ರಾತ್ರಿ ಹನ್ನೆರಡೂವರೆಯಾಗಿತ್ತು. ನನ್ನ ಮಡದಿಯ ಫೋನು ರಿಂಗಣಿಸಿತು. ಆಕೆಯನ್ನು ಗಾಢ ನಿದ್ರೆಯ ಲೋಕದಿಂದ ಹೊರತರುವುದು ಸುಲಭದ ಮಾತಲ್ಲ. ಫೋನಿನ ರಂಪಾಟಕ್ಕೆ (ನನ್ನ ಮಗ ಇಟ್ಟಿದ್ದ ವಿಚಿತ್ರ ರಿಂಗ್ ಟೋನ್ ರಂಪಾಟವೇ ಸರಿ) ನನಗೇ ಮೊದಲು ಎಚ್ಚರವಾಯ್ತು. ಎದ್ದು, ಅಪರಾತ್ರಿಯಲ್ಲಿ ಬಂದ ಫೋನ್ ಕರೆಗೆ ತುಸು ಗಾಬರಿಯಿಂದಲೆ ಎದ್ದು ಫೋನ್ ಎತ್ತಿಕೊಂಡು ಅದರ ಮೋರೆ ನೋಡಿದೆ. ಊರಿನಿಂದ ಅಮ್ಮ ಫೋನ್ ಮಾಡುತ್ತಿದ್ದಳು. ಈಗ ಸಹಜವಾಗಿಯೇ ಗಾಬರಿ ಮತ್ತಷ್ಟು ಹೆಚ್ಚಾಯ್ತು. ರಿಸೀವ್ ಮಾಡಿ ‘ಯಾಕಮ್ಮ,ಏನಾಯ್ತು?’ ಅಂದೆ. ‘ಏನೂ ಆಗಿಲ್ಲ. ಸರಸು ಮಲಗಿದಾಳಾ? ಎಬ್ಬಿಸಿ ಫೋನ್ ಕೊಡು’ ಅಮ್ಮನ ದನಿಯಲ್ಲಿ ಸ್ವಲ್ಪ ಗಾಬರಿ ಇದ್ದಂತಿತ್ತು. ಹೆಂಡತಿಯನ್ನು ಎಬ್ಬಿಸಿ ಫೋನ್ ಕೊಟ್ಟೆ. ಅರೆನಿದ್ರೆ, ಫುಲ್ ಗಾಬರಿಯೊಂದಿಗೆ ಫೋನ್ ಕಿವಿಗಿಟ್ಟ ಆಕೆ, ‘ಹ್ಞಾಂ, ಹೂಂ, ಓಹ್, ಆಯ್ತು, ಇಲ್ಲ’ ಎಂಬ ಗುಪ್ತ ಉದ್ಘಾರಗಳೊಂದಿಗೆ ಮಾತು ಮುಗಿಸಿ ಫೋನ್ ಕೆಳಗಿಟ್ಟು ಪಕ್ಕದಲ್ಲೊಂದು ಆಕೃತಿ ವಿಷಯ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದೆ ಎಂಬ ಕಾಳಜಿಯೂ ಇಲ್ಲದೆ ತೆಪ್ಪಗೆ ಬಿದ್ದುಕೊಂಡಳು. ರೇಗಿಹೋಯ್ತು. ಹಾಗಂತ ರೇಗಾಡುವಂತೆಯೂ ಇರಲಿಲ್ಲ. ‘ಏನಂತೆ? ಅಮ್ಮ ಏನಿಕ್ಕೆ ಫೋನ್ ಮಾಡಿದ್ದು?’ ಕೇಳಿಯೇ ಬಿಟ್ಟೆ. ಅದ್ಯಾವ ದೇವರು ಅವಳಿಗೆ ಆಕ್ಷಣಕ್ಕೆ ಒಳ್ಳೆ ಬುದ್ದಿ ಕೊಟ್ಟನೋ ಗೊತ್ತಿಲ್ಲ, ಇಂತಹ ನಿದ್ರಾಭಂಗದ ಸಮಯದಲ್ಲಿ ಸಿಟ್ಟಿಗೇಳುವಂತೆ ತಾರಾಮಾರಿ ತರಾಟೆಗೆ ತೆಗೆದುಕೊಳ್ಳದೆ ವಿಷಯ ಹೇಳಿದಳು. ನಮ್ಮಮ್ಮ ಫೋನ್ ಮಾಡಿದ್ದ ಸಾರಾಂಶ ಇಷ್ಟು. ‘ತಿರುಪತಿಯ ತಿಮ್ಮಪ್ಪನ ದೇವಸ್ಥಾನದಲ್ಲಿ ಶಾಶ್ವತ ದೀಪವೊಂದು ನಂದಿಹೋಗಿದೆ, ಹಾಗಾಗಿ ಎಲ್ಲರೂ ಈ ಕೂಡಲೇ ಎದ್ದು ಮಡಿಮೈಲುಗೆಯಲ್ಲಿ ಸ್ನಾನ ಮಾಡಿ, ಅವರವರ ಮನೆಯ ದೇವರ ಮುಂದೆ ದೀಪ ಹಚ್ಚಬೇಕು; ಇಲ್ಲವಾದರೆ ಕೆಡುಕು ಉಂಟಾಗುತ್ತದೆ’ ಎಂದು ಯಾರೊ ಪುಣ್ಯಾತ್ಮ (ನಮ್ಮಮ್ಮನ ಪ್ರಕಾರ ಹಿತೈಷಿ) ಅಷ್ಟು ರಾತ್ರಿಯಲ್ಲಿ ನಮ್ಮ ಅಮ್ಮನಿಗೆ ಫೋನ್ ಮಾಡಿ ಈ ಸುದ್ದಿಯನ್ನು ತಲುಪಿಸಿದ್ದ. ಮೊದಲೇ ದೈವಭಕ್ತಿಯ ನಮ್ಮಮ್ಮ ತನ್ನ ಸೊಸೆಗೂ ಆ ಸುದ್ದಿ ಮುಟ್ಟಿಸಲು ಆತುರಗೊಂಡು ಫೋನ್ ಮಾಡಿದ್ದಳು.
ನನ್ನ ಸಹವಾಸ ದೋಷದಿಂದ ಇತ್ತೀಚೆಗೆ ಕೊಂಚ ‘ಹಾಳಾಗಿ’ ಹೋಗಿರುವ ನನ್ನಾಕೆ ಇದಕ್ಕೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಮಲಗಿದಳು.
ಆದರೆ ಬೆಳಗೆದ್ದು ನೋಡಿದರೆ, ಅಕ್ಕಪಕ್ಕದ ಮನೆಯವರೆಲ್ಲ ರಾತ್ರಿಯೇ ಎದ್ದು ವ್ರತಾಚರಣೆ ಮಾಡಿ ದೀಪ ಹಚ್ಚಿ ನಿಟ್ಟುಸಿರು ಬಿಟ್ಟಿದ್ದರು. ನ್ಯೂಸ್ ಚಾನೆಲ್ಲುಗಳಲ್ಲೆಲ್ಲ ಅದೇ ಸುದ್ದಿ. ಹೆಚ್ಚೂಕಮ್ಮಿ ನಾಡಿಗೆ ನಾಡೇ ಮಧ್ಯರಾತ್ರಿ ದೀಫೋತ್ಸವ ಆಚರಿಸಿತ್ತು. ವ್ಯತ್ಯಾಸವೆಂದರೆ, ಆಯಾ ಪ್ರದೇಶದಲ್ಲಿ ಯಾವ ದೇವರು ‘ಪವರ್ ಫುಲ್ಲೊ’ ಆ ದೇವರ ಹೆಸರನ್ನು ಬಳಸಿಕೊಳ್ಳಲಾಗಿತ್ತು. ಕೆಲವು ಕಡೆ ಧರ್ಮಸ್ಥಳದ ಹೆಸರು ಕೇಳಿಬಂದಿದ್ದರೆ, ಮತ್ತೆ ಕೆಲವೆಡೆ ತಿರುಪತಿ, ಇನ್ನು ಕೆಲವೆಡೆ ಬೇರೆ ಬೇರೆ ದೇವರುಗಳ ಹೆಸರು ಬಳಕೆಯಾಗಿತ್ತು.
