Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-2)

- Advertisement -
- Advertisement -

“ಇದೆಲ್ಲವೂ ಅರ್ಥವಿಲ್ಲದ್ದು, ನನ್ನನ್ನು ಒಬ್ಬಳನ್ನೇ ಇರಲು ಬಿಡಿ!” ಕೋಪಗೊಂಡ ತಾಯಿ ನುಡಿದಳು. “ಸರಿ ಆದರೆ ಈಗ ನನಗೆ ಹೇಳು ಪ್ರಿನ್ಸ್, ಇಲ್ಲೆ ಕುಳಿತುಕೋ, ಇನ್ನೂ ನನ್ನ ಹತ್ತಿರದಲ್ಲಿ, ಆ ಬೆಳಕಿನ ಬಳಿ ಬಾ! ನಾನು ನಿನ್ನ ಮುಖವನ್ನ ಸರಿಯಾಗಿ ನೋಡಬೇಕು. ಸರಿ, ಈಗ ಆ ಅಬ್ಬಾಟ್ ಅಂದರೆ ಯಾರು?”

“ಅಬ್ಬಾಟ್ ಪಾಫ್ನೂಟ್”, ನಮ್ಮ ಸ್ನೇಹಿತ ಗಂಭೀರತೆ ಮತ್ತು ಗೌರವದಿಂದ ಹೇಳಿದ.

“ಪಾಫ್ನೂಟ್, ಹೌದು. ಮತ್ತು ಅವನು ಯಾರು?”

ಎಪಾಂಚಿನ್‌ನ ಹೆಂಡತಿ ಆತುರದಿಂದ ಮತ್ತು ಒರಟಾಗಿ ಈ ಪ್ರಶ್ನೆಗಳನ್ನೆಲ್ಲಾ ಅವನಿಗೆ ಹಾಕಿದಳು. ಪ್ರಿನ್ಸ್ ಉತ್ತರಿಸಿದಾಗ ಅವಳು ಸಂತನಂತೆ ತಲೆಯಾಡಿಸುತ್ತಾ ಅವನ ಮಾತಿನ ಪ್ರತಿ ಪದವನ್ನೂ ಕೇಳಿಸಿಕೊಳ್ಳುತ್ತಾ ಹೋದಳು.

“ಅಬ್ಬಾಟ್ ಪಾಫ್ನೂಟ್ ಜೀವಿಸಿದ್ದು ಹದಿನಾಲ್ಕನೇ ಶತಮಾನದಲ್ಲಿ, ಪ್ರಿನ್ಸ್ ಪ್ರಾರಂಭಿಸಿದ; “ಅವನು ವೋಲ್ಗಾ ನದಿಯ ತೀರದಲ್ಲಿದ್ದ ಒಂದು ಮೊನಾಸ್ಟರಿಯ ಮೇಲ್ವಿಚಾರಕನಾಗಿದ್ದ, ಅದು ಇದ್ದದ್ದು ಈಗ ನಮ್ಮ ಕೊಸ್ಟ್ರಾಮೊ ಸರ್ಕಾರ ಇರುವ ಸ್ಥಳದಲ್ಲಿ. ಅವನು ಧಾರ್ಮಿಕ ಜಗತ್ತಿನಲ್ಲಿ ನಡೆಯುತ್ತಿದ್ದ ಹಲವು ಸಂಗತಿಗಳಲ್ಲಿ ಸಹಾಯ ಮಾಡಲು ಓರಿಯೊಲ್‌ಗೆ ತೆರಳಿದ. ಅವನು ಅಲ್ಲಿ ಒಂದು ಶಾಸನವನ್ನ ಬರೆದು ತನ್ನ ಸಹಿಯನ್ನ ಹಾಕಿದ, ಮತ್ತು ನಾನು ಅವನ ಮುದ್ರಿತ ಹಸ್ತಾಕ್ಷರವನ್ನ ಅಲ್ಲಿ ನೋಡಿದೆ; ಅದು ನನ್ನನ್ನು ಚಕಿತಗೊಳಿಸಿತು, ಮತ್ತು ನಾನದರ ನಕಲನ್ನು ಮಾಡಿಕೊಂಡೆ. ಜನರಲ್ ತನ್ನ ಓದುವ ಕೋಣೆಯಲ್ಲಿ ನನ್ನ ಕೈ ಬರಹವನ್ನು ಪರೀಕ್ಷಿಸಲು ಏನನ್ನಾದರೂ ಬರಿ ಎಂದು ಕೇಳಿದಾಗ ನಾನು ’ಅಬ್ಬಾಟ್ ಪಾಫ್ನೂಟ್ ಇಲ್ಲಿ ಸಹಿ ಹಾಕಿದ’, ಎಂದು ಅಬ್ಬಾಟ್‌ನ ಕೈಬರಹದಂತೆಯೇ ಬರೆದೆ. ಜನರಲ್‌ಗೆ ಅದು ಬಹಳ ಇಷ್ಟವಾಯಿತು, ಅದೇ ಕಾರಣಕ್ಕೆ ಅವನು ಅದನ್ನ ಈಗ ತಾನೇ ನೆನಪಿಸಿಕೊಂಡಿದ್ದು.”

