ಕುಳಿತು ಏನು ಮಾಡಬೇಕೆಂದು ಮೋದಿಯಂತೆ ಪ್ರತಿಪಕ್ಷಗಳು ಕೂಡಾ ಏಕೆ ಹೇಳಬಾರದು? ಕಳೆದ ಆರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯ ಗಿಮಿಕ್‌ಗಳನ್ನು ನೋಡುತ್ತಾ ಬಂದಿರುವ ಪ್ರತಿಪಕ್ಷಗಳಿಗೆ ಇನ್ನೂ ಕೂಡಾ ರಾಜಕೀಯದ ಬದಲಾದ ಭಾಷೆ ಅರ್ಥವಾಗಿಲ್ಲ. ಅವುಗಳು ಮನಸ್ಸು ಮಾಡಿದರೆ, ಸಾಕಷ್ಟನ್ನು ಮಾಡಬಹುದು.

- Advertisement -
- Advertisement -

ಶಿವಂ ವಿಜ್, (ದಿ ಪ್ರಿಂಟ್‌)

ಅನುವಾದ: ನಿಖಿಲ್ ಕೋಲ್ಪೆ

ಕಳೆದ ಆರು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯ ಗಿಮಿಕ್‌ಗಳನ್ನು ನೋಡುತ್ತಾ ಬಂದಿರುವ ಪ್ರತಿಪಕ್ಷಗಳಿಗೆ ಇನ್ನೂ ಕೂಡಾ ರಾಜಕೀಯದ ಬದಲಾದ ಭಾಷೆ ಅರ್ಥವಾಗಿಲ್ಲ. ಜನರು ಮನೆಯಲ್ಲಿ ಕುಳಿತು ಏನು ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಕೂಡಾ ಏಕೆ ಹೇಳಬಾರದು?

ಉದಾಹರಣೆಗೆ, ಜನರು ಕಪ್ಪುಬಟ್ಟೆ ಅಥವಾ ಪಟ್ಟಿ ಧರಿಸಿ, ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 19ರಷ್ಟು ಇತ್ತೀಚಿನ ತನಕ ವೈದ್ಯರಿಗೆ ಬೇಕಾಗುವ ಸುರಕ್ಷಾ ಸಾಧನಗಳ ರಫ್ತಿಗೆ ಅವಕಾಶ ಕೊಟ್ಟದ್ದು ಯಾಕೆ ಎಂದು ಪ್ರಶ್ನಿಸಿ ವಿಡಿಯೋ ಮಾಡುವಂತೆ ಕೇಳಿಕೊಳ್ಳಬಹುದು. ಕಾಂಗ್ರೆಸ್ ಈ ವಿಷಯವನ್ನು ಎತ್ತುತ್ತಲೇ ಇದೆ. ಸರಿಯಾದ ಪರೀಕ್ಷೆ ಮಾಡದಿರುವುದು, ಕೋವಿಡ್-19 ವೈರಸನ್ನು ಎದುರಿಸಲು ಸರಕಾರ ಸೂಕ್ತ ಸಿದ್ಧತೆ ನಡೆಸದೆ, ತಡ ಮಾಡಿರುವುದು, ಕೆಟ್ಟದಾಗಿ ಯೋಜಿಸಲಾದ 21 ದಿನಗಳ ಲಾಕ್‌ಡೌನ್‌ನಿಂದ ಜನರು ಎದುರಿಸುತ್ತಿರುವ ಸಂಕಷ್ಟ ಇತ್ಯಾದಿ ವಿಷಯಗಳನ್ನು ಕೂಡಾ ಕಾಂಗ್ರೆಸ್ ಎತ್ತುತ್ತಾ ಬಂದಿದೆ.

