Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

ಪುಸ್ತಕ ಪರಿಚಯ: ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)

- Advertisement -
- Advertisement -

19ನೇ ಶತಮಾನದ ಕೊನೆಯ ಮತ್ತು 20ನೇ ಶತಮಾನದ ಮೊದಲ ಭಾಗ. ಆಗಿನ ಮುಂಬೈ ಪ್ರಾಂತ್ಯದಲ್ಲಿ ಸಂಗೀತ ಮತ್ತು ರಂಗಭೂಮಿಯ ಲೋಕದಲ್ಲಿ ಅನೇಕ ಪ್ರಖ್ಯಾತರು ಆಗಿಹೋದರು. ಭೂಗಂಧರ್ವ ರೆಹಮತ್ ಖಾನ್, ಅಬ್ದುಲ್ ಕರೀಂಖಾನ್, ಉಸ್ತಾದ್ ಅಲ್ಲಾದಿಯಾ ಖಾನ್, ಭಾತಖಂಡೆ, ಹೀರಾಬಾಯಿ ಬಡೋದೆಕರ್, ಭಾಸ್ಕರರಾವ್ ಬಖಲೆ, ವಿಷ್ಣುಪಂಥ ಛತ್ರೆ, ಸವಾಯಿ ಗಂಧರ್ವ, ಬಾಲಗಂಧರ್ವ, ನತ್ಥನ್ ಖಾನ್, ಬರ್ಕತ್‌ಉಲ್ಲಾ ಖಾನ್- ಹೀಗೆ ಹಲವಾರು ಪ್ರಭೃತಿಗಳು ತಮ್ಮ ಪ್ರತಿಭೆ-ಪ್ರಯೋಗಗಳನ್ನು ಕಾಣಿಸಿದರು. ಇವರಲ್ಲಿ ಗಾಯಕರೂ ನಟರೂ ಮುಖ್ಯವಾಗಿ ಹಾರ್ಮೊನಿಯಂ ವಾದಕರೂ ಆಗಿದ್ದ ಗೋವಿಂದರಾವ್ ಟೇಂಬೆಯವರದೂ ಒಬ್ಬರು. ಅವರ ಆತ್ಮಕಥೆಯಿದು- ‘ಮಾಝಾ ಸಂಗೀತ ವ್ಯಾಸಂಗ್’.

ನಟ, ಗಾಯಕ, ನಾಟಕಕಾರ, ಲೇಖಕ, ಹಾರ್ಮೊನಿಯಂ ವಾದಕ ಆಗಿದ್ದ ಗೋವಿಂದರಾವ್ ಟೇಂಬೆ (1881-1955), ಕೊಲ್ಹಾಪುರದವರು. ಶಾಹು ಮಹಾರಾಜರ ಆಸ್ಥಾನದಲ್ಲಿದ್ದ ಅಲ್ಲಾದಿಯಾಖಾನ್ ಹಾಗೂ ಅವರ ಶಿಷ್ಯ ಭಾಸ್ಕರರಾವ್ ಬಖಲೆ ಅವರಿಂದ ಸಂಗೀತ ಕಲಿತವರು. ಮರಾಠಿಯ ಮೊದಲ ಟಾಕಿ ‘ಅಯೋಧ್ಯಾಚ ರಾಜಾ’ದಲ್ಲಿ ನಟಿಸಿದವರು. ‘ಶಿವಾಜಿ ನಾಟಕ ಮಂಡಳಿ’ ಎಂಬ ಕಂಪನಿಯನ್ನೂ ಅವರು ಕಟ್ಟಿ ನಡೆಸಿದವರು. ಟೇಂಬೆಯವರಿಗೂ ಕರ್ನಾಟಕಕ್ಕೂ ಬಹಳ ಲಗತ್ತಿತ್ತು. ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಸೋದರ ಕಂಠೀರವ ನರಸರಾಜ ಒಡೆಯರ ಆಪ್ತ ಒಡನಾಡಿ. ಇಬ್ಬರೂ ಸೇರಿ ಸಂಗೀತದ ರಂಗಭೂಮಿಯ ಪ್ರದರ್ಶನ ನೋಡಲು ಒಟ್ಟಿಗೆ ಹೋಗುತ್ತಿದ್ದವರು. ವಿದೇಶ ಪ್ರವಾಸ ಮಾಡುತ್ತಿದ್ದರು. ಕನ್ನಡಿಗರ ನಾಟಕ ಕಂಪನಿಗಳಲ್ಲೂ ಟೇಂಬೆಯವರು ಗವಾಯಿಯಾಗಿ ಕೆಲಸ ಮಾಡಿದರು.

