Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ ಶತಮೂರ್ಖ (ಅಧ್ಯಾಯ-4; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ ಶತಮೂರ್ಖ (ಅಧ್ಯಾಯ-4; ಭಾಗ-2)

- Advertisement -
- Advertisement -

ಅಲೆಕ್ಸಾಂಡ್ರ ತನ್ನದೇ ಆದ ಸ್ವಂತ ಅಭಿಪ್ರಾಯಗಳನ್ನು ಹೊಂದಿದ್ದರೂ ಒಳ್ಳೆಯ ಸ್ವಭಾವದ ಹುಡುಗಿ. ಅವಳು ಬುದ್ಧಿವಂತೆ ಮತ್ತು ದಯಾಪರಳು; ಅವಳೇನಾದರೂ ಟೋಟ್ಸ್ಕಿಯನ್ನೇ ಮದುವೆಯಾಗುತ್ತಾಳೆ ಅಂತಾದರೆ, ಅವನಿಗೆ ಒಳ್ಳೆಯ ಹೆಂಡತಿಯಾಗುತ್ತಾಳೆ ಅನ್ನುವುದಂತೂ ನಿಜ. ಅವಳು ಎಂದೂ ದೊಡ್ಡ ಸಂಬಂಧಗಳ ಬಗ್ಗೆ ತಲೆಕೆಡಿಸಿಕೊಂಡವಳಲ್ಲ; ಅವಳ ವ್ಯಕ್ತಿತ್ವದಲ್ಲಿದ್ದ ಶ್ರೇಷ್ಟವಾದ ಗುಣಲಕ್ಷಣಗಳು ರೂಪುಗೊಂಡಿದ್ದು ಯಾವುದೇ ಗಂಡಸಿನ ಜೀವನವನ್ನ ಸುಮಧುರ, ಸುಖಮಯವನ್ನಾಗಿ ಮಾಡುವುದಕ್ಕೋಸ್ಕರವೇ; ಅವಳು ಪರಿಪೂರ್ಣ ಸುಂದರಿಯಲ್ಲದಿದ್ದರೂ ನಿರ್ಣಾಯಕವಾಗಿ ರೂಪವತಿಯಾಗಿದ್ದಳು. ಇದಕ್ಕಿಂತಲೂ ಹೆಚ್ಚಿನದನ್ನೇನು ಟೋಟ್ಸ್ಕಿ ಬಯಸಲು ಸಾಧ್ಯ?

ಆದ್ದರಿಂದ ಈ ವಿಷಯ ನಿಧಾನವಾಗಿ ತೆವಳುತ್ತಾ ಹೋಯಿತು. ಯಾವುದೇ ರೀತಿಯ ಅವಸರದ ಮತ್ತು ಬದಲಿಸಲಾರಾದಂತಹ ಹೆಜ್ಜೆಯನ್ನ ಇಡಬಾರದೆಂಬ ಒಡಂಬಡಿಕೆಗೆ ಜನರಲ್ ಮತ್ತು ಟೋಟ್ಸ್ಕಿ ಬಂದಿದ್ದರು. ಅಲೆಕ್ಸಾಂಡ್ರಳ ಪೋಷಕರು ಈ ವಿಷಯದ ಬಗ್ಗೆ ತಮ್ಮ ಹೆಣ್ಣುಮಕ್ಕಳ ಜೊತೆ ಮನಬಿಚ್ಚಿ ಮಾತನಾಡುವದನ್ನ ಇನ್ನೂ ಪ್ರಾರಂಭಿಸಿರಲಿಲ್ಲ, ಇದ್ದಕ್ಕಿದ್ದಂತೆ ಈ ಎಲ್ಲಾ ಪ್ರಕ್ರಿಯೆಗಳ ಸಾಮರಸ್ಯವನ್ನ ಕದಡುವಂತಹ ಅಪಸ್ವರದ ಧ್ವನಿಯೊಂದು ಎದ್ದಿತು. ಎಪಾಂಚಿನ್‌ನ ಹೆಂಡತಿಯಲ್ಲಿ ಅಸಮಾಧಾನಗೊಂಡಿದ್ದರ ಚಿಹ್ನೆಗಳು ಕಾಣತೊಡಗಿದವು; ಇದೊಂದು ಗಂಭೀರವಾದ ವಿಷಯವಾಗಿತ್ತು. ಈ ಎಲ್ಲಾ ವ್ಯವಹಾರವನ್ನೂ ಬುಡಮೇಲು ಮಾಡಬಹುದೆನ್ನುವ ಭಯವನ್ನುಂಟು ಮಾಡುವ ಸನ್ನಿವೇಶವೊಂದು ಎದುರಾಗಿತ್ತು.