ಒಂದು ಸಂಜೆ ಏಕಾಏಕಿಯಾಗಿ ಒಮ್ಮೆಲೇ ಜನರು ಕಪ್ಪು ಉಡುಪು ಅಥವಾ ಪಟ್ಟಿ ಧರಿಸಿ, ಈ ಪ್ರಶ್ನೆಗಳನ್ನು ಕೇಳುವ ನೂರಾರು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡರೆ ಪರಿಣಾಮ ನಂಬಲಾರದಷ್ಟು ಶಕ್ತಿಶಾಲಿಯಾಗಿರುತ್ತದೆ. ಈ ರೀತಿ ಏನನ್ನಾದರೂ ಮಾಡುವುದು ಸ್ಪಷ್ಟವಾಗಿಯೇ ಮೋದಿ ಈಗ ಮಾಡುತ್ತಿರುವುದಕ್ಕೆ ಪ್ರತಿಪ್ರಚಾರವಾದೀತು.

ಬಿಜೆಪಿಯು ಮಾಡಿದಂತೆ, ಸಮಾಜವಾದಿ ಪಕ್ಷವು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಕೈತೊಳೆಯುವ ಚಾಲೆಂಜ್ ಯಾಕೆ ಹಾಕಬಾರದು? ಅದು ಪ್ರತಿಯೊಬ್ಬ ನಾಯಕನೂ ಐವರನ್ನು ಟ್ಯಾಗ್ ಮಾಡಿ, ಕೈತೊಳೆದು ಕೊರೋನ ವೈರಸನ್ನು ದೂರವಿಡುವುದು ಹೇಗೆ ಎಂದು ತೋರಿಸುವ ವಿಡಿಯೋ ಪೋಸ್ಟ್ ಮಾಡುವಂತೆ ಏಕೆ ಹೇಳುತ್ತಿಲ್ಲ? ಸ್ವಚ್ಛತಾ ಕಾರ್ಮಿಕರನ್ನು ಗೌರವಿಸಲು ತಮ್ಮ ಮನೆಯ ಮುಂದೆ ನಿಂತು ಚಪ್ಪಾಳೆ ತಟ್ಟಿ ಎಂದು ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಜನತೆಗೆ ಯಾಕೆ ಹೇಳುವುದಿಲ್ಲ?

ಮೋದಿಯ ಹಲವಾರು ಟ್ರಿಕ್ಕುಗಳು ಸ್ಪಷ್ಟವಾಗಿವೆ, ಮಾಮೂಲಿಯಾಗಿವೆ. ಆತ ಅದನ್ನು ಮತ್ತೆಮತ್ತೆ ಮಾಡುತ್ತಾ ಇರುತ್ತಾರೆ. ಆಡಳಿತದಲ್ಲಿ ವಿಫಲನಾಗಿರುವ ಹೊರತಾಗಿಯೂ ಅದು ಆತನಿಗೆ ಜನಪ್ರಿಯನಾಗಿ ಉಳಿಯಲು ನೆರವಾಗುತ್ತದೆ ಎಂಬುದೂ ಸ್ಪಷ್ಟವಾಗಿದೆ. ಮೋದಿಯ ನೋಟು ಅಮಾನ್ಯೀಕರಣ ವಿಫಲವಾಗಿದೆ ಮತ್ತು ಆತ ಅಧಿಕಾರಕ್ಕೆ ಬಂದಂದಿನಿಂದ ಆರ್ಥಿಕತೆಯು ಕೆಳಜಾರುತ್ತಿದೆ ಎಂಬುದನ್ನು ಜನರು ಮರೆಯುವಂತೆ ಮಾಡುವಷ್ಟು ಈ ಗಿಮಿಕ್‌ಗಳು ಪ್ರಭಾವಶಾಲಿಯಾಗಿವೆ.