“ಅಗ್ಲಾಯ, ಪಾಫ್ನೂಟ್ ಅನ್ನುವ ಹೆಸರನ್ನ ಬರೆದಿಟ್ಟುಕೊ, ಇಲ್ಲ ಅಂದರೆ ನಾವು ಮರೆತುಬಿಡುತ್ತೇವೆ. ಸರಿ ಈ ಹಸ್ತಾಕ್ಷರ ಎಲ್ಲಿದೆ?”

“ನನ್ನ ಪ್ರಕಾರ ಅದು ಜನರಲ್‌ನ ಟೇಬಲ್ಲಿನ ಮೇಲಿದೆ ಅನ್ನಿಸುತ್ತದೆ.”

“ಅದನ್ನ ತರಿಸುವುದಕ್ಕೆ ತಕ್ಷಣ ಯಾರನ್ನಾದರೂ ಕಳುಹಿಸಿ.”

“ಅದಕ್ಕೇನೀಗ, ನಿಮಗಾಗಿ ಹೊಸದೊಂದನ್ನು ಬೇಕಾದರೆ ಅರ್ಧ ನಿಮಿಷದಲ್ಲಿ ಬರೆದು ಕೊಡುತ್ತೇನೆ”, ಪ್ರಿನ್ಸ್ ಹೇಳಿದ, “ನಿಮಗೆ ಬೇಕಾದರೆ!”

“ಖಂಡಿತವಾಗಿಯೂ ಅಮ್ಮ!” ಅಲೆಕ್ಸಾಂಡ್ರ ಹೇಳಿದಳು, “ಆದರೆ ಈಗ ಮೊದಲು ಊಟ ಮಾಡೋಣ, ನಮಗೆಲ್ಲರಿಗೂ ಹಸಿವಾಗಿದೆ!”

“ಹೌದು, ಬಾ ಪ್ರಿನ್ಸ್”, ತಾಯಿ ಹೇಳಿದಳು, “ನಿನಗೂ ಬಹಳ ಹಸಿವಾಗಿದ್ದಿರಬಹುದು.”

“ಹೌದು, ನನಗೆ ಬಹಳ ಹಸಿವಾಗಿದೆ, ಬಹಳ ಧನ್ಯವಾದಗಳು.”

“ಸರಿ, ಜನರಲ್ ನಿನ್ನ ಶಿಷ್ಟಾಚಾರದ ನಡವಳಿಕೆಯ ಬಗ್ಗೆ ಅಷ್ಟೆಲ್ಲಾ ವಿವರುಸಿದರು, ಈಗ ನಾನೂ ಕೂಡ ಅದನ್ನ ನೋಡಬೇಕು. ಬಾ, ನೀನಿಲ್ಲೇ ಕೂಳಿತುಕೊ, ನನ್ನ ಎದುರುಗಡೆ”, ಅವಳು ಮಾತನ್ನು ಮುಂದುವರಿಸಿದಳು, “ನಾನು ನಿನ್ನ ಮುಖವನ್ನ ನೋಡಬೇಕು, ಅಲೆಕ್ಸಾಂಡ್ರ, ಅಡೆಲೈಡ ಪ್ರಿನ್ಸ್‌ನನ್ನು ಚೆನ್ನಾಗಿ ನೋಡಿಕೊಳ್ಳಿ! ಅವನನ್ನು ನೋಡಿದರೆ ಕಾಯಿಲೆಯವನು ಅಂತ ಅಷ್ಟೇನೂ ಅನಿಸುವುದಿಲ್ಲ. ನಿಮಗೇನಾದರೂ ಹಾಗೆ ಕಾಣಿಸುತ್ತಾನೆಯೇ? ನನಗನ್ನಿಸುವುದು ಅವನ ಗಲ್ಲದ ಕೆಳಗಡೆ ಇಟ್ಟುಕೊಳ್ಳಲು ಕರವಸ್ತ್ರದ ಅಗತ್ಯವೇನೂ ಇಲ್ಲ ಅಂತ, ನಿನಗೆ ಆ ರೀತಿ ಇಟ್ಟುಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆಯೇ ಪ್ರಿನ್ಸ್?”

“ಹಿಂದೆ ನಾನು ಏಳು ವರ್ಷದ ಹುಡುಗ ಆಗಿದ್ದಾಗಷ್ಟೆ, ನಾನು ಹಾಗೆ ಧರಿಸಿಕೊಳ್ಳುತ್ತಿದ್ದದ್ದು ನೆನಪಿದೆ; ಆದರೆ ಈಗ ತಿನ್ನುವಾಗ ಸಾಮಾನ್ಯವಾಗಿ ನನ್ನ ಮಂಡಿಗಳ ಮೇಲೆ ಕರವಸ್ತ್ರವನ್ನ ಇಟ್ಟುಕೊಳ್ಳುತ್ತೇನೆ.”

