Homeನ್ಯಾಯ ಪಥಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-1)

- Advertisement -
- Advertisement -

ಜನರಲ್ ಎಪಾಂಚಿನ್‌ನ ಹೆಂಡತಿ ಸ್ವಭಾವತಃ ಸ್ವಾಭಿಮಾನಿ ಮತ್ತು ಹೆಮ್ಮೆಯ ಹೆಂಗಸು. ಅವಳ ವಂಶಾವಳಿಯ ಕಟ್ಟಕಡೆಯು ಕುಡಿ ಎನ್ನಲಾದ ಮೂಯಿಶ್ಕಿನ್ ಎಂಬುವವನೊಬ್ಬ ದರಿದ್ರನಾದ ಮೂರ್ಖ, ಮತ್ತು ಒಬ್ಬ ಭಿಕ್ಷಾಟನೆ ಮಾಡುವವನು ಎಂಬುದನ್ನ ತಿಳಿದಾಗ ಅವಳ ಭಾವನೆಗಳು ಯಾವ ರೀತಿಯದ್ದಾಗಿದ್ದಿರಬಹುದು? ಅವಳಲ್ಲಿ ಹೆಚ್ಚಿನ ಪರಿಣಾಮವನ್ನ ಉಂಟುಮಾಡಲಿ ಎಂದು ಆಶಿಸಿ ಈ ಎಲ್ಲಾ ವಿವರಗಳನ್ನೂ ಜನರಲ್ ಹೇಳಿದ್ದ! ಅವಳ ಗಮನವನ್ನ ಒಂದೇ ಏಟಿಗೆ ಬೇರೆ ಕಡೆಗೆ ತಿರುಗಿಸುವುದು ಅವನ ಉದ್ದೇಶವಾಗಿತ್ತು; ಅವಳ ಆಲೋಚನೆಗಳನ್ನ ಪ್ರಸಕ್ತ ಕೌಟುಂಬಿಕ ವಿಷಯಗಳಿಂದ ಬದಲಾಯಿಸುವುದೇ ಅವನಿಗೆ ಮುಖ್ಯವಾಗಿತ್ತು.

ಎಪಾಂಚಿನ್‌ನ ಹೆಂಡತಿ ಉತ್ಸಾಹಭರಿತಳಾದಾಗ ಏನನ್ನೂ ಮಾತನಾಡದೆ ನೆಟ್ಟಗೆ ನಿಂತುಕೊಂಡು, ತನ್ನ ಮುಂದಿರುವುದನ್ನು ದಿಟ್ಟಿಸಿ ನೋಡುವುದು ಅವಳ ಅಭ್ಯಾಸ.

ಅವಳೊಬ್ಬಳು ತನ್ನ ಗಂಡನಷ್ಟೇ ವಯಸ್ಸಿನ ಅತ್ಯುತ್ತಮವಾದ ಹೆಂಗಸು, ಅವಳ ಮೂಗು ಸ್ವಲ್ಪ ಗಿಣಿಯ ಮೂಗಿನಂತಿತ್ತು, ಎತ್ತರವಾಗಿದ್ದಳು, ಕಿರಿದಾದ ಹಣೆಯನ್ನ ಹೊಂದಿದ್ದಳು, ದಟ್ಟವಾದ ನರೆಯುತ್ತಿದ್ದ ಕೂದಲು, ಮತ್ತು ಸ್ವಲ್ಪ ಹಳದಿ ಮಿಶ್ರಿತ ಕಂದು ಮೈಬಣ್ಣ. ಅವಳ ಕಣ್ಣುಗಳು ಬೂದುಬಣ್ಣದ್ದಾಗಿದ್ದವು, ಮತ್ತು ಅವುಗಳಲ್ಲಿ ಕೆಲವು ಬಾರಿ ಕುತೂಹಲಕರವಾದ ಭಾವ ಮೂಡುತ್ತಿತ್ತು. ಅದು ಬಹಳ ಪರಿಣಾಮಕಾರಿ ಎಂದು ಅವಳು ನಂಬಿದ್ದಳು ಮತ್ತು ಆ ನಂಬಿಕೆಯನ್ನೂ ಯಾವುದರಿಂದಲೂ ಬದಲಿಸಲು ಸಾಧ್ಯವಿರಲಿಲ್ಲ.

“ಏನು, ಅವನನ್ನ ಬರಮಾಡಿಕೊ! ತಕ್ಷಣ ಬರಮಾಡಿಕೊಳ್ಳಬೆಕೇ?” ತನ್ನ ಮುಂದೆ ಚಡಪಡಿಸುತ್ತಾ ನಿಂತಿದ್ದ ತನ್ನ ಗಂಡನ ಕಡೆಗೆ ಅಸ್ಪಷ್ಟತೆಯಿಂದ ನೋಡುತ್ತಾ ಎಪಾಂಚಿನ್‌ನ ಹೆಂಡತಿ ಕೇಳಿದಳು.