ಈ ವೃತ್ತಾಂತ ನಡೆದದ್ದು ಮೋದಿಯವರ ಕ್ಯಾಂಡಲ್ ಐಡಿಯಾ ಹೊರಬೀಳುವುದಕ್ಕು ಮೂರುನಾಲ್ಕು ದಿನ ಮೊದಲು! ಬಹುಶಃ ಕರ್ನಾಟಕದಲ್ಲಿ ರಾತ್ರೋರಾತ್ರಿ ನಡೆದ ಈ ‘ದೀಪಕ್ರಾಂತಿ’ಯೇ ಮೋದಿಯವರಿಗೆ ಕ್ಯಾಂಡಲ್ ಐಡಿಯಾ ತಂದುಕೊಟ್ಟಿದ್ದರೂ ಅಚ್ಚರಿಯಿಲ್ಲ. ಅದೇನೆ ಇರಲಿ, ಇಲ್ಲಿ ನಾವು ಅರ್ಥ ಮಾಡಿಕೊಳ್ಳಲೇಬೇಕಾದ ಒಂದಷ್ಟು ಗಂಭೀರ ಸಂಗತಿಗಳಿವೆ.
ಮೊದಲನೆಯದು, ನಮ್ಮ ಜನರ ಸಮೂಹಸನ್ನಿಯ ಸಾಮರ್ಥ್ಯ! ಅದು ಇಂದು ನಿನ್ನೆಯದಲ್ಲ. ಕೂಗುಮಾರಿಯ ಕರೆಗೆ ಓಗೊಟ್ಟರೆ ರಕ್ತಕಾರಿಕೊಂಡು ಸಾಯುತ್ತಾರೆ ಎಂಬ ಸುದ್ದಿಗೆ ಬೆಚ್ಚಿಬಿದ್ದು, ಮನೆಯ ಬಾಗಿಲುಗಳ ಮೇಲೆ ನಿಯತ್ತಾಗಿ ‘ನಾಳೆ ಬಾ’ ಎಂದು ಬರೆದುಕೊಂಡದ್ದಕ್ಕಿಂತಲೂ ಬಹಳ ಹಿಂದಿನಿಂದಲೆ ನಮ್ಮ ಜನರಿಗೆ ಸಮೂಹ ಸನ್ನಿ ರಕ್ತಗತವಾಗಿದೆ. ಹುಡುಕುತ್ತಾ ಹೋದರೆ ಇಂತಹ ಸಾಕಷ್ಟು ನಿದರ್ಶನಗಳು ಪುಟಿದೇಳುತ್ತವೆ. ವೈಜ್ಞಾನಿಕ ಪ್ರಜ್ಞೆ ಮತ್ತು ವಿಚಾರವಂತಿಕೆಯ ಗುಣಗಳನ್ನು ನಮ್ಮ ಜನರಿಂದ ವಂಚಿಸುತ್ತಾ ಬಂದ ಒಂದು ಪಾರಂಪರಿಕ ದ್ರೋಹವೇನು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿತ್ತಲ್ಲ, ಅದರ ಪರಿಣಾಮಗಳು ಇವು. ಯಂತ್ರವಿಜ್ಞಾನದ ಸಾಧನಗಳನ್ನೂ ಇಂತಹ ಮೌಢ್ಯಾಚರಣೆಗಳ ಪ್ರಸರಣಕ್ಕೆ ಬಹಳ ಮುಗ್ಧತೆಯಿಂದ ಬಳಸಿಕೊಳ್ಳುವಷ್ಟು ಸಮೂಹಸನ್ನಿ ನಮ್ಮ ಜನರಲ್ಲಿ ಬೇರುಬಿಟ್ಟಿದೆ.