ಜಾತ್ಯತೀತತೆಯ ಕಾರಣದಿಂದಾಗಿ ಪ್ರತಿಪಕ್ಷಗಳು ಮೋದಿಯನ್ನು ಅನುಕರಿಸಬಾರದು ಎಂದು ಈ ಹಂತದಲ್ಲಿ ತಾತ್ವಿಕ ಕರ್ಮಠರು ಹೇಳಬಹುದು. ಮೋದಿ ನೀರು ಕುಡಿಯುತ್ತಾರೆ; ಹಾಗೆಂದು ಜಾತ್ಯತೀತವಾದಿಗಳು ನೀರು ಕುಡಿಯುವುದನ್ನು ನಿಲ್ಲಿಸಬೇಕೆ? ನಂತರ ಅವರು- ನಾವು ನಮ್ಮದೇ ಅಸಲಿ ಚಿಂತನೆಗಳನ್ನು ರೂಪಿಸಬೇಕು ಎಂದು ಹೇಳಬಹುದು. ಅಸಲಿಗೆ ಈ ಚಿಂತನೆಗಳು ಕೂಡಾ ಮೋದಿಯ ಅಸಲಿಯಾಗಲೀ, ಸ್ವಂತದ್ದಾಗಲೀ ಅಲ್ಲ. ಈ ಚಿಂತನೆಗಳು ದಶಕಗಳಿಂದ ಇರುವುದರಿಂದ, ಆತ ಕೂಡಾ ಬೇರೆ ಕಡೆಯಿಂದ ಪ್ರೇರೇಪಣೆ ಪಡೆದಿರುವುದು ಸುಸ್ಪಷ್ಟ.

ಮೋದಿಯೀಗ ಜನರನ್ನು ಅದು ಮಾಡಿ, ಇದು ಮಾಡಿ ಎಂದು ಹೇಳುತ್ತಿರುವಂತೆಯೇ, ಜನರನ್ನು ಕೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರೊಬ್ಬರು ಹಿಂದೆ ಇದ್ದರು. ಅವರ ಹೆಸರು ಮೋಹನದಾಸ ಕರಮ್‌ಚಂದ್ ಗಾಂಧಿ. ಅವರು ಜನರಲ್ಲಿ ವಿದೇಶಿ ಬಟ್ಟೆಗಳನ್ನು ಸುಡಲು, ಚರಕದಲ್ಲಿ ನೂಲಲು, ಮನೆಯಲ್ಲಿಯೇ ಬಟ್ಟೆ ತಯಾರಿಸಲು, ಅಥವಾ ಗುಜರಾತಿನ ಕಡಲ ತಡಿಯಲ್ಲಿ ಉಪ್ಪು ತಯಾರಿಸಲು ತನ್ನ ಜೊತೆ ಸೇರಬೇಕೆಂದು ಕೇಳಿಕೊಳ್ಳುತ್ತಿದ್ದರು. ಕಾಂಗ್ರೆಸಿಗೆ ಕೂಡಾ ಗಾಂಧಿವಾದಿ ಆಂದೋಲನಗಳ ವಿಧಾನಗಳು ಮರೆತು ಹೋಗಿವೆ ಮತ್ತವರು ಪಕ್ಷದೊಳಗೆ ಕಳೆದುಹೋದ ಪರಂಪರೆಯ ಬಗ್ಗೆ ಮಾತನಾಡುತ್ತಿದ್ದಾರೆ.

ರಾಜಕಾರಣಿಯೊಬ್ಬನ ಧ್ವನಿಯನ್ನು ವರ್ಧಿಸುವ ಸಾಧನಗಳೆಂದರೆ, ಜನರು. ರಾಜಕಾರಣಿ ಮತ್ತು ಜನಸಮುದಾಯದ ನಡುವಿನ ಸಂಬಂಧವೆಂದರೆ ವೇದಿಕೆಯಲ್ಲಿರುವ ಕಲಾವಿದರು ಮತ್ತು ಪ್ರೇಕ್ಷಕರ ನಡುವಿನ ಸಂಬಂಧದಂತದ್ದು. ಪ್ರೇಕ್ಷಕರ ತಪ್ಪಾಳೆ, ನಗು, ಕೇಕೆ, ಕುಹಕಧ್ವನಿ, ನಿಟ್ಟುಸಿರು ಎಲ್ಲವೂ ರಂಗಾನುಭವದ ಭಾಗ. ಮೋದಿಯ ಪ್ರಚಾರ ತಂತ್ರಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರತಿಪಕ್ಷಗಳ ಹಿಂಜರಿಕೆ ಮತ್ತು ಅಸಾಮರ್ಥ್ಯಗಳು ಸಮೂಹ ರಾಜಕಾರಣದೊಂದಿಗೆ ಅವುಗಳ ಸ್ವಂತ ಸಂಬಂಧ ಕಡಿದುಹೋಗಿರುವುದನ್ನು ತೋರಿಸುತ್ತದೆ.

