Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-4)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-4)

- Advertisement -
- Advertisement -

“ಅಷ್ಟೇನ? ಪೂರ್ತಿ ಹೇಳಾಯ್ತಾ?” ಅಗ್ಲಾಯ ಕೇಳಿದಳು.

“ಪೂರ್ತಿ? ಹೌದು” ಪ್ರಿನ್ಸ್ ಹೇಳಿದ, ಒಂದು ಕ್ಷಣದ ಸ್ವಪ್ನಲೋಕದ ಮಗ್ನತೆಯಿಂದ ಆಚೆ ಬಂದು.

“ಮತ್ತು ಇದನ್ನೆಲ್ಲಾ ನಮಗೆ ಏಕೆ ಹೇಳಿದೆ?”

“ಓ ಸಾಂದರ್ಭಿಕವಾಗಿ ಅದು ನನ್ನ ನೆನಪಿಗೆ ಬಂತು, ಅಷ್ಟೇನೆ, ಆದರೆ ನಮ್ಮ ಸಂಭಾಷಣೆಗೆ ಅದು ಸರಿಹೊಂದಿತು.”

“ನೀನು ಬಹುಶಃ ಸಾಬೀತುಪಡಿಸಲು ಹೊರಟಿದ್ದೆ ಅನಿಸುತ್ತದೆ ಪ್ರಿನ್ಸ್” ಅಲೆಕ್ಸಾಂಡ್ರ ಹೇಳಿದಳು, “ಅಂದರೆ ಕಾಲದ ಕ್ಷಣಗಳನ್ನು ಹಣದ ಮೌಲ್ಯದಿಂದ ಎಣಿಸಲಸಾಧ್ಯ ಎಂದು, ಮತ್ತು ಬರೀ ಐದು ನಿಮಿಷಗಳಷ್ಟು ಸಮಯ ಕೂಡ ಕೆಲವು ಸಾರಿ ಎಣಿಸಲಾಗದಂತಹ ಸಂಪತ್ತಿಗಿಂತ ಅಮೂಲ್ಯವಾದದ್ದು ಎಂದು. ಇದೆಲ್ಲವೂ ಕೂಡ ಸ್ತುತ್ಯಾರ್ಹವಾದದ್ದು, ಈಗ ನಾನು ನಿನ್ನ ಸ್ನೇಹಿತನ ಬಗ್ಗೆ ಯಾರು ಅವನ ಜೀವನದ ಭಯಾನಕವಾದ ಅನುಭವದ ಬಗ್ಗೆ ಹೇಳಿದನೊ ಅವನ ಬಗ್ಗೆ ಒಂದು ವಿಷಯವನ್ನ ಕೇಳಲೇ? ನೀನು ಹೇಳುವ ಪ್ರಕಾರ, ಅವನಿಗೆ ಕ್ಷಮಾದಾನ ಸಿಕ್ಕಿತು, ಅಂದರೆ ಬೇರೇ ಮಾತಿನಲ್ಲಿ ಹೇಳಬೇಕೆಂದರೆ ಅವರು ಅವನಿಗೆ ’ದಿನಗಳ ಅನಂತತೆ’ಯನ್ನ ಪುನಃಸ್ಥಾಪಿಸಿಕೊಟ್ಟರು. ಅವನು ಈ ಕಾಲದ ಐಶ್ವರ್ಯವನ್ನ ಏನು ಮಾಡಿದ? ಪ್ರತಿಯೊಂದು ನಿಮಿಷವನ್ನೂ ಸದುಪಯೋಗ ಪಡಿಸಿಕೊಂಡನೇ?”

“ಓ, ಇಲ್ಲ, ಖಂಡಿತ ಇಲ್ಲ, ಅದರ ಬಗ್ಗೆ ನಾನೇ ಅವನನ್ನು ಕೇಳಿದೆ. ಅವನಂದುಕೊಂಡ ರೀತಿಯಲ್ಲಿ ಅವನು ಬಾಳಲೇ ಇಲ್ಲ. ಅನೇಕ ಕ್ಷಣಗಳನ್ನ ವ್ಯರ್ಥವಾಗಿ ಕಳೆದನಂತೆ.”

“ಸರಿ ಹಾಗಾದರೆ, ಇಲ್ಲೊಂದು ಪರೀಕ್ಷೆಯಿದೆ, ಮತ್ತು ಒಂದು ಸಂಗತಿ ಸಾಬೀತಾಗಿದೆ; ಪ್ರತಿಯೊಂದು ನಿಮಿಷವನ್ನೂ ಗಣನೆಗೆ ತೆಗೆದುಕೊಳ್ಳುತ್ತಾ ಬದುಕುವುದು ಅಸಾಧ್ಯ ಎನ್ನುವುದು. ನೀನು ಏನಾದರೂ ಹೇಳು, ಯಾವುದೊ ಒಂದು ಕಾರಣಕ್ಕೆ ಅದು ಅಸಾಧ್ಯ.”

“ಅದು ನಿಜ” ಪ್ರಿನ್ಸ್ ಹೇಳಿದ. “ನಾನೂ ಅದರ ಬಗ್ಗೆ ಯೋಚಿಸಿದ್ದೇನೆ, ಆದರೂ ಯಾಕೆ ಯಾರಾದರೂ ಅದನ್ನು ಮಾಡುವುದಕ್ಕೆ ಸಾಧ್ಯವಿಲ್ಲ?”

“ಹಾಗಾದರೆ, ಎಲ್ಲರಿಗಿಂತ ಹೆಚ್ಚು ಬುದ್ಧಿವಂತಿಕೆಯಿಂದ ನೀನು ಬದುಕಬಲ್ಲೆ ಎಂದು ನೀನು ಚಿಂತಿಸುತ್ತೀಯಾ?” ಅಗ್ಲಾಯ ಕೇಳಿದಳು.

“ಹೌದು, ಕೆಲವು ಬಾರಿ ನಾನು ಆ ಕಲ್ಪನೆ ನನಗೆ ಬಂದದ್ದಿದೆ.”

“ನೀನು ಈಗಲೂ ಕೂಡ ಆ ಕಲ್ಪನೆಯನ್ನು ಹೊಂದಿದ್ದೀಯಾ?”

“ಹೌದು, ಈಗಲೂ ಕೂಡ” ಪ್ರಿನ್ಸ್ ಉತ್ತರಿಸಿದ.

ಇಲ್ಲಿಯವರೆಗೂ ಅವನು ಸೌಮ್ಯ ಮತ್ತು ಆತ್ಮವಿಶ್ವಾಸದಿಂದ ಕೂಡಿರದ ನಗುವಿನೊಂದಿಗೆ ಅಗ್ಲಾಯಳನ್ನು ಅವಲೋಕಿಸುತ್ತಿದ್ದ. ಆದರೆ ಆ ಕೊನೆಯ ಮಾತುಗಳು ಅವನ ತುಟಿಯಿಂದ ಹೊರಬಿದ್ದಂತೆ ಅವನು ನಗಲು ಶುರುಮಾಡಿದ, ಮತ್ತು ಅವಳ ಕಡೆಗೆ ಪುನಃ ಸಂತಸದಿಂದ ನೋಡಿದ.

“ನೀನೊಬ್ಬ ಸಭ್ಯ ಸಾಧಾರಣ ಮನುಷ್ಯ ಹೌದಲ್ಲವೊ?” ಅಗ್ಲಾಯ ಸ್ವಲ್ಪ ಸಿಡುಕಿಕೊಂಡೇ ಕೇಳಿದಳು.

“ಆದರೆ ನೀನದೆಷ್ಟು ದಿಟ್ಟಲಾಗಿದ್ದೀಯ!” ಅವನು ಹೇಳಿದ. “ನೀನು ನಗುತ್ತಿದ್ದೀಯ, ಮತ್ತು ನಾನು-ಆ ಮನುಷ್ಯನ ಕಥೆ ನನ್ನನ್ನು ಎಷ್ಟೊಂದು ಪ್ರಭಾವಗೊಳಿಸಿತೆಂದರೆ ಅದರ ಬಗ್ಗೆ ನಂತರ ನಾನು ಕನಸಿನಲ್ಲಿ ಕಂಡೆ, ಹೌದು ಆ ಐದು ನಿಮಿಷಗಳನ್ನ ಕನಸಿನಲ್ಲಿ ಕಂಡೆ.”

ಅವನು ಅವನ ಕೇಳುಗರ ಕಡೆಗೆ ಅಷ್ಟೇ ಗಾಂಭೀರ್ಯದ ಮತ್ತು ಹುಡುಕಾಡುತ್ತಿರುವ ಮುಖಭಾವದಿಂದ ನೋಡಿದ.

“ನಿಮಗ್ಯಾರಿಗೂ ನನ್ನ ಮೇಲೆ ಕೋಪವಿಲ್ಲ ತಾನೆ?” ಅವರ ಮುಖಗಳನ್ನ ನೇರವಾಗಿ ನೋಡುತ್ತಿದ್ದರೂ ಒಂದು ರೀತಿಯ ಧೃತಿಗೆಟ್ಟ ಆತುರದಿಂದ ಅವನು ಇದ್ದಕ್ಕಿದ್ದಂತೆ ಕೇಳಿದ.

“ನಾವ್ಯಾಕೆ ಕೋಪಗೊಳ್ಳಬೇಕು?” ಅವರೆಲ್ಲಾ ಕೂಗಿ ಹೇಳಿದರು.