ಈ ಸನ್ನಿವೇಶ ಹದಿನೆಂಟು ವರ್ಷಗಳ ಹಿಂದೆಯೇ ತಲೆದೋರಿತ್ತು. ರಷ್ಯದ ಮಧ್ಯಪ್ರಾಂತಗಳೊಂದರಲ್ಲಿ, ಟೋಟ್ಸ್ಕಿಯ ಎಸ್ಟೇಟಿನ ಹತ್ತಿರವೇ, ಆ ಕಾಲಕ್ಕೆ, ಒಬ್ಬ ಬಡವ ವಾಸಿಸುತ್ತಿದ್ದ, ಅವನ ಎಸ್ಟೇಟ್ ಅತ್ಯಂತ ಹೀನಾಯವಾದ ಸ್ಥಿತಿಯಲ್ಲಿತ್ತು. ಈ ಮನುಷ್ಯ ಆ ಪ್ರದೇಶದ ಸುತ್ತಮುತ್ತಲೆಲ್ಲಾ ತನ್ನ ದುರಾದೃಷ್ಟಕ್ಕೆ ಹೆಸರುವಾಸಿಯಾಗಿದ್ದ; ಅವನ ಹೆಸರು ಬರಾಶ್ಕಾಫ್, ವಂಶಾವಳಿ ಮತ್ತು ಕೌಟುಂಬಿಕ ಹಿರಿಮೆಯನ್ನು ಪರಿಗಣಿಸಿದರೆ ಆ ಮನುಷ್ಯ ಟೋಟ್ಸ್ಕಿಗಿಂತ ಉನ್ನತ ಸ್ಥಾನದಲ್ಲಿದ್ದ, ಆದರೆ ಅವನ ಎಸ್ಟೇಟನ್ನು ಕೊನೆಯ ಎಕರೆಯವರೆಗೂ ಅಡ ಇಡಲಾಗಿತ್ತು. ಒಂದು ದಿನ ಅವನು ಸಾಲ ಕೊಟ್ಟವನೊಬ್ಬನನ್ನು ಕಾಣಲು ಪಟ್ಟಣಕ್ಕೆ ಹೋದಾಗ, ಸ್ವಲ್ಪ ಸಮಯದ ನಂತರ, ಅವನ ಇಡೀ ಮನೆ ಹತ್ತಿಕೊಂಡು ಉರಿದುಹೋಯಿತು ಅನ್ನುವ ಸುದ್ದಿಯೊಂದಿಗೆ, ಆ ಹಳ್ಳಿಯ ಮುಖ್ಯ ರೈತ ಆ ಮನುಷ್ಯನನ್ನು ಹಿಂಬಾಲಿಸುತ್ತಾ ಓಡಿಬಂದ. ಅವನ ಹೆಂಡತಿ ಬೆಂಕಿಗೆ ಆಹುತಿಯಾಗಿದ್ದಳು. ಆದರೆ ಅವನ ಮಕ್ಕಳು ಮಾತ್ರ ಬಚಾವಾಗಿದ್ದಾರೆ ಅನ್ನುವ ಸುದ್ದಿಯನ್ನ ಮುಟ್ಟಿಸಿದ.