“ಖಂಡಿತ, ಖಂಡಿತ! ಮತ್ತು ನಿನ್ನ ಮೂರ್ಛೆ ರೋಗದ ಬಗ್ಗೆ?”

“ಮೂರ್ಛೆ ರೋಗಾನ?” ಪ್ರಿನ್ಸ್ ಸ್ವಲ್ಪ ಆಶ್ಚರ್ಯಗೊಂಡವನಂತೆ ಕೇಳಿದ, “ಈ ನಡುವೆ ನನಗೆ ಅದು ಯಾವಾಗಲೊ ಒಂದೊಂದು ಸಲ ವಿರಳವಾಗಿ ಮಾತ್ರ ಬರುತ್ತದೆ, ಇಲ್ಲಿ ಹೇಗೆ ಎನ್ನುವುದು ಇನ್ನೂ ನನಗೆ ತಿಳಿದಿಲ್ಲ, ಆದರೂ ಇಲ್ಲಿನ ಹವಾಗುಣ ನನಗೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ.”

“ಅವನು ಬಹಳ ಚೆನ್ನಾಗಿಯೇ ಮಾತನಾಡುತ್ತಾನೆ, ಅಲ್ಲವಾ?” ಎಪಾಂಚಿನ್‌ನ ಹೆಂಡತಿ ಹೇಳಿದಳು. ಅವಳಿನ್ನೂ ಅವನ ಮಾತಿನ ಪ್ರತಿ ಪದಕ್ಕೂ ತಲೆಯಾಡಿಸುವುದನ್ನ ಮುಂದುವರಿಸುತ್ತಲೇ ಇದ್ದಳು. “ನಾನೇನೂ ಅದನ್ನು ನಿರೀಕ್ಷಿಸಲಿಲ್ಲ, ನನ್ನ ಪ್ರಕಾರ ಅದೆಲ್ಲಾ ಆ ಜನರಲ್ ಎಂದಿನಂತೆ ಉತ್ಪ್ರೇಕ್ಷೆಯಿಂದ ಹೇಳಿದ್ದು ಅನ್ನಿಸುತ್ತದೆ. ಮನಃತೃಪ್ತಿಯಿಂದ ತಿನ್ನು. ನನಗೆ ಹೇಳು, ನೀನು ಹುಟ್ಟಿದ್ದು ಎಲ್ಲಿ, ಮತ್ತು ಬೆಳೆದಿದ್ದು ಎಲ್ಲಿ ಎಂದು. ನಾನೀಗ ನಿನ್ನ ಬಗ್ಗೆ ಎಲ್ಲವನ್ನೂ ತಿಳಿಯಲು ಇಷ್ಟ ಪಡುತ್ತೇನೆ. ನಿನ್ನ ಬಗ್ಗೆ ಈಗ ಇನ್ನೂ ಹೆಚ್ಚಿನ ಆಸಕ್ತಿ ನನಗೆ ಉಂಟಾಗಿದೆ!”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-1)

ಪ್ರಿನ್ಸ್ ಮತ್ತೊಂದು ಬಾರಿ ಧನ್ಯವಾದಗಳನ್ನ ವ್ಯಕ್ತಪಡಿಸಿದ, ಮತ್ತು ಮನಃಪೂರ್ತಿಯಿಂದ ತಿನ್ನುತ್ತಾ, ತನ್ನ ಸ್ವಿಟ್ಜರ್ಲೆಂಡಿನಲ್ಲಿನ ಜೀವನದ ನಿರೂಪಣೆಯನ್ನು ಮುಂದುವುರಿಸುತ್ತಾ ಹೋದ; ಅದೆಲ್ಲವನ್ನೂ ನಾವು ಮುಂಚೆಯೇ ಕೇಳಿದ್ದೇವೆ. ಎಪಾಂಚಿನ್‌ನ ಹೆಂಡತಿ ತನ್ನ ಅತಿಥಿಯ ಬಗ್ಗೆ ಹೆಚ್ಚು ಹೆಚ್ಚು ಸಂತಸಗೊಳ್ಳತೊಡಗಿದಳು; ಹುಡುಗಿಯರೂ ಕೂಡ ಸಾಕಷ್ಟು ಗಮನ ಹರಿಸಿ ಕೇಳಿಸಿಕೊಳ್ಳುತ್ತಿದ್ದರು. ಅವಳ ಜೊತೆಯಲ್ಲಿನ ಸಂಬಂಧದ ಬಗ್ಗೆ ಮಾತನಾಡುವಾಗ, ಬಹಿರಂಗವಾದದ್ದು, ಪ್ರಿನ್ಸ್ ಅವಳ ಇಡೀ ವಂಶಾವಳಿಯ ವಿವರಣೆಗಳನ್ನು ಬಾಯಿಪಾಠ ಮಾಡಿದವನಂತೆ ಹೇಳಿದ್ದು. ಮತ್ತು ಈಗ ತಿಳಿದಿದ್ದು ಎಪಾಂಚಿನ್‌ನ ಹೆಂಡತಿಗೂ ಮತ್ತು ಪ್ರಿನ್ಸ್‌ಗೂ ಯಾವುದೇ ರೀತಿಯ ಸಂಬಂಧದ ಕೊಂಡಿ ಇಲ್ಲದೇ ಇರುವುದು, ಆದರೆ ಅವನ ಜೊತೆಯಲ್ಲಿನ ಮಾತುಕತೆ, ಮತ್ತು ಅವಳ ವಂಶವೃಕ್ಷದ ಬಗ್ಗೆಗಿನ ವಿಷಯಗಳ ಬಗ್ಗೆ ಚರ್ಚಿಸುವ ಅವಕಾಶ ಅವಳನ್ನ ಅತೀವವಾಗಿ ಸಂತಸಗೊಳಿಸಿತು, ಅವಳು ಮನೋಲ್ಲಾಸದಿಂದ ಟೇಬಲ್ಲಿನಿಂದ ಮೇಲೆದ್ದಳು.