ಜನರಿಗೊಂದು ಕೆಲಸ ಕೊಡಿ

“ನನಗೆ ಮೋದೀಜಿ ಕುರಿತು ಯಾವುದೇ ಸಮಸ್ಯೆಯಿಲ್ಲ. ಆದರೆ, ಆತ ತುಂಬಾ ಕೆಲಸಕೊಡುತ್ತಾ ಇದ್ದಾರೆ” ಎಂದು ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಮಿಡಿಯನ್ ಅಭಿಜಿತ್ ಗಾಂಗೂಲಿ ಹೇಳಿದ್ದರು. ಪ್ರಧಾನಿಯಾಗುವುದಕ್ಕೆ ಮುಂಚೆಯೇ ಮೋದಿ ಜನರಿಗೆ “ಕೆಲಸ” ಮಾಡುವಂತೆ ಹೇಳುತ್ತಿದ್ದರು.

2013-14ರಲ್ಲಿ  ಅವರು ಪಟೇಲ್ ಪ್ರತಿಮೆಯಲ್ಲಿ ಕರಗಿಸಲು ತಮ್ಮ ಕಬ್ಬಿಣದ ಸಲಕರಣೆಗಳನ್ನು ಕೊಡಿ ಎಂದು ರೈತರಲ್ಲಿ ಕೇಳಿದ್ದರು. ಪ್ರಧಾನಮಂತ್ರಿ ಆದ ಬಳಿಕ ರಸ್ತೆಗಳನ್ನು ಸ್ವಚ್ಛಗೊಳಿಸುವಂತೆ ಜನರನ್ನು ಕೇಳಿದರು. ಜನರಿಗೆ ಯೋಗ ಮಾಡಲು ಹೇಳಿದರು ಮತ್ತು ಯೋಗದಿನದಂದು, ಅದನ್ನೊಂದು ಕಾರ್ಯಕ್ರಮದಂತೆ ನಡೆಸಲು ಕೇಳಿಕೊಂಡರು.

ಆತ ಜನರಿಗೆ ಕರೆನ್ಸಿ ನೋಟುಗಳನ್ನು ಬದಲಿಸುವ ಮತ್ತು ಹೊಸ ತೆರಿಗೆ ಪದ್ಧತಿಗೆ (ಜಿಎಸ್‌ಟಿ) ಒಗ್ಗುವ, ಎಲ್ಲದಕ್ಕೂ ಆಧಾರ ಲಿಂಕ್ ಮಾಡುವ , ಸ್ವಇಚ್ಛೆಯಿಂದ ಅನಿಲ ಸಬ್ಸಿಡಿ ಬಿಟ್ಟುಕೊಡುವ ಹಲವಾರು ಕೆಲಸಗಳನ್ನು ನೀಡಿದರು. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರಿನ ಮೊದಲು ‘ಚೌಕಿದಾರ್’ ಎಂದು ಸೇರಿಸುವಂತೆ, “NaMo” app ಡೌನ್ಲೋಡ್ ಮಾಡುವಂತೆ, NaMo ಸರಕುಗಳನ್ನು ಕೊಳ್ಳುವಂತೆ ಹೇಳಿದರು. ಹೇಳಿದರು…ಇತ್ಯಾದಿ, ಇತ್ಯಾದಿ.

ಮೋದಿ ಯಾವತ್ತೂ ಜನರಿಗೆ ಅದನ್ನು ಮಾಡಿ, ಇದನ್ನು ಮಾಡಿ ಎಂದು ಹೇಳುವುದು ಏಕೆಂದರೆ, ಅದು ರಾಜಕೀಯ ಸಂವಹನಕ್ಕಿಂತ ಹೆಚ್ಚು ಪರಿಣಾಮಕಾರಿ. ಇದು, ಉಪನ್ಯಾಸ ಮತ್ತು ಕಾರ್ಯಾಗಾರಕ್ಕೆ ಇರುವ ವ್ಯತ್ಯಾಸವಿರುವಂತೆ. ಆದು ಒಂದು ಉತ್ಪನ್ನವನ್ನು ಟಿವಿಯಲ್ಲಿ ನೋಡುವುದಕ್ಕೂ, ಅದು ಹೇಗೆ ಕೆಲಸಮಾಡುತ್ತದೆ ಎಂದು ಮಾರಾಟ ಮಳಿಗೆಯಲ್ಲಿ ಸ್ವತಃ ನೋಡುವುದಕ್ಕೂ ಇರುವ ವ್ಯತ್ಯಾಸದಂತೆ.