“ಓ ನನ್ನ ಪ್ರೀತಿ ಪಾತ್ರಳೆ ಅವನ ಜೊತೆಯಲ್ಲಿ ನೀನು ಯಾವುದೇ ರೀತಿಯ ಔಪಚಾರಿಕತೆಯನ್ನ ತೋರಬೇಕಾಗಿಲ್ಲ. ಜನರಲ್ ಆತುರದಿಂದ ವಿವರಿಸಿದ. “ಅವನಿನ್ನೂ ಮಗುವಿನಂತೆಯೇ, ಒಬ್ಬ ಕರುಣಾಜನಕವಾಗಿ ಕಾಣುವ ಜೀವಿ ಎಂದು ವಿಶೇಷವಾಗಿ ಹೇಳಲೇಬೇಕಿಲ್ಲ. ಅವನಿಗೆ ಯಾವುದೋ ರೀತಿಯ ಮೂರ್ಛೆರೋಗವಿದೆ; ಈಗತಾನೆ ಸ್ವಿಟ್ಜರ್ಲೆಂಡಿನಿಂದ ಬಂದಿಳಿದಿದ್ದಾನೆ; ರೈಲ್ವೆ ನಿಲ್ದಾಣದಿಂದ ನೇರವಾಗಿ ಇಲ್ಲಿಗೆ ಬಂದಿದ್ದಾನೆ, ಒಬ್ಬ ಜರ್ಮನ್‌ನಂತೆ ಉಡುಗೆತೊಡುಗೆಯನ್ನ ಧರಿಸಿಕೊಂಡು ಜೇಬಿನಲ್ಲಿ ಒಂದು ಕಾಸೂ ಕೂಡ ಇಲ್ಲದೇ. ನಾನೇ ಅವನಿಗೆ ಇಪ್ಪತ್ತೈದು ರೂಬಲ್ಲುಗಳನ್ನ ಸದ್ಯದ ಖರ್ಚಿಗೆ ಕೊಟ್ಟೆ ಮತ್ತು ಅವನಿಗೆ ಸರ್ಕಾರಿ ಕಚೇರಿಯೊಂದರಲ್ಲಿ ಒಂದು ಸುಲಭವಾದ ಕೆಲಸವನ್ನ ಕೊಡಿಸುತ್ತೇನೆ. ಅವನಿಗೆ ಈಗ ನೀನು ಹೊಟ್ಟೆಗೆ ಆಹಾರವನ್ನ ಕೊಡಬೇಕು; ಪ್ರೀತಿ ಪಾತ್ರರುಗಳೇ, ನನಗನ್ನಿಸುತ್ತದೆ ಅವನು ಬಹಳವಾಗಿ ಹಸಿದಿದ್ದಾನೆ ಎಂದು.”

“ನೀನು ನನ್ನನ್ನು ಅಚ್ಚರಿಗೊಳಿಸುತ್ತೀಯ”, ಹೆಂಡತಿ ಹೇಳಿದಳು, “ಮೂಛರೋಗ ಮತ್ತು ಹಸಿವು, ಯಾವ ರೀತಿಯ ಮೂಛೆರೋಗ?”

ಇದನ್ನೂ ಓದಿ: ಮುಷ್ಕರ ವಾಪಸ್‌ ಪಡೆದ ಸರ್ಕಾರಿ ನೌಕರರ ಸಂಘ; 17% ವೇತನ ಹೆಚ್ಚಿಸುವುದಾಗಿ ತೆರಿಗೆ ಭಾರ ಹೊರಿಸಿದ ಗೌರ್ಮೆಂಟ್!