“ನಾವೆಲ್ಲರೂ ಈಗ ನನ್ನ ಮಲಗುವ ಖಾಸಗಿ ಕೋಣೆಗೆ ಹೋಗೋಣ” ಅವಳೆಂದಳು. “ಮತ್ತು ಸ್ವಲ್ಪ ಕಾಫಿಯನ್ನ ಅಲ್ಲಿಯೇ ಕುಡಿಯೋಣ”, ಎಂದು ಕೂಡ ಸೇರಿಸಿದಳು. “ಆ ರೂಮಿನಲ್ಲಿಯೇ ನಾವೆಲ್ಲರೂ ಸೇರಿ ಮನಸ್ಸಿಗೆ ಇಷ್ಟ ಬಂದಹಾಗೆ ಇರುವುದು” ಎಂದು ವಿವರಿಸಿದಳು. “ಅಲೆಕ್ಸಾಂಡ್ರ, ನನ್ನ ಹಿರಿಯ ಮಗಳು ಪಿಯಾನೊ ನುಡಿಸುತ್ತಾಳೆ, ಅಥವಾ ಓದುತ್ತಾ, ಅಥವಾ ಕಸೂತಿ ಕೆಲಸ ಮಾಡುತ್ತಾ ಕುಳಿತಿರುತ್ತಾಳೆ. ಅಡಲೈಡ ಭೂದೃಶ್ಯಗಳ ಕಲಾತ್ಮಕ ಚಿತ್ರಗಳನ್ನ ಬಿಡಿಸುತ್ತಾ ಇರುತ್ತಾಳೆ. (ಆದರೆ ಇಲ್ಲಿಯವರೆಗೂ ಯಾವುದನ್ನೂ ಸಂಪೂರ್ಣಗೊಳಿಸಿಲ್ಲ); ಮತ್ತು ಅಗ್ಲಾಯ ಏನನ್ನೂ ಮಾಡದೇ ಸುಮ್ಮನೆ ಕುಳಿತಿರುತ್ತಾಳೆ. ನಾನೂ ಕೂಡ ಅತಿ ಹೆಚ್ಚು ಕೆಲಸ ಮಾಡುವುದಿಲ್ಲ. ನಾವೀಗ ಇಲ್ಲಿದ್ದೇವೆ. ಅಲ್ಲಿರುವ ನಮ್ಮನ್ನೆಲ್ಲಾ ಬೆಚ್ಚಗಿಡುವ ಆ ಬೆಂಕಿಯ ಹತ್ತಿರ ಕುಳಿತುಕೊ ಪ್ರಿನ್ಸ್ ಮತ್ತು ನಮ್ಮೊಂದಿಗೆ ಮಾತನಾಡು. ಯಾವುದಾದರೂ ವಿಷಯದ ಬಗ್ಗೆ ಮಾತನಾಡು. ನಾನು ಮೊದಲು ನಿನ್ನ ಬಗ್ಗೆ ಖಚಿತಮಾಡಿಕೊಂಡು ನನ್ನ ಹಳೆಯ ಸ್ನೇಹಿತೆಯರಿಗೆ ತಿಳಿಸಬೇಕು, ಅದರಲ್ಲೂ ಪ್ರಿನ್ಸೆಸ್ ಬೀಲೊಕೊನ್ಸ್ಕಿಗೆ ನಿನ್ನ ಬಗ್ಗೆ ಹೇಳಬೇಕು. ನೀನೂ ಎಲ್ಲಾ ಒಳ್ಳೆಯ ಜನಗಳನ್ನ ಪರಿಚಯಿಸಿಕೊಳ್ಳಬೇಕೆಂಬುದು ನನ್ನ ಇಚ್ಚೆ ಮತ್ತು ಅವರಲ್ಲಿ ನಿನ್ನ ಬಗ್ಗೆ ಆಸಕ್ತಿಯು ಹುಟ್ಟುವಂತೆ ಮಾಡಬೇಕು.”