ರಾತ್ರಿ ಹತ್ತು ಗಂಟೆಗೆ ಉಂಡು ಮಲಗುವ ಸಮಯದಲ್ಲು ಯಾವ ಚಕಾರವೂ ಇರದಿದ್ದ, ಬಾಯಿಬಡುಕ ನ್ಯೂಸ್ ಚಾನೆಲ್ಲುಗಳ ನಿಗಾಕ್ಕೂ ಬರದ ‘ದೀಪ’ವಿದ್ಯಮಾನವೊಂದು ರಾತ್ರೊರಾತ್ರಿ ಜನ್ಮ ಪಡೆದು, ಮಲಗಿದ್ದ ಜನರನ್ನು ಎಬ್ಬಿಸಿ ಅನುಷ್ಠಾನಕ್ಕೆ ಇಳಿಯುತ್ತದೆ ಎಂದ ಮೇಲೆ; ಮೂರು ದಿನ ಮೊದಲೇ ಪ್ರಧಾನಿ ಅನೌನ್ಸ್ ಮಾಡಿ, ಮಿಡಿಯಾಗಳು ಬೊಂಬಡಾ ಹೊಡೆದುಕೊಂಡ ‘ಟಾಸ್ಕ್’ಗೆ ನಮ್ಮ ಜನ ಸಮೂಹ ಸನ್ನಿಗೆ ಒಳಗಾಗಿ ಚಪ್ಪಾಳೆ ತಟ್ಟಿ, ಪಾತ್ರೆ ಪಡಗ ಬಡಿದು,ದೀಪ ಹಚ್ಚಿ, ಪಂಜಿನ ಮೆರವಣಿಗೆ ನಡೆಸಿದ ಅತಿರೇಕಗಳು ಅಚ್ಚರಿಯೂ ಅಲ್ಲ, ಅಥವಾ ಯಾವುದೊ ಒಬ್ಬ ವ್ಯಕ್ತಿಯ ದಾಸ್ಯಕ್ಕೆ ಶತಪ್ರಮಾಣದಲ್ಲಿ ಈ ದೇಶ ತುತ್ತಾಗಿದೆ ಎಂಬುದರ ದ್ಯೋತಕವೂ ಅಲ್ಲ.
ಹಾಗಿದ್ದರೆ, ಮಧ್ಯರಾತ್ರಿ ದೀಪಕ್ರಾಂತಿಯ ಮಾರನೆ ದಿನ ಅಂತಹ ಸುಳ್ಳು ಸುದ್ದಿ ಹಬ್ಬಿಸಿದ್ದ ಕಾರಣಕ್ಕೆಅರೆಸ್ಟಾದ ಮತ್ತು ಕಿಡಿಗೇಡಿತನಕ್ಕಾಗಿ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡ, ದಾವಣಗೆರೆ ಸಮೀಪದ ಹುಡುಗರು ಮೋದಿಗಿಂತಲೂ ಪವರ್ ಫುಲ್ ವ್ಯಕ್ತಿಗಳಾಗಬೇಕಿತ್ತು. ಸಮೂಹ ಸನ್ನಿಗೆ ಸುಲಭವಾಗಿ ತುತ್ತಾಗುವ ದೌರ್ಬಲ್ಯವೇನಿದೆಯಲ್ಲ, ಅದನ್ನು ಬಳಸಿಕೊಂಡು ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ, ಅವರಲ್ಲಿ ನಿರಾಶವಾದ, ಅಸಹಾಯಕತೆಯನ್ನು, ಕೈಚೆಲ್ಲುವ ಮನಸ್ಥಿತಿಯನ್ನು ಮಡುಗಟ್ಟಿಸುವ ಒಂದು ವ್ಯವಸ್ಥಿತ ಸಂಚು ಸಹ ಇದರ ಹಿಂದೆ ಇದೆ ಮತ್ತು ನಮ್ಮ ಅನೇಕ ಚಿಂತಕರ ವಾದ,ವರ್ತನೆ, ವ್ಯಂಗ್ಯ ಮತ್ತು ಅವರ ಮಾತುಗಳಲ್ಲಿ ಧ್ವನಿಸುತ್ತಿರುವ ಹತಾಷೆಯ ಪ್ರಶ್ನೆಗಳು, ಬಲಪಂಥೀಯರು ತಮ್ಮ ಸಂಚಿನಲ್ಲಿ ಯಶಸ್ವಿಯಾಗುತ್ತಿದ್ದಾರಾ ಎಂಬ ಅನುಮಾನ ಮೂಡಿಸುತ್ತಿದೆ. ಇದು ಜನರನ್ನು ಯಾಮಾರಿಸುವ ಟ್ರ್ಯಾಪ್ ಅಲ್ಲ. ಇವತ್ತಲ್ಲ ಇನ್ನು ನೂರು ವರ್ಷಗಳ ನಂತರವು ನಮ್ಮ ಜನ ಸಮೂಹಸನ್ನಿಗೆ ಹೀಗೇ ವರ್ತಿಸುತ್ತಾರೆ. ಆದರೆ ಆ ವರ್ತನೆಯನ್ನೆ ಆಧಾರವಾಗಿಟ್ಟುಕೊಂಡು, ಸದ್ಯದ ತಮ್ಮ ರಾಜಕೀಯ ಮೇಲುಗೈ ಲಾಭವನ್ನು ಬಳಸಿಕೊಂಡು ಪ್ರಗತಿಪರ ಸಮೂಹವನ್ನು ‘ವಿಘಟನೆಗೊಳಿಸುವ’ ಟ್ರ್ಯಾಪ್ ಇದು. ಇದನ್ನು ನಾವು ಅರ್ಥ ಮಾಡಿಕೊಳ್ಳಲೇಬೇಕಿದೆ.
ಇನ್ನು ಎರಡನೆಯ ಸಂಗತಿಗೆ ಬರೋಣ. ನಮ್ಮ ದೇಶದ ಇದುವರೆಗಿನ ಎಲ್ಲಾ ಸಮೂಹಸನ್ನಿಗಳ ಮೂಲವನ್ನು ಕೆದಕಿದರೆ ನಮಗೆ ಸಿಗೋದು ‘ಭೀತಿ’ ಎಂಬ ಉತ್ತರ. ಹೌದು, ಒಂದು ವಿದ್ಯಮಾನ ಜನರನ್ನು ಎಷ್ಟು ಆಳವಾಗಿ ಭೀತಿಗೊಳಿಸುತ್ತದೊ, ಅದು ಅಷ್ಟೇ ವ್ಯಾಪಕವಾಗಿ ವಿಸ್ತಾರಗೊಳ್ಳುವ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತದೆ. ಮಾನಸಿಕ ರೋಗಗಳಿಗೆ ಪರಿಹಾರವಾಗಿ ಮಾಟಮಂತ್ರದ ಮೌಢ್ಯ ಹುಟ್ಟಿದ್ದಾಗಲಿ, ಪ್ಲೇಗು ಸಿಡುಬು ದಡಾರದಂತಹ ಕಾಯಿಲೆಗಳಿಗೆ ದೇವತೆಗಳು ಸೃಷ್ಟಿಯಾಗಿ ಅವರಿಗೆ ಒಂದೊಂದು ಗುಡಿಗೋಪುರ,ಪೂಜೆ ಪುನಸ್ಕಾರಗಳು ಜಾರಿಗೆ ಬಂದದ್ದಾಗಲಿ ಎಲ್ಲವೂ ನಮ್ಮ ಜನ ಗಂಭೀರ ಭೀತಿಗೆ ತುತ್ತಾಗಿದ್ದ ಸಂದರ್ಭದಲ್ಲಿ. ಅಷ್ಟೇ ಯಾಕೆ, ಸಂತರು, ಯೋಗಿಗಳು, ಅವತಾರ ಪುರುಷರು ಅವತರಿಸಿದ್ದು ಕೂಡಾ ನಮ್ಮ ಜನ ಭಯಭೀತರಾಗಿದ್ದ ಸಂದರ್ಭದಲ್ಲೆ.