“ನಾನು ಬಂದಾಗಿನಿಂದಲೂ ನಿಮಗೆ ಉಪನ್ಯಾಸ ನೀಡುತ್ತಲೇ ಇದ್ದೇನೆ ಅನ್ನುವ ಕಾರಣದಿಂದ!”

ಇದಕ್ಕೆ ಅವರೆಲ್ಲರೂ ಹೃತ್ಪೂರ್ವಕವಾಗಿ ಒಟ್ಟಿಗೇ ನಕ್ಕುಬಿಟ್ಟರು.

“ದಯವಿಟ್ಟು ನನ್ನ ಬಗ್ಗೆ ಕೋಪಗೊಳ್ಳಬೇಡಿ” ಪ್ರಿನ್ಸ್ ಮುಂದುವರಿಸಿದ. “ಜೀವನದಲ್ಲಿನ ನನ್ನ ಅನುಭವ ಮಿಕ್ಕೆಲ್ಲವರಿಗಿಂತಲೂ ಬಹಳ ಕಡಿಮೆ ಎನ್ನುವುದು ನನಗೂ ಕೂಡ ಚೆನ್ನಾಗಿ ತಿಳಿದಿದೆ, ಮತ್ತು ಅದರ ಬಗ್ಗೆಗಿನ ಜ್ಞಾನವೂ ಕೂಡ ಕಮ್ಮಿಯೇ. ನಾನು ಕೆಲವು ಬಾರಿ ವಿಚಿತ್ರವಾಗಿ ಮಾತನಾಡುತ್ತಿರುವಂತೆ ಕಾಣಿಸಿಕೊಳ್ಳುತ್ತೇನೆ.”

ಅವನು ಕೊನೆಯ ಮಾತುಗಳನ್ನ ಉದ್ರೇಕಗೊಂಡವನಂತೆ ಹೇಳಿದ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-2)

“ನೀನು ಸಂತೋಷದಿಂದ ಇದ್ದೆ ಎಂದು ಹೇಳಿದ ಮೇಲೆ ನೀನು ಬೇರೆಯವರಿಗಿಂತ ಬದುಕಿನ ಬಗ್ಗೆ ಕಡಿಮೆ ಅನುಭವವನ್ನ ಪಡೆದಿಲ್ಲ, ಆದರೆ ಹೆಚ್ಚಿನದನ್ನು ಪಡೆದಿದ್ದೀಯ ಅಂದ ಹಾಗೆ ಆಯಿತು. ಈ ರೀತಿಯ ಸಮರ್ಥನೆಗಳೆಲ್ಲಾ ಯಾಕೆ?” ಅಗ್ಲಾಯ ಮಧ್ಯದಲ್ಲಿ ಅಡ್ಡಿಬಂದು ಅಣಕಿಸುವ ಧ್ವನಿಯಲ್ಲಿ ಕೇಳಿದಳು. “ಅದರ ಜೊತೆಗೆ ನಮಗೆಲ್ಲಾ ಉಪನ್ಯಾಸ ಕೊಡುವುದರ ಬಗ್ಗೆ ನೀನೇನೂ ಕಳವಳ ಪಡಬೇಕಾಗಿಲ್ಲ; ಕಾರಣ ನಿನ್ನ ಬಗ್ಗೆ ನೀನೇ ಹೊಗಳಿಕೊಳ್ಳುವುದಂತಹದೇನೂ ಇಲ್ಲದಿರುವುದಿಂದ. ನಿನ್ನಲ್ಲಿನ ಸರ್ವ ಸ್ವೀಕಾರ ಮನೋಭಾವದ ಕಾರಣದಿಂದ ಒಬ್ಬ ಮನುಷ್ಯ ನೂರಕ್ಕೂ ಹೆಚ್ಚು ವರ್ಷಗಳ ಕಾಲ ಸಂತೋಷದಿಂದ ಬದುಕಬಹುದು. ಒಬ್ಬ ಅಪರಾಧಿಯನ್ನ ಮರಣದಂಡನೆಗೆ ಗುರಿಪಡಿಸುವುದನ್ನ ನಿನಗೊಬ್ಬರು ತೋರಿಸಬಹುದು, ಅಥವ ಒಂದು ಕಿರುಬೆರಳನ್ನೂ ತೋರಿಸಬಹುದು, ನೀನು ಎರಡರಿಂದಲೂ ಒಂದು ನೀತಿಪಾಠವನ್ನ ಮತ್ತು ಉತ್ಕರ್ಷವಾದ ವಿಚಾರವನ್ನ ಸಿದ್ಧಪಡಿಸಿ ಸಂತೃಪ್ತಿಯಿಂದ ಮತ್ತು ಸಂತೊಷದಿಂದ ಇದ್ದುಬಿಡುತ್ತೀಯ. ಈ ರೀತಿಯ ಬದುಕು ಸುಲಭಸಾಧ್ಯವಾದ ಬದುಕು.”