“ಅಮ್ಮ ನೀನು ಈಗ ಕೊಡುತ್ತಿರುವುದು ಒಂದು ರೀತಿಯ ವಿಚಿತ್ರವಾದ ಆದೇಶ!” ಅಡಲೈಡ ಹೇಳಿದಳು, ಅವಳು ಪೇಂಟ್ ಮಾಡುವ ಸ್ಟಾಂಡ್ ಬಳಿ ಬಣ್ಣ ಬ್ರಶ್‌ಗಳ ಜೊತೆಯಲ್ಲಿ ಗಡಿಬಿಡಿ ಮಾಡುತ್ತಿದ್ದಳು. ಅಗ್ಲಾಯ ಮತ್ತು ಅಲೆಕ್ಸಾಂಡ್ರ ಕೈಗಳನ್ನ ಕಟ್ಟಿಕೊಂಡು ಸೋಫಾ ಒಂದರ ಮೇಲೆ ಆಸೀನರಾಗಿದ್ದರು, ಸ್ಪಷ್ಟವಾಗಿ ಕೇಳುಗರ ಪಾತ್ರ ವಹಿಸುತ್ತಿರುವ ರೀತಿ. ಪ್ರಿನ್ಸ್‌ಗೆ ಅನಿಸಿದ್ದು ಎಲ್ಲರ ಗಮನವೂ ಅವನ ಮೇಲೆಯೇ ಕೇಂದ್ರೀಕೃತವಾಗಿದೆ ಎಂದು.

“ನನಗೆ ಯಾರಾದರೂ ಈ ರೀತಿಯ ಕಥೆ ಹೇಳೆಂದು ಹೇರಿಕೆಯ ಆದೇಶ ನೀಡಿದ್ದಿದ್ದರೆ ನಾನು ತಕ್ಷಣ ತಿರಸ್ಕರಿಸಿಬಿಡುತ್ತಿದ್ದೆ!” ಅಗ್ಲಾಯ ಅಭಿಪ್ರಾಯ ಪಟ್ಟಳು.

“ಯಾಕೆ, ಅದರಲ್ಲೇನು ವಿಚಿತ್ರವಾದದ್ದಿದೆ? ಅವನಿಗೊಂದು ನಾಲಿಗೆ ಇದೆ, ಅವನ್ಯಾಕೆ ನಮಗೆ ಏನಾದರೂ ಹೇಳಬಾರದು? ನಾನೀಗ ತೀರ್ಮಾನಿಸಬೇಕಾದದ್ದು ಅವನು ಒಳ್ಳೆಯ ಕಥೆಗಾರನೊ ಅಲ್ಲವೊ ಎಂದು; ನಿನ್ನ ಮನಸ್ಸಿಗೆ ಯಾವುದು ಇಷ್ಟವಾಯಿತೊ ಅದನ್ನ ಹೇಳು ಪ್ರಿನ್ಸ್, ಏನೇ ಆದರೂ ಪರವಾಗಿಲ್ಲ, ಅಂದರೆ ನೀನು ಹೇಗೆ ಸ್ವಿಟ್ಜರ್ಲ್ಯಾಂಡನ್ನು ಇಷ್ಟ ಪಟ್ಟೆ, ನಿನ್ನ ಮೊದಲ ಅನಿಸಿಕೆ ಏನು, ನೀನು ವಿಶೇಷವಾಗಿ ಕಂಡಿದ್ದು; ನೋಡಿ ಬೇಕಾದರೆ, ಅವನು ನೇರವಾಗಿ ಶುರುಮಾಡಿ ಅದರ ಬಗ್ಗೆ ನಮಗೆಲ್ಲಾ ಮನಮುಟ್ಟುವಂತೆ ಸುಂದರವಾಗಿ ಹೇಳುತ್ತಾನೆ.”

“ನನ್ನ ಮೊದಲ ಅನಿಸಿಕೆ… ಗಾಢವಾದ ಪ್ರಭಾವ ಬೀರಿದ ಅನಿಸಿಕೆ…” ಪ್ರಿನ್ಸ್ ಪ್ರಾರಂಭಿಸಿದ.

“ನೋಡಿ ಹುಡುಗಿಯರೇ”, ತಾಳ್ಮೆ ಕಳೆದುಕೊಂಡ ಹೆಂಗಸು ಹೇಳಿದಳು. “ಅವನು ಶುರುಮಾಡಿದ ನೋಡಿ.”