ಬರಾಷ್ಕಾಫ್, ಅನೇಕ ದುರಾದೃಷ್ಟಗಳ ಸರಮಾಲೆಯಿಂದ ಘಾಸಿಗೊಂಡು ಇಲ್ಲಿಯವರೆಗೂ ಬದುಕುತ್ತಿದ್ದರೂ, ಈಗ ಎರಗಿದ ಹೊಡೆತದಿಂದ ತತ್ತರಿಸಿಹೋದ. ಅವನು ಹುಚ್ಚನಂತಾಗಿ ಕೊನೆಗೂ ಊರಿನ ಆಸ್ಪತ್ರೆಯಲ್ಲಿ ಮರಣಹೊಂದಿದ. ಸಾಲ ಕೊಟ್ಟವರಿಗೋಸ್ಕರ ಅವನ ಎಸ್ಟೇಟನ್ನು ಮಾರಲಾಯಿತು; ಅವನ ಮಕ್ಕಳಾದ ಇಬ್ಬರು ಪುಟ್ಟ ಹುಡುಗಿಯರನ್ನು, ಅವರಲ್ಲಿ ಒಬ್ಬಳಿಗೆ ಏಳು, ಮತ್ತೊಬ್ಬಳಿಗೆ ಎಂಟು ವರ್ಷ ವಯಸ್ಸು, ಟೋಟ್ಸ್ಕಿ ದತ್ತು ತೆಗೆದುಕೊಂಡ. ಅವರುಗಳ ನಿರ್ವಹಣೆ ಮತ್ತು ವಿದ್ಯಾಭ್ಯಾಸದ ಜವಾಬ್ದಾರಿಯನ್ನ ತನ್ನ ಕರುಣಾಮಯ ಹೃದಯದ ಭಾವನೆಯಿಂದ ಅವನು ವಹಿಸಿಕೊಂಡ. ಅವನ ಜೊತೆ ಇದ್ದ ಜರ್ಮನ್ ಮೇಲ್ವಿಚಾರಕನ ಮಕ್ಕಳ ಜೊತೆಯಲ್ಲಿಯೇ ಅವರನ್ನ ಬೆಳಸಲಾಯಿತು. ಸ್ವಲ್ಪ ಕಾಲದಲ್ಲೇ ಆ ಎರಡು ಹೆಣ್ಣು ಮಕ್ಕಳಲ್ಲಿ ಒಬ್ಬಳು ಮಾತ್ರ – ನಸ್ಟಾಸಿಯಾ ಫಿಲಿಪೊವ್ನ ಉಳಿದುಕೊಂಡಳು, ಇನ್ನೊಬ್ಬಳು ನಾಯಿಕೆಮ್ಮಿನಿಂದ ಬಳಲಿ ಅಸುನೀಗಿದಳು. ಆ ಸಮಯದಲ್ಲಿ ಟೋಟ್ಸ್ಕಿ ಹೊರದೇಶದಲ್ಲಿ ಇದ್ದುದರಿಂದ ಸ್ವಲ್ಪದಿನದ ನಂತರ ಈ ಮಗುವಿನ ಬಗ್ಗೆ ಸಂಪೂರ್ಣವಾಗಿ ಮರೆತುಬಿಟ್ಟಿದ್ದ; ಆದರೆ ಐದು ವರ್ಷಗಳಾದ ಮೇಲೆ ರಷ್ಯಾಗೆ ವಾಪಸ್ಸಾದ ನಂತರ, ತನ್ನ ಎಸ್ಟೇಟನ್ನ ನೋಡಿ, ಅಲ್ಲಿ ಏನು ನಡೆಯುತ್ತಿದೆಯೊ ತಿಳಿದು ಬರಬೇಕೆಂದು ಅವನಿಗೆ ಇದ್ದಕ್ಕಿದ್ದಂತೆ ಅನ್ನಿಸಿತು. ತನ್ನ ಮೇಲ್ವಿಚಾರಕನ ಮನೆಗೆ ಇದ್ದಕ್ಕಿದ್ದಂತೆ ಬಂದ ಅವನಿಗೆ ಮೇಲ್ವಿಚಾರಕನ ಮಕ್ಕಳ ಜೊತೆಯಲ್ಲಿ ಒಬ್ಬಳು ಹನ್ನೆರಡು ವರ್ಷ ವಯಸ್ಸಿನ ಸುಂದರವಾದ ಹುಡುಗಿಯನ್ನ ಕಾಣುವುದೇನೂ ತಡವಾಗಲಿಲ್ಲ. ಆ ಹುಡುಗಿ ಬಹಳ ಮುದ್ದಾಗಿದ್ದಳು ಮತ್ತು ಬುದ್ಧಿವಂತೆ ಕೂಡ, ಮುಂದೆ ಬಹಳ ರೂಪವತಿಯಾಗಿ ಬೆಳೆಯುತ್ತಾಳೆ ಎನ್ನುವ ಭರವಸೆ ಎಲ್ಲರಿಗೂ ಇತ್ತು; ಅವಳೀಗ ಅನುಮಾನವಿಲ್ಲದೇ ಟೋಟ್ಸ್ಕಿಯ ಸುಪರ್ದಿಯಲ್ಲಿದ್ದಳು.

ಅವನ ಆ ಸಂದರ್ಭದಲ್ಲಿ ಆ ಊರಿನಲ್ಲಿ ಕೆಲವು ದಿನಗಳು ಮಾತ್ರ ಇದ್ದ, ಆದರೆ ಅವನು ನಿರ್ಧರಿಸಿದ ಕೆಲವು ವ್ಯವಸ್ಥೆಗಳನ್ನ ಮಾಡಲು ಅವನಿಗೆ ಸಾಕಷ್ಟು ಕಾಲಾವಕಾಶ ಇತ್ತು. ಮಗುವಿನ ವಿದ್ಯಾಭ್ಯಾಸದಲ್ಲಿ ಅನೇಕ ಬದಲಾವಣೆಗಳು ಉಂಟಾದವು; ಮನೆಯಲ್ಲಿಯೇ ಪಾಠ ಪ್ರವಚನವನ್ನ ಮಾಡುವ ಒಳ್ಳೆಯ ಹೆಂಗಸನ್ನು ಅಂದರೆ ಗೌರ್ನೆಸ್‌ಳನ್ನು ನೇಮಿಸಲಾಯಿತು, ಅವಳೊಬ್ಬಳು ಅನುಭವಸ್ತ ಒಳ್ಳೆಯ ಸಂಸ್ಕೃತಿಯ ಸ್ವಿಸ್ ಹೆಂಗಸು. ಸುಮಾರು ನಾಲ್ಕು ವರ್ಷಗಳ ಕಾಲ ಈ ಹೆಂಗಸು ಪುಟ್ಟ ಹುಡುಗಿ ನಸ್ಟಾಸಿಯ ಜೊತೆ ಆ ಮನೆಯಲ್ಲಿಯೇ ವಾಸವಾಗಿದ್ದಳು. ಆ ಹೆಂಗಸು ಹೊರಟುಹೋದ ನಂತರ ಟೋಟ್ಸ್ಕಿಯ ಆದೇಶದ ಮೇರೆಗೆ ಇನ್ನೊಬ್ಬಳು ಹೆಂಗಸು ನಸ್ಟಾಸಿಯಾಳನ್ನು ಕರೆದುಕೊಂಡು ಹೋಗುವುದಕ್ಕೆ ಬಂದಳು. ಈ ಪ್ರದೇಶದಿಂದ ದೂರವಿದ್ದ ಟೋಟ್ಸ್ಕಿಯ ಇನ್ನೊಂದು ಎಸ್ಟೇಟಿಗೆ ಮಗುವನ್ನು ರವಾನಿಸಲಾಯಿತು.

