Homeಅಂಕಣಗಳುಬಹುಜನ ಭಾರತ; ಜನತಂತ್ರದ ಸ್ತಂಭಗಳ ಮೇಲೆ ನಡೆದ ಕರಾಳ ದಾಳಿ!

ಬಹುಜನ ಭಾರತ; ಜನತಂತ್ರದ ಸ್ತಂಭಗಳ ಮೇಲೆ ನಡೆದ ಕರಾಳ ದಾಳಿ!

- Advertisement -
- Advertisement -

ಭೀಮಾ ಕೋರೆಗಾಂವ್ ಆಪಾದಿತರ ಪೈಕಿ ಒಬ್ಬರಾದ ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ ಅಜ್ಞಾತ ಹ್ಯಾಕರ್ ಒಬ್ಬನು ಮೂವತ್ತು ದಸ್ತಾವೇಜುಗಳನ್ನು ’ನೆಟ್ಟಿದ್ದ’ನೆಂದು ವಾಷಿಂಗ್ಟನ್ ಪೋಸ್ಟ್ ಈ ವರ್ಷದ ಶುರುವಿನಲ್ಲಿ ವರದಿ ಮಾಡಿತ್ತು. ಆರ್ಸೆನಾಲ್ ಕನ್ಸಲ್ಟಿಂಗ್ ಎಂಬ ವಿಧಿವಿಜ್ಞಾನ ಸಂಸ್ಥೆಯ ತನಿಖೆಯನ್ನು ಈ ವರದಿ ಆಧರಿಸಿತ್ತು. ಕಳೆದ ತಿಂಗಳು ಇದೇ ವಿಧಿವಿಜ್ಞಾನ ಸಂಸ್ಥೆ ಆಪಾದಿತರಲ್ಲಿ ಒಬ್ಬರಾದ ಸುರೇಂದ್ರ ಗಾಡ್ಲಿಂಗ್ ಎಂಬ ದಲಿತ ಹಕ್ಕುಗಳ ಹೋರಾಟಗಾರರ ಕಂಪ್ಯೂಟರಿನ ಹಾರ್ಡ್ ಡ್ರೈವ್‌ನ್ನು ವಿಶ್ಲೇಷಿಸಿತ್ತು. ಹ್ಯಾಕಿಂಗ್ ಮಾಡಿ ಅವರ ಕಂಪ್ಯೂಟರಿಗೆ ಸುಳ್ಳು ಸಾಕ್ಷ್ಯಗಳನ್ನು ಹುದುಗಿಸಿದ ಕುರಿತು ಈ ಸಲ ಆರ್ಸೆನಾಲ್ ಕನ್ಸಲ್ಟಿಂಗ್ ಸಂಸ್ಥೆಗೆ ಇನ್ನಷ್ಟು ಆಳವಾದ ಪುರಾವೆ ದೊರೆತಿದೆ. ಬಾಸ್ಟನ್ ಮ್ಯಾರಥಾನ್ ಬಾಂಬಿಂಗ್ ಮುಂತಾದ ತೀರಾ ಗಂಭೀರ ಪ್ರಕರಣಗಳ ಸಾಕ್ಷ್ಯಗಳನ್ನು ಈ ಸಂಸ್ಥೆ ವಿಶ್ಲೇಷಿಸಿದೆ.

ಆದರೆ ಸುರೇಂದ್ರ ಗಾಡ್ಲಿಂಗ್ ಕಂಪ್ಯೂಟರಿನಲ್ಲಿ ಹ್ಯಾಕಿಂಗ್ ಮೂಲಕ ಸುಳ್ಳು ಸಾಕ್ಷ್ಯ ನೆಟ್ಟು, ಆಪಾದಿತರ ವಿರುದ್ಧ ಸಾಕ್ಷ್ಯ ಸೃಷ್ಟಿಸಿರುವ ಪ್ರಕರಣದಂತಹ ಮತ್ತೊಂದು ಗಂಭೀರ ಪ್ರಕರಣವನ್ನು ತಾನು ಕಂಡಿಲ್ಲವೆಂದು ಈ ಸಂಸ್ಥೆ ಹೇಳಿದೆ. 2016ರ ಫೆಬ್ರವರಿಯಿಂದ 2017ರ ನವೆಂಬರ್ ತನಕ 20 ತಿಂಗಳ ಕಾಲ ಗಾಡ್ಲಿಂಗ್ ಅವರ ಕಂಪ್ಯೂಟರನ್ನು ಹ್ಯಾಕಿಂಗ್ ಮೂಲಕ ಸುಳ್ಳು ಸಾಕ್ಷ್ಯ ನೆಡಲು ಗುರಿಯಾಗಿಸಲಾಗಿತ್ತು. ರೋನಾ ವಿಲ್ಸನ್ ಅವರ ಕಂಪ್ಯೂಟರಿನಲ್ಲಿ 30 ದಸ್ತಾವೇಜುಗಳನ್ನು ನೆಟ್ಟಿದ್ದ ಅದೇ ಹ್ಯಾಕರ್, ಗಾಡ್ಲಿಂಗ್ ಅವರ ಕಂಪ್ಯೂಟರಿನಲ್ಲಿ 14 ಸುಳ್ಳು ಸಾಕ್ಷ್ಯದ ದಸ್ತಾವೇಜುಗಳನ್ನು ನೆಟ್ಟಿದ್ದಾನೆ ಎಂದು ಆಸೆನಾಲ್ ಹೇಳಿದೆ