“ಓ, ಅದೇನೂ ಪದೇಪದೆ ಬರುವಂತಹದ್ದಲ್ಲ; ಜೊತೆಗೆ, ಅವನು ಸಾಕಷ್ಟು ವಿದ್ಯಾವಂತನಾಗಿದ್ದರೂ ಕೂಡ ಅವನೊಬ್ಬ ನಿಜವಾದ ಮಗುವೇ. ನನ್ನ ಪ್ರೀತಿಪಾತ್ರರೇ, ನಾನು ನಿಮ್ಮನ್ನು ಕೇಳುವುದು” ಬಾಗಿಲಿನಿಂದ ಆಚೆಗೆ ಮೆಲ್ಲಗೆ ಹೋಗಲು ಪ್ರಯತ್ನಿಸುತ್ತಾ ಜನರಲ್ ಹೇಳಿದ, “ಅವನಿಗೆ ನೀವು ಪರೀಕ್ಷೆಯನ್ನ ಒಡ್ಡಿ, ಅವನ ಆಸಕ್ತಿ ಯಾವುದರಲ್ಲಿದೆ ಅನ್ನುವುದನ್ನ ಕಂಡುಹಿಡಿಯಿರಿ. ನೀವು ಅವನ ಬಗ್ಗೆ ಕರುಣೆಯಿಂದ ನಡೆದುಕೊಳ್ಳಿ; ಅದೊಂದು ಒಳ್ಳೆಯ ಕೆಲಸ, ನಿಮಗೆ ಗೊತ್ತಿದೆಯಲ್ಲಾ; ಏನೇ ಆದರೂ ನಿಮಗೇನಿಷ್ಟವೊ ಅದನ್ನ ಮಾಡಿ, ಅವನು ಒಂದು ರೀತಿಯಲ್ಲಿ ಸಂಬಂಧಿ ಎನ್ನುವುದನ್ನ ನೆನಪಿನಲ್ಲಿಟ್ಟುಕೊಳ್ಳಿ, ಇದನ್ನ ಗಮನದಲ್ಲಿಟ್ಟುಕೊಂಡರೆ ಈ ಯುವಕ ನನ್ನ ಪ್ರಕಾರ ನಿಮ್ಮಲ್ಲೆಲ್ಲಾ ಆಸಕ್ತಿಯನ್ನ ಹುಟ್ಟಿಸಬಹುದು.”

“ಓ ಖಂಡಿತ ಅಮ್ಮ, ಅವನ ಜೊತೆಯಲ್ಲಿ ಯಾವುದೇ ರೀತಿಯ ಔಪಚಾರಿಕತೆಯನ್ನ ಅನುಸರಿಸಬೇಕಾಗಿಲ್ಲದಿದ್ದರೆ, ನಾವು ಆ ಪಾಪದ ಹುಡುಗನಿಗೆ ಅವನ ಪ್ರಯಾಣದ ನಂತರ ಏನನ್ನಾದರೂ ತಿನ್ನಲು ಕೊಡಬೇಕು; ಅದರಲ್ಲೂ ಅವನಿಗಿನ್ನೂ ಮುಂದೆಲ್ಲಿಗೆ ಹೋಗಬೇಕು ಅನ್ನುವುದರ ಬಗ್ಗೆ ಯಾವುದೇ ಕಲ್ಪನೆಯೂ ಕೂಡ ಇಲ್ಲದ್ದರಿಂದ” ಎಂದು ಎಲ್ಲರಿಗಿಂತಲೂ ಹಿರಿಯಳಾದ ಅಲೆಕ್ಸಾಂಡ್ರ ಹೇಳಿದಳು.

ಇದನ್ನೂ ಓದಿ: ಒಬಿಸಿ ಸಚಿವಾಲಯ, ಜಾತಿಗಣತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ: ಕಾಂಗ್ರೆಸ್ ನಿರ್ಣಯಗಳಿವು


“ಅದಲ್ಲದೇ ಅವನೊಬ್ಬ ಸಮಚಿತ್ತತೆಯ ಮಗುವಿನಂತಹ ಮನುಷ್ಯ; ಬೇಕಾದಾಗ ನಾನವನನ್ನು ಸ್ವಲ್ಪ ಕಣ್ಣಾ ಮುಚ್ಚಾಲೆ ಆಡಿಸಿ ಮಜ ತೆಗೆದುಕೊಳ್ಳಬಹುದು”, ಅಡಲೈಡ್ ಹೇಳಿದಳು.

“ಕಣ್ಣಾ ಮುಚ್ಚಾಲೆ? ಏನು ನೀನು ಹೇಳುತ್ತಿರುವುದರ ಅರ್ಥ?” ಎಪಾಂಚಿನ್‌ನ ಹೆಂಡತಿ ಕೇಳಿದಳು.
“ಓ ಅಮ್ಮ, ನಾಟಕ ಆಡಬೇಡ” ಅಗ್ಲಾಯ ಸಿಡಿಮಿಡಿಗೊಂಡು ಕಿರುಚಿದಳು. “ಅವನನ್ನ ಮೇಲಕ್ಕೆ ಕಳುಹಿಸಿ ಅಪ್ಪ, ಅಮ್ಮಳ ಸಮ್ಮತಿ ಇದೆ.” ಜನರಲ್ ಗಂಟೆ ಬಾರಿಸಿ ಪ್ರಿನ್ಸ್‌ನನ್ನು ಒಳಗೆ ಕಳುಹಿಸುವಂತೆ ಹೇಳಿದ.