ಆ ಜಾಗದಲ್ಲಿ ಅವಳಿಗಾಗಿಯೇ ನಿರ್ಮಿಸಲಾಗಿದ್ದ ಸುಂದರವಾದ ಮತ್ತು ಪುಟ್ಟದಾದ ಮನೆಗೆ ಅವಳು ಬಂದಳು. ಇಲ್ಲಿಗೆ ಹಳೆಯ ಮನೆಯಿಂದ ಅವಳನ್ನು ಕರೆದುಕೊಂಡು ಬಂದ ಹೆಂಗಸಿನ ಜೊತೆ ವಾಸಿಸಲು ಪ್ರಾರಂಭಿಸಿದಳು. ಈ ಮನೆಯಲ್ಲಿ ಇಬ್ಬರು ಅನುಭವಸ್ತ ಮನೆಕೆಲಸದವರಿದ್ದರು ಮತ್ತು ಸಂಗೀತದ ಅನೇಕ ಉಪಕರಣಗಳು, ಆಕರ್ಷಕವಾದ “ಯುವ ಹೆಂಗಸರ ಗ್ರಂಥಾಲಯ” ಚಿತ್ರಗಳು, ಚಿತ್ರಕಲೆಯ ಬಣ್ಣಗಳ ಡಬ್ಬಿ, ಒಂದು ಪುಟ್ಟ ನಾಯಿ, ಮತ್ತು ಜೀವನವನ್ನ ಹಿತಕರವನ್ನಾಗಿ ಮಾಡುವ ಎಲ್ಲಾ ಸಲಕರಣೆಗಳೂ ಇದ್ದವು. ಹದಿನೈದು ದಿನದ ನಂತರ ಟೋಟ್ಸ್ಕಿಯೂ ಅಲ್ಲಿಗೆ ಹೋದ, ಅಂದಿನಿಂದ ಆ ಭಾಗದ ಬಗ್ಗೆ ಅವನಿಗೆ ಅತೀವವಾದ ಮೆಚ್ಚುಗೆ ಉಂಟಾಯಿತು; ಹಾಗೆಯೇ ಪ್ರತಿ ಬೇಸಿಗೆಯಲ್ಲಿಯೂ ಅಲ್ಲಿಗೆ ಹೋಗಲು ಪ್ರಾರಂಭಿಸಿದ. ಹೋದಾಗಲೆಲ್ಲ ಎರಡು ಅಥವಾ ಮೂರು ತಿಂಗಳು ಅಲ್ಲಿಯೇ ಇರುತ್ತಿದ್ದ. ಸುಮಾರು ನಾಲ್ಕು ವರ್ಷಗಳು ಆ ಮನೋಹರವಾದ ಪರಿಸರದಲ್ಲಿ ಶಾಂತಿಯುತವಾಗಿ ಕಳೆದು ಹೋದವು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-1)