ಇಡೀ ಭಾಷಣದುದ್ದಕ್ಕೂ ಪೂರ್ಣ ಗಮನವಿಟ್ಟು ಹೆಚ್ಚು ಜನರು ಕೇಳುವುದಿಲ್ಲ. ಅವರಿಗೊಂದು ಚಿಕ್ಕ ಕೆಲಸಕೊಡಿ- ಅದನ್ನವರು ಮಾಡಬಹುದು. ಮೋದಿ ಹಿಂದೆ ಮಾಡಿದಂತೆ, ತಾವು ವ್ಯಾಯಾಮ ಮಾಡುವ ಒಂದು ವಿಡಿಯೋ ಪೋಸ್ಟ್ ಮಾಡಲಃ ಹೇಳಿ; ಅಥವಾ ಒಂದು ವಿಷಯವನ್ನು ಬೆಂಬಲಿಸಿ ಒಂದು ಸೆಲ್ಫಿ ಹಾಕಲು ಹೇಳಿ- ಅದನ್ನು ಮಾಡಲು ಸಿದ್ಧರಾಗುವ ಜನರ ಸಂಖ್ಯೆಯನ್ನು ಕಂಡು ನಿಮಗೆ ಅಚ್ಚರಿಯಾದೀತು.

ಕಾರ್ಪೊರೇಟ್ ಜಗತ್ತಿನಲ್ಲಿ ಇದಕ್ಕೊಂದು ಪದವಿದೆ- “ಪ್ರೋಸಮ್ಮರ್”. ಅಂದರೆ, ಜನರು ಕೇವಲ ಜಡ ಗ್ರಾಹಕರಲ್ಲ; ಅವರು, ಒಂದು ಉತ್ಪನ್ನವನ್ನು ರೂಪಿಸಲು ಮತ್ತು ಅದನ್ನು ವ್ಯಾಖ್ಯಾನಿಸಲು ನೆರವಾಗುತ್ತಾರೆ. ಉದಾಹರಣೆಗೆ ಮಕ್ಕಳ ಆಟಿಕೆಯ ಕಂಪೆನಿಯಾಗಿರುವ “ಲೆಗೋ” ತನ್ನ ಹೊಸ ಲೋಗೋ ವಿನ್ಯಾಸವನ್ನು ‘ಕ್ರೌಡ್ ಸೋರ್ಸಿಂಗ್’ ಮೂಲಕ ಮಾಡುತ್ತಿದೆ. ಈಗ ಜನರಿಗೆ ಜಾದು, ದಿಯಾ, ಚಹಾ, ಕೃಷಿ ಮುಂತಾದ ಪರಿಕರಗಳನ್ನು ನೀಡಿ, ನಿರ್ವಹಿಸಲು ಸಾಧ್ಯವಿರುವ ಕಾರ್ಯಗಳನ್ನು ನೀಡುವುದು ಹಳೆಯದು ಮತ್ತು ಸಾಮಾನ್ಯವಾಗಿದೆ. ಕೆಲವು ಆಚರಣೆಗಳು ಸಮುದಾಯಗಳನ್ನು ಒಟ್ಟು ಸೇರಿಸಲು ನೆರವಾಗುವಂತೆ, ಇವುಗಳೆಲ್ಲಾ ಮೋದಿಯ ಸುತ್ತ ಜನ ಸೇರಿಸಲು ನೆರವಾಗುತ್ತವೆ.

