Homeಮುಖಪುಟಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕ; ಕೇಂದ್ರ ಸರ್ಕಾರ ಅಧಿಸೂಚನೆ

ಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕ; ಕೇಂದ್ರ ಸರ್ಕಾರ ಅಧಿಸೂಚನೆ

- Advertisement -
- Advertisement -

ಸುಪ್ರೀಂ ಕೋರ್ಟ್‌ಗೆ ಐವರು ಹೊಸ ನ್ಯಾಯಮೂರ್ತಿಗಳ ನೇಮಕಕ್ಕೆ ಕೇಂದ್ರ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ. ಅವರ ನೇಮಕಾತಿಯೊಂದಿಗೆ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಮೇಲ್ದರ್ಜೆಗೇರಿದ ನ್ಯಾಯಮೂರ್ತಿಗಳು:

ಜಸ್ಟಿಸ್ ಪಂಕಜ್ ಮಿಥಾಲ್, ರಾಜಸ್ಥಾನ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
ಜಸ್ಟಿಸ್ ಸಂಜಯ್ ಕರೋಲ್, ಪಾಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
ಜಸ್ಟಿಸ್ ಪಿವಿ ಸಂಜಯ್ ಕುಮಾರ್, ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ
ಜಸ್ಟಿಸ್ ಅಹ್ಸಾನುದ್ದೀನ್ ಅಮಾನುಲ್ಲಾ, ಪಾಟ್ನಾ ಹೈಕೋರ್ಟ್‌ನ ನ್ಯಾಯಾಧೀಶರು
ಜಸ್ಟಿಸ್ ಮನೋಜ್ ಮಿಶ್ರಾ, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರು

ಸುಪ್ರೀಂ ಕೋರ್ಟ್‌‌ನ ಕೊಲಿಜಿಯಂ ಡಿಸೆಂಬರ್ 13 ರಂದು ಈ ನ್ಯಾಯಾಧೀಶರ ಹೆಸರನ್ನು ಶಿಫಾರಸು ಮಾಡಿತ್ತು. ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಒಂದು ದಿನದ ನಂತರ ಅಧಿಸೂಚನೆ ಹೊರಬಿದ್ದಿದೆ.

“ನೇಮಕಾತಿಗಳನ್ನು ಶೀಘ್ರದಲ್ಲಿಯೇ ಮಾಡಲಾಗುತ್ತದೆ” ಎಂದು ಅಟಾರ್ನಿ ಜನರಲ್ ಎನ್ ವೆಂಕಟರಮಣಿ ಅವರು ಹೇಳಿದ ನಂತರ ನ್ಯಾಯಾಲಯವು ನೇಮಕಾತಿ ಪ್ರಕ್ರಿಯೆ ಅಂತಿಮಗೊಳಿಸಲು ಕೇಂದ್ರಕ್ಕೆ 10 ದಿನಗಳ ಕಾಲಾವಕಾಶ ನೀಡಿತ್ತು.

ಇತ್ತೀಚಿನ ದಿನಗಳಲ್ಲಿ ಸುಪ್ರೀಂಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆಯ ಕುರಿತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಟೀಕಾಪ್ರಹಾರ ಮಾಡಿದ್ದರು. ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವೆ ಚರ್ಚೆಗಳು ಕಾವು ಪಡೆದಿದ್ದವು.

’ಈ ಕೊಲಿಜಿಯಂನ ಕಾರ್ಯವಿಧಾನ ಪಾರದರ್ಶಕವಾಗಿಲ್ಲ ಮತ್ತು ಉತ್ತರದಾಯಿತ್ವವಾಗಿಲ್ಲ; ಮುಖ್ಯ ನ್ಯಾಯಮೂರ್ತಿಗಳ ಸಮಯ ನೇಮಕಾತಿಯಲ್ಲಿಯೇ ಪೋಲಾಗುತ್ತಿದೆ’ ಎಂಬ ಕಾರಣಗಳನ್ನು ನೀಡಿ 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆ ಕಾಯ್ದೆಯನ್ನು ರದ್ದುಪಡಿಸಿ ಹಾಲಿ ಇರುವ ಕೊಲಿಜಿಯಂ ವ್ಯವಸ್ಥೆಯನ್ನು ಎತ್ತಿಹಿಡಿದಿತ್ತು. ಜೊತೆಗೆ ಹಾಲಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವುದಕ್ಕಾಗಿ ಸಾರ್ವಜನಿಕರಿಂದ ಸಲಹೆ ಕೇಳಿ ಪಾರದರ್ಶಕತೆಯನ್ನು ಹೆಚ್ಚಿಸುವುದಕ್ಕಾಗಿ ನಾಲ್ಕು ಅಂಶಗಳಲ್ಲಿ ಸುಧಾರಣೆಗೆ ಮುಂದಾಗಿತ್ತು.

ಹಾಲಿ ಕೇಂದ್ರ ಸರ್ಕಾರ ಮತ್ತೆ ನ್ಯಾಯಾಧೀಶರ ನೇಮಕದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಬಹಿರಂಗವಾಗಿ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಕಿಡಿಕಾರುತ್ತಿದ್ದು, “ಸರ್ಕಾರವು ಕೈಕಟ್ಟಿ ಕುಳಿತಿಲ್ಲ, ಪರ್ಯಾಯ ವ್ಯವಸ್ಥೆ ತರಲು ಯೋಚಿಸುತ್ತಿದೆ” ಎಂಬ ಹೇಳಿಕೆ ನೀಡಿದ್ದರು.