ಆ ಸಮಯವು ಕೊನೆಗೊಳ್ಳುತ್ತಿದ್ದಂತೆ, ಟೋಟ್ಸ್ಕಿಯು ಕಡೆಯ ಭೇಟಿಯ ನಾಲ್ಕು ತಿಂಗಳ ನಂತರ (ಈ ಬಾರಿ ಅವನು ಇದದ್ದು ಬರೀ ಹದಿನೈದು ದಿನಗಳು), ನಸ್ಟಾಸಿಯ ಪಿಲಿಪೊವ್ನಳಿಗೆ ವರದಿಯೊಂದು ತಲುಪಿತು; ಅಂದರೆ ಟೋಟ್ಸ್ಕಿ ಪೀಟರ್ಸ್‌ಬರ್ಗಿನಲ್ಲಿ ಇನ್ನೇನು ಒಬ್ಬಳು ಐಶ್ವರ್ಯವಂತ, ಪ್ರಖ್ಯಾತ ಸುಂದರ ಹೆಣ್ಣನ್ನು ಮದುವೆಯಾಗುತ್ತಿದ್ದಾನೆ ಎಂದು. ಆ ವರದಿ ಭಾಗಶಃ ಮಾತ್ರ ಸತ್ಯವಾಗಿತ್ತು, ಈ ಮದುವೆಯ ಯೋಜನೆ ಇನ್ನೂ ಭ್ರೂಣಾವಸ್ಥೆಯಲ್ಲಿತ್ತು, ಆದರೆ ಆ ಸುದ್ದಿಯನ್ನು ಕೇಳಿದ ನಂತರ ನಸ್ಟಾಸಿಯ ಫಿಲಿಪೊವ್ನಳಲ್ಲಿ ಮಹತ್ತರವಾದ ಬದಲಾವಣೆ ಉಂಟಾಯಿತು. ಅವಳು ಈ ಸಮಯದಲ್ಲಿ ಅಸಾಧಾರಣವಾದ ದೃಢಸಂಕಲ್ಪ ಮತ್ತು ಬಲವಾದ ಇಚ್ಚಾಶಕ್ತಿಯನ್ನು ಪ್ರದರ್ಶಸಿದಳು; ಅವಳು ತನ್ನ ಆಲೋಚನೆಯಲ್ಲಿ ಕಾಲಹರಣ ಮಾಡುತ್ತಾ ಕುಳಿತುಕೊಳ್ಳದೇ ತಾನಿದ್ದ ಹಳ್ಳಿಯ ಮನೆಯನ್ನ ಬಿಟ್ಟು, ಸೆಂಟ್ ಪೀಟರ್ಸ್‌ಬರ್ಗಿಗೆ ಬಂದಳು; ಒಬ್ಬಳೇ ನೇರವಾಗಿ ಟೋಟ್ಸ್ಕಿಯ ಮನೆಗೆ ಬಂದು ಕುಳಿತಳು.

ಅವಳ ನಡತೆಯ ಬಗ್ಗೆ ಟೋಟ್ಸ್ಕಿ ಆಶ್ಚರ್ಯಚಕಿತನಾಗಿ, ತನ್ನ ಅಸಂತೋಷವನ್ನ ವ್ಯಕ್ತಪಡಿಸಲು ಪ್ರಾರಂಭಿಸಿದ; ಆದರೆ ಸ್ವಲ್ಪ ಸಮಯದಲ್ಲೇ ಅವನಿಗೆ ಅರಿವಾಗಿದ್ದೇನೆಂದರೆ, ಈ ಯುವತಿಯ ವಿಷಯದಲ್ಲಿ ತನ್ನ ಧ್ವನಿಯ ಧಾಟಿಯನ್ನ, ಶೈಲಿಯನ್ನ ಮತ್ತು ಮಿಕ್ಕೆಲ್ಲವುಗಳನ್ನೂ ಬದಲಾಯಿಸಿಕೊಳ್ಳಬೇಕೆನ್ನುವುದು; ಹಳೆಯ ರೀತಿ ರಿವಾಜುಗಳೆಲ್ಲವೂ ಈಗ ಹೊರಟುಹೋಗಿತ್ತು. ಅವನ ಮುಂದೆ ಈಗ ಕುಳಿತುಕೊಂಡಿರುವುದು ಸಂಪೂರ್ಣವಾಗಿ ಬದಲಾದ ಹೆಂಗಸು; ಕಳೆದ ಜುಲೈನಲ್ಲಿ ಹಳ್ಳಿಯಲ್ಲಿ ಬಿಟ್ಟುಬಂದಿದ್ದ ಹುಡುಗಿಗೂ ಇವಳಿಗೂ ಯಾವುದೇ ರೀತಿಯ ಹೋಲಿಕೆ ಎಳ್ಳಷ್ಟೂ ಇರಲಿಲ್ಲ.

ಎಲ್ಲಕ್ಕಿಂತ ಮೊದಲಾಗಿ, ಈ ಬದಲಾದ ಹೆಂಗಸು ಅವಳ ವಯಸ್ಸಿಗೆ ಮೀರಿದಂತಹ ಗ್ರಹಿಕಾ ಸಾಮರ್ಥ್ಯವನ್ನು ಹೊಂದಿದ್ದಳು, ಅದು ಅದು ನಿಜವಾಗಲೂ ಎಷ್ಟಿತ್ತೆಂದರೆ, ಅವಳೆಲ್ಲಿಂದ ತನ್ನ ಜ್ಞಾನವನ್ನ ಈ ಮಟ್ಟಕ್ಕೆ ವೃದ್ಧಿಸಿಕೊಂಡಳು ಎಂದು ಟೋಟ್ಸ್ಕಿಗೆ ಅತ್ಯಾಶ್ಚರ್ಯವಾಗಿತ್ತು. ಅವಳ “ಯುವ ಹೆಂಗಸರ ಗ್ರಂಥಾಲಯ”ದಿಂದಂತೂ ಅಲ್ಲ? ಅವಳ ಜ್ಞಾನ ಕಾನೂನಿನ ವಿಷಯಗಳನ್ನೂ ಒಳಗೊಂಡಿತ್ತು, ಮತ್ತು ಸ್ವಲ್ಪ ಮಟ್ಟಿಗೆ “ಪ್ರಾಪಂಚಿಕ” ವಿಷಯಗಳ ಬಗ್ಗೆಯೂ ಅರಿತಿದ್ದಳು.