ಸುರೇಂದ್ರ ಗಾಡ್ಲಿಂಗ್ ಮತ್ತು ರೋನಾ ವಿಲ್ಸನ್ ಅವರಂತೆ ಸ್ಟ್ಯಾನ್ ಸ್ವಾಮಿ ಮತ್ತು ಎಲ್ಗರ್ ಪರಿಷತ್- ಭೀಮಾ ಕೋರೆಗಾಂವ್ ಪ್ರಕರಣದ ಇತರೆ 13 ಮಂದಿ ಬಂಧಿತರೂ ಹ್ಯಾಕಿಂಗ್ ಸಂಚಿನ ಬಲಿಪಶುಗಳಾಗಿದ್ದರೆ ಆಶ್ಚರ್ಯವಿಲ್ಲ ಎಂದೂ ಆರ್ಸೆನಾಲ್- ವಾಷಿಂಗ್ಟನ್ ಪೋಸ್ಟ್ ವರದಿ ಹೇಳಿದೆ.

ಇದೀಗ ಇಸ್ರೇಲಿ ಮೂಲದ ಬೇಹುಗಾರಿಕೆ ತಂತ್ರಾಂಶವನ್ನು ಮೊಬೈಲು ಫೋನುಗಳಲ್ಲಿ ಹೊಗಿಸಿ ನಮ್ಮ ದೇಶದ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು, ನ್ಯಾಯಮೂರ್ತಿಗಳ ಬೇಹುಗಾರಿಕೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ. ಪ್ಯಾರಿಸ್‌ನಲ್ಲಿರುವ Forbidden Stories ಎಂಬ ಲಾಭದ ಉದ್ದೇಶವಿಲ್ಲದ ಮೀಡಿಯಾ ಸಂಸ್ಥೆ ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಒಳಗೊಂಡ ಅಂತಾರಾಷ್ಟ್ರೀಯ ಸಹಕಾರಿ ತನಿಖೆಯ ಭಾಗವಾಗಿ ಈ ಬೇಹುಗಾರಿಕೆ ಪ್ರಕರಣ ಹೊರಬಿದ್ದಿದೆ. ಜಗತ್ತಿನ 16 ಮೀಡಿಯಾ ಸಂಸ್ಥೆಗಳು ಈ ಪ್ರಕರಣಗಳನ್ನು ಪರಿಶೀಲಿಸಿವೆ. ಟೊರಾಂಟೋ ವಿಶ್ವವಿದ್ಯಾಲಯದ ಪ್ರತಿಷ್ಠಿತ ಸಿಟಜನ್ ಲ್ಯಾಬ್ ಈ ಡೇಟಾವನ್ನು ವಿಶ್ಲೇಷಿಸಿ ಪೆಗಸಸ್ ಬೇಹುಗಾರಿಕೆ ತಂತ್ರಾಂಶದ ಪ್ರಯೋಗವನ್ನು ಪುಷ್ಟೀಕರಿಸಿದೆ. ಹೀಗಾಗಿ ಇದನ್ನು ಗಾಳಿಸುದ್ದಿಯೆಂದು ತಳ್ಳಿ ಹಾಕಲು ಬರುವುದಿಲ್ಲ.