“ನೀನು ಈ ರೀತಿ ಉದ್ರೇಕ ಸ್ಥಿತಿಗೆ ಯಾವಾಗಲೂ ಯಾಕೆ ತಲುಪುತ್ತೀಯ ಎಂದು ನನಗೆ ಅರ್ಥವಾಗುವುದಿಲ್ಲ” ಮೇಡಮ್ ಎಪಾಂಚಿನ್ ಹೇಳಿದಳು, ಅವಳು ಈ ಸಂಭಾಷಣೆಯನ್ನ ಕೇಳುಕೇಳುತ್ತಾ ಮಾತನಾಡುತ್ತಿರುವವರ ಮುಖಗಳನ್ನ ಅಂತಿಂದಿತ್ತ ವೀಕ್ಷಿಸುತ್ತಿದ್ದಳು. “ನಿನ್ನ ಮಾತಿನ ಅರ್ಥ ಏನೆಂದೇ ನನಗೆ ತಿಳಿಯುತ್ತಿಲ್ಲ. ನಿನ್ನ ಕಿರುಬೆರಳಿಗೂ ಪ್ರಸಕ್ತ ವಿಷಯಕ್ಕೂ ಏನು ಸಂಬಂಧ? ಅವನ ಮಾತುಗಳು ರಂಜನೀಯವಾಗಿಲ್ಲದಿದ್ದರೂ, ಪ್ರಿನ್ಸ್ ಚೆನ್ನಾಗಿಯೇ ಮಾತನಾಡುತ್ತಾನೆ. ಶುರುಮಾಡಿದಾಗ ಅವನು ಲವಲವಿಕೆಯಿಂದ ಇದ್ದ, ಈಗ ಬೇಜಾರಾದವನ ರೀತಿ ಕಾಣುತ್ತಿದ್ದಾನೆ.”

“ಅಯ್ಯೊ ಪರವಾಗಿಲ್ಲ ಅಮ್ಮ! ಪ್ರಿನ್ಸ್ ನೀನು ಮರಣದಂಡನೆಗೆ ಗುರಿಪಡಿಸುವುದನ್ನ ಕಣ್ಣಾರೆ ಕಂಡಿದ್ದರೆ ಚೆನ್ನಾಗಿರುತ್ತಿತ್ತು” ಅಗ್ಲಾಯ ಹೇಳಿದಳು. “ನೀನು ನೋಡಿದ್ದರೆ ನಾನು ಅದರ ಬಗ್ಗೆ ಒಂದು ಪ್ರಶ್ನೆಯನ್ನ ಕೇಳಬೇಕೆಂದಿದ್ದೇನೆ.”

“ಹೌದು ನಾನೊಂದು ಮರಣದಂಡನೆಯ ಪ್ರಕ್ರಿಯೆಯನ್ನು ನೋಡಿದ್ದೇನೆ” ಪ್ರಿನ್ಸ್ ಹೇಳಿದ.

“ನೀನು ನೋಡಿದ್ದೀಯ!” ಅಗ್ಲಾಯ ಕೂಗಿ ಹೇಳಿದಳು. “ನಾನು ಊಹಿಸಬೇಕಾಗಿತ್ತು. ಈ ಕಥೆಯ ಉಳಿದ ಭಾಗಕ್ಕೆ ಅದೊಂದು ಮುಕುಟದಂತಿರುತ್ತಿತ್ತು. ನೀನು ಮರಣದಂಡನೆಯನ್ನ ನೋಡಿದ್ದರೆ, ಅದು ಹೇಗೆ ನೀನು ಸಂಪೂರ್ಣವಾಗಿ ಸಂತೋಷದಿಂದ ಇದ್ದೆ ಎಂದು ನೀನು ಹೇಳಲು ಸಾಧ್ಯ?”

“ನೀನು ಇದ್ದ ಜಾಗದಲ್ಲಿ ಮರಣದಂಡನೆಯ ಶಿಕ್ಷೆ ಜಾರಿಯಲ್ಲಿತ್ತೇ?” ಅಡೆಲೈಡ ಕೇಳಿದಳು.

“ನಾನದನ್ನ ನೋಡಿದ್ದು ಲ್ಯೋನ್ಸ್ ಎಂಬ ಪ್ರದೇಶದಲ್ಲಿ. ಪ್ರೊಫೆಸರ್ ಸ್ಕ್ನೀಡರ್ ನಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು, ನಾವು ಅಲ್ಲಿಗೆ ಹೋದ ತಕ್ಷಣವೇ ಅದನ್ನು ನೋಡಿದೆವು.”