ಅವಳ ಸ್ವಭಾವ ಮತ್ತು ನಡವಳಿಕೆ ಈಗ ಸಂಪೂರ್ಣವಾಗಿ ಬದಲಾಗಿತ್ತು. ಸಾಮಾನ್ಯವಾಗಿ ಹುಡುಗಿಯರಲ್ಲಿರುವ ಚಂಚಲತೆ, ತುಂಟಾಟ, ಪ್ರೀತಿಸುವಂತಹ ನಿಷ್ಕಪಟತನ, ಪುಕ್ಕಲುತನ, ಸಿಡುಕುತನ ಮತ್ತು ಕಲ್ಪನಾ ಜಗತ್ತಿನಲ್ಲಿ ವಿಹರಿಸುವ ಸ್ವಭಾವ, ಕಣ್ಣೀರಿಡುವುದು ಮತ್ತು ಹುಡುಗಾಟ ಎಲ್ಲವೂ ಈಗ ಅವಳಿಂದ ಮಾಯವಾಗಿತ್ತು; ಈಗ ಇಲ್ಲಿ ಬಂದು ಕುಳಿತಿರುವುದು ಸಂಪೂರ್ಣವಾಗಿ ಪರಿಚಯವಿಲ್ಲದ ಹೊಸ ಅಸ್ತಿತ್ವ; ಇಲ್ಲಿ ಕುಳಿತು ಅವನ ಬಗ್ಗೆಯೇ ಹಾಸ್ಯ ಮಾಡಿ ನಗುವ ವ್ಯಕ್ತಿ, ದ್ವೇಷ ಮತ್ತು ತಿರಸ್ಕಾರಗಳನ್ನು ಬಿಟ್ಟು “ನನಗೆ ನಿನ್ನ ಬಗ್ಗೆ ಯಾವುದೇ ಒಳ್ಳೆಯ ಭಾವನೆಗಳಿಲ್ಲ ಎಂದು ಅವನಿಗೆ ಮುಖಕ್ಕೆ ಹೊಡೆದ ಹಾಗೆ ಮಾತನಾಡುವವಳು; ಆತನ ಮೊದಲ ಪರಿಚಯದಲ್ಲಿಯೇ ಆದ ಅಚ್ಚರಿ ಮತ್ತು ನಂಬಲಾಗದ ಭಾವನೆಗಳನ್ನು ಅನುಸರಿಸಿ ಬಂದಿದ್ದ ತಿರಸ್ಕಾರ ಅದು.

ಈ ಹೊಸದಾಗಿ ಮಾರ್ಪಾಡಾದ ಹೆಂಗಸು ಅವನಿಗೆ ಇನ್ನೂ ಹೆಚ್ಚು ಅರ್ಥವಾಗುವಂತೆ ಹೇಳಿದ್ದು, ಅವನು ಯಾರನ್ನ ಮದುವೆಯಾದರೂ ಅವಳ ದೃಷ್ಟಿಯಲ್ಲಿ ಎಲ್ಲವೂ ಒಂದೇ, ಆದರೂ ಈಗ ನಡೆಯಬಹುದಾದ ಮದುವೆಯನ್ನ ತಡೆಹಿಡಿಯಲು ತಾನು ನಿರ್ಧರಿಸಿದ್ದೇನೆ ಎಂದು; ಯಾವುದೇ ನಿರ್ದಿಷ್ಟವಾದ ಕಾರಣದಿಂದಲ್ಲ, ಆದರೆ ಅವಳು ಆ ರೀತಿ ಮಾಡಲೇಬೇಕೆಂದು ಆಯ್ಕೆ ಮಾಡಿಕೊಂಡಿರುವ ಕಾರಣದಿಂದ, ಅವನಿಗೆ ತೊಂದರೆ ಉಂಟುಮಾಡಿ ತಾನು ಮನರಂಜನೆಯನ್ನ ಪಡೆಯುವುದಕ್ಕೋಸ್ಕರ; “ಈಗ ಸ್ವಲ್ಪ ನಗುವುದು ಅವಳ ಸರದಿಯಾಗಿದೆ” ಎಂಬ ಉದ್ದೇಶದಿಂದ.

ಅವಳು ಆಡಿದ ಮಾತುಗಳು ಈ ರೀತಿ ಇದ್ದವು. ಈ ರೀತಿಯ ಅವಳ ಅತಿರೇಕದ ನಡವಳಿಕೆಗೆ ನಿಜವಾದ ಕಾರಣವನ್ನ ಅವಳು ಕೊಡದಿರುವುದಕ್ಕೆ ಸಾಧ್ಯತೆಯೇ ಹೆಚ್ಚು; ಆದರೆ ಅವಳು ಈಗ ಹೇಳಿರುವಷ್ಟು ಮಾತ್ರ ಅವಳು ಕೊಟ್ಟಂತಹ ವಿವರಣೆ.