ಈ ವಿಧಾನದ ಹಿಂದಿನ ಶಕ್ತಿ ನಮಗೆ ಗೊತ್ತು. ಪರಿಕರಗಳು ಇಂತಹಾ ಕಲ್ಪನೆಗಳನ್ನು ಕಾರ್ಯಸಾಧ್ಯಗೊಳಿಸುತ್ತವೆ. ಜನರ ಭಾಗವಹಿಸುವಿಕೆಯು ಮೋದಿಯ ವಿಚಾರಗಳಲ್ಲಿ ಅವರು ತೊಡಗಿಸಿಕೊಳ್ಳುವಂತೆ ಮಾಡುತ್ತವೆ ಮತ್ತು ಮೋದಿಯ ವಿರುದ್ಧ ಟೀಕೆಗೆ ಕಡಿಮೆ ಸಂವೇದನೆ ತೋರುವಂತೆ ಮಾಡುತ್ತವೆ. (ಅಂದರೆ, ಆತನ ವಿರುದ್ಧ ಟೀಕೆಗಳು ಭಕ್ತರ ಮೇಲೆ ಕಡಿಮೆ ಪರಿಣಾಮ ಬೀರುತ್ತವೆ). ಜನರು ಇಂತಹ ವಿಧಾನಗಳ ವೈಫಲ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.

ಏಕೆಂದರೆ, ಅವರೇ ಸ್ವತಃ ಅದರಲ್ಲಿ ಭಾಗವಹಿಸಿರುತ್ತಾರೆ. ಅದು ತನ್ನ ಸ್ವಂತ ವೈಫಲ್ಯವನ್ನು ಒಪ್ಪಿಕೊಂಡಂತೆ ಎಂಬಂತೆ ಭಾಸವಾಗುತ್ತದೆ. ಇಂತಹ ಭಾಗವಸಹಿಸುವಿಕೆಯ ಪ್ರಚಾರತಂತ್ರಗಳು ಗುರಿಯನ್ನು ಬೇರೆಡೆಗೆ ಕದಲಿಸಲು ನೆರವಾಗುತ್ತವೆ. ಅಂದರೆ, ಸರಕಾರ ವೈದ್ಯಕೀಯ ಮತ್ತು ಸುರಕ್ಷಾ ಉಪಕರಣಗಳ ಕೊರತೆಯನ್ನು ಹೇಗೆ ನಿಭಾಯಿಸುತ್ತಿದೆ ಎಂಬುದು ಮುಖ್ಯವಾಗುವುದಿಲ್ಲ. ಆದರೆ, ಎಷ್ಟು ಜನರು ಕ್ಯಾಂಡಲ್ ಉರಿಸಿದರು ಎಂಬುದು ಮುಖ್ಯವಾಗುತ್ತದೆ.

ನೀವು ಭಾರತೀಯ ರಾಜಕೀಯದ ವೀಕ್ಷಕರಾಗಿದ್ದರೆ, ಇದು ತುಂಬಾ ಹಳೆಯದಾಗಿ ಕಾಣಿಸುತ್ತದೆ. ನಮಗೆ ತಳ್ಳುವಿಕೆಯ ಶಕ್ತಿ ಗೊತ್ತಿದೆ. ಇಂತಹಾ ಕಲ್ಪನೆಗಳ ಹಿಂದಿರುವ ಸ್ವಭಾವ ವಿಜ್ಞಾನ (ವರ್ತತನಾ ಶಾಸ್ತ್ರ)ದ ತರ್ಕ ಗೊತ್ತಿದೆ.