“ಸರಿ, ಅದು ನಿನಗೆ ತುಂಬಾ ಇಷ್ಟವಾಯಿತೇ? ಅದು ನೀತಿ ಬೋಧಪ್ರದವಾಗಿತ್ತೇ ಮತ್ತು ಆಸಕ್ತಿದಾಯಕವಾಗಿತ್ತೇ?” ಅಗ್ಲಾಯ ಕೇಳಿದಳು.

“ಇಲ್ಲ, ನನಗದು ಇಷ್ಟವಾಗಲೇ ಇಲ್ಲ, ಅದನ್ನ ನೋಡಿದ ಮೇಲೆ ಅನಾರೋಗ್ಯದಿಂದ ಬಳಲಿದೆ; ಆದರೆ ಇಡೀ ಪ್ರಕ್ರಿಯೆಯನ್ನು ದಿಟ್ಟ ದೃಷ್ಟಿಯಿಂದ ನೋಡುತ್ತಿದ್ದೆ ಎಂದು ಒಪ್ಪಿಕೊಳ್ಳುತ್ತೇಬೆ. ನನಗೆ ನನ್ನ ನೋಟವನ್ನ ಅದರ ಕಡೆಯಿಂದ ತಿರುಗಿಸಲು ಸಾಧ್ಯವಾಗಲೇ ಇಲ್ಲ.”

“ನನಗೂ ಕೂಡ ಅದರ ಕಡೆಯಿಂದ ನನ್ನ ನೋಟವನ್ನ ತಿರುಗಿಸಲು ಆಗುತ್ತಿರಲಿಲ್ಲವೇನೊ” ಅಗ್ಲಾಯ ಹೇಳಿದಳು.

“ಅಲ್ಲಿಗೆ ಹೆಂಗಸರು ಹೋಗಿ ಮರಣದಂಡನೆಯನ್ನ ವೀಕ್ಷಿಸುವುದನ್ನ ಅವರು ಸಮ್ಮತಿಸುವುದಿಲ್ಲ. ಅಲ್ಲಿಗೇನಾದರೂ ಯಾರಾದರೂ ಹೆಂಗಸರು ಹೋಗಿ ನೋಡಿದರೆ, ಮರು ದಿನದ ದಿನಪತ್ರಿಕೆಯಲ್ಲಿ ಅವರನ್ನು ಅವಹೇಳನ ಮಾಡಲಾಗುತ್ತದೆ.”

“ಅದು ಯಾಕೆಂದರೆ, ಅದೊಂದು ಹೆಂಗಸರು ನೋಡುವಂತಹ ದೃಶ್ಯವಲ್ಲ ಎಂಬ ಪ್ರತಿಪಾದನೆಯ ಕಾರಣದಿಂದ, ಮತ್ತು ಅವರು ಒಪ್ಪಿಕೊಳ್ಳುವುದು ಅದೊಂದು ಗಂಡಸರು ನೋಡುವಂತಹ ದೃಶ್ಯ ಎಂದು. ಆ ಒಂದು ತೀರ್ಮಾನಕ್ಕೆ ನಾನವರನ್ನ ಅಭಿನಂದಿಸುತ್ತೇನೆ. ನಾನಂದುಕೊಂಡಿರುವುದು ನೀನೂ ಇದನ್ನು ಒಪ್ಪುತ್ತೀಯಲ್ಲವೇ ಪ್ರಿನ್ಸ್?”

“ನಮಗೆ ಆ ಮರಣದಂಡನೆಯ ಪ್ರಕ್ರಿಯೆಯ ಬಗ್ಗೆ ತಿಳಿಸು” ಅಡಲೈಡ ಕೇಳಿದಳು.

“ಈಗ ನಾನದನ್ನ ಹೇಳದಿರುವುದೇ ಒಳ್ಳೆಯದು” ಸ್ವಲ್ಪ ಕ್ಷೋಭೆಗೊಳಗಾದಂತೆ ಮತ್ತು ಮುಖ ಗಂಟಿಕ್ಕಿಕೊಳ್ಳುತ್ತಾ ಪ್ರಿನ್ಸ್ ಹೇಳಿದ.

“ನಮಗೆ ಹೇಳಲು ನಿನಗೆ ಇಷ್ಟವಿಲ್ಲವೆಂದು ತೋರುತ್ತದೆ” ಅಗ್ಲಾಯ ಅಣಕಿಸುವಂತೆ ಮುಖ ಮಾಡುತ್ತಾ ಹೇಳಿದಳು.

“ಇಲ್ಲ, ವಿಷಯ ಏನೆಂದರೆ ಎಲ್ಲವನ್ನೂ ನಾನು ಸ್ವಲ್ಪ ಹೊತ್ತಿನ ಮುಂಚೆಯೇ ವಿವರವಾಗಿ ಒಬ್ಬರಿಗೆ ಹೇಳಿದ್ದೆ.”

