Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

ಪುಸ್ತಕ ಪರಿಚಯ: ಸದನದಲ್ಲಿ ಭೂಪತಿ

- Advertisement -
- Advertisement -

ಕೆಲವು ಊರುಗಳಿಗೆ ಅವುಗಳದ್ದೇ ಆದ ವಿಶಿಷ್ಟ ಸಾಂಸ್ಕೃತಿಕ ಚರಿತ್ರೆಯಿರುತ್ತದೆ. ಆದರೆ ಅದು ಯಾವುದೊ ಒಂದು ಘಟನೆಯಿಂದ ಮಸಿಬಿದ್ದ ಚಿತ್ರದಂತಾಗುವುದು. ಭಟ್ಕಳ, ಮಂಗಳೂರು, ಶಿವಮೊಗ್ಗ, ಸೊಂಡೂರು, ಬಳ್ಳಾರಿ ಇಂತಹ ನತದೃಷ್ಟ ಊರುಗಳು. ಕನ್ನಡದ ಮೊದಲ ಪತ್ರಿಕೆ ಶುರುವಾದ, ಸಂಗನಕಲ್ ಎಂಬ ಪ್ರಾಗೈತಿಹಾಸಿಕ ಸ್ಥಳವಿರುವ, ಪ್ರಾಚೀನ ದೇವತೆ ದುರ್ಗಮ್ಮನಿರುವ, ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ರಂಜಾನ್ ಸಾಬ್ ಅವರ ಬಳ್ಳಾರಿ ಜಿಲ್ಲೆಯ ಚರಿತ್ರೆಯು ಅಕ್ರಮ ಗಣಿಗಾರಿಕೆ ಮತ್ತು ದುಂಡಾವರ್ತಿ ರಾಜಕಾರಣದಿಂದ ಬದಿಗೆ ಸರಿಯಿತು. ಬಯಲುಸೀಮೆಯ ಅದ್ಭುತ ಅರಣ್ಯವಿರುವ, ಅನೇಕ ಭೂಹೋರಾಟಗಳು ನಡೆದಿರುವ, ಪ್ರಾಚೀನ ಸ್ಕಂದಪಂಥದ ಕುಮಾರಸ್ವಾಮಿ ಗುಡಿಯಿರುವ, ಭೂಪತಿಯಂತಹ ಆದರ್ಶವಾದಿ ರಾಜಕಾರಣಿಯಿದ್ದ ಸೊಂಡೂರಿಗೂ ಹೀಗೇ ಆಗಿದೆ. ಇಲ್ಲಿನ ನಿಸರ್ಗ ಸೌಂದರ್ಯವನ್ನು ಕಂಡು ಗಾಂಧೀಜಿ, ದಕ್ಷಿಣದ ಕಾಶ್ಮೀರ ಎಂದು ಕರೆದಿದ್ದರು. ರಾಜರು ಆಳ್ವಿಕೆ ಮಾಡುತ್ತಿದ್ದ ಮತ್ತು ರಾಜಮನೆತನದವರು ಶಾಸಕರಾಗಿದ್ದ ಸೊಂಡೂರಿಗೆ ’ಕೆಳಜಾತಿ’ಗೆ ಸೇರಿದ ಕಮ್ಯುನಿಸ್ಟ್ ಚಳವಳಿಯಲ್ಲಿ ಬೆಳೆದ ತರುಣನೊಬ್ಬರು ಶಾಸಕರಾಗಿದ್ದರು. ಅವರೇ ಭೂಪತಿ. ದುರದೃಷ್ಟವಶಾತ್ ಭೂಪತಿಯವರು ಎಳೆಯವಯಸ್ಸಿನಲ್ಲೇ ತೀರಿಕೊಂಡರು. ಹೀಗೆ ತೀರಿಕೊಂಡ ಮತ್ತೊಬ್ಬ ತರುಣ ರಾಜಕಾರಣಿ ಚಿಕ್ಕಮಗಳೂರಿನ ಸುಂದರೇಶ್.