ಈ ಪ್ರಚಾರ ತಂತ್ರಗಳನ್ನು ಮೋದಿ ಮಾತ್ರ ಬಳಸಿರುವುದಲ್ಲ. ಆತ ಆವುಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿರಬಹುದು. ಆಮ್ ಆದ್ಮಿ ಪಕ್ಷದ ಸಮ-ಬೆಸ ದಿನಗಳ ಕಾರು ರೇಷನಿಂಗ್ ಪದ್ಧತಿಯು ಇದೇ ಮಾದರಿಯಲ್ಲಿ ಇತ್ತು. ನನ್ನ ಮೆಚ್ಚಿನ ಉದಾಹರಣೆ ಒಂದು ದಶಕಕ್ಕೂ ಹಿಂದಿನದು. 2009ರಲ್ಲಿ ಸಾಮಾಜಿಕ ಗೂಂಡಾಗಿರಿ (ಪೊಲೀಸ್‌ಗಿರಿ ಎಂಬ ಪದಪ್ರಯೋಗ ಅಸಂಬದ್ಧ) ಗುಂಪೊಂದು ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆಸಿ, ಮಹಿಳೆಯರ ಮೇಲೆ ಹಲ್ಲೆ ಮಾಡಿತ್ತು. ದಿಲ್ಲಿಯ ಕೆಲವು ಹೋರಾಟಗಾರರು ಈ ಹಲ್ಲೆಕೋರ ಗುಂಪಿಗೆ ಕೊರಿಯರ್ ಮೂಲಕ ಗುಲಾಬಿ ಒಳಚಡ್ಡಿ ಕಳಿಸುವಂತೆ ದೇಶಾದ್ಯಂತದ ಜನರಿಗೆ ಮನವಿ ಮಾಡಿತ್ತು. ಸಾವಿರಾರು ಜನರು ಕುಷಿಯಿಂದ ಹಾಗೆ ಮಾಡಿದ್ದಲ್ಲದೆ,  ತಾವು ಕಳುಹಿಸಲಿರುವ ಒಳಚಡ್ಡಿಗಳ ಜೊತೆ ಸೆಲ್ಫಿ ತೆಗೆದು ಫೇಸ್ಬುಕ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದರು ಕೂಡಾ. ಅದನ್ನು “ಗುಲಾಬಿ ಚಡ್ಡಿ ಅಭಿಯಾನ” ಎಂದು ಕರೆಯಲಾಯಿತು.

ಸಿದ್ಧಾಂತದ ವಿರುದ್ಧ ನಾಟಕ

ಬ್ರ್ಯಾಂಡಿಂಗ್ ತಜ್ಞರು ಬ್ರ್ಯಾಂಡಿನ ಸಾಚಾತನದ ಕುರಿತು ಚಿಂತಿಸುತ್ತಿರುತ್ತಾರೆ. ಬ್ರ್ಯಾಂಡೊಂದು ಸಾಚಾ ಅಲ್ಲವೆಂದು ಗೊತ್ತಾದ ಕ್ಷಣದಲ್ಲೇ ಆದು ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಆದರೆ, ಸಾಚಾತನ ಎಂಬುದು ವಿಷಯನಿಷ್ಟವಾಗಿರುವುದರಿಂದ, ಬ್ಯ್ಯಾಂಡ್‌ಗಳು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು, ಸಮಯದೊಂದಿಗೆ ಬದಲಾಗಬೇಕಾಗುತ್ತದೆ ಮತ್ತು ಹೊಸ ಮಾರುಕಟ್ಟೆ ಹಾಗೂ ಜಾಹೀರಾತು ಅಭಿಯಾನದಲ್ಲಿ ತೊಡಗಬೇಕಾಗಿದೆ. ಒಂದು ಬ್ರ್ಯಾಂಡ್ ಏನು ಎಂಬುದು ಮತ್ತು  ಗ್ರಾಹಕರಿಗೆ ಮಾರಬೇಕಾದ ಅಗತ್ಯದ ನಡುವೆ ಸದಾ ಒತ್ತಡ ಇದ್ದೇ ಇರುತ್ತದೆ. ಗ್ರಾಹಕರ ಸಂರಚನೆ ಹಾಗೂ ಅಭಿರುಚಿಗಳು ಸದಾಬದಲಾಗುತ್ತಲೇ ಇರುತ್ತವೆ.