“ಸರಿ ಹಾಗಾದರೆ, ಮೊದಲು ಅವನು ಮಾತನ್ನು ಮುಂದುವರಿಸಲು ಬಿಡು ಅಮ್ಮ”, ಅಲೆಕ್ಸಾಂಡ್ರ ಹೇಳಿದಳು. “ಈ ಪ್ರಿನ್ಸ್ ಒಬ್ಬ ದೊಡ್ಡ ಆಶಾಢಭೂತಿ, ಆದರೆ ಮೂರ್ಖನಂತೂ ಅಲ್ಲ, ಅವಳು ಅಗ್ಲಾಯಳಿಗೆ ಪಿಸುಮಾತಿನಲ್ಲಿ ಹೇಳಿದಳು.

“ಓ ಅದನ್ನ ಮೊದಲ ನೋಟದಲ್ಲೇ ನಾನು ಕಂಡೆ”, ಅಗ್ಲಾಯ ಉತ್ತರಿಸಿದಳು. “ಈ ರೀತಿ ಆಡುವುದರಿಂದ ಅವನು ಏನನ್ನು ಪಡೆಯಲು ಬಂದಿದ್ದಾನೆ? ಈ ರೀತಿ ಅವನು ಪಾತ್ರವಹಿಸುವುದು ಉಚಿತವಲ್ಲ.”

“ನನ್ನ ಮೊದಲ ಅನಿಸಿಕೆ ಬಹಳ ಗಾಢವಾದದ್ದು”, ಪ್ರಿನ್ಸ್ ಪುನರುಚ್ಛರಿಸಿದ. “ನನ್ನನ್ನು ರಷ್ಯದಿಂದ ಕರೆದುಕೊಂಡು ಹೋಗುವಾಗ, ನನ್ನ ನೆನಪಿನ ಪ್ರಕಾರ ನಾನು ಅನೇಕ ಜರ್ಮನಿಯ ಪಟ್ಟಣಗಳ ಮೂಲಕ ಹಾದು ಹೋಗುತ್ತಿದ್ದೆ; ಆಗ ಕಿಟಕಿಯಿಂದ ಆಚೆಗೆ ನೋಡುತ್ತಿದ್ದೆ, ಆದರೆ ಅದರ ಬಗ್ಗೆ ಯಾವುದೇ ಪ್ರಶ್ನೆಗಳನ್ನ ಕೇಳುವ ಗೋಜಿಗೆ ಹೋಗಲಿಲ್ಲ. ನಾನು ಅನುಭವಿಸಿದ ನಿರಂತರವಾದ ಮೂರ್ಛೆರೋಗದ ದಾಳಿಯ ನಂತರದ ಕಥೆ ಇದು. ಈ ರೀತಿಯ ಸರಣಿ ದಾಳಿಗಳ ನಂತರ ನಾನೊಂದು ರೀತಿಯ ನಿಸ್ತೇಜ ಜಡತ್ವಕ್ಕೆ ಜಾರಿಬಿಡುತ್ತಿದ್ದೆ, ಮತ್ತು ನನ್ನ ನೆನಪಿನಶಕ್ತಿಯನ್ನ ಸಂಪೂರ್ಣವಾಗಿ ಕಳೆದುಕೊಂಡುಬಿಡುತ್ತಿದ್ದೆ; ಅಂತಹ ಸಂದರ್ಭಗಳಲ್ಲಿ ನಾನು ಒಟ್ಟಾರೆಯಾಗಿ ನನ್ನ ವಿವೇಚನಾ ಶಕ್ತಿಯನ್ನು ಕಳೆದುಕೊಳ್ಳದೇಇದ್ದರೂ, ನನ್ನಲ್ಲಿ ತರ್ಕಬದ್ಧವಾದ ಆಲೋಚನಾ ಶಕ್ತಿ ಇರುತ್ತಿರಲಿಲ್ಲ. ಈ ಸ್ಥಿತಿಯು ಮೂರು ನಾಲ್ಕು ದಿನಗಳವರೆಗೂ ಮುಂದುವರಿಯುತ್ತಿತ್ತು, ನಂತರ ನಾನು ಪುನಃ ಚೇತರಿಸಿಕೊಂಡುಬಿಡುತ್ತಿದ್ದೆ. ನನ್ನ ನೆನಪಿನ ಪ್ರಕಾರ ನನ್ನ ವಿಷಣ್ಣತೆ ಅಸಹನೀಯವಾಗಿಬಿಡುತ್ತಿತ್ತು; ನನಗೆ ಅತ್ತುಬಿಡಬೇಕು ಅನಿಸುತ್ತಿತ್ತು; ನಾನು ಅಹಿತಕರವಾಗಿ ವಿಸ್ಮಯಗೊಳ್ಳುತ್ತಲೇ ಕುಳಿತಿರುತ್ತಿದ್ದೆ; ಎಲ್ಲವೂ ವಿಚಿತ್ರ ಅನ್ನುವ ಪ್ರಜ್ಞೆ ನನ್ನನ್ನು ಭಯಂಕರವಾಗಿ ಆವರಿಸಿಕೊಂಡಿತ್ತು; ನನಗೆ ಅರ್ಥವಾಗುತ್ತಿದ್ದದ್ದು ಎಲ್ಲವೂ ಪರಕೀಯ ಮತ್ತು ವಿಚಿತ್ರ ಎಂದು. ಈಗ ನನ್ನ ನೆನಪಿನ ಪ್ರಕಾರ, ನಾನು ಈ ಸ್ಥಿತಿಯಿಂದ ಮೊದಲ ಬಾರಿಗೆ ಹೊರಬಂದಿದ್ದು ಬೇಸಲ್‌ನಲ್ಲಿ; ಒಂದು ಸಂಜೆ ಕತ್ತೆಯೊಂದು ಊರಿನ ಮಾರುಕಟ್ಟೆಯ ಪ್ರದೇಶದಲ್ಲಿ ಕಿರುಚಿಕೊಳ್ಳುವುದನ್ನ ಕೇಳಿಸಿಕೊಂಡಾಗ, ನಾನು ಆ ಕತ್ತೆಯನ್ನ ನೋಡಿ ಅತೀವವಾಗಿ ಸಂತಸಗೊಂಡೆ, ಮತ್ತು ಆ ಕ್ಷಣದಿಂದ ನಾನು ಸ್ಪಷ್ಟತೆಯಿಂದ ಆಲೋಚಿಸತೊಡಗಿದೆ.”