“ಅಷ್ಟು ಮಾತ್ರವಲ್ಲದೇ ಕೊಲಿಜಿಯಂ ಶಿಫಾರಸ್ಸು ಮಾಡಿದ ನ್ಯಾಯಾಧೀಶರ ಹೆಸರು ಅಂತಿಮಗೊಳಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಇದು ಸ್ವೀಕಾರಾರ್ಹವಲ್ಲ” ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸುತ್ತಲೇ ಬಂದಿದೆ.

“ನ್ಯಾಯಾಂಗ ಮತ್ತು ಕಾರ್ಯಾಂಗದ ಅಧಿಕಾರವನ್ನು ಪ್ರತ್ಯೇಕಿಸುವ ಸಂವಿಧಾನದ ಮೂಲ ರಚನೆಯ ಸಿದ್ಧಾಂತವು ದಿಕ್ಕು ತೋರಿಸುವ ಧ್ರುವ ನಕ್ಷತ್ರದಂತೆ” ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇತ್ತೀಚೆಗೆ ಹೇಳಿದ್ದರು.

1973ರ ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್ ಕೇರಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಮಹತ್ವದ ತೀರ್ಪನ್ನು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಟೀಕಿಸಿದ ಕೆಲವು ದಿನಗಳ ನಂತರ ಚಂದ್ರಚೂಡ್ ಅವರ ಹೇಳಿಕೆಗಳು ಹೊರಬಿದ್ದಿದ್ದವು.

7-6 ಬಹುಮತದೊಂದಿಗೆ 13 ನ್ಯಾಯಾಧೀಶರ ಪೀಠವು, “ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವಿದೆ. ಆದರೆ ಅದರ ಮೂಲ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದಿದ್ದು ಐತಿಹಾಸಿಕ ತೀರ್ಪಾಗಿದೆ.

ಜನವರಿ 11ರಂದು ಧಂಕರ್ ಮಾತನಾಡುತ್ತಾ, “ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರವು ಬೇರೆ ಯಾವುದೇ ಸಂಸ್ಥೆಯ ಮೇಲೆ ಅವಲಂಬಿತವಾಗಿದೆಯೇ? ಇದಕ್ಕೆ ನಮ್ಮ ಸ್ಟಾಂಪ್ ಬೇಕು ಎಂದು ಯಾವುದೇ ಸಂಘಟನೆ ಅಥವಾ ಸಂಸ್ಥೆ ಹೇಳಬಹುದೇ?” ಎಂದು ಪ್ರಶ್ನಿಸಿದ್ದರು.

ಕೇಶವಾನಂದ ಭಾರತಿಯವರನ್ನು ಪ್ರತಿನಿಧಿಸಿದ ವಕೀಲ ನಾನಿ ಪಾಲ್ಖಿವಾಲಾ ಅವರನ್ನು ಚಂದ್ರಚೂಡ್ ಅವರು ಸ್ಮರಿಸಿದ್ದರು. ಕೇರಳದ 1969ರ ಭೂ ಸುಧಾರಣೆಗಳನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದಾಗ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು.

“ನಮ್ಮ ಸಂವಿಧಾನದ ಮೂಲ ರಚನೆಯು ಧ್ರುವ ನಕ್ಷತ್ರದಂತೆ, ಸಂವಿಧಾನದ ವ್ಯಾಖ್ಯಾನಕಾರರು ಮತ್ತು ಅನುಷ್ಠಾನಕಾರರಿಗೆ ಮಾರ್ಗದರ್ಶನ ನೀಡುತ್ತದೆ, ನಿರ್ದಿಷ್ಟ ನಿರ್ದೇಶನವನ್ನು ನೀಡುತ್ತದೆ” ಎಂದು ಚಂದ್ರಚೂಡ್ ಹೇಳಿದ್ದರು.

“ನಮ್ಮ ಸಂವಿಧಾನದ ಮೂಲ ರಚನೆ ಅಥವಾ ತತ್ವವು ಸಂವಿಧಾನದ ಶ್ರೇಷ್ಠತೆ, ಕಾನೂನಿನ ನಿಯಮ, ಅಧಿಕಾರಗಳ ಪ್ರತ್ಯೇಕತೆ, ನ್ಯಾಯಾಂಗ ವಿಮರ್ಶೆ, ಜಾತ್ಯತೀತತೆ, ಫೆಡರಲಿಸಂ, ಸ್ವಾತಂತ್ರ್ಯ, ವ್ಯಕ್ತಿಯ ಘನತೆ, ರಾಷ್ಟ್ರದ ಏಕತೆ, ಸಮಗ್ರತೆಯ ಮೇಲೆ ಆಧಾರಿತವಾಗಿದೆ” ಎಂದಿದ್ದರು.

“ಸಂವಿಧಾನದ ಆತ್ಮವನ್ನು ಹಾಗೇ ಇಟ್ಟುಕೊಂಡು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸಂವಿಧಾನದ ಪಠ್ಯವನ್ನು ವ್ಯಾಖ್ಯಾನಿಸುವುದರಲ್ಲಿ ನ್ಯಾಯಾಧೀಶರ ಕುಶಲತೆ ಅಡಗಿದೆ” ಎಂದು ತಿಳಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...