2019ರಲ್ಲಿ ಪೆಗಸಸ್ ಬೇಹುಗಾರಿಕೆ ತಂತ್ರಾಂಶ ಪ್ರಯೋಗಿಸಿ ಭಾರತದ 121 ಮಂದಿ ನಾಗರಿಕರ ವಾಟ್ಸ್ಯಾಪ್ ಸಂದೇಶಗಳಿಗೆ ಕನ್ನ ಹಾಕಿದ ಪ್ರಕರಣ ನಡೆದಿತ್ತು. ಹೀಗಾಗಿ ಈಗಿನದು ಪೆಗಸಸ್ ಬೇಹುಗಾರಿಕೆಯ ಎರಡನೆಯ ಸುತ್ತು. 35 ದೇಶಗಳ 17 ಮೀಡಿಯಾ ಸಂಸ್ಥೆಗಳ 180 ಪತ್ರಕರ್ತರು ಈ ದಾಳಿಗೆ ಒಳಗಾಗಿದ್ದಾರೆ. ಈ ಪೈಕಿ ಭಾರತದ ಪತ್ರಕರ್ತರು 40 ಮಂದಿ. ಭಯೋತ್ಪಾದಕರು ಮತ್ತು ಪಾತಕಿಗಳ ವಿರುದ್ಧ ಬಳಸುವ ಸೈಬರ್ ಅಸ್ತ್ರವಿದು ಎಂದು ಪೆಗಸಸ್‌ಅನ್ನು ತಯಾರಿಸಿದ ಎನ್.ಎಸ್.ಒ.ಸಂಸ್ಥೆ ಹೇಳಿದೆ. ಹಾಗಿದ್ದರೆ ಪತ್ರಕರ್ತರು, ನ್ಯಾಯಮೂರ್ತಿಗಳು, ಮಾನವ ಹಕ್ಕುಗಳ ಹೋರಾಟಗಾರರು ಭಯೋತ್ಪಾದಕರೇ?

2019ರಲ್ಲಿ ಪೆಗಸಸ್ ಬಳಸಿದ್ದು ತಾನೆಂದು ಸರ್ಕಾರ ಒಪ್ಪಿಕೊಂಡೂ ಇರಲಿಲ್ಲ, ಅಲ್ಲಗಳೆದೂ ಇರಲಿಲ್ಲ. ಈಗಲೂ ಹಾಗೆಯೇ ನಡೆದುಕೊಂಡಿದೆ.

ಪೆಗಸಸ್ ಬೇಹುಗಾರಿಕೆ ಬೆಳವಣಿಗೆಗಳನ್ನು ಶೂನ್ಯದಲ್ಲಿ ನೋಡಲು ಬರುವುದಿಲ್ಲ. ಕಳೆದ ಆರೇಳು ವರ್ಷಗಳ ಕಾಲ ದೇಶದ ಸಾಮಾಜಿಕ-ರಾಜಕೀಯ ವಲಯದ ಆತಂಕಕಾರಿ ವಿದ್ಯಮಾನಗಳ ಬೆಳಕಿನಲ್ಲಿಟ್ಟು ನೋಡಬೇಕಿದೆ.

ತನ್ನ ಸೈದ್ಧಾಂತಿಕ ವಿರೋಧಿಗಳನ್ನ ಬೆನ್ನು ಹತ್ತಿ ಬೇಟೆ ಆಡತೊಡಗಿದೆ ಮೋದಿ ಪ್ರಭುತ್ವ. ಈ ದಿಕ್ಕಿನಲ್ಲಿ ತಾನು ಯಾವ ಹಂತಕ್ಕೆ ಬೇಕಾದರೂ ಹೋಗಲು ತಯಾರು ಎಂದು ಅದು ಯಾವುದೇ ಸಂಶಯಕ್ಕೆ ಎಡೆಯಿಲ್ಲದಂತೆ ತೋರಿಸಿಕೊಟ್ಟಿದೆ. ನ್ಯಾಯ- ಅನ್ಯಾಯದ ಮಾತು ಒತ್ತಟ್ಟಿಗಿರಲಿ, ಮೂಲಭೂತ ಮಾನವೀಯ ಮೌಲ್ಯವನ್ನು ಕೂಡ ಅದು ಗಾಳಿಗೆ ತೂರಿದೆ. ಈ ಅಮಾನುಷತೆ ಕಳೆದ ಆರೇಳು ವರ್ಷಗಳಿಂದ ಬಿಟ್ಟೂ ಬಿಡದಂತೆ ನಡೆದುಕೊಂಡು ಬಂದಿದೆ. ಈ ದೇಶದಲ್ಲಿ ತಬ್ಬಲಿಗಳೇ ಆಗಿ ಹೋಗಿರುವ ಈ ನೆಲದ ಮೂಲ ಮಕ್ಕಳಾದ ಆದಿವಾಸಿಗಳ ಕಷ್ಟ ಕಣ್ಣೀರುಗಳನ್ನು ತೊಡೆಯಲು ಬದುಕು ಸವೆಸಿದವರು ಫಾದರ್ ಸ್ಟ್ಯಾನ್ ಸ್ವಾಮಿ. ಅವರನ್ನು ಜೀವಂತ ಇರುವ ತನಕ ಅಮಾನವೀಯವಾಗಿ ನಡೆಸಿಕೊಂಡು ಕೈಯಾರೆ ಸಾವಿಗೆ ನೂಕಿದ್ದು ಪ್ರಭುತ್ವವೇ. ತನ್ನ ವಿರೋಧಿಗಳನ್ನು ಗೋರಿಗೆ ಕಳಿಸುವ ತನಕ ಬೆನ್ನು ಬಿಡದಿರುವ ಅದರ ಕ್ರೌರ್ಯಕ್ಕೆ ಸ್ಟ್ಯಾನ್ ಸ್ವಾಮಿ ಇತ್ತೀಚಿನ ಉದಾಹರಣೆ.