ಗೋವಿಂದರಾವ್ ಟೇಂಬೆ

ಟೇಂಬೆಯವರ ಆತ್ಮಕಥೆಯ ವಿಶೇಷವೆಂದರೆ, ಇದು ಅವರ ತಂದೆ ತಾಯಿ, ಮಡದಿ ಮಕ್ಕಳು, ಗೆಳೆಯರು ಬಂಧುಗಳನ್ನು ಕುರಿತು ಹೇಳುವುದಿಲ್ಲ. ಬದಲಿಗೆ ಅವರ ಜೀವಿತ ಕಾಲದಲ್ಲಿ ಸಂಗೀತ ಲೋಕದಲ್ಲಿ ನಡೆದ ವಿದ್ಯಮಾನಗಳನ್ನು ಕಟ್ಟಿಕೊಡುತ್ತದೆ. ಈ ಕೃತಿಯಲ್ಲಿ, ಹಿಂದೂಸ್ತಾನಿ ಸಂಗೀತ ಮತ್ತು ಮರಾಠಿ ರಂಗಭೂಮಿ, ಮುಂಬೈ ಚಲನಚಿತ್ರ ರಂಗಗಳನ್ನು ಹೇಗೆ ಎಲ್ಲ ಧರ್ಮದ ಪ್ರತಿಭಾವಂತರು ಸೇರಿ ಬೆಳೆಸಿದರು ಎಂಬುದರ ಅಪೂರ್ವ ಚರಿತ್ರೆ ಸಿಗುತ್ತದೆ. ಅದರಲ್ಲೂ ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ನತ್ಥನ್‌ಖಾನ್ ಮೊದಲಾದವರ ಅದ್ಭುತವಾದ ವ್ಯಕ್ತಿಚಿತ್ರಗಳು ಸಿಗುತ್ತವೆ. ಸಂಗೀತ ಲೋಕದಲ್ಲಿದ್ದ ಸ್ಪರ್ಧೆ ಅಸೂಯೆ ಸಣ್ಣತನಗಳ ಚಿತ್ರಗಳೂ, ಉದಾರತೆ ಪ್ರೀತಿ ಬೆಳೆಸುವಿಕೆಯ ಚಿತ್ರಗಳೂ ಇಲ್ಲಿವೆ. ಶ್ರವ್ಯಾನುಭವಕ್ಕೆ ಸಂಬಂಧಿಸಿದ ಸಂಗೀತದ ಸೊಗಸನ್ನು ಬಣ್ಣಿಸಲು ಟೇಂಬೆಯವರು ಬಳಸಿರುವ ರೂಪಕಗಳು ವಿಶೇಷವಾಗಿವೆ. ಒಂದು ರೂಪಕ ನನಗೆ ಬಹಳ ಸೆಳೆಯಿತು. ಅದು ಪಶ್ಚಿಮದ ವಾದ್ಯವಾದ ಹಾರ್ಮೊನಿಯಂಅನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪಳಗಿಸುವಾಗ ಟೇಂಬೆಯವರು ಪಟ್ಟ ಕಷ್ಟವನ್ನು ಕುರಿತದ್ದು. ಅದನ್ನವರು “ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಎರಕ ಹೊಯ್ದ ನರ್ತಕಿಗೆ ಭಾರತೀಯ ಕುಲವಧುವಿನ ಆಭರಣಗಳನ್ನು ತೊಡಿಸಿದಷ್ಟು ಕಠಿಣವಾದ ಕಾರ್ಯ” ಎನ್ನುತ್ತಾರೆ. ಇದು, ಬಿಎಂಶ್ರೀಯವರು ‘ಇಂಗ್ಲಿಷ್ ಗೀತಗಳು’ ಅನುವಾದವನ್ನು ಮಾಡುವಾಗ, ‘ಇವಳ ಸೊಬಗನವಳು ತೊಟ್ಟು ನೋಡಬಯಸಿದೆ. ಅವಳ ತೊಡುಗೆ ಇವಳಿಗಿಟ್ಟು ಹಾಡಬಯಸಿದೆ’ ಎಂದು ಬಣ್ಣಿಸಿದ ರೂಪಕವನ್ನು ನೆನಪಿಸುತ್ತದೆ. ಹೀಗಾಗಿ ಈ ಕೃತಿ ಪಶ್ಚಿಮದ ಸಂಸ್ಕೃತಿ ನಾಗರಿಕತೆಗಳ ಜತೆ, ಭಾರತೀಯ ಸಮಾಜವು ಅನುಸಂಧಾನ ಮಾಡುತ್ತಿದ್ದ ಚರಿತ್ರೆಯ ಕೃತಿಯೂ ಆಗಿದೆ. ಇದು ವಿಶೇಷ ತಜ್ಞತೆಯಿರುವ ಕ್ಷೇತ್ರದ ಅನುಭವವಿರುವ ಕೃತಿಯಾದರೂ ಸಾಮಾನ್ಯರೂ ಕಾದಂಬರಿಯಂತೆ ಓದಬಹುದು.