ಈ ಪುಸ್ತಕವು ಭೂಪತಿಯವರು 1984-90ರವರೆಗೆ ಐದು ವರ್ಷಕಾಲ ಸಿಪಿಐ ಪಕ್ಷದಿಂದ ಶಾಸಕರಾಗಿದ್ದ ಕಾಲದಲ್ಲಿ ಸದನದಲ್ಲಿ ಮಾಡಿದ ಚರ್ಚೆ, ಎತ್ತಿದ ಪ್ರಶ್ನೆಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಹೊಸ ಶಾಸಕರು ಸದನದಲ್ಲಿ ಹೆಚ್ಚು ಮಾತಾಡುವುದಿಲ್ಲ. ಅವರಿಗೆ ಮಾತಾಡುವ ಅವಕಾಶಗಳೂ ಸಿಗುವುದಿಲ್ಲ. ಆದರೆ ತಮ್ಮ ಒಂದು ಅವಧಿಯಲ್ಲಿ ಭೂಪತಿಯವರು ಮಾಡಿರುವ ಚರ್ಚೆಗಳನ್ನು ಕಂಡರೆ ಸೋಜಿಗವಾಗುತ್ತದೆ. ಗ್ರಾಮೀಣ ವಿದ್ಯುದೀಕರಣ, ಕುಡಿವ ನೀರು, ನೀರಾವರಿ, ಗುತ್ತಿಗೆ ಕಾರ್ಮಿಕರು, ಕರಡಿ ಹಾವಳಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ದರೋಡೆಕೋರರ ಸಮಸ್ಯೆ, ಜನತಾಮನೆ, ಆಸ್ಪತ್ರೆ-ಹಾಸ್ಟೆಲು ಸಮಸ್ಯೆ, ರಸ್ತೆ, ಗುತ್ತಿಗೆ ನೌಕರರು, ಬರಗಾಲದ ಕಾಮಗಾರಿ, ಪಠ್ಯಪುಸ್ತಕ, ಸ್ಮಶಾನದ ಭೂಮಿ, ಕಾಡಿನ ಒತ್ತುವರಿ, ವರದಕ್ಷಿಣೆ ಕೊಲೆ, ಪೋಲೀಸು ದೌರ್ಜನ್ಯ-ಹೀಗೆ ಹಲವಾರು ವಿಷಯಗಳನ್ನು ಕುರಿತು ಆ ಚರ್ಚೆಗಳಿವೆ. ಈ ಪ್ರಶ್ನೆ ಮತ್ತು ಚರ್ಚೆಗಳಲ್ಲಿ ಮೂರು ಆಯಾಮಗಳಿವೆ. 1. ಕ್ಷೇತ್ರದ ಕುಂದುಕೊರತೆಗಳಿಗೆ ಸಂಬಂಧಿಸಿ. 2. ಇಡೀ ಕರ್ನಾಟಕದ ಶಿಕ್ಷಣ ನೀರಾವರಿ ಮತ್ತು ಅಸ್ಪೃಶ್ಯತೆ ಸಮಸ್ಯೆ ಕುರಿತು. 3. ದೇಶದ ಸಮಸ್ಯೆಗಳನ್ನು ಕುರಿತು. ಈ ಮೂರೂ ಸ್ತರಗಳಲ್ಲಿ ಭೂಪತಿಯವರ ವಾದ ಮತ್ತು ಕಾಳಜಿ ಅಸಹಾಯಕರ ಮತ್ತು ತಬ್ಬಲಿಗಳ ಪರವಾಗಿದೆ. ಗಂಗಾವತಿಯಲ್ಲಿ ಪೋಲೀಸ್ ಠಾಣೆಯಲ್ಲಿ ಪೆಟ್ಟು ತಿಂದು ಮಡಿದ ಒಬ್ಬ ವ್ಯಕ್ತಿಯ ಕುಟುಂಬದ ಬಗ್ಗೆ ಅವರು ಹೃದಯ ಕರಗುವಂತೆ ಮಾತಾಡಿದ್ದಾರೆ. ಬಂಡಾಯ ಚಳವಳಿಗೆ ಬಳಕೆಯಾದ ಘೋಷವಾಕ್ಯವನ್ನು ತುಸು ಬದಲಿಸಿ ಹೇಳುವುದಾದರೆ, ಭೂಪತಿ ಜನತೆಯ ನೋವಿಗೆ ಮಿಡಿವ ಪ್ರಾಣಮಿತ್ರನ ಹಾಗೆ ಸದನದಲ್ಲಿ ಮಾತುಕತೆ ಮಾಡಿದ್ದಾರೆ. ಇಲ್ಲಿ ತಾಯ್ತನದ ಕಾಳಜಿಯಿದೆ. ಅಧ್ಯಯನವಿದೆ. ತಾತ್ವಿಕ ಸ್ಪಷ್ಟತೆಯಿದೆ. ನಿಷ್ಠುರತೆಯಿದೆ. ಅವರ ಎದುರು ಮಂತ್ರಿಗಳಾಗಿದ್ದವರು ರಾಮಕೃಷ್ಣ ಹೆಗಡೆ, ದೇವೇಗೌಡ ಮೊದಲಾದವರು.