ಪೆಗಸಸ್ ಗೂಢಚಾರ ತಂತ್ರಾಂಶವನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುವುದಾಗಿಯೂ ಖಾಸಗಿ ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ಮಾರಾಟ ಮಾಡುವುದಿಲ್ಲ ಅಂತ ಎನ್.ಎಸ್.ಓ ಸಂಸ್ಥೆ ಈ ಹಿಂದೆ ಹೇಳಿತ್ತು. ಮತ್ತು ಈ ತಂತ್ರಾಂಶವನ್ನು ಸರ್ಕಾರಗಳು ತಮ್ಮ ರಾಷ್ಟ್ರೀಯ ಭದ್ರತೆ ಅಥವಾ ಸುರಕ್ಷತೆಯನ್ನು ಕಾಪಾಡಲು ಬಳಸುತ್ತವೆ ಎಂದೂ ಹೇಳಿತ್ತು. ಆದರೆ ಈ ಮಾತು ಸುಳ್ಳಾಗಿದೆ. ನಾಗರಿಕರ ಖಾಸಗಿತನದ ಮೇಲೆ ದಾಳಿ ನಡೆದಿದೆ.

ಮಾನವ ಹಕ್ಕುಗಳ ಹೋರಾಟಗಾರರು, ಪತ್ರಕರ್ತರು, ವಕೀಲರು, ಉದ್ಯಮಿಗಳು, ಇಬ್ಬರು ಹಾಲಿ ಮಂತ್ರಿಗಳು, ಮೂವರು ಪ್ರತಿಪಕ್ಷಗಳ ನಾಯಕರು, ಒಬ್ಬರು ನ್ಯಾಯಾಧೀಶರ ಡೇಟಾದ ಫಲಾನುಭವಿ ಯಾರು ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ.

ತಾನು ಅನಧಿಕೃತವಾಗಿ ಏನನ್ನೂ ಮಾಡಿಲ್ಲ ಎಂದು ಸರ್ಕಾರ ಹೇಳಿಕೆ ನೀಡಿದೆ. ಹಾಗಿದ್ದರೆ ಅಧಿಕೃತವಾಗಿ ಮಾಡಿದೆಯೇ, ಮಾಡಿದ್ದರೆ ಹೇಳಲು ಹಿಂಜರಿಕೆ ಯಾಕೆ?

ಈ ಕೃತ್ಯವನ್ನು ತಾನು ಎಸಗಿಲ್ಲವಾದರೆ ಯಾರು ಮಾಡಿಸಿದ್ದಾರೆ ಎಂದು ತನಿಖೆ ಮಾಡಿಸುವುದು ಸರ್ಕಾರದ ಆದ್ಯ ಕರ್ತವ್ಯ. ದೇಶದ ಜನತಂತ್ರ ಮತ್ತು ಸಮಗ್ರತೆ ಸಾರ್ವಭೌಮತೆಯ ಪ್ರಶ್ನೆಯಿದು. ಒಂದು ವೇಳೆ ಇದು ವಿದೇಶೀ ಸೈಬರ್ ದಾಳಿಯಾಗಿದ್ದರೆ ತೀರಾ ಕಳವಳಕಾರಿ ಸಂಗತಿ. ನಮ್ಮ ಸರ್ಕಾರವೇ ಮಾಡಿದ್ದರೆ ಭಾರತದ ಸಾಂವಿಧಾನಿಕ ಜನತಂತ್ರದ ಬುಡಮೇಲು ಕೃತ್ಯ. ವಿದೇಶೀ ಶಕ್ತಿಗಳು ಮಾಡಿದ್ದರೆ ಭಾರತ ಮತ್ತು ಭಾರತದ ನಾಗರಿಕರ ಮೇಲೆ ನಡೆದ ಕರಾಳ ಸೈಬರ್ ದಾಳಿ. ಎರಡರ ಪೈಕಿ ಯಾವುದೆಂದು ಕಂಡುಹಿಡಿಯಲು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಲೇಬೇಕು.


ಇದನ್ನೂ ಓದಿ: ಫೋನ್ ಟ್ಯಾಪ್ ಮಾಡಲಿ, ಜೈಲಿಗೆ ಹಾಕಲಿ, ನನ್ನ ಕೊನೆಯ ಉಸಿರಿರುವ ತನಕ ಬರೆಯುತ್ತಲೇ ಇರುವೆ

ಇದನ್ನೂ ಓದಿ: ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...