“ಯಾರಿಗೆ ನೀನು ಹೇಳಿದ್ದು?”

“ಗಂಡಸು ಸೇವಕನಿಗೆ, ನಾನು ಜನರಲ್‌ನನ್ನು ನೋಡಲು ಕಾಯುತ್ತಾ ಕುಳಿತಿದ್ದಾಗ.”

“ನಮ್ಮ ಸೇವಕನಿಗಾ?” ಎಂದು ಅನೇಕ ಧ್ವನಿಗಳು ಒಟ್ಟಿಗೇ ಉದ್ಗರಿಸಿದವು.

“ಅದೇ ಒಳ ಬರುವ ಕೋಣೆಯಲ್ಲಿರುತ್ತಾನೆಯಲ್ಲಾ ಅವನಿಗೆ, ಬೂದುಬಣ್ಣದ, ಕೆಂಪು ಮುಖದ ಮನುಷ್ಯನಿಗೆ.”

“ಈ ಪ್ರಿನ್ಸ್ ಸ್ಪಷ್ಟವಾಗಿ ಒಬ್ಬ ಡೆಮಾಕ್ರಟ್- ಪ್ರಜಾಪ್ರಭುತ್ವವಾದಿ” ಆಗ್ಲಯಾ ಅಭಿಪ್ರಾಯಪಟ್ಟಳು.

“ಸರಿ, ನೀನು ಆ ಅಲೆಕ್ಸೈಗೇ ಅದರ ಬಗ್ಗೆ ಹೇಳಿದ್ದರೆ, ಖಂಡಿತವಾಗಿ ನಮಗೂ ಕೂಡ ಹೇಳಬಹುದು.”

“ನಾನೂ ಕೂಡ ಈಗ ಅದರ ಬಗ್ಗೆ ಕೇಳಬಯಸುತ್ತೇನೆ.” ಅಡಲೈಡ ಪುನಃ ಹೇಳಿದಳು.

“ಸರಿ, ಈಗತಾನೆ ನಿವೇದಿಸಿಕೊಂಡೆ” ಇನ್ನೂ ಹೆಚ್ಚು ಮುಖಭಾವದಿಂದ ಪ್ರಿನ್ಸ್ ಶುರುಮಾಡಿದ, “ನೀನು ಚಿತ್ರಿಸುವುದಕ್ಕೆ ಒಂದು ವಸ್ತುವಿನ ಬಗ್ಗೆ ವಿವರಕ್ಕಾಗಿ ನನ್ನನ್ನು ಕೇಳಿದಾಗ, ಅದರ ಬಗ್ಗೆ ಹೇಳಲು ಗಂಭೀರವಾಗಿ ಆಲೋಚಿಸಿದೆ ಎಂಬುದನ್ನಿಲ್ಲಿ ನಿವೇದಿಸಿಕೊಳ್ಳುತ್ತೇನೆ. ನಾನು ಯೋಚಿಸಿದ್ದು ಒಬ್ಬ ಅಪರಾಧಿಯ ಮುಖವನ್ನ ಚಿತ್ರಿಸು ಎಂದು ಹೇಳಲು, ಗಿಲೊಟಿನ್ ಅವನ ಕತ್ತಿನ ಮೇಲೆ ಬೀಳುವುದಕ್ಕಿಂತ ಮುಂಚೆ ಕಂಡ ಅವನ ಮುಖದ ಚಿತ್ರಣವನ್ನು, ಅಂದರೆ ಆ ನತದೃಷ್ಟ ವ್ಯಕ್ತಿ ಗಲ್ಲು ಸ್ಥಳದ ಮೇಲೆ ಇನ್ನೂ ನಿಂತಿರುವಾಗಿನ ಅವನ ಮುಖಚರ್ಯೆಯನ್ನ, ಅವನ ಕತ್ತನ್ನ ಗಿಲೊಟಿನ್‌ನಲ್ಲಿ ಇಡುವುದಕ್ಕೆ ತಯಾರಿ ನಡೆಸುತ್ತಿರುವಾಗಿನದು.”

“ಏನು, ಬರೀ ಅವನ ಮುಖವನ್ನಾ?” ಅಡಲೈಡ ಕೇಳಿದಳು. “ಅದೊಂದು ಖಂಡಿತವಾಗಿಯೂ ವಿಚಿತ್ರವಾದ ವಸ್ತು ಆಗುತ್ತದೆ. ಅದ್ಯಾವ ರೀತಿಯ ಕಲಾಕೃತಿಯಾಗುತ್ತದೆ?”