ಇದನ್ನೂ ಓದಿ: ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

ಭಾರತದಲ್ಲಿ ಚರಿತ್ರೆ ಎಂದರೆ ಹಿಂದಿನ ರಾಜರು ಚಕ್ರವರ್ತಿಗಳು ಆಳಿದ, ಯುದ್ಧಮಾಡಿದ, ಮಡಿದ ಕಥನಗಳು ಎಂಬಂತಾಗಿದೆ. ಇವು ವರ್ತಮಾನದಲ್ಲಿ ಸಮುದಾಯಗಳ ನಡುವೆ ವೈಮನಸ್ಸನ್ನು ಹರಡಲು ಹತ್ಯಾರಗಳಾಗಿವೆ. ಇಂತಹ ಚರಿತ್ರೆಯನ್ನು ಬ್ರಿಟಿಷರು ಆರಂಭಿಸಿದರು. ಮತೀಯವಾದವು ಇದನ್ನು ಮುಂದುವರಿಸಿತು. ಅದೀಗ ನಮ್ಮ ಪಠ್ಯಪುಸ್ತಕಗಳನ್ನು ಆಳವಾಗಿ ಹೊಕ್ಕಿದೆ. ಆದರೆ ಚರಿತ್ರೆಯಲ್ಲಿ ಸಾಹಿತ್ಯದ ಸಂಗೀತದ ನೃತ್ಯದ ಸಿನಿಮಾದ ಭಾಷೆಗಳ ರಂಗಭೂಮಿಯ ಅಧ್ಯಾಯಗಳೂ ಇವೆ. ಜಾತಿಮತಗಳ ಹಂಗಿಲ್ಲದ ಆದಿಮಾನವರ ಚರಿತ್ರೆಯೂ ಇದೆ. ಇವನ್ನು ನಮ್ಮ ಗತಕಾಲದ ಮತ್ತು ವರ್ತಮಾನದ ತಿಳಿವಳಿಕೆ ರೂಪಿಸಲು ಬಳಸುವುದು ಕಡಿಮೆ. ಈ ಚರ್ಚೆಯ ಹಿನ್ನೆಲೆಯಲ್ಲಿ ಟೇಂಬೆಯವರ ಕೃತಿಯು ಇಂತಹ ಪರ್ಯಾಯ ಚರಿತ್ರೆಯನ್ನು ನಮ್ಮ ಮುಂದಿಡುತ್ತದೆ. ಗುಬ್ಬಿವೀರಣ್ಣನವರ ‘ಗುಬ್ಬಿಕಂಪನಿ’, ಬಿ.ವಿ ಕಾರಂತರ ‘ಇಲ್ಲಿರಲಾರೆ’ ಮೊದಲಾದ ಕಲಾಲೋಕದ ಆತ್ಮಚರಿತ್ರೆಯನ್ನಾಗಲಿ, ಸಿನಿಮಾ ಸಂಗೀತ ರಂಗಭೂಮಿ ಚಿತ್ರಕಲೆ ವಾಸ್ತುಶಿಲ್ಪ ಕುರಿತ ಕೃತಿಗಳನ್ನಾಗಲಿ ಇಲ್ಲಿ ಸ್ಮರಿಸಬೇಕು.