“ಕತ್ತೆನಾ? ಎಂತಹ ವಿಚಿತ್ರ! ಆದರೂ ಇದು ವಿಚಿತ್ರವಲ್ಲ. ನಮ್ಮಲ್ಲಿನ ಯಾರೇ ಆದರೂ ಕತ್ತೆಯನ್ನು ಪ್ರೀತಿಸಿಬಿಡಬಹುದು! ಇದು ಪುರಾಣಗಳಲ್ಲಿ ನಡೆದಿರುವ ಸಾಕ್ಷಿಗಳಿವೆ”, ಮೇಡಮ್ ಎಪಾಂಚಿನ್ ಹೇಳಿದಳು. ಜೋರಾಗಿ ನಕ್ಕ ಕಾರಣಕ್ಕಾಗಿ ತನ್ನ ಮಕ್ಕಳ ಕಡೆಗೆ ಕೋಪದಿಂದ ನೋಡುತ್ತಾ, “ಮುಂದುವರಿಸು ಪ್ರಿನ್ಸ್” ಎಂದಳು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ ಶತಮೂರ್ಖ (ಅಧ್ಯಾಯ-4; ಭಾಗ-2)

“ಆ ಒಂದು ಸಂಜೆಯಿಂದ ನಾನು ವಿಶೇಷವಾಗಿ ಕತ್ತೆಗಳನ್ನು ಇಷ್ಟಪಡಲು ಪ್ರಾರಂಭಿಸಿದೆ. ಅವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಶುರುಮಾಡಿದೆ, ಕಾರಣ ನಾನೆಂದು ಕತ್ತೆಯೊಂದನ್ನು ನೋಡಿಯೇ ಇರಲಿಲ್ಲ; ತಕ್ಷಣ ನಾನು ತೀರ್ಮಾನಕ್ಕೆ ಬಂದಿದ್ದು ಪ್ರಾಣಿಗಳಲ್ಲೇ ಇದು ಅತ್ಯಂತ ಉಪಯೋಗಕರವಾದ ಪ್ರಾಣಿ ಎಂದು. ಬಲಾಢ್ಯ, ಸದಾ ಸಿದ್ಧವಾಗಿರುವ, ತಾಳ್ಮೆಯಿಂದಿರುವ ಮತ್ತು ದುಬಾರಿಯಲ್ಲದ ಪ್ರಾಣಿ; ಮತ್ತು ಈ ಕತ್ತೆಗೆ ನಾನು ಧನ್ಯವಾದಗಳನ್ನ ಅರ್ಪಿಸುತ್ತೇನೆ, ನಾನು ಪ್ರಯಾಣಿಸುತ್ತಿದ್ದ ಇಡೀ ದೇಶವನ್ನು ಇಷ್ಟ ಪಡಲು ಪ್ರಾರಂಭಿಸಿದೆ; ಮತ್ತು ನನ್ನ ವಿಷಣ್ಣತೆ ಮಾಯವಾಗಿ ಹೋಯಿತು.”