ಆದರೆ ಈ ಪುಸ್ತಕದಲ್ಲಿರುವ ಚರ್ಚೆಗಳು ಶಾಸಕರೊಬ್ಬರ ಸಾರ್ವಜನಿಕ ಕಾಳಜಿಯನ್ನು ಮಾತ್ರ ಸೂಚಿಸುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಜನಪರ ರಾಜಕಾರಣದಿಂದ ಉಳ್ಳವರ ಹಿತಾಸಕ್ತಿ ರಕ್ಷಿಸುವತ್ತ ಪ್ರಭುತ್ವಗಳ ಸ್ವರೂಪಕ್ಕೆ ಬದಲಾಗುತ್ತಿರುವುದನ್ನು ಸೂಚಿಸುತ್ತವೆ. ಭೂಪತಿಯವರು ಐದು ಕೋಟಿ ಸಾರ್ವಜನಿಕ ಹಣವನ್ನು ಹೂಡಿದ ಖಾಸಗಿ ಕಂಪನಿಯು ಉತ್ಪಾದನೆ ಮಾಡದೆ ಕೆಲಸ ನಿಲ್ಲಿಸಿದ್ದರ ಬಗ್ಗೆ ಅಪಾರ ಸಿಟ್ಟಿನಿಂದ ಮಾತಾಡುತ್ತಾರೆ. ಇದೇನು ದೊಡ್ಡ ಸಂಗತಿಯಲ್ಲ ಎಂದು ಜೆ.ಎಚ್. ಪಟೇಲರು ಉಡಾಫೆಯಿಂದ ಉತ್ತರಿಸುತ್ತಾರೆ. ಈ ಪುಸ್ತಕದಲ್ಲಿರುವ ಮಾತುಕತೆಗಳು ಕಳೆದುಹೋದ ಸಮಾಜವಾದಿ ದಿನಗಳ ಸುವರ್ಣಯುಗದ ಅಧ್ಯಾಯವೊಂದರಂತೆ ಭಾಸವಾಗುತ್ತವೆ.

ಇದನ್ನೂ ಓದಿ: ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಕರ್ನಾಟಕದ ರಾಜಕಾರಣದಲ್ಲಿ ನಾಲ್ಕು ಮಾದರಿಗಳಿವೆ. ಅ. ಕ್ಯಾಪಿಟೇಶನ್, ಲಿಕ್ಕರ್, ರಿಯಲ್ ಎಸ್ಟೇಟು, ಗಣಿಗಾರಿಕೆ, ಮೊದಲಾದ ಹಣದ ವಹಿವಾಟಿನ ನೆಲೆಯಿಂದ ರೂಪುಗೊಂಡ ರಾಜಕಾರಣ; ಆ. ದ್ವೇಷದ ಸಿದ್ಧಾಂತ, ಗಲಭೆ, ಕೊಲೆ, ರಕ್ತ, ವಿವಾದಗಳ ನೆಲೆಯ ರಾಜಕಾರಣ; ಇ. ಫ್ಯೂಡಲ್ ಪಕ್ಷಗಳಲ್ಲಿದ್ದರೂ, ತಮ್ಮ ಮುತ್ಸದ್ದಿತನ ಮತ್ತು ಮುಂಗಾಣ್ಕೆಯಿಂದ ನಾಡನ್ನು ಕಟ್ಟುವ ರಾಜಕಾರಣ- ದೇವರಾಜ ಅರಸು, ಬಸವಲಿಂಗಪ್ಪ, ನಜೀರ್‌ಸಾಬ್, ಗೋವಿಂದೇಗೌಡ, ಇಂತಹವರು; ಈ ಜನಪರ ಚಳವಳಿಗಳಿಂದ ಮೂಡಿದ ರಾಜಕಾರಣ- ವಾಟಾಳ್ ನಾಗರಾಜ್, ಶಾಂತವೇರಿ ಗೋಪಾಲಗೌಡ, ನಂಜುಂಡಸ್ವಾಮಿ, ಭೂಪತಿ ಮೊದಲಾದವರು.

ಕನ್ನಡದಲ್ಲಿ ಸಿದ್ಧಲಿಂಗಯ್ಯನವರನ್ನು ಒಳಗೊಂಡಂತೆ ಅನೇಕ ಶಾಸಕರ ಸದನದ ಮಾತುಕತೆಯ ಕೃತಿಗಳು ಬಂದಿವೆ. ಅವುಗಳ ಸಾಲಿನಲ್ಲಿ ಭೂಪತಿಯವರದೂ ಒಂದು. ಕನ್ನಡ ಸಾಹಿತ್ಯದ ವಿಶಾಲ ಪರಿಕಲ್ಪನೆಯಲ್ಲಿ ಸದನದ ಸಾಹಿತ್ಯವೂ ಒಂದು. ಈ ದಾಖಲು ಸಾಹಿತ್ಯವು ಬರೆದಿದ್ದಲ್ಲ. ಮಾತಿನ ಬರೆಹರೂಪ. ಇದನ್ನು ಕರ್ತೃಗಳು ಸಾಮಾನ್ಯವಾಗಿ ರಾಜಕಾರಣಿಗಳು. ಜನಪ್ರತಿನಿಧಿಗಳಾಗಿ ತಮ್ಮ ಕ್ಷೇತ್ರದ ನಾಡಿನ ಸಮಸ್ಯೆಗಳನ್ನು ಚರ್ಚಿಸುತ್ತ ಆಡಿದ ಮಾತುಗಳು. ಇವು ಮೂಲತಃ ರಾಜಕೀಯ ಆರ್ಥಿಕ ಸಾಮಾಜಿಕ ಚರ್ಚೆಯನ್ನು ಒಳಗೊಂಡಿರುವ ಈ ಕೃತಿಗಳಲ್ಲಿ ಸಾಹಿತ್ಯ ಕಲೆಗೆ ಸಂಬಂಧಿಸಿದ್ದು ಕಡಿಮೆ. ಜನರ ನೋವು ನಲಿವಿಗೆ ಸಂಬಂಧಿಸಿದ್ದೇ ಹೆಚ್ಚು. ಆದರೂ ಇವು ಕತೆ ಕಾದಂಬರಿಯಂತೆ ಓದಿಸಿಕೊಂಡು ಹೋಗಬಲ್ಲವು. ಇದು ಯಾರು ಸದನದಲ್ಲಿ ಮಾತಾಡಿದ್ದಾರೆ ಎಂಬುದರ ಮೇಲೆ ಹೋಗುತ್ತದೆ.

ಇಂತಹ ದಾಖಲು ಸಾಹಿತ್ಯದ ಕೃತಿಯನ್ನು ಮುಕುಂದರಾಜು ಮತ್ತು ಅವರ ಜೀವನಸಂಗಾತಿ ಪದ್ಮಾ ಚಿನ್ಮಯಿ ಅವರು ಸೇರಿ ಸಂಪಾದಿಸಿದ್ದಾರೆ. ಭೂಪತಿ ಟ್ರಸ್ಟ್ ಪ್ರಕಟಸಿದೆ. ಕನ್ನಡದ ರಾಜಕೀಯಶಾಸ್ತ್ರದ ವಿದ್ಯಾರ್ಥಿಗಳು ಮಾತ್ರವಲ್ಲ, ಕರ್ನಾಟಕದ ರಾಜಕಾರಣ, ಆರ್ಥಿಕತೆ, ಸಾಮಾಜಿಕತೆ ಬಗ್ಗೆ ಆಸ್ಥೆಯುಳ್ಳವರೆಲ್ಲರೂ ಓದುವ ಹಾಗೆ ಈ ಕೃತಿ ರೂಪುಗೊಂಡಿದೆ. ಸದ್ಯ ಕರ್ನಾಟಕದ ಶಾಸಕರ ಮನೆಗಳಲ್ಲಿ ಕಂತೆ ಹಣ, ಅಶ್ಲೀಲ ಸಿಡಿಗಳು, ದ್ವೇಷಸಾಧನೆಯ ಆಯುಧಗಳು ಸಿಗುತ್ತಿರುವ ವರದಿ ಬರುತ್ತಿವೆ. ಶಾಸಕಾಂಗ ಅಧಃಪತನಕ್ಕೆ ಇಳಿದುಹೋಗಿದೆ. ಇಂತಹ ಹೊತ್ತಲ್ಲಿ ಆದರ್ಶವಾದಿ ರಾಜಕಾರಣಿಯೊಬ್ಬರ ಜನಪರ ಕಾಳಜಿಯ ಮಾತುಕತೆಯ ಪುಸ್ತಕವು ಪ್ರಕಟವಾಗಿದೆ. ಇದನ್ನು ವೈರುಧ್ಯವೆನ್ನಬೇಕೊ ಅಗತ್ಯವೆನ್ನಬೇಕೊ ತಿಳಿಯದಾಗಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...