“ಹಾಗಾದರೆ, ಒಂದೇ ಒಂದು ಷರತ್ತಿನ ಮೇರೆಗೆ; ಊಟ ಮಾಡುವಾಗ ಅವನು ತನ್ನ ಗಲ್ಲದ ಕೆಳಗಡೆಗೆ ಕರವಸ್ತ್ರವನ್ನ ಧರಿಸಬೇಕು” ಎಪಾಂಚಿನ್‌ನ ಹೆಂಡತಿ ಹೇಳಿದಳು. ಅವನು ಊಟ ಮಾಡುವಾಗ ಅವನ ಪಕ್ಕದಲ್ಲಿ ಸೇವಕರುಗಳಾದ ಫೆಡರ್ ಅಥವ ಮಾವ್ರ ನಿಂತಿರಬೇಕು. ಅವನಿಗೆ ಈ ಮೂರ್ಛೆರೋಗ ಬಂದಾಗ ಗಲಾಟೆ ಮಾಡದೇ ಇರುತ್ತಾನ? ಯಾವುದೇ ರೀತಿಯಲ್ಲಿ ಹಿಂಸಾತ್ಮಕವಾಗಿ ನಡೆದುಕೊಳ್ಳುವುದಿಲ್ಲವಾ?”

“ಅದಕ್ಕೆ ತದ್ವಿರುದ್ಧವಾಗಿ ಅವನು ಬಹಳ ಒಳ್ಳೆಯ ಹಿನ್ನೆಲೆಯಿಂದ ಬೆಳೆದುಬಂದವನು. ಅವನ ನಡವಳಿಕೆಗಳು ಅತ್ಯುತ್ತಮವಾಗಿವೆ. ಇಗೋ ಅವನೇ ಇಲ್ಲಿಗೆ ಬಂದ ನೋಡಿ. ನನ್ನ ಪ್ರೀತಿ ಪಾತ್ರನೆ, ಬಾ ಇಲ್ಲಿ ಪ್ರಿನ್ಸ್, ನಿನ್ನನ್ನು ಮೂಯುಶ್ಕಿನ್ ವಂಶದ ಕೊನೆಯ ಕುಡಿಗಳಿಗೆ ಪರಿಚಯಿಸುತ್ತೇನೆ, ಅದೂ ನಿನ್ನ ಸ್ವಂತ ಸಂಬಂಧಿಗಳಗೆ, ಅಥವ ನಿನ್ನದೇ ಹೆಸರಿರುವ ವ್ಯಕ್ತಿಗಳಿಗೆ. ಅವನನ್ನು ಪ್ರೀತಿ ಪೂರ್ವಕವಾಗಿ ಬರಮಾಡಿಕೊ, ದಯವಿಟ್ಟು. ಅವರು ಊಟವನ್ನ ಸೀದ ತರುತ್ತಿದ್ದಾರೆ ಪ್ರಿನ್ಸ್. ನೀನಿಲ್ಲಿ ಊಟ ಮಾಡಿಯೇ ಹೋಗಬೇಕು. ಆದರೆ ಈಗ ನೀನು ನನ್ನನ್ನು ಕ್ಷಮಿಸಬೇಕು. ನಾನೀಗ ಆತುರದಲ್ಲಿದ್ದೇನೆ, ಈ ತಕ್ಷಣದಲ್ಲಿ ನಾನು ಹೋಗಬೇಕು.”

“ನಮಗೆಲ್ಲಾ ಗೊತ್ತು ನೀನು ಎಲ್ಲಿಗೆ ಆತುರದಿಂದ ಹೋಗಬೇಕೆಂದು!” ಎಪಾಂಚಿನ್‌ನ ಹೆಂಡತಿ ತಾನು ಉದ್ದೇಶಿಸಿದ ಅರ್ಥ ಬರುವ ಧ್ವನಿಯಲ್ಲಿ ಹೇಳಿದಳು.