ಇಂತಹ ಅಮೂಲ್ಯವೂ ಚಾರಿತ್ರಿಕ ಮಹತ್ವವೂ ಇರುವ ಕೃತಿಯನ್ನು ಮರಾಠಿಯಿಂದ ಬೆಳಗಾವಿಯ ಸಂಗೀತ ಚರಿತ್ರೆಕಾರ ಶಿರೀಷ್ ಜೋಶಿ ಕನ್ನಡಕ್ಕೆ ತಂದಿದ್ದಾರೆ. ಅವರ ಅನುವಾದ ಬಹಳ ಆಪ್ತವಾಗಿದೆ. ಅವರು ಸ್ವತಃ ಸಂಗೀತದವರು. ಕುಮಾರ ಗಂಧರ್ವ, ಬಸವರಾಜ ರಾಜಗುರು ಜೀವನ ಚರಿತ್ರೆಗಳನ್ನು ಬರೆದವರು. ಗಡಿಜಗಳ, ನದಿಜಗಳಗಳಲ್ಲಿ ಎರಡು ಭಾಷಿಕ ಸಮುದಾಯಗಳ ನಡುವೆ ಸದಾ ಕಿಡಿ ಹಾರುವ ಸಮಯದಲ್ಲಿ, ಇಂತಹ ಪುಸ್ತಕಗಳು ಎರಡು ಭಾಷಿಕರ ನಡುವೆ ನಡೆದಿರುವ ಸಾಂಸ್ಕೃತಿಕ ಕೊಡುಕೊಳೆಗಳನ್ನು ಕಾಣಿಸುತ್ತವೆ. ಶಂಬಾ ಜೋಶಿ, ದ.ರಾ. ಬೇಂದ್ರೆ, ರಾ.ಚಿಂ. ಢೇರೆಯವರು ಕರ್ನಾಟಕ-ಮಹಾರಾಷ್ಟ್ರಗಳ ಚಾರಿತ್ರಿಕ ಸಾಂಸ್ಕೃತಿಕ ಸಾಹಿತ್ಯಕ ಸಂಬಂಧಗಳನ್ನು ಶೋಧಿಸಿದವರು. ಚಂದ್ರಕಾಂತ ಪೋಕಳೆ, ಡಿ.ಎಸ್.ಚೌಗಲೆ, ಸರಜೂ ಕಾಟ್ಕರ್, ಶಿರೀಷ ಜೋಶಿ ಮೊದಲಾದವರು ಮರಾಠಿಯಿಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ತಿಳಿವನ್ನು ಉಣಿಸುತ್ತಿರುವವರು. ಇವರಿಗೆ ಕೃತಜ್ಞತೆ ಸಲ್ಲಬೇಕು.

ನನ್ನ ಸಂಗೀತ ವ್ಯಾಸಂಗ (ಆತ್ಮಕಥೆ)
ಪಂಡಿತ ಗೋವಿಂದರಾವ್ ಟೇಂಬೆ,
ಅನು: ಶಿರೀಷ ಜೋಶಿ, ಕನ್ನಡ ಜಾಗೃತ್ತಿ ಪುಸ್ತಕ ಮಾಲೆ, ಅಲ್ಲಮ ಪ್ರಭು ಜನಕಲ್ಯಾಣ ಸಂಸ್ಥೆ,
ಚಿಂಚಣಿ

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಮ್ಮ ನಾಯಕ ಅಂದು ಗುಹೆಯೊಳಗೆ, ಇಂದು ನೀರೊಳಗೆ, ಮುಂದೆ ಚಂದ್ರನ ಮೇಲೆ: ಪ್ರಕಾಶ್ ರಾಜ್

0
"ನಮಗೊಬ್ಬ ನಾಯಕನಿದ್ದಾನೆ. ಆತ 2019ರಲ್ಲಿ ಕ್ಯಾಮರಾ ಮ್ಯಾನ್‌ಗಳ ಜೊತೆ ಗುಹೆ ಸೇರ್ಕೊಂಡ. ಈಗ ಚುನಾವಣೆ ಬರುವಾಗ ನೀರಿನೊಳಗೆ ಹೋಗಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ಆತ 20ನೇ ಶತಮಾನದ ದೇಶದ ನಾಯಕನಾ?"...