ಏತನ್ಮಧ್ಯೆ, ಟೋಟ್ಸ್ಕಿ ತನ್ನ ಚದುರಿಹೋದ ಕಲ್ಪನೆಗಳೂ ಅನುಮತಿಸಿದಷ್ಟು ಮಾತ್ರ ಈ ವಿಷಯದ ಬಗ್ಗೆ ಆಲೋಚಿಸಿದ. ಅವನ ಈ ಪರ್ಯಾಲೋಚನೆ ಹದಿನೈದು ದಿನಗಳ ಕಾಲ ನಡೆಯಿತು. ಇದರ ಕೊನೆಗೆ ಅವನು ಒಂದು ನಿರ್ಧಾರಕ್ಕೆ ಬಂದ. ವಾಸ್ತವದಲ್ಲಿ ಈ ಸಮಯಕ್ಕೆ ಟೋಟ್ಸ್ಕಿಗೆ ಐವತ್ತು ವರ್ಷ ವಯಸ್ಸಾಗಿತ್ತು. ಅವನ ಸ್ಥಾನ ಸುಭದ್ರ ಮತ್ತು ಗೌರವಾನ್ವಿತವಾಗಿತ್ತು. ಸಮಾಜದಲ್ಲಿನ ಅವನ ಸ್ಥಾನ ಬಹಳ ಹಿಂದಿನಿಂದಲೇ ಸುರಕ್ಷಿತವಾದ ತಳಹದಿಯ ಮೇಲೆ ನಿಂತಿತ್ತು; ಅವನು ತನ್ನನ್ನು ತಾನು ಪ್ರೀತಿಸುತ್ತಿದ್ದುದಲ್ಲದೆ, ಆರಾಮವಾದ ಜೀವನ ನಡೆಸುವುದನ್ನ ಮತ್ತು ತನ್ನ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದನ್ನ ಪ್ರಪಂಚದಲ್ಲಿನ ಎಲ್ಲದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ; ಎಲ್ಲಾ ಗೌರವಾನ್ವಿತ ಸಂಭಾವಿತ ವ್ಯಕ್ತಿಗಳು ಹೇಗಿರುತ್ತಾರೆಯೋ ಹಾಗೆಯೇ!

ಅದೇ ಸಮಯದಲ್ಲಿ ಸಾಮಾನ್ಯವಾಗಿ ವಸ್ತುಸ್ಥಿತಿಯ ಮೇಲಿನ ಅವನ ಗ್ರಹಿಕೆ ಸ್ವಲ್ಪ ಸಮಯದ ನಂತರ ಅವನಿಗೆ ತೋರಿಸಿದ್ದೇನೆಂದರೆ, ಅವನೀಗ ಸಾಂಪ್ರದಾಯಿಕ ನಡವಳಿಕೆಯ ಸಾಧಾರಣ ನಿಯಮಗಳಿಂದಾಚೆಗೆ ಇರುವ ಹೆಂಗಸೊಂದರ ಜೊತೆ ವ್ಯವಹರಿಸಬೇಕಾಗಿದೆ ಎನ್ನುವುದು, ಅವಳು ತನ್ನ ಕಿಡಿಗೇಡಿತನದಿಂದ ಅವನಿಗೆ ಬೆದರಿಕೆ ಹಾಕುವುದಲ್ಲದೇ ಅದನ್ನ ಅನುಮಾನವಿಲ್ಲದೇ ಕಾರ್ಯಗತಗೊಳಿಸುತ್ತಾಳೆ ಮತ್ತು ಯಾರು ಏನೇ ಹೇಳಿದರೂ ಸುಮ್ಮನಾಗುವುದಿಲ್ಲ ಎನ್ನುವುದು.

ಅಲ್ಲೊಂದು ಅಗೋಚರವಾದ ಶಕ್ತಿಯು ಕಾರ್ಯನಿರತವಾಗಿದೆ ಎಂದು ಅವನು ತೀರ್ಮಾನಕ್ಕೆ ಬಂದ; ಮನಸ್ಸಿನೊಳಗೆ ಎದ್ದ ಯಾವುದೋ ಚಂಡಮಾರುತದಂತೆ, ನುಗ್ಗಿಬರುತ್ತಿರುವ ಪ್ರಣಯಕ್ಕೆ ಸಂಬಂಧಪಟ್ಟ ಯಾವುದೋ ಕೋಪ, ದೇವರಿಗೇ ಗೊತ್ತು ಅದು ಯಾರ ವಿರುದ್ಧ ಮತ್ತು ಏಕೆ ಎನ್ನುವುದು, ಅದೊಂದು ಅತೃಪ್ತಿಯಿಂದ ಉಂಟಾದ ತಿರಸ್ಕಾರ, ಒಂದೇ ಪದದಲ್ಲಿ ಹೇಳಬೇಕೆಂದರೆ ಅದು ಒಟ್ಟಾರೆಯಲ್ಲಿ ಅಸಂಬದ್ಧ ಮತ್ತು ಅಸಾಧ್ಯವಾದದ್ದು; ಜೊತೆಜೊತೆಗೇ ಅದು ಯಾವುದೇ ಸಮಾಜದಲ್ಲಿರುವ ಗೌರವಾನ್ವಿತನು ಎದುರಿಸಲಾಗದಂತಹ ಅತ್ಯಂತ ಅಪಾಯಕಾರಿಯಾಗಿರುವುದೂ ಕೂಡ ನಿಜ.