ಮ್ಯಾನೇಜ್‌ಮೆಂಟ್ ಸೈದ್ಧಾಂತಿಕರಲ್ಲಿ ಒಬ್ಬರಾಗಿರುವ ಮೈಕೆಲ್ ಬೆವರ್‌ಲ್ಯಾಂಡ್ ಅವರು, ಈ ಒತ್ತಡವನ್ನು “ಇರುವಿಕೆ ಮತ್ತು ಮಾಡುವಿಕೆ”ಗಳ ನಡುವಿನ ಒತ್ತಡ ಎಂದು ವ್ಯಾಖ್ಯಾನಿಸಿದ್ದಾರೆ. ಒಂದು ಬ್ರ್ಯಾಂಡನ್ನು ನೈಜವಾಗಿ ಉಳಿಸಿಕೊಂಡು, ಅದನ್ನು ಬೆಳೆಯುವಂತೆ ಮಾಡಲು ಇದು ನಿರ್ಣಾಯಕ ಎಂದು ಅವರು ಪ್ರತಿಪಾದಿಸಿದ್ದಾರೆ. ಇದನ್ನೇ ಇನ್ನೊಬ್ಬ ಬ್ರ್ಯಾಂಡಿಂಗ್ ತಜ್ಞ ಅಭಿಜಿತ್ ಪ್ರಸಾದ್ ನನಗೆ ತಿಳಿಸಿದಂತೆ, ಇದರ ರಾಜಕೀಯ ಸಮಾನಾರ್ಥಕವೆಂದರೆ, “ಸಿದ್ಧಾಂತ ಮತ್ತು ನಾಟಕ”.

ಸಿದ್ಧಾಂತವು ಒಂದು ರಾಜಕೀಯ ಪಕ್ಷದ ಗುರುತು. ಅದು ಬಹುಪಾಲು ಮತಗಳನ್ನು ಗಳಿಸುತ್ತದೆ. ಆದರೆ, ನಾಟಕವು ಅತ್ತಿತ್ತ ಕದಲುವ ಅಥವಾ ಓಲಾಡುವ ಮತಗಳನ್ನು ಗಳಿಸುತ್ತದೆ. ಇವುಗಳ ನಡುವೆ ಸಮತೋಲನ ಅಗತ್ಯ. ಒಂದು ಪಕ್ಷವು ಸಿದ್ಧಾಂತ ಮತ್ತು ನಾಟಕದ ನಡುವೆ ಒಂದೇ ಕಡೆಗೆ ಮಿತಿ ಮೀರಿ ವಾಲಿದರೆ, ಅದು ಸೋಲುತ್ತದೆ. ಮೋದಿ ಈ ಸಮತೋಲನವನ್ನು ಚೆನ್ನಾಗಿ ಉಳಿಸಿಕೊಳ್ಳುತ್ತಿದ್ದಾರೆ.

ನಮ್ಮ ಪ್ರತಿಪಕ್ಷಗಳು-ಹೆಚ್ಚಿನವು- ಸೈದ್ಧಾಂತಿಕ ಬದ್ಧತೆಯ ಕೊರತೆ ಹೊಂದಿದ್ದು, ನಾಟಕವಾಡಲು ಕೂಡಾ ಹಿಂದೇಟು ಹಾಕುತ್ತಿವೆ. ಸಿದ್ಧಾಂತವಷ್ಟೇ ಸಾಕು, ನಾಟಕ ಮಾಡಬೇಕೆಂದಿಲ್ಲ ಎಂದು ಕೆಲವು ನಾಯಕರು ಮತ್ತು ಬುದ್ದಿಜೀವಿಗಳು ಭಾವಿಸಿದ್ದಾರೆ. ಅವರು ಶೇಕ್ಸ್‌ಪಿಯರ್‌ನ ಮಾತುಗಳನ್ನು ಕೇಳಬೇಕು: ಇಡೀ ಪ್ರಪಂಚವೇ ಒಂದು ನಾಟಕರಂಗ ಮತ್ತು ಎಲ್ಲಾ ಸ್ತ್ರೀ-ಪುರುಷರು ಕೇವಲ ನಟರು.

ಮೋದಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಪ್ರತಿಪಕ್ಷಗಳು ಹಿಂದಕ್ಕೊರಗಿ ಕುಳಿತು, “ಓಹ್! ಎಂಥಹಾ ಕೆಟ್ಟ ನಟ!” ಎಂದಷ್ಟೇ ಉದ್ಘರಿಸುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...