“ಇವೆಲ್ಲವೂ ಅತ್ಯಂತ ವಿಚಿತ್ರವಾದರೂ ಆಸಕ್ತಿದಾಯಕವಾದದ್ದು”, ಎಪಾಂಚಿನ್‌ನ ಹೆಂಡತಿ ಹೇಳಿದಳು. “ಈಗ ಕತ್ತೆಯನ್ನ ಅಲ್ಲಿಯೇ ಬಿಟ್ಟು ಬೇರೇ ವಿಷಯಕ್ಕೆ ತೆರಳು. ಯಾವುದರ ಬಗ್ಗೆ ನೀವು ನಗುತ್ತಿದ್ದೀರ ಅಗ್ಲಾಯ ಮತ್ತು ಅಡೆಲೈಡ? ಪ್ರಿನ್ಸ್ ತನ್ನ ಅನುಭವಗಳ ಬಗ್ಗೆ ಜಾಣತನದಿಂದ ವಿವರಿಸಿದ; ಕತ್ತೆಯನ್ನ ಅವನೇ ಖುದ್ದಾಗಿ ನೋಡಿದ, ಮತ್ತು ನೀವು ಎಂದಾದರೂ ನೋಡಿದ್ದೀರ, ನೀವೆಂದೂ ವಿದೇಶಕ್ಕೆ ಹೋಗಿಯೇ ಇಲ್ಲ.”

“ಆದರೂ ನಾನೊಂದು ಕತ್ತೆಯನ್ನ ನೋಡಿದ್ದೇನೆ ಅಮ್ಮ!” ಅಗ್ಲಾಯ ಹೇಳಿದಳು.

“ನಾನೂ ಒಂದನ್ನು ಕೇಳಿಸಿಕೊಂಡಿದ್ದಿನಿ”, ಅಡೆಲೈಡ ಹೇಳಿದಳು. ಮೂರೂ ಜನ ಒಟ್ಟಿಗೆ ನಗಲು ಶುರುಮಾಡಿದರು, ಮತ್ತು ಪ್ರಿನ್ಸ್ ಕೂಡ ಅವರ ಜೊತೆ ಸೇರಿಕೊಂಡು ನಗಲು ಶುರುಮಾಡಿದ.

“ಸರಿ, ಇದು ನಿಜವಾಗಲೂ ನಿಮ್ಮ ಕೆಟ್ಟದಾದ ನಡವಳಿಕೆ”, ಅಮ್ಮ ಹೇಳಿದಳು. “ನೀವು ಅವರನ್ನು ಕ್ಷಮಿಸು ಪ್ರಿನ್ಸ್; ಅವರು ಒಳ್ಳೆಯ ಹುಡುಗಿಯರು. ನನಗೆ ಅವರುಗಳೆಂದರೆ ಬಹಳ ಇಷ್ಟ, ಅವರನ್ನ ಆಗಾಗ್ಗೆ ಬೈಯ್ಯುತ್ತಿದ್ದರೂ ಕೂಡ; ಅವರೆಲ್ಲಾ ತಿಳಿಗೇಡಿಗಳು, ಅವರೆಲ್ಲಾ ಏಳು ತಿಂಗಳಿಗೆ ಹುಟ್ಟಿದವರು ಆಡುವಂತೆ ಕ್ಷುಲ್ಲಕವಾಗಿ ಮತ್ತು ಹುಚ್ಚರಂತೆ ಆಡುತ್ತಾರೆ.”

“ಓ, ಅವರ್‍ಯಾಕೆ ನಗಬಾರದು? ಪ್ರಿನ್ಸ್ ಹೇಳಿದ. “ನಾನೇನಾದರೂ ಅವರ ಜಾಗದಲ್ಲಿದ್ದಿದ್ದರೆ ಈ ನಗುವ ಅವಕಾಶವನ್ನೆಂದೂ ತಪ್ಪಿಸಿಕೊಂಡು ಹೋಗಲು ಬಿಡುತ್ತಿರಲಿಲ್ಲ. ಏನೇ ಆದರೂ ನಾನು ಕತ್ತೆಯ ಜೊತೆಯಲ್ಲಿ ಅದರ ಪರವಾಗಿ ನಿಲ್ಲುತ್ತೇನೆ, ಕತ್ತೆ ಒಂದು ತಾಳ್ಮೆಯ, ಒಳ್ಳೆಯ ಸ್ವಭಾವದ ಜೀವಿ.”

“ನೀನೂ ಕೂಡ ತಾಳ್ಮೆಯಿಂದಿರುವ ಮನುಷ್ಯನೇ ಪ್ರಿನ್ಸ್? ನಾನು ಕುತೂಹಲದಿಂದ ಮಾತ್ರ ಕೇಳುತ್ತಿದ್ದೇನೆ ಅಷ್ಟೆ”, ಮೇಡಮ್ ಎಪಾಂಚಿನ್ ಹೇಳಿದಳು.

ಎಲ್ಲರೂ ಪುನಃ ಜೋರಾಗಿ ನಕ್ಕುಬಿಟ್ಟರು.

ಅನುವಾದ: ಕೆ ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...