“ಹೌದು, ಹೌದು, ನಾನೀಗ ತಕ್ಷಣ ಹೋಗಲೇಬೇಕು. ಈಗಲೇ ನನಗೆ ತಡವಾಗಿದೆ! ಇಲ್ಲಿ ನೋಡಿ ಪ್ರೀತಿಪಾತ್ರರುಗಳೇ, ನಿಮ್ಮ ಆಲ್ಬಮ್ಮುಗಳ ಮೇಲೆ ಅವನು ಬೇಕಾದರೆ ಸುಂದರವಾಗಿ ಬರೆದುಕೊಡುತ್ತಾನೆ; ನಿಮಗೆ ಗೊತ್ತಿಲ್ಲ ಅವನೆಂತಹ ಒಳ್ಳೆಯ ಕ್ಯಾಲಿಗ್ರಾಫಿಸ್ಟ್ ಅಂತ, ಆಶ್ಚರ್ಯ ಪಡುವಂತಹ ಕೌಶಲ್ಯವನ್ನ ಹೊಂದಿದ್ದಾನೆ! ಅವನು ಈಗತಾನೆ ನನಗೆ ಬರೆದುಕೊಟ್ಟಿದ್ದು, ’ಅಬ್ಬಾಟ್ ಪಾಫ್ನೂಟ್ ಇಲ್ಲಿ ಸಹಿ ಹಾಕಿದ್ದಾನೆ’, ‘Abbot pafnute signed this’ ಎಂದು. ಸರಿ, ನಿಮಗೀಗ ವಿದಾಯ ಹೇಳುತ್ತಿದ್ದೇನೆ.”

“ಸ್ವಲ್ಪ ಸಮಯ ನಿಲ್ಲು; ನೀನೆಲ್ಲಿಗೆ ಹೊರಟುಹೋಗುತ್ತಿದ್ದೀಯ? ಯಾರೀ ಅಬ್ಬಾಟ್?” ಎಪಾಂಚಿನ್‌ನ ಹೆಂಡತಿ ಹೊರಟುಹೋಗಲು ಪ್ರಯತ್ನಿಸುತ್ತಿದ್ದ ಗಂಡನ ಕಡೆಗೆ ಕೆರಳಿದ ಅಸಮಾಧಾನದಿಂದ ಕೂಗಿಕೊಂಡಳು.

“ಹೌದು ಪ್ರೀತಿಪಾತ್ರಳೆ, ಅವನೊಬ್ಬ ಹಿಂದಿನ ಕಾಲದ ಆ ಹೆಸರಿನ ಅಬ್ಬಾಟ್, ನಾನೀಗ ಕೌಂಟ್‌ನನ್ನು ನೋಡಲು ಹೋಗಬೇಕಾಗಿದೆ, ಅವನು ನನಗೋಸ್ಕರ ಕಾಯುತ್ತಿದ್ದಾನೆ, ಆಗಲೇ ತಡವಾಗಿಬಿಟ್ಟಿದೆ, ಗುಡ್ ಬೈ, ಗುಡ್ ಬೈ ಪ್ರಿನ್ಸ್!”, ಜನರಲ್ ಬೇಗನೆ ಆಚೆ ಹೋಗಿ ಬಾಗಿಲನ್ನು ಮುಚ್ಚಿ ಚಿಲಕ ಹಾಕಿಕೊಂಡ.

“ಓ ಸರಿ, ನನಗೆ ಗೊತ್ತು ನೀನು ಯಾವ ಕೌಂಟ್‌ಅನ್ನು ನೋಡಲು ಹೋಗುತ್ತಿದ್ದೀಯ ಎಂದು”, ಅವನ ಹೆಂಡತಿ ಕಡ್ಡಿ ತುಂಡಾಗುವಂತೆ ಹೇಳಿದಳು ಮತ್ತು ಈಗ ಅವಳ ಕೋಪೋದ್ರಿಕ್ತ ಕಣ್ಣುಗಳನ್ನ ಪ್ರಿನ್ಸ್‌ನ ಕಡೆಗೆ ತಿರುಗಿಸಿದಳು. “ಈಗ ಹೇಳು ಇವೆಲ್ಲಾ ಏನೆಂದು? ಯಾವ ಅಬ್ಬಾಟ್? ಪಾಫ್ನೂಟ್ ಅಂದರೆ ಯಾರು?” ಅವಳೊಂದು ರೀತಿಯಲ್ಲಿ ಒರಟಾಗಿ ಕೇಳಿದಳು.

“ಅಮ್ಮ!” ಅಲೆಕ್ಸಾಂಡ್ರ ಅವಳ ಅಮ್ಮನ ಈ ಒರಟುತನದಿಂದ ಜರ್ಜರಿತಳಾಗಿ ಕೂಗಿದಳು.

ಅಗ್ಲಾಯ ತನ್ನ ಪಾದವನ್ನ ನೆಲಕ್ಕೆ ಜೋರಾಗಿ ಅಪ್ಪಳಿಸಿದಳು.
 (ಮುಂದುವರಿಯುತ್ತದೆ..)

ಕನ್ನಡಕ್ಕೆ: ಕೆ.ಶ್ರೀನಾಥ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...