ಟೋಟ್ಸ್ಕಿಯಂತ ಐಶ್ವರ್ಯವಂತ ಮತ್ತು ಗಣ್ಯನಿಗೆ, ಇದು ಖಂಡಿತವಾಗಿಯೂ, ಎಲ್ಲಾ ರೀತಿಯಲ್ಲಿ ಕಿರಿಕಿರಿ ಉಂಟುಮಾಡುವ ವಿಷಯಗಳನ್ನೂ ಒಂದೇ ಏಟಿಗೆ ತೊಡೆದುಹಾಕಿಬಿಡಬಹುದಾದಂತಹ ಸುಲಭವಾದ ವಿಷಯ; ಅದೇ ಸಮಯದಲ್ಲಿ ನಿಸ್ಸಂಶಯವಾಗಿ, ನಸ್ಟಾಸಿಯ ಫಿಲಿಪೊವ್ನಳಿಗೆ ಅವನಿಗೆ ಯಾವುದೇ ರೀತಿಯಲ್ಲಿಯೂ ಹಾನಿ ಉಂಟುಮಾಡುವುದು ಅಸಾಧ್ಯವಾದ ಸಂಗತಿ; ಕಾನೂನು ರೀತಿಯಲ್ಲಿರಬಹುದು ಅಥವಾ ಹಗರಣವನ್ನುಂಟುಮಾಡಿ ಅವನಿಗೆ ಅಪಖ್ಯಾತಿಯನ್ನ ತರುವುದರಲ್ಲಿರಬಹುದು. ಎರಡನೆಯ ರೀತಿಯ ಅಪಾಯದ ಸಂದರ್ಭದಲ್ಲಿ ಅವಳನ್ನ ಯಾವುದಾದರೂ ಸುರಕ್ಷಿತ ಜಾಗಕ್ಕೆ ರವಾನಿಸಿಬಿಡಬಹುದು. ಏನೇ ಆದರೂ, ಈ ವಾದಗಳು ನಿಜವಾಗುವುದು ಯಾವಾಗೆಂದರೆ, ಇಂತಹ ತುರ್ತು ಸಂದರ್ಭದಲ್ಲಿ ಬೇರೆ ಯಾರಾದರೂ ಅಳವಡಿಸಿಕೊಳ್ಳುವ ತಂತ್ರಗಳನ್ನು ನಸ್ಟಾಸಿಯ ಫಿಲಿಪೊವ್ನಳೂ ಅಳವಡಿಸಿಕೊಂಡರೆ ಮಾತ್ರ. ಅವಳು ತನ್ನ ಅಸಾಮಾನ್ಯವಾದ ತೀವ್ರತನದಿಂದ, ವಿವೇಕದ ನಡವಳಿಕೆಯ ಗಡಿಯನ್ನು ದಾಟುವ ಸಾಧ್ಯತೆಗಳು ಹೆಚ್ಚು ಸಂಭವನೀಯ ಅನ್ನುವುದು ಕೂಡ ನಿಜ.

ಇಲ್ಲಿ ಟೋಟ್ಸ್ಕಿಯ ಸದೃಢ ವಿವೇಕ ಮತ್ತು ಯುಕ್ತಾಯುಕ್ತ ಪರಿಜ್ಞಾನ ಅವನನ್ನು ಉತ್ತಮಸ್ಥಿತಿಯಲ್ಲಿ ನಿಲ್ಲಿಸಿತು. ಅವನಿಗೆ ಅರಿವಾಗಿದ್ದು ನಸ್ಟಾಸಿಯ ಫಿಲಿಪೊವ್ನಳು ಕೂಡ ಅವನಿಗೆ ಕಾನೂನು ಬದ್ಧವಾಗಿ ಯಾವುದೇ ರೀತಿಯಲ್ಲಿ ಹಾನಿ ಉಂಟುಮಾಡುವುದಕ್ಕಾಗುವುದಿಲ್ಲ ಎನ್ನುವುದನ್ನ ತಿಳಿದಿದ್ದಾಳೆ ಅನ್ನುವುದು; ಅವಳ ಹೊಳೆಯುತ್ತಿದ್ದ ಕಣ್ಣುಗಳು ಅವಳ ಇನ್ನ್ಯಾವುದೊ ನಿಜವಾದ ಉದ್ದೇಶಕ್ಕೆ ದ್ರೋಹ ಬಗೆಯುತ್ತಿದ್ದುದನ್ನು ಬಿಂಬಿಸುತ್ತಿದ್ದವು.

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...