“ಯಾಕಾಗಬಾರದು?” ಪ್ರಿನ್ಸ್ ಸ್ವಲ್ಪ ಭಾವುಕತೆಯಿಂದ ಒತ್ತಾಯಿಸಿದ. “ನಾನು ಬೇಸಲ್‌ನಲ್ಲಿದ್ದಾಗ ಅದೇ ರೀತಿಯ ಶೈಲಿಯಲ್ಲಿದ್ದ ಒಂದು ಕಲಾಕೃತಿಯನ್ನ ಕಂಡಿದ್ದೆ. ಅದರ ಬಗ್ಗೆ ಹೇಳಲು ನಾನು ಇಚ್ಚಿಸುತ್ತೇನೆ; ಯಾವತ್ತಾದರೂ ಒಂದು ದಿನ ಹೇಳುತ್ತೇನೆ; ಅದು ನನ್ನನ್ನು ಗಾಢವಾಗಿ ಪ್ರಭಾವಿಸಿತ್ತು.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

“ಓ, ನೀನು ಇನ್ನೊಮ್ಮೆ ಯಾವಾಗಲಾದರೂ ಆ ಬೇಸಲ್‌ನ ಚಿತ್ರದ ಬಗ್ಗೆ ಹೇಳುವಂತೆ; ಈಗ ಆ ಮರಣದಂಡನೆಯ ಪ್ರಕ್ರಿಯೆಯ ಬಗ್ಗೆ ಸಂಪೂರ್ಣವಾಗಿ ತಿಳಿಸು.” ಅಡೆಲೈಡ ಹೇಳಿದಳು. “ನೀನು ಈಗ ನಮಗೆ ಹೇಳಬೇಕಾದದ್ದು ಆ ಮುಖದ ಬಗ್ಗೆ; ನಿನ್ನ ಕಲ್ಪನೆಗೆ ಅದು ಯಾವ ರೀತಿ ಕಂಡಿತು ಎಂದು, ಅದನ್ನ ಹೇಗೆ ಚಿತ್ರಿಸಬೇಕೆಂದು? ಬರೀ ಮುಖ ಮಾತ್ರ, ಅರ್ಥವಾಯಿತೇ?”