ಅಂತಹ ಭೀತಿಯನ್ನು ಇವತ್ತು ಕರೊನಾ ಎಂಬ ಶೀತಕೆಮ್ಮು ಕಾಯಿಲೆಯೊಂದು ಸೃಷ್ಟಿಸಿದೆ. ಅರ್ಥಾತ್, ಇಲ್ಲೀಗ ಸಮೂಹ ಸನ್ನಿಗಳು ಕಾಡ್ಗಿಚ್ಚಿನಂತೆ ಹರಡುವ ಭರಪೂರ ವಾತಾವರಣವಿದೆ. ದಾವಣಗೆರೆ ಜಿಲ್ಲೆಯ ಅವಿವೇಕಿ ಹುಡುಗರ ದೀಪಕ್ರಾಂತಿಯೆ ಇದಕ್ಕೆ ಸಾಕ್ಷಿ. ನಮ್ಮ ಜನರ ಸೋಶಿಯೊಸೈಕಾಲಜಿಯ ಜೊತೆಗೆ ಒಂದಿಷ್ಟು ಮೈಥಾಲಜಿಯನ್ನು ಅರ್ಥಮಾಡಿಕೊಂಡಿರುವ ಯಾರ ಹುನ್ನಾರಕ್ಕೆ ಬೇಕಾದರೂ ಸುಲಭವಾಗಿ ನಮ್ಮ ಜನ ಸನ್ನಿಗೆ ಒಳಗಾಗುವ ಸ್ಥಿತಿಯಲ್ಲಿದ್ದಾರೆ. ಅದು ಮೋದಿಯೇ ಆಗಬೇಕೆಂದಿಲ್ಲ. ಆದರೆ ಹೇಗೆ ಎಕ್ಸಿಕ್ಯೂಟ್ ಮಾಡುತ್ತೇವೆ ಎಂಬುದನ್ನು ಪಕ್ಕಾ ಲೆಕ್ಕ ಹಾಕಬೇಕಷ್ಟೆ. ಮೋದಿಯವರಿಗೆ ಪ್ರಧಾನಿ ಹುದ್ದೆಯ ಒಂದು ಅಥೆಂಟಿಸಿಟಿ ಇದೆ, ಮೀಡಿಯಾಗಳ ಅಧಿಕೃತ ಸಾಥ್ ಇದೆ. ಅವರು ಮಾಡಿದಂತಲ್ಲದೆ, ನಮ್ಮದೇ ರೀತಿಯಲ್ಲಿ ಪ್ರಯತ್ನಿಸಿದರೆ ನಮ್ಮ ‘ಟಾಸ್ಕ್’ಗಳಿಗೂ ಜನ ಸ್ಪಂದಿಸುತ್ತಾರೆ ಎಂಬುದನ್ನು ಆ ಹುಡುಗರು ಸಾಬೀತು ಮಾಡಿದ್ದಾರೆ.
ಮೋದಿಯವರು ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ ಎಂದಾಗ, ಪಾತ್ರೆ ಪಗಡ ಡ್ರಮ್ಮು ತಾಟು,ಸಿಲಿಂಡರುಗಳನ್ನೆಲ್ಲ ಬಡಿಯುತ್ತಾ ನಮ್ಮ ಜನ ಬೀದಿಯಲ್ಲಿ ಮೆರವಣಿಗೆ ಹೋಗದೆ ಕೇವಲ ಚಪ್ಪಾಳೆಯನ್ನಷ್ಟೆ ತಟ್ಟಿದ್ದರೆ; ಅವರು ಕ್ಯಾಂಡಲ್ ಹಚ್ಚಿ ಎಂದಾಗ, ಒಂಬತ್ತು ದೀಪ ಅಂಟಿಸಬೇಕೊ, ಮೂರು ದೀಪವನ್ನೊ, ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ ಎಣ್ಣೆ ದೀಪ ಅಂಟಿಸಬೇಕೊ, ತುಪ್ಪದ ದೀಪ ಅಂಟಿಸಬೇಕೊ,ದೀಪಾವಳಿಯಂತೆ ಪಟಾಕಿಯನ್ನೆ ಸಿಡಿಸಿಬಿಡಬೇಕೊ ಎಂಬ ಅತಿರೇಕಗಳಿಗೆ ತಲೆಕೆಡಿಸಿಕೊಳ್ಳದೆ ಒಂದು ಕ್ಯಾಂಡಲ್ ಬೆಳಗಿಸುವ ಟಾಸ್ಕನ್ನಷ್ಟೆ ನಮ್ಮ ಜನ ಪೂರೈಸಿದ್ದರೆ, ಆಗ ನಾವು ನಮ್ಮ ಜನ ನಿಜಕ್ಕೂ ಒಂದು ಲೀಡರ್ ಶಿಪ್ ನ ಅಧೀನತೆಗೆ ಒಳಗಾಗುತ್ತಿದೆ ಎಂಬ ತೀರ್ಮಾನಕ್ಕೆ ಬರಬಹುದಿತ್ತು. ಆದರೆ ನಮ್ಮ ಜನ ತೋರಿದ ಅತಿರೇಕದ ವರ್ತನೆಗಳೇನಿವೆಯಲ್ಲ ಅವು ಈ ಕ್ಷಣದ ಭೀತಿಯ ಸಮೂಹಸನ್ನಿಯ ಲಕ್ಷಣಗಳಷ್ಟೆ! ಆದರೆ, ಅದನ್ನು ವ್ಯವಸ್ಥಿತವಾಗಿ ಮೀಡಿಯಾಗಳ ನೆರವಿನಿಂದ ಪೊಲಿಟಿಕಲ್ ದೃವೀಕರಣವಾಗಿಸುವ ಪ್ರಯತ್ನ ನಡೆಯುತ್ತಿದೆ. ಕೋಮುವಿದ್ರೋಹವಾಗಿ ಪರಿವರ್ತಿಸುವ ಸಂಚನ್ನು ಜಾರಿಗೆ ತರಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಪ್ರಗತಿಪರ ಸಮೂಹ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಅವರ ಕೆಲಸವನ್ನು ಸಲೀಸಾಗಿಸುತ್ತದೆ.
ಚಪ್ಪಾಳೆ ಸದ್ದಿಗೆ ಕೊರೊನಾ ಸಾಯುತ್ತದೆಯೇ? ದೀಪಗಳ ಶಾಖಕ್ಕೆ ವೈರಸ್ ಸುಟ್ಟುಹೋಗುತ್ತದೆಯೇ? ಎಂಬ ನಮ್ಮ ಎಂದಿನ ಧಾಟಿಯ ವಾದಗಳ ಮೂಲಕವೇ ನಮ್ಮೆಲ್ಲ ಶ್ರಮವನ್ನು ವ್ಯರ್ಥ ಮಾಡಿಕೊಳ್ಳಲಿ, ಆ ನೆಪದಲ್ಲಿ ಜನರಿಂದ ನಾವು ಇನ್ನಷ್ಟು ದೂರಾಗಲಿ ಎಂಬ ಲೆಕ್ಕಾಚಾರದಿಂದಲೆ ಮೋದಿ ತಮ್ಮ ‘ಟಾಸ್ಕ್’ ಗಳಿಗೆ ಸಂಬದ್ಧ ತರ್ಕ ಮುಂದಿಟ್ಟರೆ, ಕೆಳಹಂತದ ನಾಯಕರಿಂದ ಆ ಟಾಸ್ಕಿಗೆ ಅಸಂಬದ್ಧ ವಿತರ್ಕವನ್ನು ಮುನ್ನೆಲೆಗೆ ತರುತ್ತಿದ್ದಾರೆ. ನಾವು ಆ ವಿತರ್ಕಗಳನ್ನು ಹಳಿಯುವ ವ್ಯಂಗ್ಯದಲ್ಲೆ ಬ್ಯುಸಿಯಾಗಿರುವಾಗ, ಜನರ ಸಮೂಹಸನ್ನಿಯ ಲಾಭ ಪಡೆದು ನಮ್ಮನ್ನು ಅಧೀರಗೊಳಿಸುತ್ತಿದ್ದಾರೆ.
ಇನ್ನಾದರು ನಾವು ಪ್ರಾಕ್ಟಿಕಲ್ ಪರಿಹಾರಗಳತ್ತ ಗಂಭೀರವಾಗಿ ಆಲೋಚಿಸಬೇಕಿರುವ ಕಾಲ ಬಂದೊದಗಿದೆ. ಈ ಕ್ಷಣದ ಪ್ರಾಕ್ಟಿಕಾಲಿಟಿ ಎಂದರೆ ಮತ್ತದೇ ಹಳೆಯ ಜಿಗುಟುತನವಲ್ಲ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕಿದೆ.