“ಅದು ಮರಣದಂಡನೆಗೆ ಒಳಪಡಿಸುವುದಕ್ಕಿಂತ ಕೇವಲ ಒಂದು ನಿಮಿಷದ ಮುಂಚಿನದ್ದು ಮಾತ್ರ” ಪ್ರಿನ್ಸ್ ಪ್ರಾರಂಭಿಸಿದ, ತಕ್ಷಣ ಎಲ್ಲದರ ನೆನಪು ಮರುಕಳಿಸಿದ ಕಾರಣದಿಂದ ಉತ್ತೇಜಿತನಾಗಿ ಮತ್ತು ಕ್ಷಣಮಾತ್ರದಲ್ಲಿ ಮಿಕ್ಕೆಲ್ಲವನ್ನೂ ಮರೆತುಬಿಟ್ಟು, “ಅವನು ಏಣಿಯಿಂದ ಆಚೆಗೆ ಇಳಿದು ಗಲ್ಲು ಸ್ಥಳದ ಮೇಲೆ ಹೆಜ್ಜೆಯಿಟ್ಟ ಕ್ಷಣದಲ್ಲೇ, ಅವನು ಆಕಸ್ಮಿಕವಾಗಿ ನನ್ನ ಕಡೆಗೆ ನೋಡುವ ಸಂದರ್ಭ ಒದಗಿ ಬಂದಿತು: ನಾನು ಅವನ ಕಣ್ಣುಗಳನ್ನ ನೋಡುತ್ತಲೇ ಒಮ್ಮೆಗೇ ಎಲ್ಲವನ್ನೂ ಅರ್ಥಮಾಡಿಕೊಂಡೆ, ಆದರೆ ಅದನ್ನ ಹೇಗೆ ನಾನು ವಿವರಿಸಲಿ? ಸಾಧ್ಯವಾದರೆ ನೀನು ಅಥವ ಇನ್ನು ಯಾರಾದರೋ ಆ ಚಿತ್ರವನ್ನ ಬರೆಯಲಿ ಅಂತ ನನ್ನಿಚ್ಛೆ. ಆ ಸಮಯದಲ್ಲಿ ನಾನು ಯೋಚಿಸಿದ್ದು ಎಂಥಾ ಕಲಾಕೃತಿಯಾಗಬಹುದು ಅದೆಂದು. ನೀನು ಅದಕ್ಕಿಂತ ಮುಂಚೆ ಏನೇನಾಯಿತು ಎನ್ನುವುದನ್ನು, ಎಲ್ಲವನ್ನೂ ಕಲ್ಪಿಸಿಕೊಳ್ಳಬೇಕು. ಅವನು ಜೈಲಿನಲ್ಲೇ ಕೆಲವು ದಿನಗಳಿಂದ ವಾಸವಾಗಿದ್ದ, ಮತ್ತು ಅವನ ಮರಣದಂಡನೆಯ ಪ್ರಕ್ರಿಯೆ ನಡೆಯುವುದಕ್ಕೆ ಇನ್ನೂ ಒಂದು ವಾರವಾಗುತ್ತದೆ ಎಂದು ತಿಳಿದಿದ್ದ. ಎಲ್ಲಾ ಔಪಚಾರಿಕ ಕ್ರಿಯೆಗಳೂ ಮುಗಿಯುವುದಕ್ಕೆ ಸ್ವಲ್ಪ ಕಾಲ ಹಿಡಿಯುತ್ತದೆ ಎಂಬುದು ಅವನ ವಿಶ್ವಾಸ; ಆದರೆ ಅವನ ಮರಣದಂಡನೆಯ ಮುಂಚಿನ ಎಲ್ಲಾ ಕಾರ್ಯವಿಧಾನಗಳೂ ಇದ್ದಕ್ಕಿದ್ದಂತೆ ಬೇಗನೆ ಮುಗಿದುಹೋದವು. ಅದೊಂದು ಅಕ್ಟೋಬರ್‌ನ ಮುಂಜಾನೆ, ಚಳಿಯಿಂದ ಕೂಡಿದ ಇನ್ನೂ ಕಗ್ಗತ್ತಲು ಆವರಿಸಿಕೊಂಡಿದ್ದ ಮುಂಜಾನೆ; ಅವನಿನ್ನೂ ನಿದ್ರೆ ಮಾಡುತ್ತಿದ್ದಾಗ, ಬೆಳಿಗ್ಗೆ ಐದು ಗಂಟೆಗೇ ಜೈಲಿನ ಗವರ್ನರ್ ಮೆಲ್ಲನೆ ಹೆಜ್ಜೆಗಳನ್ನು ಇಡುತ್ತಾ ಬಂದು, ಮಲಗಿದ್ದವನ ಭುಜವನ್ನ ಮೆಲ್ಲಗೆ ಅಳ್ಳಾಡಿಸುತ್ತಾ ಎಬ್ಬಿಸುತ್ತಾನೆ. ಅವನು ತಕ್ಷಣ ಎಚ್ಚೆತ್ತುಕೊಳ್ಳುತ್ತಾನೆ. ’ಏನಾಯಿತು?’ ಎಂದು ಕೇಳುತ್ತಾನೆ. ’ನಿನ್ನ ಮರಣದಂಡನೆಯ ಶಿಕ್ಷೆಯನ್ನ ಜಾರಿಗೊಳಿಸುವುದಕ್ಕೆ ಈ ದಿನ ಹತ್ತು ಗಂಟೆಯ ಸಮಯವನ್ನು ನಿಗದಿಪಡಿಸಲಾಗಿದೆ.’ ಅವನು ಆಗತಾನೆ ಎದ್ದಿದ್ದ, ಮೊದಲಿಗೆ ಅವನಿಗೆ ನಂಬಲಾಗಲಿಲ್ಲ, ಅವನು ತನ್ನ ಮರಣದಂಡನೆಯ ಕಾಗದ ಪತ್ರಗಳು ತಯಾರಾಗುವುದಕ್ಕೆ ಇನ್ನೂ ಒಂದು ವಾರವಾಗುತ್ತದೆ ಇತ್ಯಾದಿ ಎಂದು ವಾದಿಸಲು ಪ್ರಾರಂಭಿಸಿದ, ಅವನು ಸಂಪೂರ್ಣವಾಗಿ ಎಚ್ಚರಗೊಂಡು ನಿಜಸ್ಥಿತಿಯನ್ನ ಅರಿತುಕೊಂಡ, ಅವನು ಅತೀವವಾದ ಮೌನಕ್ಕೆ ಶರಣಾಗಿ ಹೆಚ್ಚು ವಾದಿಸಲು ಹೋಗಲಿಲ್ಲ, ಎಂದು ಅವರು ಹೇಳುತ್ತಾರೆ; ಆದರೆ ಸ್ವಲ್ಪ ಸಮಯದ ನಂತರ ಅವನು ನುಡಿದಿದ್ದು: ’ಒಬ್ಬನ ಮೇಲೆ ಅದು ಇದ್ದಕ್ಕಿದ್ದಂತೆ ಕಠೋರವಾಗಿ ಎರಗಿಬರುತ್ತದೆ’ ಎಂದು. ಅದಾದ ನಂತರ ಪುನಃ ಮೌನಕ್ಕೆ ಶರಣಾಗಿ ಇನ್ನೇನನ್ನೂ ಹೇಳಲೇ ಇಲ್ಲ.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...